ಈ ಕಂಪನಿ ಉದ್ಯೋಗಿಗಳ ವೇತನ ಕೇಳಿದ್ರೆ ತಲೆ ತಿರುಗುತ್ತೆ!220 ಮಂದಿ ವಾರ್ಷಿಕ ಪ್ಯಾಕೇಜ್ 1ಕೋಟಿ ರೂ.ಗಿಂತಲೂ ಅಧಿಕ
ಕೈ ತುಂಬಾ ಸಂಬಳ ನೀಡಲು ಐಟಿ ವಲಯ ಮೊದಲೇ ಫೇಮಸ್. ಅದರಲ್ಲೂ ಐಟಿಸಿ ಸಂಸ್ಥೆ ಒಂದು ಕೈ ಮೇಲೆ ಎಂದೇ ಹೇಳಬಹುದು. ಭಾರತದಲ್ಲಿ ತನ್ನ 220 ಉದ್ಯೋಗಿಗಳಿಗೆ ವಾರ್ಷಿಕ 1 ಕೋಟಿ ರೂ.ಗಿಂತಲೂ ಅಧಿಕ ವೇತನ ನೀಡುವ ಮೂಲಕ ಸದ್ಯ ಗಮನ ಸೆಳೆದಿದೆ.
ನವದೆಹಲಿ (ಜೂ.23): ಇಂದು ಪ್ರತಿಭೆ ಇರೋರಿಗೆ ಉತ್ತಮ ಅವಕಾಶ ಮಾತ್ರವಲ್ಲ, ವೇತನವೂ ದೊರೆಯುತ್ತದೆ. ಅದರಲ್ಲೂ ಐಟಿ ಕ್ಷೇತ್ರದಲ್ಲಿ ಕೇಳೋದೇ ಬೇಡ. ತಿಂಗಳಿಗೆ ಲಕ್ಷದ ಮೇಲೆ ವೇತನ ಪಡೆಯೋರ ಸಂಖ್ಯೆಗೇನೂ ಕಡಿಮೆಯಿಲ್ಲ. ಕೆಲವು ಕಂಪನಿಗಳ ಉದ್ಯೋಗಿಗಳಂತೂ ವಾರ್ಷಿಕ ಕೋಟಿ ರೂಪಾಯಿ ತನಕ ಪ್ಯಾಕೇಜ್ ಹೊಂದಿರುತ್ತಾರೆ. ಇವೆಲ್ಲದರ ನಡುವೆ ದೇಶದ ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಒಂದಾಗಿರುವ ಐಟಿಸಿ ( ITC) 220 ಉದ್ಯೋಗಿಗಳಿಗೆ ವಾರ್ಷಿಕ ಒಂದು ಕೋಟಿ ರೂಪಾಯಿಗಿಂತಲೂ ಅಧಿಕ ವೇತನ ನೀಡುತ್ತಿದೆ ಎಂದು ವರದಿಯಾಗಿದೆ.
2021-22ನೇ ಆರ್ಥಿಕ ಸಾಲಿನಲ್ಲಿ ಐಟಿಸಿಯಲ್ಲಿ 1 ಕೋಟಿ ರೂ.ಗಿಂತಲೂ ಅಧಿಕ ವೇತನ ಪಡೆಯುವ ಉದ್ಯೋಗಿಗಳ ಸಂಖ್ಯೆಯಲ್ಲಿ ಶೇ.44ರಷ್ಟು ಹೆಚ್ಚಳವಾಗಿದೆ ಎಂದು ಕಂಪನಿಯ ಇತ್ತೀಚಿಗಿನ ವಾರ್ಷಿಕ ವರದಿ ತಿಳಿಸಿದೆ. ಈ ವರದಿ ಪ್ರಕಾರ ಕಂಪನಿಯ 220 ಉದ್ಯೋಗಿಗಳು ವಾರ್ಷಿಕ ಒಂದು ಕೋಟಿ ರೂ.ಗಿಂತಲೂ ಅಧಿಕ ವಾರ್ಷಿಕ ಪ್ಯಾಕೇಜ್ ಪಡೆಯುತ್ತಿದ್ದಾರೆ. 2020-21ನೇ ಸಾಲಿನಲ್ಲಿ ಇಷ್ಟು ದೊಡ್ಡ ಮೊತ್ತದ ವೇತನ ಪಡೆಯುವ ಉದ್ಯೋಗಿಗಳ ಸಂಖ್ಯೆ 153 ಆಗಿತ್ತು.
ಇನ್ನು ಐಟಿಸಿ ಅಧ್ಯಕ್ಷ (Chairman) ಹಾಗೂ ವ್ಯವಸ್ಥಾಪಕ ನಿರ್ದೇಶಕ (MD) ಸಂಜೀವ್ ಪುರಿ ವಾರ್ಷಿಕ ಸಂಭಾವನೆ 2022ನೇ ಆರ್ಥಿಕ ಸಾಲಿನಲ್ಲಿ ಶೇ.5.35ರಷ್ಟು ಹೆಚ್ಚಳಗೊಂಡಿದ್ದು, 12.59 ಕೋಟಿ ರೂ. ಆಗಿದೆ. ಪುರಿ ಅವರ ವೇತನ ಉಳಿದ ಉದ್ಯೋಗಿಗಳಿಗೆ ಹೋಲಿಸಿದ್ರೆ 224:1 ಅನುಪಾತದಲ್ಲಿದೆ ಎಂದು ಕಂಪನಿಯ ವಾರ್ಷಿಕ ವರದಿ ತಿಳಿಸಿದೆ. 2021ನೇ ಹಣಕಾಸು ಸಾಲಿನಲ್ಲಿ ಪುರಿ ಅವರ ಒಟ್ಟು ಸಂಭಾವನೆ 11.95ಕೋಟಿ ರೂ. ಆಗಿತ್ತು.ಇನ್ನು 2022ನೇ ಸಾಲಿನಲ್ಲಿ ಐಟಿಸಿ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಸುಮಂತ್ ಹಾಗೂ ಆರ್. ಟಂಡನ್ ಅವರ ಸಂಭಾವನೆ 5.76 ಕೋಟಿ ರೂ. ಹಾಗೂ ಇನ್ನೊಬ್ಬ ಕಾರ್ಯನಿರ್ವಾಹಕ ನಿರ್ದೇಶಕ ಎನ್. ಆನಂದ್ ಅವರ ಸಂಭಾವನೆ 5.60 ಕೋಟಿ ರೂ. ಆಗಿದೆ.
2022ರ ಮಾರ್ಚ್ 31ಕ್ಕೆ ಅನ್ವಯಿಸುವಂತೆ ಒಟ್ಟು ಐಟಿಸಿ ಉದ್ಯೋಗಿಗಳ ಸಂಖ್ಯೆ 23,829. ಇದು ಕಳೆದ ಆರ್ಥಿಕ ಸಾಲಿಗೆ ಹೋಲಿಸಿದ್ರೆ ಶೇ.8.4ರಷ್ಟು ಕಡಿಮೆ. ಇದರಲ್ಲಿ 21,568 ಪುರುಷರು ಹಾಗೂ 2,261 ಮಹಿಳಾ ಉದ್ಯೋಗಿಗಳು ಸೇರಿದ್ದಾರೆ. ಕಾಯಂ ವರ್ಗವನ್ನು ಹೊರತುಪಡಿಸಿ ಈ ಕಂಪನಿಯಲ್ಲಿ ಇತರ 25,513 ಉದ್ಯೋಗಿಗಳಿದ್ದಾರೆ. 2021ರ ಮಾರ್ಚ್ 31ಕ್ಕೆ ಅನ್ವಯಿಸುವ ಅಂಕಿಅಂಶಗಳ ಪ್ರಕಾರ ಈ ಕಂಪನಿಯಲ್ಲಿ ಒಟ್ಟು 26,017 ಉದ್ಯೋಗಿಗಳಿದ್ದರು.
2022ನೇ ಆರ್ಥಿಕ ಸಾಲಿನಲ್ಲಿ ಐಟಿಸಿ ಉದ್ಯೋಗಿಗಳ ಸರಾಸರಿ ಸಂಭಾವನೆ ಶೇ.7ರಷ್ಟು ಹೆಚ್ಚಳವಾಗಿದೆ. ಇನ್ನು ಮಧ್ಯಮ ಕ್ರಮಾಂಕದ ಸಂಭಾವನೆಯಲ್ಲಿ ಶೇ.4ರಷ್ಟು ಹೆಚ್ಚಳವಾಗಿದೆ. ಇನ್ನು ಪ್ರಮುಖ ಮ್ಯಾನೇಜಿಂಗ್ ಹುದ್ದೆಯ್ಲಿರುವ ಉದ್ಯೋಗಿಗಳ ವೇತನದಲ್ಲಿ ಶೇ.8ರಷ್ಟು ಏರಿಕೆಯಾಗಿದೆ.
2022ರ ಮಾರ್ಚ್ 31ಕ್ಕೆ ಅಂತ್ಯವಾಗುವಂತೆ ಐಟಿಸಿ ಒಟ್ಟು ಆದಾಯ 59,101 ಕೋಟಿ ರೂ. ಅದರ ಹಿಂದಿನ ಸಾಲಿನಲ್ಲಿ ಇದು 48,151.24 ಕೋಟಿ ರೂ. ಆಗಿತ್ತು.
ಐಕಿಯಾದಲ್ಲಿ ಸ್ಥಳೀಯರಿಗೆ ಶೇ.75 ಉದ್ಯೋಗಾವಕಾಶ ಭರವಸೆ: ಸಿಎಂ ಬೊಮ್ಮಾಯಿ
ವಿಪ್ರೋ (Wipro) ಸಿಇಒ ಥಿಯೆರಿ ಡೆಲಾಪೋರ್ಟ್ (Thierry Delaporte) 2022ರ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ಸಾಲಿನಲ್ಲಿ ವಾರ್ಷಿಕ 79.8 ಕೋಟಿ ರೂ.(10.51 ಮಿಲಿಯನ್ ಡಾಲರ್) ವೇತನ ಪಡೆಯುವ ಮೂಲಕ ಭಾರತದ ಅತೀಹೆಚ್ಚು ವೇತನ (Salary) ಪಡೆಯೋ ಸಿಇಒ (CEO) ಎಂಬ ಖ್ಯಾತಿ ಗಳಿಸಿದ್ದಾರೆ. ವಿಪ್ರೋ ಸಿಇಒ ನಂತರ ಅಧಿಕ ವೇತನ ಪಡೆಯುತ್ತಿರೋರು ಇನ್ಫೋಸಿಸ್ (Infosys) ಕಂಪನಿಯ ಸಿಇಒ (CEO) ಸಲೀಲ್ ಪಾರೇಖ್ (Salil Parekh). 2022ನೇ ಹಣಕಾಸು ಸಾಲಿನಲ್ಲಿ ಇನ್ಫೋಸಿಸ್ ಸಿಇಒ ವೇತನದಲ್ಲಿ ಶೇ.43ರಷ್ಟು ಹೆಚ್ಚಳವಾಗೋ ಮೂಲಕ ವಾರ್ಷಿಕ 71 ಕೋಟಿ ರೂ. ತಲುಪಿತ್ತು. ಟಿಸಿಎಸ್ (TCS) ಸಿಇಒ ರಾಜೇಶ್ ಗೋಪಿನಾಥನ್ ಅವರ ವಾರ್ಷಿಕ ವೇತನ 25.76 ಕೋಟಿ ರೂ. ಎಚ್ ಸಿಎಲ್ ಟೆಕ್ ಸಿಇಒ ವಾರ್ಷಿಕ ಪ್ಯಾಕೇಜ್ 32.21 ಕೋಟಿ ರೂ. ಹಾಗೂ ಟೆಕ್ ಮಹೀಂದ್ರ ಸಿಇಒ ವೇತನ 22 ಕೋಟಿ ರೂ. ಇದೆ.