ನವದೆಹಲಿ[ಜು.11]: ಅಡುಗೆ ಅನಿಲ ಸಿಲಿಂಡರ್‌ಗೆ ಒದಗಿಸಲಾಗುವ ಸಬ್ಸಿಡಿಯನ್ನು ತ್ಯಜಿಸುವಂತೆ ಜನರನ್ನು ಪ್ರೇರೇಪಿಸಲು ‘ಗಿವ್‌ ಇಟ್‌ ಅಪ್‌’ ಅಭಿಯಾನ ಆರಂಭಿಸಿ ಯಶಸ್ವಿಯಾಗಿರುವ ಕೇಂದ್ರ ಸರ್ಕಾರ, ರೈಲ್ವೆ ಟಿಕೆಟ್‌ ಸಬ್ಸಿಡಿ ತ್ಯಜಿಸುವವರಿಗಾಗಿ ಅಂತಹುದೇ ಒಂದು ಅವಕಾಶ ಕಲ್ಪಿಸಲು ಮುಂದಾಗಿದೆ. ಪ್ರಯಾಣಿಕರು ಸ್ವಯಂಪ್ರೇರಿತವಾಗಿ ಸಂಪೂರ್ಣ ಅಥವಾ ಭಾಗಶಃ ಸಬ್ಸಿಡಿಯನ್ನು ತ್ಯಜಿಸುವ ಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರ ಸಿದ್ಧತೆಯಲ್ಲಿ ನಿರತವಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೊದಲ 100 ದಿನಗಳ ಕಾರ್ಯಕ್ರಮದಲ್ಲಿ ಇದೂ ಒಂದಾಗಿದೆ ಎಂದು ಹೇಳಲಾಗಿದೆ.

ಪ್ರಯಾಣಿಕರ ಸೇವೆ ಒದಗಿಸಲು ರೈಲ್ವೆ ಇಲಾಖೆ ಮಾಡುವ ಖರ್ಚಿನ ಪೈಕಿ ಶೇ.57ರಷ್ಟುಮಾತ್ರವೇ ಟಿಕೆಟ್‌ ಮಾರಾಟದಿಂದ ಬರುತ್ತಿದೆ. ತೈಲ ಬೆಲೆ ಏರಿಕೆ, ಮಾನವ ಶಕ್ತಿ ಖರ್ಚು, ಹಣದುಬ್ಬರ ಹೆಚ್ಚುತ್ತಿದ್ದರೂ ರೈಲ್ವೆ ಟಿಕೆಟ್‌ ದರ ಏರಿಕೆ ಮಾಡಿಲ್ಲ. ಹೀಗಾಗಿ ಕಾರ್ಯನಿರ್ವಹಣೆ ವೆಚ್ಚ ಅಧಿಕವಾಗಿದೆ. ಇದಕ್ಕಾಗಿ ಪೂರ್ತಿ ಅಥವಾ ಭಾಗಶಃ ಪ್ರಯಾಣ ದರ ಪಾವತಿಸಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ರೈಲ್ವೆ ಮುಂದಾಗಿದೆ.

ಆದರೆ ಇಲ್ಲೂ ಒಂದು ಸಮಸ್ಯೆ ಇದೆ. ಸಬ್ಸಿಡಿಯನ್ನು ಪೂರ್ತಿ ತ್ಯಜಿಸುವ ಪ್ರಯಾಣಿಕರಿಗೆ ರೈಲು ಟಿಕೆಟ್‌ ದರ ಹೆಚ್ಚೂಕಡಿಮೆ ಡಬಲ್‌ ಆಗುತ್ತದೆ. ಜತೆಗೆ ಹವಾನಿಯಂತ್ರಿತ ಬೋಗಿಗಳಲ್ಲಿನ ಪ್ರಯಾಣ ದರ ವಿಮಾನ ಪ್ರಯಾಣ ಟಿಕೆಟ್‌ ದರದಷ್ಟೇ ಆಗುತ್ತದೆ. ಸಮೀಪ ಸ್ಥಳಗಳ ರೈಲು ಟಿಕೆಟ್‌ ದರ ಹೆಚ್ಚಾದರೆ ಬಸ್‌ಗಳಿಗೆ ಅನುಕೂಲವಾಗುತ್ತದೆ. ಹೀಗಾಗಿ ರೈಲ್ವೆ ಸಮಸ್ಯೆಯಾಗದಂತೆ ಸಬ್ಸಿಡಿ ತ್ಯಜಿಸುವ ವ್ಯವಸ್ಥೆಗೆ ರೈಲ್ವೆ ತಯಾರಿ ನಡೆಸಿದೆ.

ಈ ಹಿಂದೆ ವಯಸ್ಕ ಪ್ರಯಾಣಿಕರಿಗೆ ಇದೇ ರೀತಿಯ ಯೋಜನೆ ಜಾರಿಗೆ ತಂದಿದ್ದು ಅದನ್ನು 34 ಲಕ್ಷ ಜನ ಬಳಸಿಕೊಂಡಿದ್ದು. ಇದರಿಂದ ರೈಲ್ವೆಗೆ 78 ಕೋಟಿ ರು. ಹಣ ಉಳಿತಾಯವಾಗಿತ್ತು.