ಯಮಹಾ YZF-R2 ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ಅತ್ಯಾಕರ್ಷಕ ಹಾಗೂ ಸ್ಟೈಲೀಶ್ ಲುಕ್ ಹೊಂದಿರುವ ಈ ಬೈಕ್ ಮೂರು ವೇರಿಯೆಂಟ್ ಹಾಗೂ ಐದು ಬಣ್ಣದಲ್ಲಿ ಲಭ್ಯವಿದೆ. ಬೈಕ್ ಬೆಲೆ ಸೇರಿದಂತೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರು (ಆ.28) ಯಮಹಾ ಇಂಡಿಯಾ ಭಾರತದಲ್ಲಿ ಆಕರ್ಷಕ ಹಾಗೂ ಹೆಚ್ಚು ಸ್ಟೈಲೀಶ್ ಬೈಕ್ YZF-R2 ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ಭಾರತದ ಮೂಲಕ ಜಾಗತಿಕ ಮಾರುಕಟ್ಟೆಗೆ ಬೈಕ್ ಬಿಡುಗಡೆಯಾಗಿದೆ. ಸೂಪರ್‌ಸ್ಪೋರ್ಟ್ ಶೈಲಿ, ಹಗುರವಾದ ಚಾಸಿಸ್, ಆಧುನಿಕ ತಂತ್ರಜ್ಞಾನ ಮತ್ತುಡೈಲಿ ಬಳಕೆಗೆ ಅನುಕೂಲವಾಗುವ ಪರ್ಫಾಮೆನ್ಸ್ ಸೇರಿದಂತೆ ಹಲವುವ ಆಕರ್ಷಣೆಳು ಇದರಲ್ಲಿದೆ. ಜಪಾನ್‌ನಲ್ಲಿ ಅಭಿವೃದ್ಧಿಪಡಿಸಲಾದ ಹೊಸ ಎಂಜಿನ್ ಮತ್ತು ಭಾರತದಲ್ಲಿನ ಎಂಜಿನಿಯರಿಂಗ್ ತಂಡದ ಸಹಕಾರದೊಂದಿಗೆ ಬೈಕ್ ನಿರ್ಮಿಸಲಾಗಿದೆ.

ಹೊಸ ಬೈಕ್ ಬೆಲೆ

ಸ್ಟ್ಯಾಂಡರ್ಡ್ YZF-R2 ಬೆಲೆ 2,30,500 ರೂಪಾಯಿ (ಎಕ್ಸ್ ಶೋ ರೂಂ) ಕ್ವಿಕ್ ಶಿಫ್ಟರ್ ವೆರಿಯೆಂಟ್ 2,39,500 ರೂಪಾಯಿ ಹಾಗೂ ಟಾಪ್ YZF-R2M ವೆರಿಯೆಂಟ್ 2,53,000 ರೂ ( ಎಕ್ಸ್-ಶೋರೂಂ). ಬೇಸ್ ವೆರಿಯೆಂಟ್ ಮೆಟಾಲಿಕ್ ಬ್ಲ್ಯಾಕ್ ಮತ್ತು ಡಾರ್ಕ್ ಬ್ಲೂಯಿಷ್ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಕ್ವಿಕ್ ಶಿಫ್ಟರ್ ವೆರಿಯೆಂಟ್ ಮ್ಯಾಟ್ ವೈಟ್ ಪರ್ಲ್ ಮತ್ತು ರೇಸಿಂಗ್ ಬ್ಲೂ ಬಣ್ಣಗಳಲ್ಲಿ, R2M ಮೆಟಾಲಿಕ್ ಗ್ರೇ ಬಣ್ಣದಲ್ಲಿ ಸಿಗಲಿದೆ.

ಬೈಕ್ ಎಂಜಿನ್ ಹಾಗೂ ಪವರ್

200 ಸಿಸಿ ವಿಭಾಗದಲ್ಲಿ ಯಮಹಾದ ಮೊದಲ ಬೈಕ್ ಆಗಿರುವ YZF-R2, ಹೊಸ ತಲೆಮಾರಿನ ಸವಾರರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ. ಬೈಕ್‌ನಲ್ಲಿ ಹೊಸ 204 ಸಿಸಿ ಎಂಜಿನ್ ನೀಡಲಾಗಿದೆ. ಎಂಜಿನ್‌ನ ಗರಿಷ್ಠ ಪವರ್, ಟಾರ್ಕ್ ಮತ್ತು ಅಧಿಕೃತ ಮೈಲೇಜ್ ಅಂಕಿಅಂಶಗಳನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಹಗುರವಾದ ವಿನ್ಯಾಸದಿಂದ ಉತ್ತಮ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆ ನಿರೀಕ್ಷಿಸಲಾಗಿದೆ. YZF-R2 ಕೇವಲ 149 ಕೆಜಿ ತೂಕ ಹೊಂದಿದ್ದು, ತನ್ನ ವಿಭಾಗದಲ್ಲೇ ಅತ್ಯಂತ ಹಗುರವಾದ ಬೈಕ್ ಎಂದು ಯಮಹಾ ಹೇಳಿದೆ.

ಏನಿದರ ವಿಶೇಷತೆ

ಹೊಸ ಹೈ-ಟೆನ್ಸೈಲ್ ಸ್ಟೀಲ್ ಟ್ಯೂಬ್ ಡೈಮಂಡ್ ಫ್ರೇಮ್ ಬೈಕ್‌ಗೆ ಉತ್ತಮ ಸ್ಥಿರತೆ ಮತ್ತು ಹ್ಯಾಂಡ್ಲಿಂಗ್ ನೀಡುತ್ತದೆ. 37 ಎಂಎಂ ಅಪ್‌ಸೈಡ್-ಡೌನ್ ಫ್ರಂಟ್ ಫೋರ್ಕ್‌ಗಳು ಹಾಗೂ ಹಿಂಭಾಗದಲ್ಲಿ ಮೊನೋಶಾಕ್ ಸಸ್ಪೆನ್ಷನ್ ಅಳವಡಿಸಲಾಗಿದೆ. 17 ಇಂಚಿನ ಟೈಯರ್, ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ, ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್, ಡ್ಯುಯಲ್-ಚಾನೆಲ್ ಎಬಿಎಸ್ ಹಾಗೂ ಆಯ್ಕೆಮಾಡಬಹುದಾದ ರೈಡಿಂಗ್ ಮೋಡ್‌ಗಳೂ ಇವೆ.

YZF-R2ರ ಕ್ವಿಕ್ ಶಿಫ್ಟರ್ ವೆರಿಯೆಂಟ್‌ನಲ್ಲಿ ಸೆಗ್ಮೆಂಟ್‌ನ ಮೊದಲ ಮೂರನೇ ತಲೆಮಾರಿನ ಬೈ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್ ಸೌಲಭ್ಯವಿದೆ. ಇದು ಕ್ಲಚ್ ಬಳಸದೆ ಗೇರ್‌ಗಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಬದಲಾಯಿಸಲು ನೆರವಾಗುತ್ತದೆ. 5 ಇಂಚಿನ ಫುಲ್-ಕಲರ್ TFT ಡಿಸ್‌ಪ್ಲೇ, ಸ್ಮಾರ್ಟ್ ಕನೆಕ್ಟಿವಿಟಿ ಮತ್ತು ಸೌಂಡ್-ಟ್ಯೂನ್ಡ್ ಎಕ್ಸಾಸ್ಟ್ ಕೂಡ ಪ್ರಮುಖ ವೈಶಿಷ್ಟ್ಯಗಳಾಗಿವೆ. R2M ವೆರಿಯೆಂಟ್‌ನಲ್ಲಿ ಅಡ್ಜಸ್ಟಬಲ್ ಫ್ರಂಟ್ ಫೋರ್ಕ್, ರಿಯರ್ ಶಾಕರ್, ಕ್ಲಚ್ ಲಿವರ್ ಮತ್ತು ಬ್ರೇಕ್ ಲಿವರ್ ನೀಡಲಾಗಿದೆ. ಈ ಬೈಕ್ ಸೆಪ್ಟೆಂಬರ್ 2026ರ ಮಧ್ಯಭಾಗದಿಂದ ದೇಶದ ಎಲ್ಲ ಬ್ಲೂ ಸ್ಕ್ವೇರ್ ಡೀಲರ್‌ಶಿಪ್‌ಗಳಲ್ಲಿ ಲಭ್ಯವಾಗಲಿದೆ