ಕ್ರಿಪ್ಟೋ ಕರೆನ್ಸಿ ನಕಲಿ ಎಕ್ಸ್‌ಚೇಂಜ್‌ಗಳು, ಆ್ಯಪ್‌ಗಳ ಬಗ್ಗೆ ಎಚ್ಚರ; ಭಾರತೀಯ ಹೂಡಿಕೆದಾರರಿಗೆ 1000 ಕೋಟಿ ರೂ. ವಂಚನೆ!
ಜಾಹೀರಾತಿನ ಮೋಡಿಗೆ ಸಿಲುಕಿ ಅಥವಾ ಉಡುಗೊರೆಗಳಿಗೆ ಮಾರು ಹೋಗಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡ್ಬೇಡಿ.ಕ್ರಿಪ್ಟೋ ಕರೆನ್ಸಿ ನಕಲಿ ಎಕ್ಸ್‌ಚೇಂಜ್‌ಗಳು, ಆ್ಯಪ್‌ಗಳ ಬೃಹತ್ ಜಾಲವೇ ಇದ್ದು,ಇದರ ಪ್ರಭಾವಕ್ಕೆ ಸಿಕ್ಕು ಈಗಾಗಲೇ ಅನೇಕ ಹೂಡಿಕೆದಾರರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.
ನವದೆಹಲಿ (ಜೂ.23): ಕ್ರಿಪ್ಟೋ ಕರೆನ್ಸಿ ( cryptocurrency) ಹೂಡಿಕೆದಾರರಿಗೆ (Investors) ಕಳೆದ ಕೆಲವು ದಿನಗಳಿಂದ ಒಂದರ ಮೇಲೊಂದು ಹೊಡೆತ ಬೀಳುತ್ತಿದೆ. ಈಗಾಗಲೇ ಜಾಗತಿಕ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯಲ್ಲಿನ ಕುಸಿತದಿಂದ ಹಣ ಕಳೆದುಕೊಂಡು ಕೈ ಸುಟ್ಟುಕೊಂಡಿರುವ ಹೂಡಿಕೆದಾರರು, ನಕಲಿ ಕ್ರಿಪ್ಟೋ ಕರೆನ್ಸಿ ವಿನಿಮಯ ಸಂಸ್ಥೆಗಳಿಂದ (Fake cryptocurrency exchanges)ಕೂಡ ವಂಚನೆಗೊಳಗಾಗುತ್ತಿರೋದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಇಂಥ ವಂಚನೆ ಜಾಲಕ್ಕೆ ಭಾರತೀಯ ಹೂಡಿಕೆದಾರರು ಕೂಡ ಬಲಿಯಾಗಿದ್ದು, ಅಂದಾಜು 1,000 ಕೋಟಿ ರೂ. (128 ಮಿಲಿಯನ್ ಡಾಲರ್) ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಹೂಡಿಕೆದಾರರಿಗೆ ವಂಚನೆ ಮಾಡುತ್ತಿದ್ದ ಫಿಶಿಂಗ್ ಡೊಮೇನ್‌ಗಳು ಮತ್ತು ಆ್ಯಂಡ್ರಾಯ್ಡ್ ಆಧಾರಿತ ನಕಲಿ ಕ್ರಿಪ್ಟೋ ಅಪ್ಲಿಕೇಷನ್ ಗಳ ಬಗ್ಗೆ ತನಿಖೆ ನಡೆಸುತ್ತಿರೋದಾಗಿ ಸೈಬರ್ ಸೆಕ್ಯುರಿಟಿ ಕಂಪನಿ ಕ್ಲೋಡ್ ಸೆಕ್ (CloudSEK) ತಿಳಿಸಿದೆ. ಇದು ದೊಡ್ಡ ಮಟ್ಟದ ವಂಚನೆ ಜಾಲವಾಗಿದ್ದು, ಹೆಚ್ಚಿನ ಎಚ್ಚರಿಕೆ ಹೊಂದಿರದ ಜನರನ್ನು ಆಕರ್ಷಿಸುತ್ತಿದೆ. ಅನೇಕ ನಕಲಿ ವೆಬ್ ಸೈಟ್ ಗಳು ಇಂಗ್ಲೆಂಡ್ ಮೂಲದ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ( trading) ಪ್ಲ್ಯಾಟ್ ಫಾರ್ಮ್ (platform) 'ಕಾಯಿನ್ ಎಗ್' ( CoinEgg) ಸೋಗಿನಲ್ಲಿ ವಂಚನೆ ನಡೆಸುತ್ತಿವೆ ಎಂದು ವರದಿ ಹೇಳಿದೆ. ಇಂಥ ಕ್ರಿಪ್ಟೋ ಕರೆನ್ಸಿ ವಂಚನೆಗೊಳಗಾದ ವ್ಯಕ್ತಿಯೊಬ್ಬ ಠೇವಣಿ ಮೊತ್ತ, ತೆರಿಗೆ ಇತ್ಯಾದಿ ಸೇರಿ ಒಟ್ಟು 50ಲಕ್ಷ ರೂ. ಕಳೆದುಕೊಂಡಿದ್ದಾನೆ ಎಂದು ಕ್ಲೋಡ್ ಸೆಕ್ ತಿಳಿಸಿದೆ.
ಐಕಿಯಾದಲ್ಲಿ ಸ್ಥಳೀಯರಿಗೆ ಶೇ.75 ಉದ್ಯೋಗಾವಕಾಶ ಭರವಸೆ: ಸಿಎಂ ಬೊಮ್ಮಾಯಿ
'ಇಂಥ ನಕಲಿ ಕ್ರಿಪ್ಟೋ ಕರೆನ್ಸಿ ವಿನಿಮಯ ಕೇಂದ್ರಗಳ ಮೂಲಕ ಹೂಡಿಕೆದಾರರು ಸುಮಾರು 1,000 ಕೋಟಿ ರೂ. ಕಳೆದುಕೊಂಡಿದ್ದಾರೆ' ಎಂದು ಕ್ಲೋಡ್ ಸೆಕ್ ಸಂಸ್ಥಾಪಕ ಹಾಗೂ ಸಿಇಒ ರಾಹುಲ್ ಸಸಿ ತಿಳಿಸಿದ್ದಾರೆ.
ವಂಚನೆ ಹೇಗೆ ನಡೆಯುತ್ತೆ?
ಹೂಡಿಕೆದಾರರು ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯಿಂದ ತಮ್ಮ ಗಮನವನ್ನು ಬೇರೆ ಕಡೆ ಹರಿಸಿದ ತಕ್ಷಣ ವಂಚಕರು ಅವರ ಗಮನವನ್ನು ತಮ್ಮೆಡೆಗೆ ಸೆಳೆಯಲು ಪ್ರಯತ್ನಿಸುತ್ತಾರೆ ಎನ್ನುತ್ತಾರೆ ರಾಹುಲ್ ಸಸಿ. ಈ ವಂಚಕರು ಮೊದಲಿಗೆ ನಕಲಿ ಡೊಮೇನ್‌ಗಳನ್ನು ಸೃಷ್ಟಿಸುತ್ತಾರೆ. ಇವು ಅಧಿಕೃತ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ಪ್ಲ್ಯಾಟ್ ಫಾರ್ಮ್ ಮಾದರಿಯಲ್ಲೇ ಇರುತ್ತವೆ. ಈ ವೆಬ್ ಸೈಟ್ ಗಳ ಡ್ಯಾಶ್ ಬೋರ್ಡ್ ವಿನ್ಯಾಸ ಸೇರಿದಂತೆ ಎಲ್ಲವೂ ಅಧಿಕೃತ ವೆಬ್ ಸೈಟ್ ಗಳ ಪ್ರತಿರೂಪದಂತೆಯೇ ಇರುತ್ತವೆ. ಹೀಗಾಗಿ ಹೂಡಿಕೆದಾರರಿಗೆ ಯಾವುದೇ ಅನುಮಾನ ಕಾಡುವುದಿಲ್ಲ.
ಆ ಬಳಿಕ ವಂಚಕರು ಸೋಷಿಯಲ್ ಮೀಡಿಯಾದಲ್ಲಿ ಮಹಿಳೆ ಹೆಸರಿನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ಹೂಡಿಕೆದಾರರ ಜೊತೆ ಸ್ನೇಹ ಬೆಳೆಸುತ್ತಾರೆ. ಆ ಬಳಿಕ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿ ಟ್ರೇಡಿಂಗ್ ಪ್ರಾರಂಭಿಸುವಂತೆ ಅವರ ಮೇಲೆ ಒತ್ತಡ ಹೇರುತ್ತಾರೆ. ಅಷ್ಟೇ ಅಲ್ಲ, ನಿರ್ದಿಷ್ಟ ಕ್ರಿಪ್ಟೋ ವಿನಿಮಯಕ್ಕೆ 100 ಡಾಲರ್ ಕ್ರೆಡಿಟ್ ಉಡುಗೊರೆ ಕೂಡ ನೀಡುವ ಆಮಿಷ ತೋರಿಸಲಾಗುತ್ತದೆ. ಇಂಥ ಉಡುಗೊರೆಗಳ ಮೂಲಕ ಹೂಡಿಕೆದಾರರನ್ನು ಆಕರ್ಷಿಸಿ ನಕಲಿ ಟ್ರೇಡಿಂಗ್ ಪ್ಲಾಟ್ ಫಾರ್ಮ್ ನಲ್ಲಿ ಹೂಡಿಕೆ ಮಾಡುವಂತೆ ಮಾಡಲಾಗುತ್ತದೆ. ಪ್ರಾರಂಭದಲ್ಲಿ ಲಾಭ ಗಳಿಸುವಂತೆ ಮಾಡಲಾಗುತ್ತದೆ. ಇದ್ರಿಂದ ಹೂಡಿಕೆದಾರರಿಗೆ ಆ ಪ್ಲ್ಯಾಟ್ ಫಾರ್ಮ್ ಮೇಲೆ ನಂಬಿಕೆ ಹುಟ್ಟುತ್ತದೆ. ಮತ್ತಷ್ಟು ಹೂಡಿಕೆ ಮಾಡುತ್ತಾರೆ.
Deadline Extends:ಕ್ರೆಡಿಟ್, ಡೆಬಿಟ್ ಕಾರ್ಡ್ ಗ್ರಾಹಕರೇ ಗಮನಿಸಿ, RBI ಹೊಸ ನಿಯಮ ಅನುಷ್ಠಾನದ ಗಡುವು ವಿಸ್ತರಣೆ
ಒಮ್ಮೆ ಹೂಡಿಕೆದಾರ ತನ್ನ ಸ್ವಂತ ಹಣವನ್ನು ನಕಲಿ ಕ್ರಿಪ್ಟೋ ವಿನಿಮಯ ಕೇಂದ್ರದಲ್ಲಿ ಹೂಡಿಕೆ ಮಾಡಿದ್ರೆ ಮುಗಿಯಿತು ಆತನ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಇದ್ರಿಂದ ಹೂಡಿಕೆ ಮಾಡಿದ ವ್ಯಕ್ತಿಗೆ ಆ ಹಣ ಹಿಂಪಡೆಯಲು ಸಾಧ್ಯವಾಗೋದಿಲ್ಲ. ಇಲ್ಲಿಗೆ ಮುಗಿಯೋದಿಲ್ಲ. ಈ ರೀತಿ ಮೋಸಕ್ಕೊಳಗಾದವರು ಖಾತೆ ನಿಷ್ಕ್ರಿಯಗೊಂಡ ಬಗ್ಗೆ ದೂರು ನೀಡಲು ವಿವಿಧ ಪ್ಲ್ಯಾಟ್ ಫಾರ್ಮ್ ಗೆ ಭೇಟಿ ನೀಡಿದರೆ, ಈ ಹಿಂದೆ ಮೋಸ ಮಾಡಿದವರು ಅಥವಾ ಹೊಸ ವಂಚಕರು ತನಿಖಾಧಿಕಾರಿಗಳ ಸೋಗಿನಲ್ಲಿ ಅವರನ್ನು ಸಂಪರ್ಕಿಸಿ ಐಟಿ ಕಾರ್ಡ್ ಗಳು ಹಾಗೂ ಬ್ಯಾಂಕ್ ಮಾಹಿತಿಗಳನ್ನು ಇ-ಮೇಲ್ ಮೂಲಕ ಕಳುಹಿಸುವಂತೆ ತಿಳಿಸುತ್ತಾರೆ. ಈ ಮಾಹಿತಿಗಳನ್ನು ಪಡೆದು ಮತ್ತೆ ಬೇರೆ ಮಾದರಿಯಲ್ಲಿ ವಂಚನೆಗಳನ್ನು ನಡೆಸುತ್ತಾರೆ.