1. ಪಾನ್‌ ಮತ್ತು ಆಧಾರ್‌ ಲಿಂಕ್‌ ಮಾಡಿ

ಪಾನ್‌ಕಾರ್ಡ್‌ ಮತ್ತು ಆಧಾರ್‌ ಕಾರ್ಡ್‌ ಲಿಂಕ್‌ ಮಾಡಲು ಕೊನೆಯ ಗಡು ಮಾಚ್‌ರ್‍ 31. ಅದರ ನಂತರವೂ ಪಾನ್‌ ಮತ್ತು ಆಧಾರ್‌ ಲಿಂಕ್‌ ಆಗಿರದೇ ಇದ್ದರೆ ರು.10000 ದಂಡ ಕಟ್ಟಬೇಕಾಗಬಹುದು. ಅಷ್ಟುದೂರ ಯಾಕಾದರೂ ಹೋಗಬೇಕು. ಪಾನ್‌ ಮತ್ತು ಆಧಾರ್‌ ಲಿಂಕ್‌ ಮಾಡದವರು ಈ ಕ್ಷಣವೇ ಲಿಂಕ್‌ ಮಾಡಬಹುದು. ಪಾನ್‌ ಕಾರ್ಡ್‌ ಸಂಖ್ಯೆ ಮತ್ತು ಆಧಾರ್‌ ಕಾರ್ಡ್‌ ಸಂಖ್ಯೆಯನ್ನು ಆದಾಯ ತೆರಿಗೆ ಇಲಾಖೆಗೆ ಎಸ್‌ಎಂಎಸ್‌ ಮಾಡಿದರೂ ಲಿಂಕ್‌ ಆಗುತ್ತದೆ. ಇಲ್ಲವೇ www.incometaxindiaefiling.gov.in/ ವೆಬ್‌ಸೈಟ್‌ಗೆ ಹೋಗಿ ಲಿಂಕ್‌ ಮಾಡಬಹುದು.

ಆಧಾರ್‌ ಜತೆ ವೋಟರ್‌ ಐಡಿ ಜೋಡಣೆ ಪರಿಶೀಲನೆಯಲ್ಲಿದೆ

2. ಕಳೆದ ವರ್ಷದ ಆದಾಯ ತೆರಿಗೆ ರಿಟರ್ನ್‌ ಫೈಲ್‌ ಮಾಡಲು ಮರೆಯದಿರಿ

ಸಾಮಾನ್ಯವಾಗಿ ಆಯಾ ವರ್ಷದ ಆದಾಯ ತೆರಿಗೆ ರಿಟರ್ನ್‌ ಫೈಲ್‌ ಮಾಡಲು ಜುಲೈ 31ರವರೆಗೆ ಕಾಲಾವಕಾಶ ಇರುತ್ತದೆ. ಉದಾಹರಣೆ 2018-2019 ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್‌ ಮಾಡಲು ಜುಲೈ 31 ಕೊನೆಯ ದಿನ. ಸ್ವಲ್ಪ ದಂಡ ಕಟ್ಟುವ ಮೂಲಕ ಈ 2020 ಮಾಚ್‌ರ್‍ 31ರ ಒಳಗೂ ರಿಟರ್ನ್‌ ಫೈಲ್‌ ಮಾಡಬಹುದು. ಹಾಗಾಗಿ ಯಾರು ಕಳೆದ ವರ್ಷ ಆದಾಯ ತೆರಿಗೆ ರಿಟರ್ನ್‌ ಫೈಲ್‌ ಇನ್ನೂ ಮಾಡಿಲ್ಲವೋ ಈಗಲೇ ಮಾಡುವುದೊಳಿತು. ತಡವಾಗಿ ಫೈಲ್‌ ಮಾಡುವವರಲ್ಲಿ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕಡಿಮೆ ಇರುವವರಿಗೆ 1000ದ ವರೆಗೆ ದಂಡ ಕಟ್ಟಬೇಕಾಗುತ್ತದೆ. 5 ಲಕ್ಷಕ್ಕಿಂತ ಜಾಸ್ತಿ ಇದ್ದರೆ ಹತ್ತು ಸಾವಿರದವರೆಗೆ ದಂಡ ಇರುತ್ತದೆ.

3. ಸೆಕ್ಷನ್‌ 80 ಅಡಿಯಲ್ಲಿ ಒಂದೂವರೆ ಲಕ್ಷ ತೆರಿಗೆ ರಿಯಾಯಿತಿ

ಸೆಕ್ಷನ್‌ 80 ಅಡಿಯಲ್ಲಿ ಕೆಲವು ಉಳಿತಾಯ ಖಾತೆಯಲ್ಲಿ ಹಣ ಹೂಡುವುದರಿಂದ ಒಂದೂವರೆ ಲಕ್ಷದಷ್ಟುಹಣಕ್ಕೆ ತೆರಿಗೆ ರಿಯಾಯಿತಿ ದೊರೆಯುತ್ತದೆ. ತೆರಿಗೆ ರಿಯಾಯಿತಿ ಪಡೆಯುವ ಅತಿ ಸುಲಭದ ಮತ್ತು ಅತಿ ಜನಪ್ರಿಯ ವಿಧಾನಗಳಲ್ಲಿ ಇದು ಒಂದು. ಎಲ್ಲೆಲ್ಲಿ ಹಣ ಹೂಡಿದರೆ ಸೆಕ್ಷನ್‌ 80ರ ಅಡಿಯಲ್ಲಿ ತೆರಿಗೆ ರಿಯಾಯಿತಿ ಪಡೆಯಬಹುದು ಎಂದು ತೆರಿಗೆ ತಜ್ಞರಲ್ಲಿ ವಿಚಾರಿಸಿ ಈ ಕ್ಷಣವೇ ಕಾರ್ಯಪ್ರವೃತ್ತರಾಗುವುದರಲ್ಲಿ ಒಳಿತಿದೆ. 80ಸಿ, 80ಸಿಸಿಸಿ, 80ಸಿಸಿಡಿ ಅಡಿಯಲ್ಲಿ ಹೀಗೆ ರಿಯಾಯಿತಿ ಪಡೆಯುವ ಸೌಲಭ್ಯ ಇದೆ.

4. ನ್ಯಾಷನಲ್‌ ಪೆನ್ಷನ್‌ ಸ್ಕೀಮ್‌ನಲ್ಲಿ ಹಣ ಹೂಡಿದರೆ ಮತ್ತೆ 50000ಕ್ಕೆ ರಿಯಾಯಿತಿ

ಒಂದೂವರೆ ಲಕ್ಷಕ್ಕೆ ರಿಯಾಯಿತಿ ದೊರೆತ ನಂತರ ಮತ್ತೆ ಐವತ್ತು ಸಾವಿರ ರೂಪಾಯಿಗೆ ತೆರಿಗೆ ರಿಯಾಯಿತಿ ಪಡೆಯುವ ಸೌಲಭ್ಯ ಕೂಡ ಲಭ್ಯ. ಇದು ಅನೇಕರಿಗೆ ಗೊತ್ತಿಲ್ಲ. ಕಳೆದ ಕೆಲವು ವರ್ಷಗಳ ಹಿಂದೆಯೇ ನ್ಯಾಷನಲ್‌ ಪೆನ್ಷನ್‌ ಸ್ಕೀಮ್‌ನಲ್ಲಿ ಹಣ ಹೂಡಿದರೆ ಐವತ್ತು ಸಾವಿರ ರೂಪಾಯಿಗೆ ತೆರಿಗೆ ರಿಯಾಯಿತಿ ಪಡೆಯಬಹುದು ಎಂದು ಘೋಷಿಸಿದ್ದಾರೆ. 80ಸಿಸಿಡಿ ಅಡಿಯಲ್ಲಿ ಈ ರಿಯಾಯಿತಿ ಪಡೆಯಬಹುದು. ಇದರಿಂದ ಮತ್ತೊಂದು ಪ್ರಯೋಜನವೂ ಇದೆ. ನಿವೃತ್ತಿಯ ನಂತರ ಪೆನ್ಷನ್‌ ಪಡೆಯಬಹುದಾಗಿದೆ.

5. ಹೆಲ್ತ್‌ ಇನ್ಸುರೆನ್ಸ್‌ ಪಡೆದರೂ ತೆರಿಗೆ ರಿಯಾಯಿತಿ ಲಭ್ಯ

ಹೆಲ್ತ್‌ ಇನ್ಸುರೆನ್ಸ್‌ ಪಡೆದರೆ 25,000 ರೂಪಾಯಿಗೆ ತೆರಿಗೆ ರಿಯಿಯಾತಿ ಸಿಗುತ್ತದೆ ಅನ್ನುವುದು ಕೂಡ ಗಮನದಲ್ಲಿರಲಿ. ಆರೋಗ್ಯ ಯಾವಾಗ ಕೈ ಕೊಡುತ್ತದೋ ಹೇಳುವುದು ಕಷ್ಟ. ಅಂಥದ್ದರಲ್ಲಿ ಹೆಲ್ತ್‌ ಇನ್ಸುರೆನ್ಸ್‌ ಮಾಡಿಸಿಕೊಂಡರೆ ಆಸ್ಪತ್ರೆ ಖರ್ಚೂ ಆಗುತ್ತದೆ. ತೆರಿಗೆ ರಿಯಾಯಿತಿಯೂ ದೊರೆಯುತ್ತದೆ. ಇನ್ನು ಪೋಷಕರಿಗೆ ಹೆಲ್ತ್‌ ಇನ್ಸುರೆನ್ಸ್‌ ಮಾಡಿಸಿದರೆ ಮತ್ತೆ ಇಪ್ಪತ್ತೈದು ಸಾವಿರ ರೂಪಾಯಿಗಳಿಗೆ ತೆರಿಗೆ ರಿಯಾಯಿತಿ ದೊರೆಯಲಿದೆ. ಒಂದು ವೇಳೆ ಅವರು ಸೀನಿಯರ್‌ ಸಿಟಿಜನ್‌ ಆಗಿದ್ದರೆ ಐವತ್ತು ಸಾವಿರಕ್ಕೆ ರಿಯಾಯಿತಿ ದೊರೆಯಲಿದೆ. ಮಾಚ್‌ರ್‍ 31ರ ಒಳಗೆ ಹೆಲ್ತ್‌ ಇನ್ಸುರೆನ್ಸ್‌ ಮಾಡಿಸಿದರೆ ತೆರಿಗೆಯಲ್ಲಿ ರಿಯಾಯಿತಿ ಪಡೆಯಬಹುದು.

ಕೊರೋನಾ ಚಿಕಿತ್ಸೆಗೂ ವಿಮಾ ಪಾಲಿಸಿ!

6. ಮೊದಲೇ ತೆರಿಗೆ ಕಟ್ಟುವುದು ಒಳ್ಳೆಯದು

ಸಾಮಾನ್ಯವಾಗಿ ಸ್ಯಾಲರಿ ಪಡೆಯುವ ಮಂದಿ ಅಡ್ವಾನ್ಸ್‌ ತೆರಿಗೆ ಕಟ್ಟಬೇಕಾಗಿಲ್ಲ. ಯಾಕೆಂದರೆ ಅವರ ಸಂಬಳದಲ್ಲೇ ಟಿಡಿಎಸ್‌ ಕಟ್‌ ಮಾಡಿಕೊಳ್ಳಲಾಗುತ್ತದೆ. ಸ್ಯಾಲರಿ ಮಂದಿಯನ್ನು ಹೊರತುಪಡಿಸಿ ಇನ್ನುಳಿದವರು ಅಡ್ವಾನ್ಸ್‌ ತೆರಿಗೆ ಕಟ್ಟಬೇಕು. ಒಂದು ವೇಳೆ ಮೊದಲೇ ತೆರಿಗೆ ಕಟ್ಟದಿದ್ದರೆ ದಂಡ ಕಟ್ಟುವ ಪರಿಸ್ಥಿತಿ ಎದುರಾದೀತು.

7. ಹಣ ಹೂಡಿದರೆ ತೆರಿಗೆ ಉಳಿಸಬಹುದು

ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌, ನ್ಯಾಷನಲ್‌ ಪೆನ್ಷನ್‌ ಸ್ಕೀಮ್‌ ಹೀಗೆ ಅನೇಕ ವಿಧಾನಗಳಿಂದ ಹಣ ಹೂಡಿದರೆ ಸಣ್ಣ ಪ್ರಮಾಣದ್ದಾದರೂ ತೆರಿಗೆ ರಿಯಾಯಿತಿ ಪಡೆಯಬಹುದಾದ ಅವಕಾಶ ಇರುತ್ತದೆ. ಇದರಿಂದ ಎರಡು ಲಾಭವಿದೆ. ಒಂದು ಹಣ ಉಳಿತಾಯ. ಇನ್ನೊಂದು ತೆರಿಗೆ ರಿಯಾಯಿತಿ. ಕಡಿಮೆ ಅಂತ ಭಾವಿಸದೆ ಈ ಕಡೆ ಗಮನ ಹರಿಸುವುದರಲ್ಲೂ ಖುಷಿ ಇದೆ.