ಬೆಂಗಳೂರು: ಸಾರಿಗೆ ಇಲಾಖೆಯು ನಗರದ ಕೆ.ಆರ್‌.ಪುರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆರಂಭಿಸಿರುವ ಕೆಎ 53, ಎಂಜಿ 0000 ಸರಣಿಯ ಮುಂಗಡ ಫ್ಯಾನ್ಸಿ ನೋಂದಣಿ ಸಂಖ್ಯೆಗಳ ಬಹಿರಂಗ ಹರಾಜಿನಲ್ಲಿ ‘0001’ ನೋಂದಣಿ ಸಂಖ್ಯೆ ಅತ್ಯಧಿಕ ಮೊತ್ತ 5.13 ಲಕ್ಷ ರು.ಗೆ ಬಿಕರಿಯಾಗಿದೆ.

ಶಾಂತಿನಗರದ ಸಾರಿಗೆ ಇಲಾಖೆ ಕಚೇರಿಯಲ್ಲಿ ಬುಧವಾರ ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಗ್ರಾಹಕರು 9999ಗೆ .2.90 ಲಕ್ಷ, 0999ಗೆ .2.35 ಲಕ್ಷ, 0009ಗೆ .2.26 ಲಕ್ಷ, 0099ಗೆ .2.05 ಲಕ್ಷ, 6666ಗೆ .1.68 ಲಕ್ಷ, 8888ಗೆ .1.67 ಲಕ್ಷ, 0007ಗೆ .1.28 ಲಕ್ಷ, 5555ಗೆ .1.15 ಲಕ್ಷ ಪಾವತಿಸಿ ಖರೀದಿಸಿದರು. ಅಂತೆಯೆ 4444 ನೋಂದಣಿ ಸಂಖ್ಯೆ .85 ಸಾವಿರ ಹಾಗೂ 8055 ನೋಂದಣಿ ಸಂಖ್ಯೆ .79 ಸಾವಿರಕ್ಕೆ ಬಿಕರಿಯಾಯಿತು. ಒಟ್ಟು 26 ಫ್ಯಾನ್ಸಿ ನೋಂದಣಿ ಸಂಖ್ಯೆಗಳು ಬಿಕರಿಯಾಗಿದ್ದು, ಇದರಿಂದ ಇಲಾಖೆಗೆ .33,43,500 ಆದಾಯ ಸಂಗ್ರಹವಾಗಿದೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.