Asianet Suvarna News Asianet Suvarna News

ಮಹಾಲಕ್ಷ್ಮೀ ಲೇಔಟ್: ಗೋಪಾಲಯ್ಯ ಹ್ಯಾಟ್ರಿಕ್‌ ಕನಸಿಗೆ ಜೆಡಿಎಸ್‌ ಅಡ್ಡಿ

ಮಹಾಲಕ್ಷ್ಮೀ ಲೇಔಟ್‌ನಲ್ಲಿ ಬಿಜೆಪಿ-ಜೆಡಿಎಸ್‌ ನಡುವೆ ನೇರ ಹಣಾಹಣಿ |  ಎರಡು ಬಾರಿ ಕೈಕೊಟ್ಟನಾಯಕನ ಮಣಿಸಲು ಗೌಡ, ಎಚ್‌ಡಿಕೆ ಪಣ |  ಕಾಂಗ್ರೆಸ್‌ ಪಾಳಯದಿಂದ ನಿರೀಕ್ತಿತ ಪ್ರಚಾರ ಕಾಣಿಸುತ್ತಿಲ್ಲ  ಬಿಜೆಪಿ ಅಭ್ಯರ್ಥಿ ಕೈಹಿಡಿದು ಗೆಲ್ಲಿಸ್ತಾರಾ ಕ್ಷೇತ್ರದ ಜನ?

By Election 2019 Mahalakshmi layout ground report here
Author
Bengaluru, First Published Dec 2, 2019, 12:25 PM IST

ಬೆಂಗಳೂರು (ಡಿ. 02): ಬಡ ಮತ್ತು ಮಧ್ಯಮ ವರ್ಗದವರೇ ಹೆಚ್ಚಾಗಿರುವ ಮಹಾಲಕ್ಷ್ಮೇ ಲೇಔಟ್‌ ವಿಧಾನಸಭಾ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಹ್ಯಾಟ್ರಿಕ್‌ ಸಾಧಿಸುವ ಗುರಿಯೊಂದಿಗೆ ಮೂರನೇ ಬಾರಿ ಚುನಾವಣಾ ಅಖಾಡದ ಅದೃಷ್ಟಪರೀಕ್ಷೆಗಿಳಿದಿದ್ದಾರೆ. ಆ ಗುರಿಯನ್ನು ವಿಫಲಗೊಳಿಸಲು ಜೆಡಿಎಸ್‌ ಭರ್ಜರಿ ಪ್ರಯತ್ನ ನಡೆಸಿದೆ.

ಜೆಡಿಎಸ್‌ನಿಂದ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಗೋಪಾಲಯ್ಯ ‘ದಳಪತಿ’ಗೆ ಕೈಕೊಟ್ಟು ಬಿಜೆಪಿಯಿಂದ ಉಪ ಚುನಾವಣೆ ಎದುರಿಸಲು ಸನ್ನದ್ಧರಾಗಿದ್ದಾರೆ. ಆದರೆ, ಮೈತ್ರಿ ಸರ್ಕಾರ ಪತನಗೊಳಿಸಲು ಪ್ರಮುಖ ಕಾರಣವಾಗಿದ್ದಾರೆ ಎಂಬ ಮುನಿಸು ಜೆಡಿಎಸ್‌ ವರಿಷ್ಠರಲ್ಲಿ ಬಲವಾಗಿ ಬೇರೂರಿದೆ. ಇದರ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಜೆಡಿಎಸ್‌ ಇದ್ದು, ಗೋಪಾಲಯ್ಯ ಅವರ ಹ್ಯಾಟ್ರಿಕ್‌ ಸಾಧನೆಗೆ ಅಡ್ಡಗೋಡೆಯಾಗಿ ನಿಲ್ಲಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಬಿಜೆಪಿ-ಜೆಡಿಎಸ್‌ನ ಪ್ರಚಾರದ ಅಬ್ಬರದಲ್ಲಿ ಕಾಂಗ್ರೆಸ್‌ ಮಂಕಾಗಿದೆ.

By Election 2019 Mahalakshmi layout ground report here

ಪಕ್ಷವಾರು ಪೈಪೋಟಿಗಿಂತ ಹೆಚ್ಚಾಗಿ ವ್ಯಕ್ತಿವಾರು ಪೈಪೋಟಿ ಇರುವುದು ಕ್ಷೇತ್ರದಲ್ಲಿ ಎದ್ದು ಕಾಣುತ್ತಿದೆ. ಎರಡು ಬಾರಿ ಪಕ್ಷಕ್ಕೆ ಮೋಸ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಗೋಪಾಲಯ್ಯ ಅವರನ್ನು ಮಣಿಸಲು ಜೆಡಿಎಸ್‌ ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿದೆ.

ಶಿವಾಜಿನಗರ ಬೈ ಎಲೆಕ್ಷನ್: ರೋಷನ್‌ ಬೇಗ್‌ ಇಲ್ಲದ ಹೈವೋಲ್ಟೇಜ್‌ ಸಮರ

ಕಾಂಗ್ರೆಸ್‌ ಸಹ ಜೆಡಿಎಸ್‌ನಂತೆ ಗೋಪಾಲಯ್ಯ ಅವರ ಗೆಲುವಿನ ಓಟಕ್ಕೆ ತಡೆ ಹಾಕಲು ತಂತ್ರ ರೂಪಿಸಿದೆ. 2013 ಮತ್ತು 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಗೋಪಾಲಯ್ಯ ಅವರ ರಾಜೀನಾಮೆನಿಂದಾಗಿ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಗಿದೆ.

ಜೆಡಿಎಸ್‌ ತನ್ನ ಅಭ್ಯರ್ಥಿಯಾಗಿ ಉತ್ತಮ ಶೈಕ್ಷಣಿಕ ಹಿನ್ನೆಲೆಯುಳ್ಳ ಗಿರೀಶ್‌ ಕೆ.ನಾಶಿ ಅವರನ್ನು ಅಖಾಡಕ್ಕಿಳಿಸಿದೆ. ಕಾಂಗ್ರೆಸ್‌ ಪಕ್ಷವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಶಿಷ್ಯ’ ಹಾಗೂ ಬಿಬಿಎಂಪಿ ಸದಸ್ಯ ಎಂ.ಶಿವರಾಜ್‌ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕವಾಗಿದ್ದು, ಗೋಪಾಲಯ್ಯ ಮಾತ್ರ ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯಾಗಿದ್ದಾರೆ.

ಇನ್ನುಳಿದಂತೆ ಜೆಡಿಎಸ್‌ ಅಭ್ಯರ್ಥಿ ಗಿರೀಶ್‌ ಕೆ.ನಾಶಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಶಿವರಾಜ್‌ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರು ಕನ್ನಡ ಚಳವಳಿ ವಾಟಾಳ್‌ ಪಕ್ಷದಿಂದ ಕಣದಲ್ಲಿದ್ದಾರೆ.

ಒಕ್ಕಲಿಗರ ನಡುವೆ ಜಿದ್ದಾಜಿದ್ದಿ ಕದನ; 3 ಪಕ್ಷಗಳಿಂದ ಒಕ್ಕಲಿಗ ಅಭ್ಯರ್ಥಿಗಳು ಕಣಕ್ಕೆ

ಕ್ಷೇತ್ರದಲ್ಲಿ 2,85,869 ಮತದಾರರಿದ್ದು, 1,47,353 ಪುರುಷ ಮತದಾರರು, 1,38,474 ಮಹಿಳಾ ಮತದಾರರು ಮತ್ತು 42 ಇತರೆ ಮತದಾರರಿದ್ದಾರೆ. 3,545 ಮತದಾರರು 18-19 ವರ್ಷದ ವಯೋಮಾನದವರಿದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ ಒಕ್ಕಲಿಗರು 80 ಸಾವಿರಕ್ಕೂ ಹೆಚ್ಚಿದ್ದು, ಹಿಂದುಳಿದ ವರ್ಗದವರು 50 ಸಾವಿರಕ್ಕಿಂತ ಹೆಚ್ಚು ಇದ್ದಾರೆ.

ಪರಿಶಿಷ್ಟರು 30 ಸಾವಿರಕ್ಕಿಂತ ಅಧಿಕ, ಲಿಂಗಾಯತ ಸಮುದಾಯದವರು 22 ಸಾವಿರಕ್ಕಿಂತ ಹೆಚ್ಚು ಮತ್ತು ಮುಸ್ಲಿಂ ಸಮುದಾಯದವರು 7 ಸಾವಿರಕ್ಕೂ ಅಧಿಕ ಮಂದಿ ಇದ್ದಾರೆ. ಪೀಣ್ಯ ಮತ್ತು ಯಶವಂತಪುರ ವಾರ್ಡ್‌ನಲ್ಲಿ ಶ್ರಮಿಕ ವರ್ಗದವರೇ ಅಧಿಕ ಇದ್ದು, ಮಾಗಡಿ, ನೆಲಮಂಗಲ, ತುಮಕೂರು ಮತ್ತು ಉತ್ತರ ಕರ್ನಾಟಕ ಭಾಗದ ವಲಸಿಗರು ಇದ್ದಾರೆ.

ಅನರ್ಹ ಶಾಸಕ ಗೋಪಾಲಯ್ಯ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ನೀಡುತ್ತಿದ್ದಂತೆ ಟಿಕೆಟ್‌ ಆಕಾಂಕ್ಷಿಗಳಾದ ಮಾಜಿ ಉಪಮೇಯರ್‌ ಎಸ್‌.ಹರೀಶ್‌ ಮತ್ತು ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ತೀವ್ರ ಅಸಮಾಧಾನಗೊಂಡಿದ್ದರು. ಮಾತ್ರವಲ್ಲ ಬಿಜೆಪಿಯ ಸ್ಥಳೀಯರು ಸಹ ಗೋಪಾಲಯ್ಯಗೆ ಟಿಕೆಟ್‌ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇಬ್ಬರನ್ನು ಪ್ರತ್ಯೇಕವಾಗಿ ಕರೆದು ವಾಸ್ತವಾಂಶದ ಬಗ್ಗೆ ಮನವೊಲಿಕೆ ಮಾಡಿದರು. ಅಸಮಾಧಾನ ಶಮನಗೊಂಡ ತರುವಾಯ ನರೇಂದ್ರ ಬಾಬು ಮತ್ತು ಹರೀಶ್‌ ಅವರು ಗೋಪಾಲಯ್ಯ ಪರ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಕೆ ಆರ್ ಪುರ ಉಪಚುನಾವಣೆ: ಕಾಂಗ್ರೆಸ್‌ ಮತ ಛಿದ್ರವಾದರೆ ಬೈರತಿಗೆ ಸಲೀಸು

ಕಾಂಗ್ರೆಸ್‌ ತುಸು ಮಂಕು:

ಕಾಂಗ್ರೆಸ್‌ ಅಭ್ಯರ್ಥಿ ಎಂ.ಶಿವರಾಜ್‌ ಪ್ರಚಾರ ಕ್ಷೇತ್ರದಲ್ಲಿ ಅಷ್ಟಕಷ್ಟೇ ನಡೆಯುತ್ತಿದೆ. ಗೆಲ್ಲಲ್ಲೇಬೇಕು ಎಂಬ ಕೆಚ್ಚು ಕಾಣುತ್ತಿಲ್ಲ. ಕ್ಷೇತ್ರದ ಕಾಂಗ್ರೆಸ್‌ ಮತಗಳು ಅನ್ಯ ಪಕ್ಷಗಳ ಪಾಲಾಗುವುದಿಲ್ಲ ಎಂಬ ವಿಶ್ವಾಸ ಕಾಂಗ್ರೆಸಿಗರಿಗೆ ಇದೆ.

ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮತ್ತು ಆಡಳಿತ ಪಕ್ಷದ ನಾಯಕರಾಗಿ ಕೆಲಸ ಮಾಡಿರುವ ಅನುಭವ ಶಿವರಾಜ್‌ಗೆ ಇದ್ದು, ಇದರ ಲಾಭವನ್ನು ಪಡೆದುಕೊಂಡರೆ ಪ್ರಯೋಜನವಾಗಬಹುದು. ಅಲ್ಲದೇ ಕ್ಷೇತ್ರದಲ್ಲಿ ಬಹುತೇಕ ಜನರು ಮಧ್ಯಮ ವರ್ಗದವರಾಗಿದ್ದಾರೆ. ಅವರಲ್ಲಿ ಕಾಂಗ್ರೆಸ್‌ ಪರ ಒಲವು ಹೊಂದಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ಶಿವರಾಜ್‌ಗೆ ವರದಾನವಾದರೆ ಗೆಲುವು ಅಚ್ಚರಿಯೇನಲ್ಲ.

ಪಣತೊಟ್ಟಮಾಜಿ ಪ್ರಧಾನಿ:

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮನದಲ್ಲಿ ಗೋಪಾಲಯ್ಯ ಅವರನ್ನು ಮಣಿಸಲೇಬೇಕು ಎಂದು ಪಟ್ಟು ಹಿಡಿದು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಮಹಾಲಕ್ಷ್ಮೇ ಲೇಔಟ್‌ ಕ್ಷೇತ್ರವು ಜೆಡಿಎಸ್‌ ಕೋಟೆಯಾಗಿರುವ ಕಾರಣ ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಈ ಹಿಂದೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ ಮಾಡಿದರೂ ಗೋಪಾಲಯ್ಯ ಅವರನ್ನು ಜೆಡಿಎಸ್‌ ವರಿಷ್ಠರು ಕ್ಷಮಿಸಿದ್ದರು.

ಆದರೆ, ಈ ಬಾರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನೇ ಪತನಗೊಳಿಸಲು ಬಿಜೆಪಿ ಜತೆ ಕೈ ಜೋಡಿಸಿದ್ದು, ಪಕ್ಷದ ವರಿಷ್ಠರಿಗೆ ಇನ್ನಿಲ್ಲದ ಸಿಟ್ಟು ತರಿಸಿದೆ. ಈ ಸೇಡನ್ನು ತೀರಿಸಿಕೊಳ್ಳಬೇಕು ಎಂಬ ಹಟದಲ್ಲಿ ಬಿರುಸಿನ ಪ್ರಚಾರ ಕೈಗೊಂಡು ಪಕ್ಷಕ್ಕೆ ದ್ರೋಹ ಎಸಗಿರುವುದು ಮತ್ತು ಕ್ಷೇತ್ರಕ್ಕೆ ನೀಡಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡಿಲ್ಲ ಎಂಬ ಆರೋಪ ಹಾಗೂ ಅನರ್ಹ ಶಾಸಕ ಎಂಬ ಅಸ್ತ್ರವನ್ನು ಬಳಸಿಕೊಂಡು ಮತಬೇಟೆ ನಡೆಸಲಾಗುತ್ತಿದೆ. ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಕ್ಷೇತ್ರದಲ್ಲಿ ಹಲವು ಬಾರಿ ಪ್ರಚಾರ ನಡೆಸಿದ್ದಾರೆ.

ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಸಹ ಕನ್ನಡ ಚಳವಳಿ ವಾಟಾಳ್‌ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಕನ್ನಡ ಸಂಘಟನೆಗಳ ಬೆಂಬಲದೊಂದಿಗೆ ಅವರು ಪ್ರಚಾರ ನಡೆಸುತ್ತಿದ್ದಾರೆ. ಮೂರು ಪಕ್ಷಗಳ ಪ್ರಚಾರದ ಭರಾಟೆಯಲ್ಲಿ ವಾಟಾಳ್‌ ನಾಗರಾಜ್‌ ತೆರೆಮರೆಗೆ ಸರಿದಿದ್ದಾರೆ. ಸದಾ ವಿಭಿನ್ನವಾಗಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆಯುವ ಅವರ ಪ್ರಚಾರ ಕ್ಷೇತ್ರದಲ್ಲಿ ಮಂಕಾಗಿದೆ.

ಕ್ಷೇತ್ರದಲ್ಲಿ ವೃಷಭಾವತಿ ನಾಲೆಯಿಂದಾಗುವ ಸಮಸ್ಯೆಗಳು, ಕುಡಿಯುವ ನೀರಿನ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಪ್ರಚಾರ ನಡೆಸಿವೆ. ಆದರೆ, ಇದು ಎಷ್ಟರ ಮಟ್ಟಿಗೆ ಆಡಳಿತಾರೂಢ ಬಿಜೆಪಿಗೆ ಪೆಟ್ಟುಕೊಡಲಿದೆ ಎಂಬುದನ್ನು ಕಾದು ನೋಡಬೇಕು. ಒಟ್ಟಾರೆ, ಅನರ್ಹತೆಯ ಕಳಂಕವನ್ನು ನಿವಾರಿಸಿಕೊಂಡು ಮತ್ತೊಮ್ಮೆ ಶಾಸಕರಾಗುವ ಗೋಪಾಲಯ್ಯ ಅವರ ಪ್ರಯತ್ನಕ್ಕೆ ತಡೆಯೊಡ್ಡುವ ಮೂಲಕ ಪಕ್ಷ ಬಿಟ್ಟು ಹೋದ ಮುಯ್ಯಿ ತೀರಿಸುವಲ್ಲಿ ಜೆಡಿಎಸ್‌ ಯಶಸ್ವಿಯಾಗುವುದೇ ಎಂಬುದು ಈ ಹಣಾಹಣಿಯ ಕೌತುಕ.

Follow Us:
Download App:
  • android
  • ios