₹100 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುವ ಬಾಲಿವುಡ್ ನಟನಾತ. ಆದರೆ ಸಾಮಾಜಿಕ ಕಾಳಜಿ ಹೊಂದಿರುವ ಆ ಸಿನಿಮಾದ ಪಾತ್ರಕ್ಕಾಗಿ ಆತ ಪಡೆದದ್ದು ಕೇವಲ ಒಂದು ರೂಪಾಯಿ! ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋತರೂ, ಆತನ ಆ ನಿರ್ಧಾರ ಮಾತ್ರ ಇಂದಿಗೂ ಸ್ಫೂರ್ತಿದಾಯಕವಾಗಿದೆ.

ಬಾಲಿವುಡ್‌ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್‌ ಇಂದು ಬಹು ಬೇಡಿಕೆಯ ನಟ. ಇಂದು ಆತ ಒಂದು ಸಿನಿಮಾದಲ್ಲಿ ಪಾತ್ರ ಮಾಡೋಕೆ ₹100 ಕೋಟಿ ಮೇಲಾಗಿಯೇ ಸಂಭಾವನೆ ಕೇಳೋ ನಟ. ಇಂದಿನ ದಿನಗಳಲ್ಲಿ ಅವರು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲೊಬ್ಬರು. ಆದ್ರೆ… 2000ರ ದಶಕದಲ್ಲೇ ಟಾಪ್‌ ಸ್ಟಾರ್‌ ಆಗಿದ್ದ ಸಲ್ಮಾನ್‌, ಒಮ್ಮೆ ಎಲ್ಲರಿಗೂ ಶಾಕ್‌ ಕೊಟ್ಟ ಒಂದು ನಿರ್ಧಾರ ತೆಗೆದುಕೊಂಡಿದ್ದರು. ಅದೇನು ಗೊತ್ತಾ? ಕೇವಲ 1 ರೂಪಾಯಿ ಸಂಭಾವನೆಗೆ ಒಂದು ಸಿನಿಮಾದ ಲೀಡ್‌ ರೋಲ್‌ನಲ್ಲಿ ನಟಿಸಿದ್ದರು!

ನಿನ್ನೆ ಸಲ್ಮಾನ್‌ 60ನೇ ಹುಟ್ಟುಹಬ್ಬದ ದಿನ. ಆ ಹಿನ್ನೆಲೆಯಲ್ಲಿ ಒಂದು ಅಪರೂಪದ ನೆನಪು. ಅವರ ಸಿನಿ ಕರಿಯರ್‌ನಲ್ಲಿನ ಅತ್ಯಂತ ಸ್ವಾರ್ಥರಹಿತ ನಿರ್ಧಾರಗಳಲ್ಲೊಂದು ಮತ್ತೆ ನೆನಪಿಗೆ ಬರುತ್ತೆ. ಆ ಸಿನಿಮಾ ‘ಫಿರ್ ಮಿಲೇಂಗೆ’. 2024ರಲ್ಲಿ ‘ಫಿರ್ ಮಿಲೇಂಗೆ’ ಚಿತ್ರದ ನಿರ್ಮಾಪಕ ಶೈಲೆಂದ್ರ ಸಿಂಗ್ ಒಂದು ಹಳೆಯ ಸಂಗತಿಯನ್ನು ಬಹಿರಂಗಪಡಿಸಿದ್ದರು. 2004ರಲ್ಲಿ ಬಂದ ಈ ಸಿನಿಮಾಗೆ ಸಲ್ಮಾನ್ ಖಾನ್‌ ಕೇವಲ ₹1 ಮಾತ್ರ ಸಂಭಾವನೆ ಪಡೆದಿದ್ದರು.

ಅಷ್ಟೇ ಅಲ್ಲ… ಈ ಸಿನಿಮಾದಲ್ಲಿ ಸಲ್ಮಾನ್ ಮಾಡಿದ್ದ ಪಾತ್ರ ಕೂಡ ಕ್ರಾಂತಿಕಾರಿ ಆಗಿತ್ತು. ಅದರಲ್ಲಿ ಅವರು HIV/AIDS ಸೋಂಕಿತ ವ್ಯಕ್ತಿಯಾಗಿ ನಟಿಸಿದ್ದರು. ಯಾವುದೇ ಹೀರೋಯಿಸಂ ಇಲ್ಲದೆ, ಕಮರ್ಶಿಯಲ್ ಮಸಾಲೆ ಇಲ್ಲದೆ, ಕ್ಲೈಮ್ಯಾಕ್ಸ್‌ನಲ್ಲಿ ಸಾವನ್ನಪ್ಪುವ ಪಾತ್ರ ಅದಾಗಿತ್ತು. ಅಂದರೆ… ಟಿಪಿಕಲ್‌ ಸಲ್ಮಾನ್ ಖಾನ್‌ ಇಮೇಜ್‌ಗೆ ಸಂಪೂರ್ಣ ವಿರುದ್ಧವಾದ ಪಾತ್ರ.

ಎಲ್ಲಾ ನಟರೂ ಈ ಕಥೆಗೆ ‘ನೋ’ ಅಂದಿದ್ರು ಅಂತ ಶೈಲೆಂದ್ರ ಸಿಂಗ್ ಬಹಿರಂಗಪಡಿಸಿದ್ರು. “ನನ್ನ ಒಂದು ಸಿನಿಮಾಗೆ ಸಲ್ಮಾನ್ ಖಾನ್ ಕೇವಲ ₹1 ಸಂಭಾವನೆ ತೆಗೆದುಕೊಂಡರು. ಆ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಅವರ ಪಾತ್ರ ಸಾಯುತ್ತೆ. AIDS ಬಗ್ಗೆ ದೇಶದ ಜನರಿಗೆ, ವಿಶೇಷವಾಗಿ ಯುವಕರಿಗೆ ಅರಿವು ಮೂಡಿಸುವುದೇ ನಮ್ಮ ಉದ್ದೇಶವಾಗಿತ್ತು.”

ಅವರು ಮತ್ತಷ್ಟು ಹೇಳಿದ್ದು: “ಆ ಸಮಯದಲ್ಲೂ, ಇಂದೂ ಕೂಡ ಬಾಲಿವುಡ್‌ನ ಅತಿದೊಡ್ಡ ಯೂತ್ ಐಕಾನ್ ಅಂದ್ರೆ ಸಲ್ಮಾನ್ ಖಾನ್‌ನೇ. ಇಂಥ ನಟನನ್ನು AIDS ಕುರಿತ ಸಿನಿಮಾ ಮಾಡೋಕೆ ಒಪ್ಪಿಸುವುದು ಎಷ್ಟು ಕಷ್ಟ ಅಂತ ಕಲ್ಪಿಸಿಕೊಳ್ಳಿ. ಸಲ್ಮಾನ್ ಖಾನ್ ಅಂದ್ರೆ ಭಾರತದ ರ್ಯಾಂಬೋ, ಟರ್ಮಿನೇಟರ್‌, ಸೂಪರ್‌ಮ್ಯಾನ್‌. ಅಂಥ ನಾಯಕನಿಗೆ HIV ಬರುತ್ತೆ, ಕೊನೆಗೆ ಸಾಯುತ್ತಾನೆ ಅನ್ನೋ ಕಥೆ. ಇಡೀ ಬಾಲಿವುಡ್ ‘ನೋ’ ಅಂದಿತ್ತು. ಆದರೆ ಸಲ್ಮಾನ್ ಮಾತ್ರ ಒಪ್ಪಿಕೊಂಡರು.”

ಇದೇನೋ ಸಲ್ಮಾನ್‌ ಫ್ಯಾನ್ಸ್‌ಗೆ ಅಷ್ಟು ಖುಷಿ ಕೊಡಲಿಲ್ಲ, ಆದ್ರೆ ಇದರ ಸಂದೇಶ ಮಾತ್ರ ಇಡೀ ದೇಶಕ್ಕೆ ತಲುಪಿತು. ಈ ಸಿನಿಮಾ ಥಿಯೇಟರ್‌ ಮಾತ್ರ ಅಲ್ಲದೆ, ಸ್ಯಾಟಲೈಟ್‌, ಟಿವಿ, ಕೇಬಲ್‌ ಎಲ್ಲೆಲ್ಲೂ ಪ್ರಸಾರವಾಯ್ತು. ಸಾಮಾಜಿಕ ಸಂದೇಶಕ್ಕೆ ದೊಡ್ಡ ವೇದಿಕೆಯಾಯ್ತು. ರೇವತಿ ನಿರ್ದೇಶನದಲ್ಲಿ ಬಂದ ‘ಫಿರ್ ಮಿಲೇಂಗೆ’ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ, ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಈ ಸಿನಿಮಾ ಭಾರತದಲ್ಲಿ HIV/AIDS ಬಗ್ಗೆ ಇರುವ ಸಾಮಾಜಿಕ ಬಹಿಷ್ಕಾರದ ನೋಟದ ಬಗ್ಗೆ ಧೈರ್ಯವಾಗಿ ಮಾತನಾಡಿದ ಮೊದಲ ಮೇನ್‌ಸ್ಟ್ರೀಮ್‌ ಚಿತ್ರಗಳಲ್ಲಿ ಒಂದಾಗಿತ್ತು. ಆದ್ರೆ, ಬಾಕ್ಸ್‌ ಆಫೀಸ್‌ನಲ್ಲಿ ಸಿನಿಮಾ ಫ್ಲಾಪ್‌ ಆಯ್ತು. ಅದರ ಬಜೆಟ್ ₹5.50 ಕೋಟಿ ಆಗಿತ್ತು. ಕಲೆಕ್ಷನ್ ಆಗಿದ್ದು ಕೇವಲ ₹5.43 ಕೋಟಿ. ಖರ್ಚೂ ಹುಟ್ಟಲಿಲ್ಲ. ಆದ್ರೆ ಸಲ್ಮಾನ್‌ ತೆಗೆದುಕೊಂಡ ನಿರ್ಧಾರ ಇಂದಿಗೂ ಜನರಿಗೆ ಸ್ಪೂರ್ತಿಯಾಗೋಂಥದ್ದು.

ಸಲ್ಮಾನ್‌ನ ಮುಂದಿನ ಸಿನಿಮಾ

ಸಲ್ಮಾನ್ ಖಾನ್‌ನ ಮುಂದಿನ ಸಿನಿಮಾ : ‘ಬ್ಯಾಟಲ್ ಆಫ್ ಗಾಲ್ವಾನ್’ (Battle of Galwan). ಇದರ ನಿರ್ದೇಶನ ಅಪೂರ್ವ ಲಖಿಯಾ. ಇದರ ಕಥೆ 2020ರ ಭಾರತ–ಚೀನಾ ಗಾಲ್ವಾನ್ ಕಣಿವೆ ಸಂಘರ್ಷದ ಹಿನ್ನೆಲೆ ಹೊಂದಿದೆ. ಸಲ್ಮಾನ್‌ ಜೊತೆಗೆ ನಾಯಕಿ ಚಿತ್ರಾಂಗದಾ ಸಿಂಗ್. ಬಹುಶಃ ಮುಂದಿನ ವರ್ಷದಲ್ಲಿ (2026) ರಿಲೀಸ್‌ ಆಗಬಹುದು.