ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಬೈಕ್ 17 ವರ್ಷ ಪೂರೈಸಿದೆ. ಹೀರೋ ಮೋಟೋಕಾರ್ಪ್ ಸಹಭಾಗಿತ್ವದಲ್ಲಿ ಹಾರ್ಲೆ ಬ್ರ್ಯಾಂಡ್ ವಿಸ್ತರಣೆ ಹೊಸ ಪ್ಲಾನ್ ರೂಪಿಸಿದೆ. ಥೈಲ್ಯಾಂಡ್ನಲ್ಲಿನ ಕಾರ್ಯಕ್ರಮಕ್ಕೆ ಭಾರತದ 100ಕ್ಕೂ ಹೆಚ್ಚು ಸವಾರರಿಗೆ ಅವಕಾಶ ನೀಡಲಾಗುತ್ತಿದೆ.
ಬೆಂಗಳೂರು (ನ.27) ಭಾರತದಲ್ಲಿ ಹಾರ್ಲೆ ಡೇವಿಡನ್ಸ್ ಬ್ರ್ಯಾಂಡ್ ಬೈಕ್ ಕ್ರೇಜ್ ಹೆಚ್ಚೇ ಇದೆ. ನಿಧಾನವಾಗಿ ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಮಾರುಕಟ್ಟೆ ಪಾಲು ಆವರಿಸಿಕೊಳ್ಳುತ್ತಿದೆ. ಹೀರೋ ಮೋಟೋಕಾರ್ಪ್ ಸಹಭಾಗಿತ್ವದಲ್ಲಿ ಹಾರ್ಲೆ ಇದೀಗ ಬ್ರ್ಯಾಂಡ್ ವಿಸ್ತರಣೆಗೆ ಮುಂದಾಗಿದೆ. ಭಾರತದ ಮಾರುಕಟ್ಟೆಯಲ್ಲಿ 17 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಹೊಸ ಡೀಲರ್ ಹಾಗೂ ಶೋ ರೂಂ ವಿಸ್ತರಣೆ, ಗ್ರಾಹಕರಿಗೆ ಸುಲಭವಾಗಿ ಹಾರ್ಲೆ ಡೇವಿಡನ್ಸ್ ಬೈಕ್ ಲಭ್ಯತೆ, ಹೊಸ ಹಾರ್ಲೆ ಮಾಡೆಲ್ ಲಾಂಚ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ.
ಹಾರ್ಲೆ-ಡೇವಿಡ್ಸನ್ ಕಸ್ಟಮ್ ವೆಹಿಕಲ್ ಆಪರೇಷನ್ಸ್ (ಸಿವಿಓ), ಟೂರಿಂಗ್, ಕ್ರೂಸರ್ ಗಳು (ಸಾಫ್ಟ್ಟೈಲ್), ಅಡ್ವೆಂಚರ್ ಟೂರಿಂಗ್ ಮತ್ತು ಸ್ಪೋರ್ಟ್ ವಿಭಾಗಗಳಲ್ಲಿ ತನ್ನ ಜಾಗತಿಕ ಮೋಟಾರ್ಸೈಕಲ್ ಶ್ರೇಣಿಯನ್ನು ನೀಡುತ್ತಿದೆ. ಅಲ್ಲದೆ, ಬ್ರಾಂಡ್ ತನ್ನ ಹಾರ್ಲೆ-ಡೇವಿಡ್ಸನ್ ಎಕ್ಸ್ ಶ್ರೇಣಿಯ ಅಡಿಯಲ್ಲಿ ಹೊಸ ಮಾದರಿಗಳನ್ನು ಪರಿಚಯಿಸುವುದನ್ನು ಮುಂದುವರಿಸಲಿದೆ ಎಂದು ಕಂಪನಿ ಹೇಳಿದೆ. ಇದೇ ವೇಳೆ ಉತ್ಸಾಹಿ ಸವಾರರ ಸಮುದಾಯವೇ ಹಾರ್ಲೆ-ಡೇವಿಡ್ಸನ್ ನ ಗುರುತಿನ ಕೇಂದ್ರಬಿಂದುವಾಗಿದೆ. ಮಾರ್ಚ್ 2027 ರವರೆಗೆ ರೋಮಾಂಚಕಾರಿ ಕಾರ್ಯಕ್ರಮಗಳ ಕ್ಯಾಲೆಂಡರ್ ಒಳಗೊಂಡಿದೆ. ಇದರಲ್ಲಿ ಉತ್ತರ ಮತ್ತು ಪೂರ್ವ ಎಚ್.ಓ.ಜಿ. ರೈಡ್ ಗಳು, ಫ್ಲಾಟ್ ಟ್ರ್ಯಾಕ್ ರೇಸಿಂಗ್ ಒಳಗೊಂಡ ಇಂಡಿಯಾ ಬೈಕ್ ವೀಕ್ನಲ್ಲಿ ಭಾಗವಹಿಸುವಿಕೆ, ಹಾರ್ಲೆ ರಾಕ್ ರೈಡರ್ಸ್ ಮತ್ತು ಕಸ್ಟಮ್ ಬಿಲ್ಡ್-ಆಫ್, ಇಂಡಿಯಾ ಎಚ್.ಓ.ಜಿ. ರಾಲಿ ಹಾಗೂ ಡೆಸ್ಟಿನೇಶನ್ ಎಕ್ಸ್ ಸೇರಿವೆ.
100ಕ್ಕೂ ಹೆಚ್ಚು ಸವಾರರಿಗೆ ಥೈಲ್ಯಾಂಡ್ ಅವಕಾಶ
3,000 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಭಾರತದ ಹಾರ್ಲೆ ಓನರ್ಸ್ ಗ್ರೂಪ್ ಏಷ್ಯಾದ ಅತಿದೊಡ್ಡ ನೆಟ್ವರ್ಕ್ ಆಗಿ ಗುರುತಿಸಿಕೊಂಡಿದೆ.ಈ ಬಲಿಷ್ಠ ಸವಾರರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವಂತೆ, ನವೆಂಬರ್ 27–28, 2026 ರಂದು ಥೈಲ್ಯಾಂಡ್ನಲ್ಲಿ ನಡೆಯಲಿರುವ ಏಷ್ಯಾ ಹಾರ್ಲೆ ಡೇಸ್ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಭಾರತೀಯ ಹಾರ್ಲೆ-ಡೇವಿಡ್ಸನ್ ಸವಾರರು ಭಾಗವಹಿಸಲಿದ್ದಾರೆ. ಇದು ಈ ಪ್ರಾದೇಶಿಕ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಪ್ರಾತಿನಿಧ್ಯ ಹೊಂದಿರುವ ಮಾರುಕಟ್ಟೆಗಳಲ್ಲಿ ಭಾರತವನ್ನು ಒಂದನ್ನಾಗಿಸಲಿದೆ.
ಬ್ರ್ಯಾಂಡ್ ವಿಸ್ತರಣೆ
2010 ರಲ್ಲಿ ತನ್ನ ಡೀಲರ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಹಾರ್ಲೆ-ಡೇವಿಡ್ಸನ್ ಭಾರತದಲ್ಲಿ ಒಟ್ಟು 80,000 ಕ್ಕೂ ಹೆಚ್ಚು ಮೋಟಾರ್ಸೈಕಲ್ಗಳ ಗ್ರಾಹಕರ ನೆಲೆಯನ್ನು ದಾಟುವ ಮೂಲಕ ದಾಖಲೆ ಬರೆದಿದೆ. ಹೀರೋ ಮೋಟೋಕಾರ್ಪ್ನೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಲಾದ ಹಾರ್ಲೆ-ಡೇವಿಡ್ಸನ್ ಎಕ್ಸ್ ಶ್ರೇಣಿಯು ಪ್ರಮುಖ ಬೆಳವಣಿಗೆಯ ಚಾಲಕವಾಗಿ ಹೊರಹೊಮ್ಮಿದ್ದು, 2023 ರಲ್ಲಿ ಬಿಡುಗಡೆಯಾದಾಗಿನಿಂದ 50,000 ಕ್ಕೂ ಹೆಚ್ಚು ಯುನಿಟ್ಗಳ ಮಾರಾಟದೊಂದಿಗೆ ಪ್ರೀಮಿಯಂ ಮೋಟಾರ್ಸೈಕಲ್ ಗ್ರಾಹಕರಲ್ಲಿ ಬ್ರಾಂಡ್ನ ವ್ಯಾಪ್ತಿಯನ್ನು ವಿಸ್ತರಿಸಿದೆ.
ಹೊಸ ಡೀಲರ್ಶಿಪ್
ಭಾರತದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಹೀರೋ ಮೋಟೋಕಾರ್ಪ್ ಮತ್ತು ಹಾರ್ಲೆ-ಡೇವಿಡ್ಸನ್ ನಡುವಿನ ಈ ಕಾರ್ಯತಂತ್ರದ ಸಹಭಾಗಿತ್ವವು ರಾಯ್ಪುರ ಮತ್ತು ಇಂದೋರ್ನಲ್ಲಿ ಎರಡು ಹೊಸ ಪೂರ್ಣ-ಶ್ರೇಣಿಯ (ಫುಲ್-ಲೈನ್) ಡೀಲರ್ಶಿಪ್ಗಳನ್ನು ಸೇರ್ಪಡೆಗೊಳಿಸಲಿದೆ. ಇದರಿಂದ ಭಾರತದಾದ್ಯಂತ ಒಟ್ಟು ಡೀಲರ್ಶಿಪ್ಗಳ ಸಂಖ್ಯೆ 23 ಕ್ಕೆ ಏರಲಿದೆ. ಇದಕ್ಕೆ ಪೂರಕವಾಗಿ, ಹಾರ್ಲೆ-ಡೇವಿಡ್ಸನ್ ಎಕ್ಸ್ ಮೋಟಾರ್ಸೈಕಲ್ಗಳ ಮಾರಾಟವನ್ನು ಬೆಂಬಲಿಸುವ ಹೀರೋ ಪ್ರೀಮಿಯಾ ಮಳಿಗೆಗಳ ಸಂಖ್ಯೆ 152 ಕ್ಕೆ ವಿಸ್ತರಣೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಣೆಯಾಗಲಿದೆ














