Asianet Suvarna News Asianet Suvarna News

‘Bounce’ ಈಗ ಸಂಪೂರ್ಣ ಎಲೆಕ್ಟ್ರಿಕ್, ಚಾರ್ಜಿಂಗ್ ಸವಾಲಿಗೆ ಸ್ವ್ಯಾಪಿಂಗ್ ಉತ್ತರ: ಸಿಓಓ ಅನಿಲ್ ಗಿರಿರಾಜು

2017 ರಲ್ಲಿ ಬೆಂಗಳೂರಿನ ಮೆಟ್ರೋ ಸೇವೆ ವಿಸ್ತರಣೆಗೊಂಡಾಗ,  ಬೌನ್ಸ್‌ ಮೊಬಿಲಿಟಿ ಸೇವೆ ಆರಂಭಗೊಂಡಿತು. ಕೋವಿಡ್‌ ನಂತರ ಅದು ಸಂಪೂರ್ಣ ಎಲೆಕ್ಟ್ರಿಕ್ ಆಗಿ ಬದಲಾಗಿದೆ.

Bounce turns complete electric Swapping solution for charging problems says COO Anil Giriraj
Author
Bangalore, First Published Apr 7, 2022, 9:27 AM IST

ಬೌನ್ಸ್ ಸಹ ಸಂಸ್ಥಾಪಕ ಅನಿಲ್ ಗಿರಿರಾಜು ವಿಶೇಷ ಸಂದರ್ಶನ- ಸುಪ್ರೀತಾ ಹೆಬ್ಬಾರ್

ಬೆಂಗಳೂರು ನಗರದ ಜನತೆ ಇನ್ನೂ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಕುರಿತು ಗೊಂದಲದಲ್ಲಿ ಇರುವಾಗಲೇ, ಬೆಂಗಳೂರಿನ ಅತಿ ದೊಡ್ಡ ಶೇರ್ ಮೊಬಿಲಿಟಿ ‘ಬೌನ್ಸ್’  (Bounce) ಮಾತ್ರ ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಿ ಬದಲಾಗಿದೆ. ಕೋವಿಡ್ ಸಾಂಕ್ರಾಮಿಕ ಹಾಗೂ ಲಾಕ್ಡೌನ್ ಸಮಯದಲ್ಲಿ ಸಾರಿಗೆ ವಲಯ ಸ್ಥಗಿತಗೊಂಡಾಗ, ಬೌನ್ಸ್ ಸಂಸ್ಥಾಪಕರು ಕಾರ್ಯಾಚರಣೆ ವೆಚ್ಚ ತಗ್ಗಿಸಲು  ಇಂಧನ ಚಾಲಿತ ದ್ವಿಚಕ್ರ ವಾಹನಗಳನ್ನು ಕೈಬಿಟ್ಟು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗಿದ್ದಾರೆ. ತಮ್ಮ ಬೌನ್ಸ್ ದ್ವಿಚಕ್ರವಾಹನ ಪಯಣ ಮತ್ತು ಎಲೆಕ್ಟ್ರಿಕ್ ವಾಹನಗಳ ಭವಿಷ್ಯದ ಕುರಿತು ಅದರ ಸಹ ಸಂಸ್ಥಾಪಕರಾದ ಅನಿಲ್ ಗಿರಿರಾಜು ‘ಏಷಿಯಾನೆಟ್ ಸುವರ್ಣ’ದೊಂದಿಗೆ ಮಾತನಾಡಿದ್ದಾರೆ.

‘ಬೌನ್ಸ್’ ಶೇರ್ ಮೊಬಿಲಿಟಿಯ ಐಡಿಯಾ ಹುಟ್ಟಿದ್ದು ಹೇಗೆ?: ಇದನ್ನು ನಾವು ಮೂವರು ಸ್ನೇಹಿತರು ಒಟ್ಟಿಗೆ ಸೇರಿ ಆರಂಭಿಸಿದೆವು. ನಾನು, ನನ್ನ ಸಹಪಾಠಿಯಾಗಿದ್ದ ಹಾಸನದ ವಿವೇಕಾನಂದ ಹಳ್ಳಿಕೇರಿ ಹಾಗೂ ಅವರ ಸ್ನೇಹಿತ ವರುಣ್ ಅಗ್ನಿ ಒಟ್ಟಾಗಿ ಹೊಸ ಉದ್ಯಮ ಆರಂಭಿಸುವ ಯೋಚನೆ ಮಾಡಿದೆವು. ನಮಗೆ ಬೈಕ್ ಬಗ್ಗೆ ಕ್ರೇಜ್ ಇದ್ದಿದ್ದರಿಂದ ಮೊದಲಿಗೆ ನಾವು ‘ವಿಕೆಡ್ ರೈಡ್’  (Wicket ride) ಎಂಬ ಹೆಸರಿನಲ್ಲಿ ಲಕ್ಸುರಿ, ಸೂಪರ್ ಬೈಕ್ಗಳ ರೆಂಟಲ್ ವ್ಯವಹಾರ ಆರಂಭಿಸಿದ್ದೆವು. ಅದಕ್ಕೆ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು.

ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಇತ್ತಾದರೂ ಜನರಿಗೆ ಮೆಟ್ರೊ ನಿಲ್ದಾಣ ತಲುಪಲು ಪೂರಕ ಸಾರಿಗೆ ವ್ಯವಸ್ಥೆಯ ಕೊರತೆಯಿತ್ತು. 2017 ರಲ್ಲಿ ಬೆಂಗಳೂರಿನ ಮೆಟ್ರೋ ಸೇವೆ ವಿಸ್ತರಣೆಗೊಂಡಾಗ, ಜನರಿಗೆ ಮೆಟ್ರೋ ಸ್ಟೇಷನ್ಗಳಿಗೆ ತಲುಪಲು, ಅಲ್ಲಿಂದ ಮರಳಲು, ಫಸ್ಟ್ ಹಾಗೂ ಲಾಸ್ಟ್ ಮೈಲ್ ಸಂಚಾರ ವ್ಯವಸ್ಥೆ ಇರಲಿಲ್ಲ. ಆಗ ನಮಗೆ ಈ ಬೌನ್ಸ್ ಮೊಬಿಲಿಟಿ ಸೇವೆ (Bounce mobility service) ಆರಂಭಿಸುವ ಚಿಂತನೆ ಬಂದಿತು.

ಇದನ್ನೂ ಓದಿ: ಬಜೆಟ್‌ನ ಸ್ಯ್ವಾಪ್ ನೀತಿ ಬೆನ್ನಲ್ಲೇ ಬೌನ್ಸ್ ಹೊಸ ದಾಖಲೆ, 10 ಲಕ್ಷ ಬ್ಯಾಟರಿ ಸ್ವ್ಯಾಪ್ ರಿಜಿಸ್ಟ್ರೇಶನ್!

ಬೆಂಗಳೂರು ನಗರದಲ್ಲಿ ಶೇರ್ ಮೊಬಿಲಿಟಿ ಅಗತ್ಯ ಎಂದು ನಿಮಗೆ ಏಕನ್ನಿಸಿತು?: ಯಾವುದೇ ನಗರದ ವಿಸ್ತರಣೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ತುಂಬಾ ಮುಖ್ಯ. ಇದು ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜೊತೆಗೆ, ಜನರಿಗೆ ಕೈಗೆಟಕುವ ದರದಲ್ಲಿ ಸಾರಿಗೆ ಒದಗಿಸುತ್ತದೆ. ಎಲ್ಲಾ ನಗರಗಳಲ್ಲಿಯೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಂದ ಫಸ್ಟ್ ಮೈಲ್ ಹಾಗೂ ಲಾಸ್ಟ್ ಮೈಲ್ ಸಂಪರ್ಕ ಒದಗಿಸುವುದು ದೊಡ್ಡ ಸವಾಲು. ಆದ್ದರಿಂದ ನಾವು ಇದನ್ನು ನ್ಯೂ ಏಜ್ ಪಬ್ಲಿಕ್ ಟ್ರಾನ್ಸ್ಪೋರ್ಟ್ ಅಂತ ಕರೀತೀವಿ.

ಹಲವು  ಮೆಟ್ರೋ ನಿಲ್ದಾಣಗಳಲ್ಲಿ ಕನೆಕ್ಟಿವಿಟಿ ಸೌಲಭ್ಯ ಸರಿಯಿಲ್ಲದಿರುವುದರಿಂದ ಬೌನ್ಸ್ ಅನ್ನು ಜನರು ಕೇವಲ ಸಂಪರ್ಕ ಸಾರಿಗೆಯನ್ನಾಗಿ ಅಷ್ಟೇ ಅಲ್ಲದೆ, ಸಂಪೂರ್ಣ ಪಯಣಕ್ಕೆ ಕೂಡ ಬಳಸಲು ಆರಂಭಿಸಿದರು.  2018-2019ರ ವೇಳೆಗೆ ಬೆಂಗಳೂರಿನಲ್ಲಿ 25 ಸಾವಿರ ಬೌನ್ಸ್ ವಾಹನಗಳಿದ್ದವು. ಮೆಟ್ರೋದಲ್ಲಿ ಓಡಾಡುವ ಜನರಲ್ಲಿ ಶೇ.30ರಿಂದ 40ರಷ್ಟು ಜನರು ಬೌನ್ಸ್ ಬಳಸುತ್ತಿದ್ದರು.ಪ್ರತಿ ನಿತ್ಯ 1ರಿಂದ 1.5 ಲಕ್ಷ ಜನರು ಸಂಚರಿಸಲು ನಮ್ಮ ವಾಹನ ಬಳಸುತ್ತಿದ್ದರು.

ಮೆಟ್ರೋ ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿಗಳು, ಕಚೇರಿಗಳಿಗೆ ತೆರಳುವವರು ಅದರಲ್ಲೂ ಮಹಿಳೆಯರು ಇದನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಒಟ್ಟು ಪ್ರಯಾಣಿಕರ ಪೈಕಿ ಶೇ.25ರಿಂದ 30ರಷ್ಟು ಮಹಿಳಾ ಬಳಕೆದಾರರಿದ್ದಾರೆ. ಅವರಿಗೆ ಯಾರ ಮೇಲೂ ಅವಲಂಬಿತರಾಗದೆ  ಸ್ವತಃ ವಾಹನ ಚಲಾಯಿಸಿಕೊಂಡು ಹೋಗುವ ಅವಕಾಶ ದೊರೆಯುತ್ತದೆ.

ಬೆಂಗಳೂರು ಹೊರತುಪಡಿಸಿ ಬೇರೆ ಯಾವ ನಗರಗಳಲ್ಲಿ ಈ ಸೇವೆಯಿದೆ?: ಬೆಂಗಳೂರು, ಹೈದರಾಬಾದ್ನಲ್ಲಿ ಆರಂಭಿಸಿದೆವು. ಹೈದರಾಬಾದ್ನಲ್ಲಿ ಸುಮಾರು 5 ಸಾವಿರ ವಾಹನಗಳಿವೆ. ಅದನ್ನು ಪ್ರತಿನಿತ್ಯ 30 ಸಾವಿರ ಜನರು ಬಳಕೆ ಮಾಡುತ್ತಿದ್ದಾರೆ. ಈಗ ಎಲೆಕ್ಟ್ರಿಕ್ ವಾಹನಗಳನ್ನು ಬೇರೆ ನಗರಗಳಿಗೂ ವಿಸ್ತರಿಸುವ ಯೋಚನೆ ಇದೆ.

ವಾಹನವನ್ನು ಬಾಡಿಗೆಗೆ ನೀಡುವ ಸಿದ್ಧತೆಗಳು ಹೇಗಿದ್ದವು?: ಇಂಧನ ಚಾಲಿತ ವಾಹನವನ್ನು ಕೀ ರಹಿತ ವಾಹನ ಮಾಡುವುದು ಸುಲಭವಾಗಿರಲಿಲ್ಲ. ವಾಹನವನ್ನು ಟ್ರ್ಯಾಕ್ ಮಾಡಲು, ಅದರ ವೇಗ, ಪಾರ್ಕಿಂಗ್ ಸ್ಥಳ, ಇಂಜಿನ್ ಕಾರ್ಯಾಚರಣೆ ಎಲ್ಲದರ ಮಾಹಿತಿ ಲಭ್ಯವಾಗುವಂತಹ ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕಿತ್ತು. ಆ ಸಮಯದಲ್ಲಿ ಇಂಧನ ಚಾಲಿತ ವಾಹನದಲ್ಲಿ ಈ ತಂತ್ರಜ್ಞಾನ ಎಲ್ಲಿಯೂ ಇರಲಿಲ್ಲ. ಇಂಜಿನಿಯರ್ ಆಗಿರುವ ನಮ್ಮ ಪಾಲುದಾರರಾದ ವರುಣ್ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದರು.

ಇದನ್ನೂ ಓದಿ: Bounce Scooter ಎಲೆಕ್ಟ್ರಿಕ್ ಸ್ಕೂಟರ್ ಶೇರಿಂಗ್‌ನಲ್ಲಿ ಹೊಸ ದಾಖಲೆ ಬರೆದ ಬೌನ್ಸ್, 3 ಕೋಟಿ ರೈಡ್ ಸಾಧನೆ!

ನಂತರವಷ್ಟೇ ನಾವು ವಾಹನಗಳನ್ನು ಕೀ ಲೆಸ್ ಮಾಡಿದೆವು. ಜನರು ಕೀ ಬಳಸಿ ಮಾಡುವ ಕೆಲಸಗಳನ್ನು ಫೋನ್ನಲ್ಲಿಯೇ ಮಾಡುವಂತೆ ತಂತ್ರಜ್ಞಾನ ಸಿದ್ಧಪಡಿಸಬೇಕಿತ್ತು. ಹ್ಯಾಂಡಲ್ಲಾಕ್ ಅನ್ಲಾಕ್, ಗಾಡಿ ಆನ್ ಮಾಡುವುದು, ಇಗ್ನಿಷನ್ ಆನ್ ಆಫ್ ಎಲ್ಲವನ್ನು ರಿಮೋಟ್ ಆಗಿ ಕಂಟ್ರೊಲ್ ಮಾಡಿದ್ದೆವು. 25 ಸಾವಿರ ವಾಹನಗಳಿಗೆ ಈ ತಂತ್ರಜ್ಞಾನ ಅಳವಡಿಸಲು 8ರಿಂದ 9 ತಿಂಗಳು ಪಡೆದುಕೊಂಡೆವು.

ಶೇರ್ ಮೊಬಿಲಿಟಿಗೆ ಎದುರಾದ ಸವಾಲುಗಳೇನು?: ನಿಯಮ ಉಲ್ಲಂಘಿಸಿ ವಾಹನವನ್ನು ಎಲ್ಲೆಂದರಲ್ಲಿ ನಿಲ್ಲಿಸುವವರು ಹಾಗೂ ಹಾನಿಗೊಳಿಸುವವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ?:  ಬೌನ್ಸ್ ಆರಂಭಿಸುವ ಮುನ್ನ ಸವಾಲುಗಳನ್ನು ನಿರೀಕ್ಷಿಸಿದ್ದೆವು. ಎಲ್ಲರೂ ನಿಯಮ ಪಾಲಿಸುತ್ತಾರೆ ಎಂದು ನಿರೀಕ್ಷಿಸಲಾಗದು. ಅದಕ್ಕಾಗಿ ನಾವು ಬಳಕೆದಾರರಿಗೆ ಕೆವೈಸಿ ಕಡ್ಡಾಯಗೊಳಿಸಿದ್ದೆವು. ಅದರಲ್ಲಿ ಬಳಕೆದಾರರು ತಮ್ಮ ಚಾಲಕರ ಪರವಾನಗಿ ಸೇರಿ ಇತರ ಮಾಹಿತಿಗಳನ್ನು ಅಪ್ಲೋಡ್ ಮಾಡಬೇಕಿತ್ತು. ಅದನ್ನು ನಮ್ಮ ಬಳಿ ಇರುವ ಸರ್ಕಾರಿ ದತ್ತಾಂಶಗಳಲ್ಲಿ ಅದನ್ನು ಪರಿಶೀಲಿಸುತ್ತೇವೆ. ಜೊತೆಗೆ, ಬಳಕೆದಾರರು ತಮ್ಮ ಪಾವತಿಯ ವಾಲೆಟ್ ಅನ್ನು ಕೂಡ ಲಿಂಕ್ ಮಾಡಿರುತ್ತಾರೆ.

ಎಲ್ಲವನ್ನೂಪರಿಶೀಲಿಸಿದ ಮೇಲೆಯೇ ವಾಹನ ನೀಡುತ್ತೇವೆ. ಜೊತೆಗೆ, ಬೌನ್ಸ್ ಬಳಕೆಯ ಪ್ರದೇಶದ ಮಿತಿಯನ್ನು ಹೇರಿರುತ್ತೇವೆ. ಆ ಮಿತಿಯನ್ನು ದಾಟಿದರೆ ಅವರಿಗೆ ಸಂದೇಶ ತಲುಪಿಸಲಾಗುತ್ತದೆ. ಅವರಿಗೆ ಟ್ರಿಪ್ ಎಂಡ್ ಮಾಡಲು ಬಿಡಲ್ಲ. ನೋಪಾರ್ಕಿಂಗ್ ಏರಿಯಾಗಳಲ್ಲಿ ಕೂಡ ಪಾರ್ಕ್ ಮಾಡಲುಹೋದರೆ ಅಲರ್ಟ್ ಮಾಡುತ್ತದೆ. ಅದನ್ನು ಮೀರಿ ಕೂಡ ಕೆಲವರು ನಿಯಮ ಉಲ್ಲಂಘಿಸುತ್ತಾರೆ. ಅವರಿಗೆ ನಾವು ದಂಡ ವಿಧಿಸುತ್ತೇವೆ. ಇಲ್ಲಿಯವರೆಗೆ 5ರಿಂದ 6 ಸಾವಿರ ಬಳಕೆದಾರರನ್ನು ಬ್ಯಾನ್ ಮಾಡಿದ್ದೇವೆ.

ಕೋವಿಡ್ ಸಂದರ್ಭದಲ್ಲಿ ಏಕಾಏಕಿ ಎಲ್ಲವೂ ಸ್ಥಗಿತಗೊಂಡಾಗ ಏನು ಮಾಡಿದಿರಿ?: ಕೋವಿಡ್ ಸಂದರ್ಭದಲ್ಲಿ ಮೊಬಿಲಿಟಿ ವಲಯದಲ್ಲಿ ಇರುವವರೆಲ್ಲರಿಗೂ ತೊಂದರೆಯಾಯಿತು. ಲಾಕ್ಡೌನ್ ಸಂದರ್ಭದಲ್ಲಿ ಹೊರಗಡೆ ಓಡಾಡಲು ಅವಕಾಶವಿದ್ದವರಿಗೆ ಮಾತ್ರ ವಾಹನಗಳನ್ನು ಬಾಡಿಗೆ ನೀಡುತ್ತಿದ್ದೆವು. ನಂತರ ಡೆಲಿವರಿ ಸೌಲಭ್ಯ ಆರಂಭವಾದಾಗ ಅವರು ಬಳಸುತ್ತಿದ್ದರು. ಆಗ ನಾವು ಇಂಧನ ಚಾಲಿತ ವಾಹನ ಬದಲಿಗೆ, ಎಲೆಕ್ಟ್ರಿಕ್ಗೆ ಬದಲಾಗಲು ನಿರ್ಧರಿಸಿದೆವು.

ಎಲೆಕ್ಟ್ರಿಕ್‌ಗೆ ಮಾರ್ಪಾಡಾಗಲು ಮುಖ್ಯ ಕಾರಣವೇನು?: ಇಂಧನ ಚಾಲಿತ ವಾಹನದಲ್ಲಿ ಕಾರ್ಯಾಚರಣೆ ವೆಚ್ಚ ಜಾಸ್ತಿ. ಆದ್ದರಿಂದ ನಾವು 2018ರಿಂದ ಎಲೆಕ್ಟ್ರಿಕ್ ಆಗಿ ಬದಲಾಗಲು ಆರಂಭಿಸಿದ್ದೆವು. ಕೋವಿಡ್ ಆರಂಭಕ್ಕೂ ಮುನ್ನವೇ ನಮ್ಮ ಬಳಿ 1 ಸಾವಿರ ಎಲೆಕ್ಟ್ರಿಕ್ ವಾಹನಗಳಿದ್ದವು. ಈ ವಾಹನಗಳಿಗೆ ಆಗಲೇ ನಾವು ಬ್ಯಾಟರಿ  ಸ್ವಾಪಿಂಗ್ ಸ್ಟೇಷನ್ ಗಳನ್ನು ಅಳವಡಿಸಿದ್ದೆವು. ಇದರ ಕಾರ್ಯಾಚರಣೆ ವೆಚ್ಚ ಕಡಿಮೆ ಇರುವುದರಿಂದ ಕೋವಿಡ್ ಸಂದರ್ಭದಲ್ಲಿ ಕೇವಲ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ನಿರ್ಧರಿಸಿದೆವು. ಆದ್ದರಿಂದ ಕೋವಿಡ್ ಸಂದರ್ಭದಲ್ಲಿ ಸುಮಾರು 20 ಸಾವಿರ ಇಂಧನ ಚಾಲಿತ ವಾಹನಗಳನ್ನು ಮಾರಾಟ ಮಾಡಿದೆವು.

ಈಗ ಬೌನ್ಸ್ ಮೊಬಿಲಿಟಿ ಆ್ಯಪ್ನಲ್ಲಿ ನೋಡಿದರೆ ತಿಳಿಯುತ್ತೆ. ನಾವು ಶೇ.100ರಷ್ಟು ಎಲೆಕ್ಟ್ರಿಕ್ ವಾಹನಗಳಿಗೆ ಮಾರ್ಪಾಡಾಗಿದ್ದೇವೆ.  ಸದ್ಯ 5 ರಿಂದ 6 ಸಾವಿರ ವಾಹನಗಳಿವೆ. ಮುಂದಿನ ತಿಂಗಳ ಒಳಗೆ ಇನ್ನೂ 6 ಸಾವಿರ ವಾಹನಗಳನ್ನು ಸೇರಿಸಲಿದ್ದೇವೆ. ಎಲ್ಲವೂ ಸ್ವ್ಯಾಪ್ ಮಾಡಬಲ್ಲ ಬ್ಯಾಟರಿಗಳನ್ನು ಹೊಂದಿರಲಿವೆ.  ಇದರಲ್ಲಿ ಲೋ ಸ್ಪೀಡ್ ಹಾಗೂ ಹೈ ಸ್ಪೀಡ್ ಎಂಬ ಎರಡು ಬಗೆಗಳಿದ್ದು, ಲೋ ಸ್ಪೀಡ್ ವಾಹನಗಳಲ್ಲಿ ಚಾಲನಾ ಪರವಾನಗಿ ಕಡ್ಡಾಯ ಇರುವುದಿಲ್ಲ. ಇದರಿಂದ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲದವರು ಕೂಡ ಈ ವಾಹನ ಬಳಕೆ ಮಾಡಬಹುದು.

ಸ್ವ್ಯಾಪೇಬಲ್ ಬ್ಯಾಟರಿ ಎಂದರೇನು?: ಜನರಿಗೆ ಎಲೆಕ್ಟ್ರಿಕ್ ವಾಹನದ ಬಳಕೆಯನ್ನು ಸುಲಭವಾಗಿಸುವ ಉದ್ದೇಶದಿಂದ ನಮ್ಮ ವಾಹನಗಳಲ್ಲಿ ನಾವು ಬದಲಿಸಬಹುದಾದ ಬ್ಯಾಟರಿಯನ್ನು ಅಳವಡಿಸಿದ್ದೇವೆ. ಇದು ಭಾರತದಲ್ಲಿಯೇ ಪ್ರಥಮ ಪ್ರಯತ್ನ. ಇದರಲ್ಲಿ ಬಳಕೆದಾರರು ತಮ್ಮ ಬೌನ್ಸ್ ಆ್ಯಪ್ನಲ್ಲಿ, ಹತ್ತಿರದಲ್ಲಿನ ಕಿರಾಣಿ ಅಂಗಡಿ ಅಥವಾ ಅಪಾರ್ಟ್ಮೆಂಟ್ಗಳು ಅಥವಾ ಪೆಟ್ರೋಲ್ ಬಂಕ್ಗಳಲ್ಲಿನ ಸ್ವ್ಯಾಪಿಂಗ್ ಕೇಂದ್ರ ಹಾಗೂ ಅದರಲ್ಲಿನ ಭರ್ತಿಯಾಗಿರುವ ಬ್ಯಾಟರಿಗಳ ಮಾಹಿತಿ ಪಡೆಯಬಹುದು. ಬ್ಯಾಟರಿ ಕಾಯ್ದಿರಿಸುವ ಅವಕಾಶ ಕೂಡ ಇದೆ. ಇದರಿಂದ ಅವರ ಸಮಯ ಉಳಿತಾಯವಾಗುತ್ತದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲಾನ್ ನಿಮಗಿದೆಯಾ, ಇಲ್ಲಿದೆ ಟಾಪ್ 10 ಟು ವ್ಹೀಲರ್!

ಈ ಬದಲಿಸುವ ಬ್ಯಾಟರಿ ವ್ಯವಸ್ಥೆಯಿಂದ ಬ್ಯಾಟರಿ ಬಾಳಿಕೆ ಕಡಿಮೆಯಾಗುವುದಿಲ್ಲವೇ?: ಬ್ಯಾಟರಿ ಗುಣಮಟ್ಟ ಕಾಯ್ದುಕೊಳ್ಳಲಿಕ್ಕಾಗಿಯೇ ಬೌನ್ಸ್ ವಾಹನಗಳಲ್ಲಿ ಸ್ಮಾರ್ಟ್ ಬ್ಯಾಟರಿಗಳನ್ನು ಬಳಸುತ್ತಿದ್ದೇವೆ. ಅದರಲ್ಲಿ ಐಒಟಿ, ಬಿಎಂಎಸ್(ಬ್ಯಾಟರಿ ನಿರ್ವಹಣಾ ವ್ಯವಸ್ಥೆ), ಜಿಪಿಎಸ್ ಇರುತ್ತದೆ ಮತ್ತು ಎಲ್ಲವೂ ನಮ್ಮ ಕ್ಲೌಡ್ಗೆ ಕನೆಕ್ಟ್ ಆಗಿರುತ್ತದೆ. ಬಿಎಂಎಸ್ ಬ್ಯಾಟರಿ ಜೀವಿತಾವಧಿ ಹೆಚ್ಚಿಸುತ್ತದೆ.

ಸಂಪೂರ್ಣ ಚಾರ್ಜ್ ಆದ ಮೇಲೆ ಸ್ವಯಂಚಾಲಿತವಾಗಿ ಚಾರ್ಜಿಂಗ್ ಕಟ್ ಆಫ್ ಮಾಡುವುದರಿಂದ ಬ್ಯಾಟರಿ ಬಾಳಿಕೆ ಹೆಚ್ಚುತ್ತದೆ. ಬ್ಯಾಟರಿ ಸೆಲ್ಗಳ ಕಾರ್ಯಾಚರಣೆ ಕುರಿತು ನಮಗೆ ಅಲರ್ಟ್ ಮಾಡುತ್ತದೆ. ಇದು ವೋಲ್ಟೇಜ್ ಫ್ಲಕ್ಚ್ಯುವೇಷನ್ ಕುರಿತು ಕೂಡ ಮಾಹಿತಿ ನೀಡುತ್ತದೆ. ಈ ದತ್ತಾಂಶಗಳು ಐಒಟಿ ಮೂಲಕ ನಮಗೆ ದೊರೆಯುತ್ತದೆ. ಹೀಗಾಗಿ ಎಲ್ಲಾ ಬ್ಯಾಟರಿಗಳನ್ನು ಒಂದೇ ಸ್ಥಳದಿಂದ ಮಾನಿಟರ್ ಮಾಡಬಹುದು.

ಇದುವರೆಗೆ ಎಷ್ಟು ಬ್ಯಾಟರಿ ಸ್ವ್ಯಾಪಿಂಗ್ ನಡೆದಿದೆ?: ಕಳೆದ ಒಂದೂವರೆ ವರ್ಷದಲ್ಲಿ ನಾವು 10 ಲಕ್ಷಕ್ಕೂ ಹೆಚ್ಚು ಬ್ಯಾಟರಿ ಬದಲಿಸಿದ್ದೇವೆ. ಪ್ರತಿ ದಿನ ಬೆಂಗಳೂರು ನಗರದಲ್ಲಿ 3ರಿಂದ 3.5 ಸಾವಿರದವರೆಗೆ ಬ್ಯಾಟರಿಗಳ ಸ್ವ್ಯಾಪಿಂಗ್ ನಡೆಯುತ್ತದೆ.  ಯಾವ ಬ್ಯಾಟರಿ ಯಾವ ಸ್ಥಳದಲ್ಲಿದೆ, ಎಷ್ಟು ಚಾರ್ಜ್ ಇದೆ, ಏನು ಸಮಸ್ಯೆ ಇದೆ ಎಂಬುದನ್ನು ಎಲ್ಲದರ ಮಾಹಿತಿ ನೀಡುವಂತೆ ಸಿಸ್ಟಮ್ ಅನ್ನು ಡೆವಲಪ್ ಮಾಡಿದ್ದೇವೆ. ಬೌನ್ಸ್ ಇನ್ಫಿನಿಟಿಯಲ್ಲಿ ವಾಹನದಲ್ಲಿ ಎರಡು ಬ್ಯಾಟರಿ ಇರಿಸುವಷ್ಟು ಜಾಗ ಇದೆ. ವಾಹನದ ಮೂಲಕ ಬ್ಯಾಟರಿಯನ್ನು ಬದಲಿಸಬೇಕಿಲ್ಲ. ಬದಲಿಗೆ, ಸ್ವ್ಯಾಪಿಂಗ್ ಸೆಂಟರ್ನಲ್ಲಿರುವ ಬ್ಯಾಟರಿಯನ್ನು ಬಳಕೆ ಮಾಡಿ, ನಂತರ ಅದನ್ನು ರಿಟರ್ನ್ ಮಾಡುವ ವ್ಯವಸ್ಥೆ ಮಾಡಲಾಗಿದೆ. 

ಕಡಿಮೆ ಬೆಲೆಗೆ ಹೈ ಸ್ಪೀಡ್ ಎಲೆಕ್ಟ್ರಿಕ್ ವಾಹನ ಬೌನ್ಸ್ ಇನ್ಫಿನಿಟಿ ಪರಿಚಯಿಸುವ ಉದ್ದೇಶವೇನು?: ಬೌನ್ಸ್ ಇನ್ಫಿನಿಟಿ ವಾಹನವನ್ನು ಭಾರತೀಯ ರಸ್ತೆಗಳು, ನಗರಗಳಲ್ಲಿ  ಬಳಕೆಯ ಪ್ರಮಾಣ, ಸಮಯವನ್ನು ಗಮನದಲ್ಲಿರಿಸಿಕೊಂಡು ತಯಾರಿಸಲಾಗಿದೆ. ಒಂದು ಅಧ್ಯಯನದ ಪ್ರಕಾರ, ಬೆಂಗಳೂರು ಸೇರಿದಂತೆ ಇತರ ಮೆಟ್ರೋಪಾಲಿಟನ್ ನಗರಗಳಲ್ಲಿ ಜನರು ದಿನವೊಂದಕ್ಕೆ ಸಂಚರಿಸುವುದು ಸರಾಸರಿ 15ರಿಂದ 20 ಕಿಮೀ ಮಾತ್ರ.

ಅಲ್ಲದೆ, ನಗರ ಪ್ರದೇಶಗಳಲ್ಲಿ 30ರಿಂದ 40 ಕಿಮೀವರೆಗೆ ವೇಗದಲ್ಲಿ ಮಾತ್ರ ಸಂಚರಿಸಲು ಸಾಧ್ಯ. ಅದಕ್ಕೆ ತಕ್ಕಂತೆ ಬೌನ್ಸ್ ಇನ್ಫಿನಿಟಿ 65 ಕಿಮೀ ರೇಂಜ್ ನೀಡಲಿದೆ. ಜೊತೆಗೆ, 65 ಕಿಮೀ ವೇಗವಾಗಿ ಸಂಚರಿಸಲಿದೆ. ಇದರಲ್ಲಿ 1.5 ಕೆಡಬ್ಲ್ಯು ಮೋಟಾರ್, 2 ಕೆಡಬ್ಲ್ಯು ಬ್ಯಾಟರಿ ಇದೆ. ಇದರಲ್ಲಿ ಬದಲಿಸಬಹುದಾದ ಬ್ಯಾಟರಿ ಇರುವುದರಿಂದ ಜನರು ಅದರ ಚಾರ್ಜಿಂಗ್ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. 

ಮುಂದಿನ ಯೋಜನೆಗಳೇನು?: ಬ್ಯಾಟರಿ ಸ್ವ್ಯಾಪಿಂಗ್ ಸೆಂಟರ್ಗಳನ್ನು ಇತರರಿಗೂ ಕೂಡ ಬಳಸುವಂತೆ ವಿನ್ಯಾಸ ಮಾಡಿದ್ದೇವೆ. ಬ್ಯಾಟರಿ ರಹಿತ ವಾಹನಗಳನ್ನು ಮಾರಾಟ ಮಾಡುವ ‘ಆ್ಯಂಪೈರ್’ ಕಂಪನಿ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಅಂತಹ ಗ್ರಾಹಕರಿಗೆ ನಾವು ಬ್ಯಾಟರಿ ಪೂರೈಕೆ ಮಾಡುತ್ತೇವೆ. ಇದೇ ರೀತಿ ಜೈಪುರ ಮೂಲದ ‘ಬ್ಯಾಟರಿ’ ಎಂಬ ಕಂಪನಿಯೊಂದಿಗೆ ಕೈಜೋಡಿಸಿದ್ದೇವೆ.ಈ ಹಣಕಾಸು ವರ್ಷದಲ್ಲಿ ಎರಡು ಲಕ್ಷ ವಾಹನ ಮಾರಾಟ ಮಾಡುವ ಗುರಿಯಿದೆ. ಮೊಬಿಲಿಟಿ ವ್ಯವಹಾರವನ್ನು 10 ನಗರಗಳಿಗೆ ವಿಸ್ತರಿಸುವ ಗುರಿ ಇದೆ. ಬ್ಯಾಟರಿ ಸೇವೆಯ ಸಾಮರ್ಥ್ಯವನ್ನು ಸುಮಾರು 10 ಲಕ್ಷ ಜನರು ಬಳಸುವಂತೆ ಹೆಚ್ಚಿಸುವ ಪ್ರಯತ್ನ ನಡೆದಿದೆ.

Follow Us:
Download App:
  • android
  • ios