ITR ಸಲ್ಲಿಕೆಗೆ ಜು.31 ಅಂತಿಮ ಗಡುವು; ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಕೆ ಮಾಡೋದ್ರಿಂದ ಏನೆಲ್ಲ ಪ್ರಯೋಜನಗಳಿವೆ?
2022-23ನೇ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಗೆ ಜು.31 ಅಂತಿಮ ಗಡುವು. ಈ ದಿನಾಂಕದೊಳಗೆ ಐಟಿಆರ್ ಸಲ್ಲಿಕೆ ಮಾಡೋದ್ರಿಂದ ತೆರಿಗೆದಾರರಿಗೆ ಅನೇಕ ಪ್ರಯೋಜನಗಳು ಕೂಡ ಇವೆ. ಹಾಗಾದ್ರೆ ಏನೆಲ್ಲ ಪ್ರಯೋಜನಗಳಿವೆ? ಇಲ್ಲಿದೆ ಮಾಹಿತಿ.
Business Desk:ಅಡಿಟ್ ಗೊಳಪಡದ ಖಾತೆಗಳನ್ನು ಹೊಂದಿರುವ ವ್ಯಕ್ತಿಗಳು ಹಾಗೂ ವೇತನ ಪಡೆಯೋ ಉದ್ಯೋಗಿಗಳಿಗೆ 2022-23ನೇ ಆರ್ಥಿಕ ಸಾಲಿನ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಗೆ ಜುಲೈ 31 ಅಂತಿಮ ಗಡುವಾಗಿದೆ. ಹೀಗಾಗಿ ತೆರಿಗೆದಾರರು ದಂಡದಿಂದ ತಪ್ಪಿಸಿಕೊಳ್ಳಲು 2022-23ನೇ ಹಣಕಾಸು ಸಾಲಿನ ಐಟಿಆರ್ ಅನ್ನು ಆನ್ ಲೈನ್ ನಲ್ಲಿ ಅಂತಿಮ ಗಡುವಿನೊಳಗೆ ಸಲ್ಲಿಕೆ ಮಾಡೋದು ಅಗತ್ಯ. ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ ಪ್ರಕಾರ ವಿಳಂಬ ಐಟಿಆರ್ ಸಲ್ಲಿಕೆಗೆ 5,000ರೂ. ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಇದಕ್ಕೂ ತಡವಾಗಿ ಐಟಿಆರ್ ಸಲ್ಲಿಕೆ ಮಾಡೋರಿಗೆ ಇದರ ದುಪ್ಪಟ್ಟು ಮೊತ್ತದ ದಂಡ ವಿಧಿಸಲಾಗುತ್ತದೆ. ಅನೇಕ ಜನರು ಐಟಿಆರ್ ಫೈಲ್ ಮಾಡೋದು ಕಾನೂನುಬದ್ಧವಾದ ಪ್ರಕ್ರಿಯೆಯಾಗಿದ್ದು, ಇದರ ಮೂಲಕ ಅವರ ತೆರಿಗೆ ವ್ಯಾಪ್ತಿಗೊಳಪಡುವ ಆದಾಯದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಭಾವಿಸುತ್ತೇವೆ. ಆದರೆ, ಕೇವಲ ನಮ್ಮ ಆದಾಯ ಹಾಗೂ ವೆಚ್ಚದ ಮಾಹಿತಿ ನೀಡುವುದಕ್ಕಾಗಿ ಮಾತ್ರ ಸಮಯಕ್ಕೆ ಸರಿಯಾಗಿ ಐಟಿಆರ್ ಫೈಲ್ ಮಾಡೋದಲ್ಲ, ಇದರಿಂದ ಇತರ ಕೆಲವು ಪ್ರಯೋಜನಗಳಿವೆ ಕೂಡ.
ದಂಡ ತಪ್ಪಿಸಲು
ಅಂತಿಮ ಗಡುವಿನೊಳಗೆ ಐಟಿಆರ್ ಫೈಲ್ ಮಾಡದಿದ್ರೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಹಾಗೆಯೇ ಆದಾಯ ತೆರಿಗೆ ನಿಯಮಗಳ ಅನ್ವಯ ಇತರ ಪರಿಣಾಮಗಳನ್ನು ಕೂಡ ಎದುರಿಸಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 234A ಅಡಿಯಲ್ಲಿ ಐಟಿಆರ್ ಫೈಲ್ ಮಾಡುವಲ್ಲಿ ವಿಳಂಬವಾದ್ರೆ ಅದರಿಂದ ಪಾವತಿಸಬೇಕಿರುವ ತೆರಿಗೆ ಮೇಲಿನ ಬಡ್ಡಿ ಕೂಡ ಹೆಚ್ಚುತ್ತದೆ.
ಉತ್ತಮ ಕ್ರೆಡಿಟ್ ಸ್ಕೋರ್ ಸಾಲ ಪಡೆಯಲು ಮಾತ್ರವಲ್ಲ, ಉಳಿತಾಯಕ್ಕೂ ನೆರವು ನೀಡುತ್ತೆ; ಹೇಗೆ? ಇಲ್ಲಿದೆ ಮಾಹಿತಿ
ಸಾಲ ಪಡೆಯೋದು ಸುಲಭ
ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಗೆ ಸಂಬಂಧಿಸಿ ನೀವು ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದರೆ ನಿಮ್ಮ ಸಾಲಗಳಿಗೆ ಅನುಮೋದನೆ ಪಡೆಯೋದು ಸುಲಭ. ಸಾಲ ಕೋರಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಾಲಗಾರರು ಬ್ಯಾಂಕ್ ಗಳಿಗೆ ಐಟಿಆರ್ ಸ್ಟೇಟ್ಮೆಂಟ್ ಪ್ರತಿಯನ್ನು ತಮ್ಮ ಆದಾಯದ ದಾಖಲೆಯಾಗಿ ಸಲ್ಲಿಕೆ ಮಾಡುತ್ತಾರೆ. ಬ್ಯಾಂಕ್ ಗಳಿಂದ ಪಡೆಯುವ ಯಾವುದೇ ಸಾಲದ ಅನುಮೋದನೆಗೆ ಐಟಿಆರ್ ದಾಖಲೆ ಕಡ್ಡಾಯ. ಹೀಗಾಗಿ ಐಟಿಆರ್ ಫೈಲ್ ಮಾಡದ ವ್ಯಕ್ತಿ ಬ್ಯಾಂಕ್ ಗಳಿಂದ ಸಾಲ ಪಡೆಯಲು ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ.
ನಷ್ಟವನ್ನು ಮುಂದುವರಿಸಬಹುದು
ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 70 ಹಾಗೂ 71ರ ಅನ್ವಯ ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿ ನಿಮಗೆ ನಷ್ಟವಾಗಿದ್ರೆ ಅದನ್ನು ಮುಂದಿನ ವರ್ಷಕ್ಕೆ ಮಂದುವರಿಸುವ ಅವಕಾಶವಿದೆ. ಅಂದರೆ ನೀವು ನಿಮ್ಮ ನಷ್ಟವನ್ನು ಮುಂದಿನ ಮೌಲ್ಯಮಾಪನ ವರ್ಷಕ್ಕೆ ಮುಂದುವರಿಸಬಹುದು.
ತೆರಿಗೆ ಕಡಿತ ಕ್ಲೇಮ್ ಮಾಡಲು ನೆರವು
ಒಂದು ವೇಳೆ ನೀವು ಐಟಿಆರ್ ಸಲ್ಲಿಕೆ ಮಾಡಿದ್ರೆ, ಸರ್ಕಾರ ನಿಮಗೆ ಕೆಲವು ಕಡಿತಗಳನ್ನು ಒದಗಿಸುತ್ತದೆ. ಇದು ತೆರಿಗೆದಾರರ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಹೆಚ್ಚಿನ ಜನರಿಗೆ ತಮ್ಮ ತೆರಿಗೆಗಳನ್ನು ಪಾವತಿಸಲು ಪ್ರೋತ್ಸಾಹ ನೀಡುತ್ತದೆ. ಈ ಕಡಿತಗಳು ಹಾಗೂ ವಿನಾಯ್ತಿಗಳನ್ನು ಕೆಲವು ಹೂಡಿಕೆಗಳಲ್ಲಿ ಪಡೆಯಬಹುದು. ಹಾಗೆಯೇ ನೀವು ಟಿಡಿಎಸ್ ಕೂಡ ಕ್ಲೇಮ್ ಮಾಡಬಹುದು.
ಒಂದೇ ವರ್ಷದಲ್ಲಿ .1.01 ಲಕ್ಷ ಕೋಟಿ ಜಿಎಸ್‌ಟಿ ವಂಚನೆ ಪತ್ತೆ
ಪರಿಶೀಲನೆ ಅಗತ್ಯ
ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದ್ರೆ ಮುಗಿಯೋದಿಲ್ಲ, ಅದರ ಪರಿಶೀಲನೆ ಕೂಡ ಕಡ್ಡಾಯ. ಬಹುತೇಕರು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಬಳಿಕ ನಮ್ಮ ಕೆಲಸ ಮುಗಿಯಿತು ಎಂದು ಭಾವಿಸುತ್ತಾರೆ. ಆದರೆ, ಆದಾಯ ತೆರಿಗೆ ರಿಟರ್ನ್ ಪರಿಶೀಲನೆ ಮಾಡಿದ ಬಳಿಕವೇ ಆ ಪ್ರಕ್ರಿಯೆ ಸಂಪೂರ್ಣವಾಗೋದು. ಐಟಿಆರ್ ಇ-ಪರಿಶೀಲನೆ (e-verification) ಮಾಡಲು ಆರು ವಿಧಾನಗಳನ್ನು ಅನುಸರಿಸಬಹುದು. ನೆಟ್ ಬ್ಯಾಂಕಿಂಗ್, ಬ್ಯಾಂಕ್ ಎಟಿಎಂ, ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಒಟಿಪಿ, ಡಿಮ್ಯಾಟ್ ಖಾತೆ, ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿ. ಆದಾಯ ತೆರಿಗೆ ಇಲಾಖೆ ಇ-ಪೋರ್ಟಲ್ ನಲ್ಲಿ ಕೂಡ ಐಟಿಆರ್ ಇ-ಪರಿಶೀಲನೆ ಮಾಡಬಹುದು.