ಉತ್ತರ ಪ್ರದೇಶದ ಅಲಿಘರ್‌ನಲ್ಲಿ ಜ್ಯೂಸ್ ಮಾರಾಟ ಮಾಡುತ್ತಿದ್ದ ಮೊಹಮ್ಮದ್ ರಯೀಸ್ ಎಂಬುವವರಿಗೆ 7.7 ಕೋಟಿ ರೂ. ಆದಾಯ ತೆರಿಗೆ ಇಲಾಖೆ ನೋಟಿಸ್ ಬಂದಿದೆ. ದಿನಕ್ಕೆ 400 ರೂ. ಸಂಪಾದಿಸುವ ರಯೀಸ್ ಕುಟುಂಬವನ್ನು ಸಾಕುತ್ತಿದ್ದು, ಈ ನೋಟಿಸ್ ಅವರಿಗೆ ಆಘಾತ ತಂದಿದೆ.

ಕೆಲ ದಿನಗಳ ಹಿಂದೆ ಪಾನಿಪುರಿ ಮಾರಾಟಗಾರನೋರ್ವನಿಗೆ 40 ಲಕ್ಷದ ಜಿಎಸ್‌ಟಿ ನೋಟಿಸ್ ಬಂದಿದೆ ಎಂಬ ಸುದ್ದಿಯೊಂದು ದೇಶಾದ್ಯಂತ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಈ ಘಟನೆ ಮಾಸುವ ಮೊದಲೇ ಈಗ ಉತ್ತರ ಪ್ರದೇಶದ ಅಲಿಘರ್‌ನ ಸಣ್ಣದೊಂದು ಗೂಡಂಗಡಿ ಇಟ್ಟುಕೊಂಡು ಜ್ಯೂಸ್ ಮಾರಾಟ ಮಾಡುತ್ತಿದ್ದ ಜ್ಯೂಸ್ ವ್ಯಾಪಾರಿಗೆ ಈಗ 7.7 ಕೋಟಿ ಮೊತ್ತದ ಆದಾಯ ತೆರಿಗೆ ಇಲಾಖೆ ನೊಟೀಸ್ ಬಂದಿದ್ದು, ಈ ನೊಟೀಸ್ ನೋಡಿ ಮಧ್ಯ ವಯಸ್ಕ ಜ್ಯೂಸ್ ವ್ಯಾಪಾರಿ ದಂಗಾಗಿ ಹೋಗಿದ್ದಾನೆ. 

ಅಲಿಘರ್‌ನ ಕಾರ್ಮಿಕ ವರ್ಗದ ಜನರು ವಾಸಿಸುವ ಸರೈ ರೆಹಮಾನ್ ನಿವಾಸಿಯಾಗಿರುವ ಮೊಹಮ್ಮದ್ ರಯೀಸ್ ಎಂಬುವವರೇ ಈಗ ಐಟಿ ಇಲಾಖೆಯಿಂದ ಕೋಟ್ಯಂತರ ಮೊತ್ತದ ನೋಟೀಸ್‌ ಪಡೆದವರು. ಇವರು ಅಲಿಗಢದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸಣ್ಣ ಜ್ಯೂಸ್ ಅಂಗಡಿ ನಡೆಸುತ್ತಿದ್ದರು. ಇವರಿಗೆ 7.79 ಕೋಟಿ ರೂ. ಬಾಕಿ ಪಾವತಿ ಕೋರಿ ಆದಾಯ ತೆರಿಗೆ ನೋಟಿಸ್ ಬಂದಿದ್ದು, ಆಘಾತಕ್ಕೊಳಗಾಗಿದ್ದಾರೆ. 

ಪಾನಿಪುರಿವಾಲನಿಗೆ 40 ಲಕ್ಷ ಆದಾಯ: ಹಲವರ ತಲೆ ಕೆಡಿಸಿರೋ GST ನೋಟಿಸ್​ ಹಿಂದಿರೋ ಸತ್ಯನೇ ಬೇರೆ!

ಈ ನೋಟಿಸ್ ಬಂದಾಗ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ದಂಗಾದ ಅವರು ಈ ಅಧಿಕೃತ ಪತ್ರದ ವಿಷಯಗಳನ್ನು ಅರ್ಥಮಾಡಿಕೊಳ್ಳಲು ತಕ್ಷಣವೇ ಸ್ನೇಹಿತ ಬಳಿ ಹೋಗಿ ಸಹಾಯ ಕೇಳಿದ್ದಾರೆ. ಮಾರ್ಚ್ 28 ರೊಳಗೆ ಉತ್ತರಿಸಲು ನಿರ್ದೇಶಿಸಿ ಮೊಹಮ್ಮದ್ ರಯೀಸ್ ಅವರಿಗೆ ಈ ಆದಾಯ ತೆರಿಗೆ ಇಲಾಖೆ ನೋಟಿಸ್ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಯಿಸ್, ಈ ನೊಟೀಸ್‌ಗೆ ಸಂಬಂಧಿಸಿದಂತೆ ಆದಾಯ ತೆರಿಗೆ ವಕೀಲರನ್ನು ಸಂಪರ್ಕಿಸಲು ನನಗೆ ಸಲಹೆ ನೀಡಲಾಯಿತು, ಅವರು ಈ ನೊಟೀಸ್‌ಗೆ ಪ್ರತಿಕ್ರಿಯೆ ರೆಡಿ ಮಾಡುವುದಕ್ಕೂ ಮೊದಲು ನನ್ನ ಬ್ಯಾಂಕ್ ಖಾತೆ ದಾಖಲೆಗಳನ್ನು ಸಂಗ್ರಹಿಸಿಕೊಂಡು ಬರುವಂತೆ ಹೇಳಿದರು ಎಂದು ಹೇಳಿದರು. 

ಆನ್​ಲೈನ್​ ವಹಿವಾಟಿನಿಂದ ಬಯಲಾಗೋಯ್ತು ಪಾನೀಪುರಿ ಮಾರಾಟಗಾರನ ಗುಟ್ಟು! ಕೇಳಿದ್ರೆ ನೀವೂ ಸುಸ್ತು!

ದಿನಕ್ಕೆ ಕೇವಲ 400 ರೂ. ಸಂಪಾದಿಸುವ ರಯೀಸ್ ಅವರು ತನ್ನ ವೃದ್ಧ ಅಸ್ವಸ್ಥ ಪೋಷಕರು ಇರುವ ಇಡೀ ಕುಟುಂಬವನ್ನು ಸಾಕುತ್ತಿದ್ದಾರೆ. ಆದರೆ ಆದಾಯ ತೆರಿಗೆ ಇಲಾಖೆಯ ಈ ನೊಟೀಸ್ ಅವರಿಗೆ ತೀವ್ರ ನೋವನ್ನುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ. ಐಟಿ ಇಲಾಖೆ ನೋಟಿಸ್‌, ಆಘಾತವು ತೀವ್ರ ಆತಂಕವನ್ನು ಉಂಟುಮಾಡಿದೆ ಮತ್ತು ನನ್ನ ರಕ್ತದೊತ್ತಡ ಹೆಚ್ಚಾಗಿದೆ. ಈ ಬಿಕ್ಕಟ್ಟನ್ನು ಹೇಗೆ ಎದುರಿಸಬೇಕೆಂದು ನನಗೆ ತಿಳಿದಿಲ್ಲ, ಅಲ್ಲದೇ ನನ್ನ ತಾಯಿ ಮೊದಲೇ ಖಿನ್ನತೆಯಿಂದ ಬಳಲುತ್ತಿದ್ದು, ಈ ಸುದ್ದಿ ಅವರ ಸ್ಥಿತಿಯನ್ನು ಮತ್ತಷ್ಟು ವಿಷಮಗೊಳಿಸಿದೆ ಎಂದು ಮೊಹಮ್ಮದ್ ರಯೀಸ್ ಹೇಳಿದ್ದಾರೆ.