Karnataka Budget 2023: ಬೀದರ್‌ಗೆ ಬರೀ ಮುಂಗಡ ಮಾತು!

ರಾಜ್ಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗೆ ಮುಂಗಡ ಪತ್ರ ಚುನಾವಣಾ ಪತ್ರ ಎಂಬ ಮಾತುಗಳ ಮಧ್ಯೆಯೇ ಅನೇಕ ಜನಪರ ಯೋಜನೆ ಹೊಂದಿದ್ದೇನೋ ನಿಜ. ಆದರೆ, ರಾಜ್ಯದ ಗಡಿ ಜಿಲ್ಲೆ ಬೀದರ್‌ನ ಲಕ್ಷಾಂತರ ಜನ ಹೊಂದಿದ್ದ ಅಪಾರ ನಿರೀಕ್ಷೆಗಳನ್ನು ಮಣ್ಣು ಪಾಲು ಮಾಡುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್‌ ಬೀದರ್‌ ಜಿಲ್ಲೆಗಂತೂ ‘ಬರೀ’ ಮುಂಗಡ ‘ಮಾತು‘ ಎಂಬಂತೆ ಸಾಬೀತಾಗಿದೆ.

Karnataka Budget 2023 Just an advance talk for Bidar rav

- ಅಪ್ಪಾರಾವ್‌ ಸೌದಿ

 ಬೀದರ್‌ (ಫೆ.18) : ರಾಜ್ಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗೆ ಮುಂಗಡ ಪತ್ರ ಚುನಾವಣಾ ಪತ್ರ ಎಂಬ ಮಾತುಗಳ ಮಧ್ಯೆಯೇ ಅನೇಕ ಜನಪರ ಯೋಜನೆ ಹೊಂದಿದ್ದೇನೋ ನಿಜ. ಆದರೆ, ರಾಜ್ಯದ ಗಡಿ ಜಿಲ್ಲೆ ಬೀದರ್‌ನ ಲಕ್ಷಾಂತರ ಜನ ಹೊಂದಿದ್ದ ಅಪಾರ ನಿರೀಕ್ಷೆಗಳನ್ನು ಮಣ್ಣು ಪಾಲು ಮಾಡುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್‌ ಬೀದರ್‌ ಜಿಲ್ಲೆಗಂತೂ ‘ಬರೀ’ ಮುಂಗಡ ‘ಮಾತು‘ ಎಂಬಂತೆ ಸಾಬೀತಾಗಿದೆ.

ರಾಜ್ಯ ಬಜೆಟ್‌ನ(Karnataka Budget) 159 ಪುಟಗಳ ಪುಸ್ತಕದಲ್ಲಿ ನಾಮ್‌ ಕೆ ವಾಸ್ತೆ ಎಂಬಂತೆ ಬೀದರ್‌(Bidar) ಹೆಸರು ಪ್ರಸ್ತಾಪವಾದಂತಿದೆ. ಸಾಂಪ್ರದಾಯಿಕ ಕೌಶಲ್ಯಗಳ ಪುನರುಜ್ಜೀವನ ಎಂದು ಚೆನ್ನಪಟ್ಟಣದ ಬೊಂಬೆ, ಕಿನ್ನಾಳ ಕಲೆ, ಕುಂಬಾರಿಕೆ ಹೀಗೆ ವಿವಿಧ ಕಲೆಗಳ ಜೊತೆಗೆ ವಿಶ್ವವಿಖ್ಯಾತ ಬಿದ್ರಿ ಕಲೆಯನ್ನೂ ಸೇರಿಸಿ ಆಯ್ದ 100 ಅಭ್ಯರ್ಥಿಗಳಿಗೆ ಉನ್ನತ ಮಟ್ಟದ ಕೌಶಲ್ಯವರ್ಧನಾ ತರಬೇತಿಯ ಯೋಜನೆ ಹಾಕಿಕೊಂಡಿದೆಯಾದರೆ ಇದು ದಶಕಗಳಿಂದ ನಡೆಯುತ್ತಲೇ ಬಂದಿದೆ. ಬಿದ್ರಿ ಕಲೆ ತರಬೇತಿಗೆ ರಾಜ್ಯವಷ್ಟೇ ಅಲ್ಲ, ಕೇಂದ್ರದ ಹಲವಾರು ಯೋಜನೆಗಳೂ ಚಾಲ್ತಿಯಲ್ಲಿವೆ. ಹೀಗಾಗಿ ಇದು ಬರೀ ಪುಸ್ತಕ ತುಂಬಿಸಲು ಮಾಡಿದ ಘೋಷಣೆ.

Karnataka Budget 2023: ಬೆಳಗಾವಿ ಜಿಲ್ಲೆಗೆ ಬೆರಳೆಣಿಕೆ ಯೋಜನೆ: ಜನರ ನಿರೀಕ್ಷೆ ಹುಸಿ!

7650 ಕೋಟಿ ರು. ವೆಚ್ಚದಲ್ಲಿ ಬೀದರ್‌-ಕಲಬುರಗಿ- ಬಳ್ಳಾರಿ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹಳೆಯದನ್ನು ಜನರಿಗೆ ನೆನಪಿಸಲಾಗಿದೆ. ಇದರೊಟ್ಟಿಗೆ ಕೆಎಸ್‌ಐಐಡಿಸಿ ವತಿಯಿಂದ ಹುಮನಾಬಾದ್‌ನಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಯ ಘೋಷಣೆ ಕಾಂಗ್ರೆಸ್‌ ಅಧಿಕಾರಾವಧಿಯಿಂದಲೂ ಬಜೆಟ್‌ ಪುಸ್ತಕ ಸೇರುತ್ತಲೆ ಸಾಗಿ ಬಂದಿದೆ. ಹೀಗಾಗಿ ಇವೆರಡೂ ಹಳಸಿದ್ದವು.

ಹಂಪಿಯ ವಿಜಯವಿಠಲ ದೇವಾಲಯ, ಬಿಜಾಪುರದ ಗೋಲ್‌ಗುಂಬಜ್‌, ಬಾದಾಮಿ ಗುಹೆಗಳು ಸೇರಿದಂತೆ 7 ಸ್ಮಾರಕ ಸ್ಥಳಗಳಲ್ಲಿ ಅತ್ಯಾಧುನಿಕ ಬೆಳಕಿನ ವ್ಯವಸ್ಥೆ, ಧ್ವನಿ ಮತ್ತು ಬೆಳಕು ಪ್ರದರ್ಶನ ಅಳವಡಿಸಲು 60 ಕೋಟಿ ರು. ಘೋಷಿಸಲಾಗಿದೆ. ಆದರೆ, ಇದಕ್ಕಾಗಿ ಈ ಹಿಂದೆಯೂ ಘೋಷಿಸಲಾಗಿತ್ತು. ಜಿಲ್ಲಾಧಿಕಾರಿಗಳು ಈಗಾಗಲೇ ಇದಕ್ಕಾಗಿ ಬೀದರ್‌ ಉತ್ಸವದ ಉಳಿಕೆ ಹಣವನ್ನು ವ್ಯಯಿಸುತ್ತಿದ್ದಾರೆ. ಹೀಗಾಗಿ ಈ ಘೋಷಣೆ ಸದ್ಯಕ್ಕೆ ಅನುಪಯುಕ್ತ.

ತುಮಕೂರು, ಹಾವೇರಿ, ಗೋಕಾಕ್‌, ಬೀದರ್‌ ಹಾಗೂ ಭಾಲ್ಕಿ ಸೇರಿದಂತೆ 13 ನಗರಗಳಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣಕ್ಕೆ ಅನುದಾನ. ಇದೂ ಹಳೆಯ ಘೋಷಣೆಯೇ ಆಗಿದೆ. ಈಗ ಮತ್ತೊಮ್ಮೆ ಘೋಷಣೆ ಮಾಡಿ ಮುಂದಿನ ವರ್ಷಕ್ಕೆ ನೂಕಿದ್ದಾರೆ.

ಇನ್ನು ಬಸವಕಲ್ಯಾಣದ ನೂತನ ಅನುಭವ ಮಂಟಪ ಕಾಮಗಾರಿ ಶೀಘ್ರದಲ್ಲಿಯೇ ಪೂರ್ಣಗೊಳಿಸುತ್ತೇವೆ ಎಂದು ಬಜೆಟ್‌ ಪುಸ್ತಕದಲ್ಲಿ ಹೇಳಲಾಗಿದೆ. ಇದು ಸರ್ಕಾರ ಮತ್ತು ಅದರ ಪ್ರತಿನಿಧಿಗಳು ಯಾವಾಗಲೂ ಹೇಳುವ ಮಾತುಗಳೇ ಹೊರತಾಗಿ ಕಲ್ಯಾಣದ ಕೋಟೆ ಅಭಿವೃದ್ಧಿ, ಆಟೋ ನಗರ ಯೋಜನæ ಮತ್ತಿತರ ಕುರಿತಾಗಿದ್ದ ನಿರೀಕ್ಷೆಗಳು ಹುಸಿಯಾಗಿವೆ.

ನೆಟೆರೋಗದಿಂದ ತೊಗರಿ ಬೆಳೆ ಹಾನಿ ಕಂಡಿರುವ ಕಲಬುರಗಿ, ಯಾದಗಿರಿ, ವಿಜಯಪುರ ಹಾಗೂ ಬೀದರ್‌ ಜಿಲ್ಲೆಯ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರು. ಪರಿಹಾರ ನೀಡಲಾಗಿದೆ ಎಂದು ಹೇಳಿದ್ದಾರೆ. ರೈತರು 25 ಸಾವಿರ ರು. ಪ್ರತಿ ಎಕರೆಗೆ ಕೇಳಿದ್ದು, ಈಗಾಗಲೇ ಈ 10 ಸಾವಿರ ರು. ಘೋಷಣೆ ಹಳೆಯದ್ದಾಗಿದೆ. ಈಗ ಮತ್ತೆ ಬಜೆಟ್‌ ಪುಸ್ತಕದಲ್ಲಿ ಮುದ್ರಿಸಲಾಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಅಡಿಯಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಯಲ್ಲಿದ್ದ ಭೂಸ್ವಾಧೀನಕ್ಕೆ ಏಕರೂಪ ದರ ನಿಗದಿಪಡಿಸುವ ಸಂಬಂಧದಲ್ಲಿ ಒಪ್ಪಂದದ ತೀರ್ಪನ್ನು ರಚಿಸುವ ಕುರಿತು ನಿರ್ಧಾರ ಕೈಗೊಂಡಿದ್ದು, ರೈತರಿಗೆ ಹಾಗೂ ಭೂಮಾಲೀಕರಿಗೆ ಶೀಘ್ರದಲ್ಲಿ ಭೂಪರಿಹಾರ ಸಿಗುವುದು. ಅದಕ್ಕಾಗಿ 5 ಸಾವಿರ ಕೋಟಿ ರು. ಮೀಸಲಿಟ್ಟಿರುವ ಕುರಿತು ಬಜೆಟ್‌ನಲ್ಲಿ ಹೇಳಲಾಗಿದೆ. ಆದರೆ, ನಾಲ್ಕೈದು ದಶಕಗಳಿಂದ ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿ ಕಾಲ ಕಳೆಯುತ್ತಿರುವ ಕಾರಂಜಾ ನೀರಾವರಿ ಯೋಜನೆಯ ಸಂತ್ರಸ್ತರನ್ನು ನೆನಪಿಸಿಕೊಂಡಿಲ್ಲ. ಹಾಗೆಯೇ ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹಣ ಸಾಮರ್ಥ್ಯದ ಕೊರತೆ ನೀಗಿಸಲು ಕೊಪ್ಪಳ ಜಿಲ್ಲೆಯ ನವಲೆ ಬಳಿ ಸಮತೋಲನಾ ಜಲಾಶಯ ನಿರ್ಮಿಸಲು ಆಂಧ್ರಪ್ರದೇಶ ಹಾಗೂ ತೆಲಂಗಣಾ ರಾಜ್ಯದ ಸಿಎಂ ಜೊತೆ ಸಭೆ ನಡೆಸಿ ಯೋಜನೆ ಅನುಷ್ಠಾನದ ಭರವಸೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿಗೆ ಬೀದರ್‌ ಜಿಲ್ಲೆಯಲ್ಲಿ ಹರಿಯುತ್ತಿರುವ ಗೋದಾವರಿ ನದಿ ನೀರಿನ ಸದ್ಬಳಕೆ ಬಗ್ಗೆ ಯೋಚನೆಯೇ ಹೊಳೆದಂತಿಲ್ಲ.

Karnataka Budget 2023: ಕೊಡಗಿನ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರು. ವಿಶೇಷ ಪ್ಯಾಕೇಜ್‌!

ಬೀದರ್‌ ಹಾಗೂ ರಾಯಚೂರು ನಗರಸಭೆಗಳನ್ನು ಮಹಾನಗರ ಪಾಲಿಕೆಯನ್ನಾಗಿ ಉನ್ನತೀಕರಿಸುವ ಬಗ್ಗೆ ಮಾನದಂಡಗಳನ್ವಯ ಪರಿಶೀಲಿಸಲಾಗುವದು ಎಂದು ಹೇಳಿದ್ದಾರೆ. ಆದರೆ, ಬೀದರ್‌ ನಗರಸಭೆಗೆ ಚುನಾವಣೆ ನಡೆದು 2 ವರ್ಷ ಗತಿಸಿದರೂ ಬಿಜೆಪಿಯಲ್ಲಿ ಸಂಖ್ಯಾ ಬಲವಿಲ್ಲದ ಕಾರಣಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮುಂದಾಗದ ಸರ್ಕಾರ ಮಹಾನಗರ ಪಾಲಿಕೆಯನ್ನಾಗಿಸಿ ಬೇರೊಬ್ಬ ಪಕ್ಷದವರನ್ನು ಮೇಯರ್‌ ಮಾಡುವತ್ತ ಮನಸ್ಸು ಮಾಡುವುದು ಅನುಮಾನ.

ಬಜೆಟ್‌ ಪುಸ್ತಕದಲ್ಲಿ ಅಲ್ಲೊಂದು ಬಾರಿ ಇಲ್ಲೊಂದು ಬಾರಿ ಎಂಬಂತೆ ಬೀದರ್‌ ಹೆಸರು ಪ್ರಸ್ತಾಪವಾಗಿದೆ. ಮಹತ್ವದ ಅಭಿವೃದ್ಧಿ ಯೋಜನೆಗಳು ಶೂನ್ಯ. ಕಳೆದ ಬಜೆಟ್‌ನಲ್ಲಿ ಅಭಿವೃದ್ಧಿಯ ಆಶಾಕಿರಣ ಮೂಡಿಸಿದ್ದ ಬೊಮ್ಮಾಯಿ ಈ ಬಾರಿ ನಿರಾಸೆ ಮೂಡಿಸಿದ್ದಾರೆ.

Latest Videos
Follow Us:
Download App:
  • android
  • ios