Asianet Suvarna News Asianet Suvarna News

ರಷ್ಯಾ-ಉಕ್ರೇನ್ ಯುದ್ಧ ಹಿನ್ನೆಲೆ, 2022ನೇ ಸಾಲಿನ ಭಾರತದ GDP ಬೆಳವಣಿಗೆ ಶೇ.4.6ಕ್ಕೆ ಇಳಿಸಿದ ವಿಶ್ವಸಂಸ್ಥೆ

*ಭಾರತದ ಯೋಜಿತ ಜಿಡಿಪಿ ಬೆಳವಣಿಗೆಯನ್ನು ಶೇ.2ರಷ್ಟು ತಗ್ಗಿಸಿದ ವಿಶ್ವಸಂಸ್ಥೆ
*ಭಾರತ 2022ನೇ ಸಾಲಿನಲ್ಲಿ ಶೇ. 6.7 ಬೆಳವಣಿಗೆ ದಾಖಲಿಸಲಿದೆ ಎಂದು ಅಂದಾಜಿಸಲಾಗಿತ್ತು
*ಜಾಗತಿಕ ಆರ್ಥಿಕ ಬೆಳವಣಿಗೆ ದರ ಶೇ.3.6ರಿಂದ ಶೇ.2.6ಕ್ಕೆ ಇಳಿಕೆ 

2022 GDP growth of India  downgraded to 4.6 percent due to ongoing war in Ukraine says UN report
Author
Bangalore, First Published Mar 25, 2022, 6:50 PM IST

ನವದೆಹಲಿ (ಮಾ.25): 2022ನೇ ಸಾಲಿನಲ್ಲಿ ಭಾರತದ (India) ಯೋಜಿತ ಆರ್ಥಿಕ ಬೆಳವಣಿಗೆಯನ್ನು(GDP) ವಿಶ್ವಸಂಸ್ಥೆ(United Nations) ಶೇ.2ರಷ್ಟು ತಗ್ಗಿಸಿ  ಶೇ.4.6ಕ್ಕೆ ನಿಗದಿಪಡಿಸಿದೆ. ರಷ್ಯಾ(Russia)-ಉಕ್ರೇನ್(Ukraine) ಯುದ್ಧ, ಇಂಧನ ಲಭ್ಯತೆ ಹಾಗೂ ಬೆಲೆಗೆ ಸಂಬಂಧಿಸಿದ ಅಡ್ಡಿ , ವಾಣಿಜ್ಯ ನಿರ್ಬಂಧಗಳಿಂದ ಸಮಸ್ಯೆಗಳು, ಆಹಾರ ಹಣದುಬ್ಬರ, ಬಿಗಿಯಾದ ನೀತಿಗಳು ಹಾಗೂ ಹಣಕಾಸು ಅಸ್ಥಿರತೆ ಹಿನ್ನೆಲೆಯಲ್ಲಿ ಭಾರತದ ಯೋಜಿತ ಆರ್ಥಿಕ ಬೆಳವಣಿಗೆಯನ್ನು ತಗ್ಗಿಸಲಾಗಿದೆ ಎಂದು ವಿಶ್ವಸಂಸ್ಥೆ ಗುರುವಾರ (ಮಾ.24) ಬಿಡುಗಡೆಗೊಳಿಸಿದ ವರದಿಯಲ್ಲಿ ತಿಳಿಸಿದೆ.

ರಷ್ಯಾ-ಉಕ್ರೇನ್ ಸಂಘರ್ಷ ಹಾಗೂ ಬೃಹತ್ ಆರ್ಥಿಕ ನೀತಿಗಳಲ್ಲಿನ ಬದಲಾವಣೆಗಳು ಅಭಿವೃದ್ಧಿ ಹೊಂದುತ್ತಿರೋ ರಾಷ್ಟ್ರಗಳನ್ನು ಅಪಾಯಕ್ಕೊಡ್ಡಿರೋ  ಹಿನ್ನೆಲೆಯಲ್ಲಿ ವ್ಯಾಪಾರ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ವಿಶ್ವಸಂಸ್ಥೆ ಸಮ್ಮೇಳನ (UNCTAD)ವರದಿ 2022ನೇ ಸಾಲಿನ ಯೋಜಿತ ಜಾಗತಿಕ ಆರ್ಥಿಕ ಬೆಳವಣಿಗೆ ದರವನ್ನು (GDP) ಶೇ.3.6ರಿಂದ ಶೇ.2.6ಕ್ಕೆ ಇಳಿಕೆ ಮಾಡಿದೆ. UNCTAD ವರದಿ ಪ್ರಕಾರ ರಷ್ಯಾ ಈ ವರ್ಷ ತೀವ್ರ ತರಹದ ಆರ್ಥಿಕ ಹಿಂಜರಿತ ಅನುಭವಿಸಲಿದೆ. ಪಶ್ಚಿಮ ಹಾಗೂ ಮಧ್ಯ ಯುರೋಪ್, ದಕ್ಷಿಣ ಹಾಗೂ ನೈಋತ್ಯ ಏಷ್ಯಾದಲ್ಲಿ ಆರ್ಥಿಕ ಬೆಳವಣಿಗೆ ಗಣನೀಯ ಇಳಿಕೆ ದಾಖಲಿಸಲಿದೆ ಎಂದು ವರದಿ ತಿಳಿಸಿದೆ. ಭಾರತ 2022ನೇ ಸಾಲಿನಲ್ಲಿ ಶೇ. 6.7 ಬೆಳವಣಿಗೆ ದಾಖಲಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದ್ರೆ UNCTAD ಈ ಅಂದಾಜನ್ನು ಶೇ. 4.6ಕ್ಕೆ ಇಳಿಸಿದೆ.

FDI Inflow:2021ನೇ ಸಾಲಿನಲ್ಲಿ ಭಾರತಕ್ಕೆ ಎಫ್ ಡಿಐ ಒಳಹರಿವಿನಲ್ಲಿ ಶೇ.15 ಇಳಿಕೆ; 74.01 ಬಿಲಿಯನ್ ಡಾಲರ್ ಗೆ ಕುಸಿತ

ಇಂಧನ ಬೆಲೆ ಹಾಗೂ ಬೇಡಿಕೆಯ ತ್ವರಿತ ಹೆಚ್ಚಳದಿಂದ ದಕ್ಷಿಣ ಹಾಗೂ ಪಶ್ಚಿಮ ಏಷ್ಯಾದ ಕೆಲವು ಆರ್ಥಿಕತೆಗಳು ಲಾಭ ಗಳಿಸಲಿವೆ. ಆದ್ರೆ ಪ್ರಾಥಮಿಕ ಸರಕು ಮಾರುಕಟ್ಟೆಗಳಲ್ಲಿನ ಪ್ರತಿಕೂಲತೆಗಳು ಮುಖ್ಯವಾಗಿ ಆಹಾರ ಹಣದುಬ್ಬರ ಹಾಗೂ ಹಣಕಾಸಿನ ಅಸ್ಥಿರತೆಗಳು ಈ ಆರ್ಥಿಕತೆಗಳ ಬೆಳವಣಿಗೆಯನ್ನು ಕುಂಠಿತಗೊಳಿಸೋ ಸಾಧ್ಯತೆಯೂ ಇದೆ ಎಂದು ಈ ವರದಿ ತಿಳಿಸಿದೆ. 

ನಿರ್ಬಂಧದಿಂದ ರಷ್ಯಾಕ್ಕೆ ಸಂಕಷ್ಟ
ರಷ್ಯಾದ ಮೇಲಿನ ನಿರ್ಬಂಧಗಳು ಅದರ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವರದಿ ತಿಳಿಸಿದೆ. ರಷ್ಯಾ ಪ್ರಸ್ತುತ ನಿರ್ಬಂಧದ ಹೊರತಾಗಿಯೂ ತೈಲ ಹಾಗೂ ನೈಸರ್ಗಿಕ ಅನಿಲದ ರಫ್ತು ನಡೆಸುತ್ತಿದೆ. ದುಬಾರಿ ಬೆಲೆ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ರಷ್ಯಾ ಪ್ರಯತ್ನಿಸುತ್ತಿದೆ. ಆದ್ರೆ ನಿರ್ಬಂಧಗಳು ವಿದೇಶಿ ವಿನಿಮಯದ ಗಳಿಕೆಯನ್ನು ಆಮದು ಅಥವಾ ಸಾಲ ನೀಡಿಕೆಗೆ ಬಳಕೆ ಮಾಡೋದಕ್ಕೆ ಗಂಭೀರ ಮಿತಿ ವಿಧಿಸಲಿದೆ. ಅಲ್ಲದೆ, ರಷ್ಯಾ ಆಮದು ಸರಕುಗಳ ಗಂಭೀರ ಕೊರತೆ ಎದುರಿಸಲಿದೆ. ಅಧಿಕ ಹಣದುಬ್ಬರ ಹಾಗೂ ಕರೆನ್ಸಿ ಅಮೌಲ್ಯೀಕರಣ ಕೂಡ ಆಗಲಿದೆ ಎಂದು ವರದಿ ಹೇಳಿದೆ.

ಅಮೆರಿಕದ ಜಿಡಿಪಿ ಬೆಳವಣಿಗೆಯನ್ನು ಕೂಡ ಈ ವರದಿ ಶೇ.3ರಿಂದ ಶೇ. 2.4 ಕ್ಕೆ ಇಳಿಕೆ ಮಾಡಿದೆ. ಚೀನಾದ ಬೆಳವಣಿಗೆ ದರವನ್ನು ಕೂಡ ಶೇ.4.8ಕ್ಕೆ ಇಳಿಕೆ ಮಾಡಲಾಗಿದೆ. ಕೆಲವು ಅಭಿವೃದ್ಧಿ ಹೊಂದುತ್ತಿರೋ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್ ಗಳು ಮುಕ್ತ ಮಾರುಕಟ್ಟೆಯಲ್ಲಿ ಬಾಂಡ್ ಗಳನ್ನು ಖರೀದಿಸುವಲ್ಲಿ ಸಕ್ರಿಯವಾಗಿರಲಿವೆ ಎಂದು ಈ ವರದಿ ತಿಳಿಸಿದೆ. ಭಾರತ, ಥೈಲ್ಯಾಂಡ್, ಕೊಲಂಬಿಯಾ ಹಾಗೂ ದಕ್ಷಿಣ ಆಫ್ರಿಕಾ ಸಾರ್ವಜನಿಕ ಬಾಂಡ್ ಖರೀದಿಗಳಲ್ಲಿ ನಿರತವಾಗಿವೆ ಎಂದು ಈ ವರದಿ ತಿಳಿಸಿದೆ. ಬ್ರೆಜಿಲ್, ರಷ್ಯಾ, ಭಾರತ ಹಾಗೂ ಚೀನಾ ಕರೆನ್ಸಿಗಳು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಪ್ರತಿದಿನ  6.6 ಟ್ರಿಲಿಯನ್ ಅಮೆರಿಕನ್ ಡಾಲರ್ ಅಂದ್ರೆ ಶೇ.3.5ಗಿಂತ ಹೆಚ್ಚಿನ ವಹಿವಾಟು ನಡೆಸಲಾರವು ಎಂದು ಈ ವರದಿ ತಿಳಿಸಿದೆ. 

SBI Tax Savings FD: 5 ವರ್ಷದ FD ತೆರೆಯಿರಿ, ತೆರಿಗೆ ಉಳಿಸಿ; ಆನ್ ಲೈನ್ ನಲ್ಲಿ ಎಫ್ ಡಿ ಖಾತೆ ತೆರೆಯೋದು ಹೇಗೆ?

ಗಗನಕ್ಕೇರಿರೋ ಆಹಾರ ಹಾಗೂ ತೈಲ ಬೆಲೆ ಅಭಿವೃದ್ಧಿ ಹೊಂದುತ್ತಿರೋ ರಾಷ್ಟ್ರಗಳ ಅತ್ಯಂತ ದುರ್ಬಲ ವರ್ಗದ ಮೇಲೆ ತಕ್ಷಣ ಪರಿಣಾಮ ಬೀರಲಿದೆ. ಇದರ ಫಲವಾಗಿ ಆಹಾರಕ್ಕೆ ಸಾಕಾಗುವಷ್ಟೇ ದುಡಿಮೆ ಹೊಂದಿರೋ ಜನರು ಹಸಿವು ಹಾಗೂ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ಆದ್ರೆ ಪ್ರತಿಯೊಬ್ಬರೂ ಖರೀದಿ ಸಾಮರ್ಥ್ಯ ತಗ್ಗುವ ಅನುಭವ ಹೊಂದಲಿದ್ದಾರೆ ಎಂದು UNCTAD ವರದಿ ಹೇಳಿದೆ. 

Follow Us:
Download App:
  • android
  • ios