Asianet Suvarna News Asianet Suvarna News

ವಿದೇಶ ಪ್ರವಾಸಕ್ಕೆ ತೆರಳುತ್ತಿರೋರು ಗಮನಿಸಿ, 7ಲಕ್ಷ ರೂ. ಮೀರಿದ ವೆಚ್ಚಕ್ಕೆ ಅ.1ರಿಂದ ಶೇ.20ರಷ್ಟು ಟಿಸಿಎಸ್!

ವಿದೇಶದಲ್ಲಿ ಮಾಡುವ ವೆಚ್ಚದ ಮೇಲಿನ ಟಿಸಿಎಸ್ ನಿಯಮಗಳಲ್ಲಿನ ಬದಲಾವಣೆ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಹೀಗಾಗಿ ಇನ್ಮುಂದೆ ವಿದೇಶಗಳಲ್ಲಿ 7ಲಕ್ಷ ರೂ.ಗಿಂತ ಅಧಿಕ ಮೊತ್ತದ ವೆಚ್ಚ ಹಾಗೂ ಪ್ರವಾಸ ಪ್ಯಾಕೇಜ್ ಗಳ ಮೇಲಿನ ಟಿಸಿಎಸ್ ದರ ಶೇ.20ರಷ್ಟು ಇರಲಿದೆ.

20 percent TCS On Foreign Remittance From October 1 All You Need To Know anu
Author
First Published Sep 29, 2023, 6:14 PM IST

Business Desk:ನೀವು ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದರೆ ಅಕ್ಟೋಬರ್ 1ರಿಂದ ಜಾರಿಗೆ ಬರಲಿರುವ ಮೂಲದಲ್ಲಿ ತೆರಿಗೆ ಸಂಗ್ರಹ (ಟಿಸಿಎಸ್) ನಿಯಮದಲ್ಲಿನ ಬದಲಾವಣೆ ಬಗ್ಗೆ ತಿಳಿಯೋದು ಅಗತ್ಯ. 2023-24ನೇ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಎಲ್ಆರ್ ಎಸ್ ಅಡಿಯಲ್ಲಿ ವಿದೇಶದಲ್ಲಿ ಮಾಡುವ ವೆಚ್ಚದ ಮೇಲಿನ ಟಿಸಿಎಸ್ ನಿಯಮಗಳಲ್ಲಿನ ಬದಲಾವಣೆ ಬಗ್ಗೆ ಘೋಷಣೆ ಮಾಡಿದ್ದರು. ಇನ್ನು ಬಜೆಟ್ ನಲ್ಲಿ ಎಲ್ಆರ್ ಎಸ್ ಅಡಿಯಲ್ಲಿನ ವೆಚ್ಚಗಳು ಹಾಗೂ ವಿದೇಶ ಪ್ರವಾಸ ಪ್ಯಾಕೇಜ್ ಗಳ ಮೇಲಿನ ಟಿಸಿಎಸ್ ದರವನ್ನು ಶೇ.20ರಷ್ಟು ಏರಿಕೆ ಮಾಡಲಾಗಿತ್ತು. ಈ ಹೊಸ ದರವು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಪ್ರಸ್ತುತ ಆರ್ ಬಿಐ ಎಲ್ ಆರ್ ಎಸ್ ಅಡಿಯಲ್ಲಿ ವಿದೇಶಕ್ಕೆ ವರ್ಗಾವಣೆ ಮಾಡುವ 7ಲಕ್ಷ ರೂ.ಗಿಂತ ಅಧಿಕ ಮೊತ್ತದ ಹಣಕ್ಕೆ ಶೇ.5ರಷ್ಟು ಟಿಸಿಎಸ್ ವಿಧಿಸಲಾಗುತ್ತಿದೆ.  
ಪ್ರವಾಸ ವೆಚ್ಚಗಳು ಸೇರಿದಂತೆ ಎಲ್ ಆರ್ ಎಸ್ ಅಡಿಯಲ್ಲಿ ವಿದೇಶಗಳಲ್ಲಿ ಮಾಡುವ ನಿಗದಿತ ಮಿತಿಗಿಂತ ಹೆಚ್ಚಿನ ಖರ್ಚಿಗೆ ಶೇ.20ರಷ್ಟು ಟಿಸಿಎಸ್ ವಿಧಿಸುವ ನಿಯಮ ಜುಲೈ 1ರಿಂದ ಜಾರಿಗೊಳಿಸೋದಾಗಿ ಈ ಹಿಂದೆ ತಿಳಿಸಲಾಗಿತ್ತು. ಆದರೆ, ಆ ಬಳಿಕ ಅಕ್ಟೋಬರ್ 1ರಿಂದ ಅನುಷ್ಠಾನಗೊಳಿಸೋದಾಗಿ ಹಣಕಾಸು ಸಚಿವಾಲಯ ತಿಳಿಸಿತ್ತು. ಬ್ಯಾಂಕ್ ಗಳು ಹಾಗೂ ಕಾರ್ಡ್ ನೆಟ್ ವರ್ಕ್ ಗಳಿಗೆ ಅಗತ್ಯ ಐಟಿ ಆಧಾರಿತ  ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸಾಕಷ್ಟು ಸಮಯಾವಕಾಶ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರೋದಾಗಿಯೂ ಸಚಿವಾಲಯ ಸ್ಪಷ್ಟಪಡಿಸಿತ್ತು.

ಅ.1ರಿಂದ 7ಲಕ್ಷ ರೂ. ಮೇಲ್ಪಟ್ಟ ವೆಚ್ಚಕ್ಕೆ ಶೇ.20ರಷ್ಟು ಟಿಸಿಎಸ್
7ಲಕ್ಷ ರೂ. ತನಕದ ವಿದೇಶಿ ಪ್ರವಾಸ ಪ್ಯಾಕೇಜ್ ಗಳಿಗೆ ಯಾವುದೇ ಟಿಸಿಎಸ್ ಇಲ್ಲ. ಆದರೆ, 7ಲಕ್ಷ ರೂ. ಮೀರಿದ ಪ್ರವಾಸ ಪ್ಯಾಕೇಜ್ ಗಳಿಗೆ ಅಕ್ಟೋಬರ್ 1ರಿಂದ ಶೇ.20ರಷ್ಟು ಟಿಸಿಎಸ್ ವಿಧಿಸಲಾಗುತ್ತದೆ. ಈ ಹಿಂದೆ ಶೇ.5ರಷ್ಟು ಟಿಸಿಎಸ್ ವಿಧಿಸಲಾಗುತ್ತಿತ್ತು.

ಈ ಒಂದು ಕೆಲಸ ಮಾಡದಿದ್ರೆ ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಕೆ ಸಾಧ್ಯವಿಲ್ಲ!

ಇನ್ನು ವೈದ್ಯಕೀಯ ವೆಚ್ಚ ಹಾಗೂ ಶಿಕ್ಷಣ ವೆಚ್ಚಕ್ಕೆ 7ಲಕ್ಷ ರೂ. ತನಕ ಯಾವುದೇ ಟಿಸಿಎಸ್ ವಿಧಿಸಲಾಗುತ್ತಿಲ್ಲ. ಆದರೆ, 7ಲಕ್ಷ ರೂ. ಮೇಲ್ಪಟ್ಟ ವೆಚ್ಚಕ್ಕೆ ಶೇ.5ರಷ್ಟು ಟಿಸಿಎಸ್ ವಿಧಿಸಲಾಗುತ್ತಿದೆ. ಈ ಹಿಂದೆ ಕೂಡ ಈ ಪ್ರಮಾಣ ಅಷ್ಟೇ ಇತ್ತು. ಸಾಲದ ಹಣವನ್ನು ವಿದೇಶಕ್ಕೆ ಶೈಕ್ಷಣಿಕ ಶುಲ್ಕ ಭರಿಸಲು ವರ್ಗಾವಣೆ ಮಾಡಿದ್ರೆ ಈ ಹಿಂದಿನಂತೆ ಒಂದು ಆರ್ಥಿಕ ಸಾಲಿನಲ್ಲಿ 7 ಲಕ್ಷ ರೂ. ಮೀರಿದ ಮೊತ್ತಕ್ಕೆ ಶೇ.0.5 ಟಿಸಿಎಸ್ ಕಡಿತ ಮಾಡಲಾಗುತ್ತದೆ. ಆದರೆ, ಶೈಕ್ಷಣಿಕ ವೆಚ್ಚವನ್ನು ಸಾಲದಿಂದ ಭರಿಸದ ಸಂದರ್ಭಗಳಲ್ಲಿ ಆರ್ಥಿಕ ಸಾಲಿನಲ್ಲಿ 7ಲಕ್ಷ ರೂ. ಗಿಂತ ಹೆಚ್ಚಿನ ಮೊತ್ತದ ವರ್ಗಾವಣೆಗೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ಎರಡೂ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 

ಶಿಕ್ಷಣ ಹಾಗೂ ವೈದ್ಯಕೀಯ ವೆಚ್ಚ ಹೊರತುಪಡಿಸಿ ಇತರ ಉದ್ದೇಶದ ಎಲ್‌ಆರ್‌ಎಸ್‌ ಗೆ 7ಲಕ್ಷ ರೂ. ತನಕ ಯಾವುದೇ ಟಿಸಿಎಸ್ ವಿಧಿಸೋದಿಲ್ಲ. 7 ಲಕ್ಷ ಮೇಲ್ಪಟ್ಟಿದ್ದರೆ ಶೇ.20ರಷ್ಟು ಟಿಸಿಎಸ್ ವಿಧಿಸಲಾಗುತ್ತದೆ. 

ಹೆಚ್ಚಿದ ಯುಪಿಐ ಬಳಕೆಯಿಂದ ತಗ್ಗಿದ ಡೆಬಿಟ್ ಕಾರ್ಡ್ ವಹಿವಾಟು; ಆದ್ರೆ ಏರಿಕೆ ಕಂಡ ಕ್ರೆಡಿಟ್ ಕಾರ್ಡ್ ಬಳಕೆ

ಕೇಂದ್ರ ಸರ್ಕಾರ ಹಣಕಾಸು ಮಸೂದೆ 2023ರಲ್ಲಿ ಎಲ್ ಆರ್ ಎಸ್ ಅಡಿಯಲ್ಲಿ ವಿದೇಶಗಳಲ್ಲಿನ ವೆಚ್ಚ ಹಾಗೂ ವಿದೇಶಿ ಪ್ರವಾಸ ಪ್ಯಾಕೇಜ್ ಗಳ ಮೇಲಿನ ಟಿಸಿಎಸ್ ಅನ್ನು ಶೇ.5ರಿಂದ ಶೇ.20ಕ್ಕೆ ಏರಿಕೆ ಮಾಡಿದೆ. ಹಾಗೆಯೇ ಎಸ್ ಆರ್ ಎಸ್ ಅಡಿಯಲ್ಲಿ ಟಿಸಿಎಸ್ ಅನ್ವಯವಾಗಲು ಈ ಹಿಂದಿನ  7 ಲಕ್ಷದ ಮಿತಿಯನ್ನು ತೆಗೆದು ಹಾಕಿತ್ತು. ಆದರೆ, ಈ ಎರಡು ಬದಲಾವಣೆಗಳು ಶೈಕ್ಷಣಿಕ ಹಾಗೂ ವೈದ್ಯಕೀಯ ವೆಚ್ಚಗಳಿಗೆ ಅನ್ವಯಿಸೋದಿಲ್ಲ. ಈ ತಿದ್ದುಪಡಿ ಜುಲೈ 1ರಿಂದ ಜಾರಿಗೆ ಬರಬೇಕಿತ್ತು. ಈ ತಿದ್ದುಪಡಿಯಲ್ಲಿ ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಬಳಸಿ ವಿದೇಶಗಳಲ್ಲಿ ಮಾಡುವ ವೆಚ್ಚಕ್ಕೂ ಶೇ.20ರಷ್ಟು ಟಿಸಿಎಸ್ ಅನ್ವಯಿಸಲಾಗಿತ್ತು. ಸರ್ಕಾರದ ಈ ಒಂದು ನಿರ್ಧಾರದ ಬಗ್ಗೆ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯ ಜೂನ್ ಅಂತ್ಯದಲ್ಲಿಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಬಳಸಿ ವಿದೇಶಗಳಲ್ಲಿ ಮಾಡುವ ವೆಚ್ಚಕ್ಕೆ ಟಿಸಿಎಸ್ ವಿಧಿಸುವ ನಿರ್ಧಾರವನ್ನು ಕೈಬಿಟ್ಟಿತ್ತು. 
 

Follow Us:
Download App:
  • android
  • ios