ರೈಲು ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ಬೆಂಗಳೂರು - ಹುಬ್ಬಳ್ಳಿ ನಡುವೆ ಮತ್ತೆರಡು ಹೊಸ ರೈಲು ಸಂಚಾರ

ಮಾರ್ಚ್ 20 ರಿಂದ ಈ ನೂತನ ರೈಲುಗಳ ಸಂಚಾರ ಆರಂಭವಾಗಲಿದೆ. ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಒಂದು ರಾತ್ರಿ ರೈಲು ಮತ್ತು ಒಂದು ಹಗಲು ರೈಲು ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

2 new trains will run between hubballi and bengaluru ash

ಬೆಂಗಳೂರು (ಮಾರ್ಚ್‌ 6, 2023): ರಾಜ್ಯದ ರೈಲು ಪ್ರಯಾಣಿಕರಿಗೆ ಮತ್ತಷ್ಟು ಸಿಹಿ ಸುದ್ದಿ ಕಾದಿದೆ. ಬೆಂಗಳೂರು-ಹುಬ್ಬಳ್ಳಿ ನಡುವೆ ಸಾಕಷ್ಟು ಜನ ರೈಲು ಪ್ರಯಾಣಿಕರಿದ್ದು, ಈ ಹಿನ್ನೆಲೆ ನೈಋತ್ಯ ರೈಲ್ವೆ ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಇನ್ನೂ 2 ನೂತನ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ಭಾಗದ ಪ್ರಯಾಣಿಕರಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹೊಸ ರೈಲುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಸಂಸದ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಮಾರ್ಚ್ 20 ರಿಂದ ಈ ನೂತನ ರೈಲುಗಳ ಸಂಚಾರ ಆರಂಭವಾಗಲಿದೆ. ಬೆಂಗಳೂರು (Bengaluru) ಮತ್ತು ಹುಬ್ಬಳ್ಳಿ (Hubli) ನಡುವೆ ಒಂದು ರಾತ್ರಿ ರೈಲು (Night Train) ಮತ್ತು ಒಂದು ಹಗಲು ರೈಲು (Day Train) ಓಡಿಸಲು ನೈರುತ್ಯ ರೈಲ್ವೆ (South Western Railway) (SWR) ನಿರ್ಧರಿಸಿದೆ. ಇನ್ನು, ವೇಳಾಪಟ್ಟಿ ಮತ್ತು ಇತರ ವಿವರಗಳು ಈ ಕೆಳಗಿನಂತಿದೆ ನೋಡಿ..

ಇದನ್ನು ಓದಿ: ಪ್ರಯಾಣಿಕರ ದಟ್ಟಣೆ, ಮುರುಡೇಶ್ವರ- ಬೆಂಗಳೂರು ರೈಲು ಮತ್ತೆ 3 ತಿಂಗಳು ವಿಸ್ತರಣೆ

ರೈಲು ಸಂಖ್ಯೆ 07339 ಹುಬ್ಬಳ್ಳಿ - ಬೆಂಗಳೂರು ದಿನನಿತ್ಯ ಎಕ್ಸ್‌ಪ್ರೆಸ್ ವಿಶೇಷ ರೈಲು ಹುಬ್ಬಳ್ಳಿಯಿಂದ ರಾತ್ರಿ 11:15 ಕ್ಕೆ ಹೊರಟು ಬೆಳಿಗ್ಗೆ 6:50 ಕ್ಕೆ ಬೆಂಗಳೂರು ತಲುಪುತ್ತದೆ. ಇನ್ನು, ಈ ರೈಲುಗಳು ಬೇಡಿಕೆ ಆಧಾರದ ಮೇಲೆ (Train on Demand) ಕಾರ್ಯನಿರ್ವಹಿಸುತ್ತವೆ. ಹಾಗೂ, ವಾಪಸ್‌ ಬರುವಾಗ, ರೈಲು ಸಂಖ್ಯೆ 07340 ಬೆಂಗಳೂರು - ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ವಿಶೇಷರೈಲು ಬೆಂಗಳೂರಿನಿಂದ ರಾತ್ರಿ 11:55 ಕ್ಕೆ ಹೊರಟು ಮರುದಿನ ಬೆಳಿಗ್ಗೆ 7:30 ಕ್ಕೆ ಹುಬ್ಬಳ್ಳಿ ತಲುಪುತ್ತದೆ ಎಂದು ತಿಳಿದುಬಂದಿದೆ.

ಈ ರೈಲು ಒಂದು 2-ಟೈರ್ ಎಸಿ ಕೋಚ್, ಎರಡು 3-ಟೈರ್ ಎಸಿ ಕೋಚ್‌ಗಳು, 7 ಸ್ಲೀಪರ್ ಕೋಚ್‌ಗಳು, 4 ಜನರಲ್ ಸೆಕ್ಷನ್ ಮತ್ತು ಎರಡು ಎಸ್‌ಎಲ್‌ಆರ್ ಕೋಚ್‌ಗಳು ಸೇರಿದಂತೆ 16 ಕೋಚ್‌ಗಳ ಸಂಯೋಜನೆಯನ್ನು ಹೊಂದಿರುತ್ತದೆ. ಸದ್ಯ, ಈ ರೈಲು 20ನೇ ಮಾರ್ಚ್ 2023 ರಿಂದ ಜುಲೈ 27, 2023 ರವರೆಗೆ ಕಾರ್ಯನಿರ್ವಹಿಸುತ್ತದೆ. ರೈಲಿನ ಪ್ರಾಥಮಿಕ ನಿರ್ವಹಣೆ ಹುಬ್ಬಳ್ಳಿಯಲ್ಲಿರುತ್ತದೆ ಮತ್ತು ದ್ವಿತೀಯ ನಿರ್ವಹಣೆಯನ್ನು ಬೆಂಗಳೂರಿನಲ್ಲಿ ನಿರ್ವಹಿಸಲಾಗುತ್ತದೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ, ಕರ್ನಾಟಕದ ಹಲವು ನಿಲ್ದಾಣದಲ್ಲಿ 1 ನಿಮಿಷ ವಿವಿಧ ರೈಲುಗಳ ನಿಲುಗಡೆ

ಹಾಗೆ, ಇನ್ನೊಂದು ರೈಲು ಬೆಂಗಳೂರಿನಿಂದ ಹುಬ್ಬಳ್ಳಿಗೆ ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07354) ಬೆಂಗಳೂರಿನಿಂದ ಬೆಳಗ್ಗೆ 7:45 ಕ್ಕೆ ಹೊರಟು ಮಧ್ಯಾಹ್ನ 2:30 ಕ್ಕೆ ಹುಬ್ಬಳ್ಳಿ ತಲುಪುತ್ತದೆ. ಈ ರೈಲು ಎರಡು ನಗರಗಳ ನಡುವೆ ಹಗಲು ರೈಲಿನಂತೆ ಕಾರ್ಯನಿರ್ವಹಿಸುತ್ತದೆ. ಹಾಗೆ, ವಾಪಸ್‌ ಹೊರಡುವ ರೈಲು ಸಂಖ್ಯೆ 07353 ಹುಬ್ಬಳ್ಳಿ - ಬೆಂಗಳೂರು ದಿನನಿತ್ಯ ಎಕ್ಸ್‌ಪ್ರೆಸ್ ಹುಬ್ಬಳ್ಳಿಯಿಂದ ಮಧ್ಯಾಹ್ನ 3:15 ಕ್ಕೆ ಹೊರಟು ರಾತ್ರಿ 11:10 ಕ್ಕೆ ಬೆಂಗಳೂರು ತಲುಪುತ್ತದೆ. ಈ ರೈಲು ಸಹ ಬೇಡಿಕೆ ಆಧಾರದ ಮೇಲೆ (Train On Demand) ಕಾರ್ಯನಿರ್ವಹಿಸುತ್ತದೆ.

ಈ ರೈಲು ಸಹ ಒಂದು 2-ಟೈರ್ ಎಸಿ ಕೋಚ್, ಎರಡು 3-ಟೈರ್ ಎಸಿ ಕೋಚ್‌ಗಳು, 7 ಸ್ಲೀಪರ್ ಕೋಚ್‌ಗಳು, 4 ಜನರಲ್ ಸೆಕ್ಷನ್ ಮತ್ತು ಎರಡು ಎಸ್‌ಎಲ್‌ಆರ್ ಕೋಚ್‌ಗಳು ಸೇರಿದಂತೆ 16 ಕೋಚ್‌ಗಳ ಸಂಯೋಜನೆಯನ್ನು ಹೊಂದಿರುತ್ತದೆ. ಹಾಗೆ, ಇದು ಸಹ 20ನೇ ಮಾರ್ಚ್ 2023 ರಿಂದ ಜುಲೈ 27, 2023 ರವರೆಗೆ ಕಾರ್ಯನಿರ್ವಹಿಸುತ್ತದೆ. ರೈಲುಗಳ ಪ್ರಾಥಮಿಕ ನಿರ್ವಹಣೆ ಹುಬ್ಬಳ್ಳಿಯಲ್ಲಿರುತ್ತದೆ ಮತ್ತು ದ್ವಿತೀಯ ನಿರ್ವಹಣೆಯನ್ನು ಬೆಂಗಳೂರಿನಲ್ಲಿ ನಿರ್ವಹಿಸಲಾಗುತ್ತದೆ.

ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸುವಾಗ ವಾಟ್ಸಾಪ್‌ನಲ್ಲೇ ಆಹಾರ ಆರ್ಡರ್‌ ಮಾಡಿ: ಐಆರ್‌ಸಿಟಿಸಿ ಹೊಸ ಸೇವೆ

ಇನ್ನೊಂದೆಡೆ, ತಮ್ಮ ಮನವಿಗೆ ಸ್ಪಂದಿಸಿ ಈ ಹೊಸ ರೈಲು ಸೇವೆಗಳನ್ನು ಆರಂಭಿಸಲು ಆದೇಶಿಸಿದ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಧಾರವಾಡ ಸಂಸದ ಪ್ರಲ್ಹಾದ ಜೋಶಿ ಧನ್ಯವಾದ ಸಲ್ಲಿಸಿದ್ದಾರೆ.

Latest Videos
Follow Us:
Download App:
  • android
  • ios