ಹೊಸಕೋಟೆ ಬೈ ಎಲೆಕ್ಷನ್: ಬಿಲಿಯನೇರ್ ಕ್ಷೇತ್ರದಲ್ಲಿ ಅಭೂತ ಜಿದ್ದಾಜಿದ್ದಿ
ಹದಿನೈದು ಕ್ಷೇತ್ರಗಳಲ್ಲಿ ಪ್ರಮುಖ ಮೂರು ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಪಕ್ಷೇತರ ಅಭ್ಯರ್ಥಿಯೊಬ್ಬ ಗೆಲ್ಲಬಹುದಾದಂಥ ವಾತಾವರಣ ಸೃಷ್ಟಿಯಾಗಿರುವುದು ಈ ಹೊಸಕೋಟೆ ಕ್ಷೇತ್ರದಲ್ಲಿ ಮಾತ್ರ. ಮೇಲಾಗಿ ಆ ಅಭ್ಯರ್ಥಿ ಆಡಳಿತಾರೂಢ ಬಿಜೆಪಿಯ ಸ್ಥಳೀಯ ಸಂಸದ ಬಿ.ಎನ್.ಬಚ್ಚೇಗೌಡರ ಪುತ್ರ ಎಂಬುದು ಮತ್ತೊಂದು ವಿಶೇಷ.
ಬೆಂಗಳೂರು (ಡಿ. 02): ಪ್ರಸಕ್ತ ಉಪಚುನಾವಣೆ ನಡೆಯುತ್ತಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಪೈಕಿ ತೀವ್ರ ಕುತೂಹಲ ಕೆರಳಿಸಿರುವ ಮತ್ತು ಜಿದ್ದಾಜಿದ್ದಿನ ಕ್ಷೇತ್ರ ಹೊಸಕೋಟೆ. ಇಲ್ಲಿ ಯಾರೇ ಗೆದ್ದರೂ ಮತಗಳ ಅಂತರ ಮಾತ್ರ ತೀರಾ ಕಡಿಮೆ.
ಹದಿನೈದು ಕ್ಷೇತ್ರಗಳಲ್ಲಿ ಪ್ರಮುಖ ಮೂರು ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಪಕ್ಷೇತರ ಅಭ್ಯರ್ಥಿಯೊಬ್ಬ ಗೆಲ್ಲಬಹುದಾದಂಥ ವಾತಾವರಣ ಸೃಷ್ಟಿಯಾಗಿರುವುದು ಈ ಹೊಸಕೋಟೆ ಕ್ಷೇತ್ರದಲ್ಲಿ ಮಾತ್ರ. ಮೇಲಾಗಿ ಆ ಅಭ್ಯರ್ಥಿ ಆಡಳಿತಾರೂಢ ಬಿಜೆಪಿಯ ಸ್ಥಳೀಯ ಸಂಸದ ಬಿ.ಎನ್.ಬಚ್ಚೇಗೌಡರ ಪುತ್ರ ಎಂಬುದು ಮತ್ತೊಂದು ವಿಶೇಷ.
ಅನರ್ಹ ಶಾಸಕರ ಪೈಕಿ ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಹೊಂದಿದ್ದವರು ಇಬ್ಬರು. ಒಬ್ಬರು ರಾಣೆಬೆನ್ನೂರಿನ ಆರ್.ಶಂಕರ್. ಮತ್ತೊಬ್ಬರು ಹೊಸಕೋಟೆಯ ಎಂ.ಟಿ.ಬಿ.ನಾಗರಾಜ್. ಇಬ್ಬರೂ ತಮ್ಮ ಸಚಿವ ಸ್ಥಾನ ತೊರೆದು ಬಿಜೆಪಿಗೆ ಬಂದರು.
ಮಹಾಲಕ್ಷ್ಮೀ ಲೇಔಟ್: ಗೋಪಾಲಯ್ಯ ಹ್ಯಾಟ್ರಿಕ್ ಕನಸಿಗೆ ಜೆಡಿಎಸ್ ಅಡ್ಡಿ
ಆದರೆ, ಶಂಕರ್ ಅವರು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹಿಂಜರಿದರೆ ನಾಗರಾಜ್ ಅಭ್ಯರ್ಥಿಯಾಗಲು ಮುಂದಾದರು. ನಾಗರಾಜ್ ಅವರಿಗೆ ಅವರದೇ ಬಿಜೆಪಿಯ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡರ ‘ಸ್ವಾಭಿಮಾನ’ದ ಪೈಪೋಟಿಯನ್ನು ಎದುರಿಸಬೇಕಾಗಿದೆ.
ಕಳೆದ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ನಾಗರಾಜ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಶರತ್ ಬಚ್ಚೇಗೌಡ ಬಿಜೆಪಿ ಅಭ್ಯರ್ಥಿಯಾಗಿದ್ದರು. ಆಗಲೂ ಅವರಿಬ್ಬರ ನಡುವೆ ತುರುಸಿನ ಸ್ಪರ್ಧೆ ನಡೆದು ಅಂತಿಮವಾಗಿ ನಾಗರಾಜ್ ಅವರು ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆ ಚುನಾವಣೆಯಲ್ಲಿ ಜೆಡಿಎಸ್ ತೀರಾ ಕಳಪೆ ಸಾಧನೆ ತೋರಿತ್ತು.
ಈ ಉಪಚುನಾವಣೆಯಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಎಂಬಂತೆ ಕಂಡುಬರುತ್ತಿದೆ. ಹೆಬ್ಬಾಳ ಕ್ಷೇತ್ರದ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ.
ಕುರುಬ ಸಮುದಾಯಕ್ಕೆ ಸೇರಿದ ಪದ್ಮಾವತಿ ಅವರನ್ನು ಕಣಕ್ಕಿಳಿಸುವ ಮೂಲಕ ಅದೇ ಸಮುದಾಯಕ್ಕೆ ಸೇರಿದ ನಾಗರಾಜ್ ಅವರನ್ನು ಸೋಲಿಸುವ ತಂತ್ರಗಾರಿಕೆ ಹೆಣೆಯಲಾಗಿದೆ ಎನ್ನಲಾಗುತ್ತಿದೆ. ಹೀಗಾಗಿ, ಎಂ.ಟಿ.ಬಿ.ನಾಗರಾಜ್ ಮತ್ತು ಶರತ್ ಬಚ್ಚೇಗೌಡರ ನಡುವೆಯೇ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್‌ನ ಪದ್ಮಾವತಿ ಅವರು ನಾಗರಾಜ್ ಅವರ ಮತಗಳನ್ನು ಹೆಚ್ಚು ಹೆಚ್ಚು ಸೆಳೆದಷ್ಟೂಅದರ ಲಾಭ ಶರತ್ ಬಚ್ಚೇಗೌಡರಿಗೆ ಆಗಲಿದೆ.
ಶಿವಾಜಿನಗರ ಬೈ ಎಲೆಕ್ಷನ್: ರೋಷನ್ ಬೇಗ್ ಇಲ್ಲದ ಹೈವೋಲ್ಟೇಜ್ ಸಮರ
ಕುತೂಹಲಕರ ಸಂಗತಿಯೆಂದರೆ ಇಲ್ಲಿನ ಪ್ರಮುಖ ಅಭ್ಯರ್ಥಿಗಳಾದ ಎಂಟಿಬಿ ನಾಗರಾಜ್, ಶರತ್ ಬಚ್ಚೇಗೌಡ ಹಾಗೂ ಪದ್ಮಾವತಿ ಸುರೇಶ್ ಮೂವರೂ ಶತಕೋಟ್ಯಧಿಪತಿಗಳು. ಹೀಗಾಗಿ ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ ಅತ್ಯಂತ ಶ್ರೀಮಂತ ಕ್ಷೇತ್ರವಿದು.
ಯಾವುದೇ ಭರವಸೆಗೂ ಜಗ್ಗದ ಶರತ್:
ಹಿಂದಿನ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರಿಂದಲೇ ಶರತ್ ಬಚæೕಗೌಡ ಅವರು ಈ ಬಾರಿಯೂ ಬಿಜೆಪಿಯಿಂದ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇಟ್ಟರು. ಆದರೆ, ಬಿಜೆಪಿಗೆ ವಲಸೆ ಬಂದ ನಾಗರಾಜ್ ಅವರನ್ನು ಕೈಬಿಡುವಂತಿರಲಿಲ್ಲ. ಆ ಬಗ್ಗೆ ಮೊದಲೇ ಭರವಸೆ ನೀಡಲಾಗಿತ್ತು. ಒಂದು ವೇಳೆ ನಾಗರಾಜ್ ಸ್ಪರ್ಧಿಸದಿದ್ದರೆ ಅವರ ಪುತ್ರನಿಗೆ ಟಿಕೆಟ್ ನೀಡುವ ಬಗ್ಗೆಯೂ ಬಿಜೆಪಿ ನಾಯಕರು ಆಶ್ವಾಸನೆ ನೀಡಿದ್ದರು.
ಇದರಿಂದ ಆಕ್ರೋಶಗೊಂಡ ಶರತ್ ಯಾವುದೇ ಕಾರಣಕ್ಕೂ ತಾವು ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದರು. ಅವರ ಬಂಡಾಯ ಬಹಿರಂಗಗೊಳ್ಳುತ್ತಿದ್ದಂತೆಯೇ ಸಂಪುಟ ದರ್ಜೆ ಸ್ಥಾನಮಾನ ಹೊಂದಿರುವ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸುವ ಪ್ರಯತ್ನ ನಡೆದರೂ ಫಲ ನೀಡಲಿಲ್ಲ. ಜೊತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗುವುದು ಎಂದೂ ಹೇಳಿದರು. ರಾಜ್ಯದ ಇತರ ಕ್ಷೇತ್ರಗಳಲ್ಲಿನ ಅತೃಪ್ತ ಮುಖಂಡರಿಗಿಂತ ಶರತ್ ಬಚ್ಚೇಗೌಡರನ್ನು ಮನವೊಲಿಸಲು ಬಿಜೆಪಿ ನಾಯಕರು ಹೆಚ್ಚಿನ ಪ್ರಯತ್ನ ನಡೆಸಿದರು.
ಆದರೆ, ತಾವು ಕಣಕ್ಕಿಳಿಯಲೇಬೇಕು ಎಂಬ ಅಚಲ ನಿರ್ಧಾರಕ್ಕೆ ಬಂದಿದ್ದ ಶರತ್ ಬಚ್ಚೇಗೌಡರು ಪಕ್ಷದ ನಾಯಕರ ಯಾವ ಭರವಸೆಗೂ ಜಗ್ಗದೆ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಪಕ್ಷಕ್ಕೆ ವಲಸೆ ಹೋಗಬಹುದಿತ್ತು. ಆದರೆ, ಕಾಂಗ್ರೆಸ್‌ಗೆ ಹೋದರೆ ಸ್ವಾಭಿಮಾನದ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ. ಈಗಿನಷ್ಟುಪ್ರಬಲ ಹೋರಾಟ ನೀಡುವುದಕ್ಕೂ ಕಷ್ಟಎಂಬುದು ಶರತ್ ಎಣಿಕೆ ಮಾಡಿದ್ದರು.
ಪುತ್ರನಿಗೆ ಸಂಸದ ಬಚ್ಚೇಗೌಡರ ಪರೋಕ್ಷ ಬೆಂಬಲ:
ಸಂಸದ ಬಿ.ಎನ್.ಬಚ್ಚೇಗೌಡ ಮತ್ತು ಎಂ.ಟಿ.ಬಿ.ನಾಗರಾಜ್ ಕುಟುಂಬಗಳ ನಡುವಿನ ರಾಜಕೀಯ ವೈರತ್ವಕ್ಕೆ ದಶಕಗಳ ಇತಿಹಾಸವಿದೆ. ಹೀಗಾಗಿ, ಒಂದು ಹಂತದಲ್ಲಿ ಪುತ್ರ ಶರತ್‌ಗೆ ಬಿಜೆಪಿ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ ಬಚ್ಚೇಗೌಡರು ನಂತರ ಕೈಚೆಲ್ಲಿದರು.
ಆದರೆ, ಪುತ್ರ ಶರತ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಂಡ ಬಳಿಕ ತಟಸ್ಥ ಧೋರಣೆ ಅನುಸರಿಸಿದರು. ಆ ಮೂಲಕ ಪರೋಕ್ಷವಾಗಿ ಪುತ್ರನಿಗೆ ಬೆಂಬಲ ಸೂಚಿಸಿದರು. ಮೊದಲ ದಿನದಿಂದ ಇಲ್ಲಿವರೆಗೂ ಬಚ್ಚೇಗೌಡರು ಪುತ್ರನ ಕಾರಣಕ್ಕಾಗಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳದೇ ಅಂತರ ಕಾಪಾಡಿಕೊಂಡರು. ಅಷ್ಟೇ ಅಲ್ಲದೆ, ತೆರೆಮರೆಯಲ್ಲಿ ತಮ್ಮ ಬೆಂಬಲಿಗರಿಗೆ ಮತ್ತು ಅಭಿಮಾನಿಗಳಿಗೆ ಕರೆ ಮಾಡಿ ಪುತ್ರನನ್ನು ಬೆಂಬಲಿಸುವಂತೆ ಮನವಿಯನ್ನೂ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಒಕ್ಕಲಿಗರ ನಡುವೆ ಜಿದ್ದಾಜಿದ್ದಿ ಕದನ; 3 ಪಕ್ಷಗಳಿಂದ ಒಕ್ಕಲಿಗ ಅಭ್ಯರ್ಥಿಗಳು ಕಣಕ್ಕೆ
ಬಚ್ಚೇಗೌಡರಿಗೆ ಇದು ತಮ್ಮ ಕೊನೆಯ ಹಂತದ ರಾಜಕಾರಣ ಎಂಬುದು ಮನವರಿಕೆಯಾಗಿದೆ. ಇನ್ನೂ ನಾಲ್ಕೂವರೆ ವರ್ಷಗಳ ಕಾಲ ಸಂಸದರಾಗಿ ಮುಂದುವರೆಯಬಹುದಾಗಿದೆ. ಆದರೆ, ಎಂ.ಟಿ.ಬಿ.ನಾಗರಾಜ್ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಲ್ಲಿ ಮತ್ತೆ ಅದು ತಮ್ಮ ಕೈಗೆ ವಾಪಸ್ ಸಿಗುವುದಿಲ್ಲ ಎಂಬುದನ್ನು ಮನಗಂಡ ಬಚ್ಚೇಗೌಡರು ಪಕ್ಷದ ಕೆಂಗಣ್ಣಿಗೆ ಗುರಿಯಾದರೂ ಸೈ ಎಂಬಂತೆ ಪುತ್ರನಿಗೆ ಪರೋಕ್ಷ ಬೆಂಬಲ ನೀಡಿದ್ದಾರೆ.
ಎಂಟಿಬಿ ಕೂಡ ಸಾಮಾನ್ಯವಲ್ಲ:
ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್ ಕೂಡ ಸುಮ್ಮನೆ ಕುಳಿತಿಲ್ಲ. ಕಳೆದ ಎರಡು ಬಾರಿ ಗೆದ್ದು ಬಂದಿದ್ದ ನಾಗರಾಜ್ ಅವರು ಹಾಟ್ರಿಕ್ ಬಾರಿಸುವುದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನೂ ನಡೆಸುತ್ತಿದ್ದಾರೆ. ಉಪಚುನಾವಣೆಗೆ ಪೂರ್ವ ತಯಾರಿ ಎಂಬಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನವೊಲಿಸಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಗರಾಜ್ ಅವರು ಗೆದ್ದ 24 ಗಂಟೆಗಳಲ್ಲೇ ಅವರನ್ನು ಸಚಿವರನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಮೊದಲ ದಿನವೇ ಘೋಷಿಸಿದ್ದಾರೆ. ಹೀಗಾಗಿ, ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ನಾಗರಾಜ್ ಅವರನ್ನು ಗೆಲ್ಲಿಸಿ ಎಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮನವಿ ಮಾಡುತ್ತಿದ್ದಾರೆ.
ಆರಂಭದಲ್ಲಿ ಬಿಜೆಪಿಯ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ನಾಗರಾಜ್ ಅವರೊಂದಿಗೆ ಹೆಚ್ಚು ಕಾಣಿಸಿಕೊಳ್ಳದಿದ್ದರೂ ನಿಧಾನವಾಗಿ ತಮ್ಮ ಮುನಿಸನ್ನು ಮರೆತು ಪಕ್ಷದ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಆದರೂ, ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಕಾರ್ಯಕರ್ತರ ವಿಶ್ವಾಸ ಗಳಿಸುವಲ್ಲಿ ನಾಗರಾಜ್ ಅವರು ಯಶಸ್ವಿಯಾಗಿಲ್ಲ ಎಂಬುದು ಕ್ಷೇತ್ರದಾದ್ಯಂತ ಸಂಚರಿಸಿದಾಗ ಅಲ್ಲಲ್ಲಿ ಕಂಡು ಬರುತ್ತಿದೆ.
ಪದ್ಮಾವತಿ ಮತ ವಿಭಜಿಸುವರೆ ಅಥವಾ ಸೆಳೆಯುವರೇ:
ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪದ್ಮಾವತಿ ಸುರೇಶ್ ಅವರ ಬದಲು ಬೇರೊಬ್ಬರು ಅಭ್ಯರ್ಥಿಯಾಗಿದ್ದರೆ ಕ್ಷೇತ್ರದ ಚಿತ್ರಣವೇ ತುಸು ಬೇರೆ ಆಗಿರುತ್ತಿತ್ತು. ಆದರೆ, ಕಾಂಗ್ರೆಸ್ ನಾಯಕರು ಶತಾಯಗತಾಯ ಎಂ.ಟಿ.ಬಿ.ನಾಗರಾಜ್ ಅವರನ್ನು ಸೋಲಿಸಲೇಬೇಕು ಎಂಬ ಉದ್ದೇಶದಿಂದ ಶಾಸಕ ಬೈರತಿ ಸುರೇಶ್ ಅವರ ಪತ್ನಿಯನ್ನು ಕರೆತಂದು ಕಣಕ್ಕಿಳಿಸುವ ಮೂಲಕ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರಿಗೆ ಅನುಕೂಲ ಮಾಡಿಕೊಡುವ ತಂತ್ರ ರೂಪಿಸಿದರು.
ಕ್ಷೇತ್ರದಲ್ಲಿ ಶರತ್ ಬಚ್ಚೇಗೌಡರ ಒಕ್ಕಲಿಗ ಸಮುದಾಯದ ಮತಗಳೇ ಹೆಚ್ಚಿದ್ದರೂ ಅದಕ್ಕೆ ಸರಿಸಮಾನವಾಗಿ ಹಿಂದುಳಿದ ವರ್ಗಗಳ ಮತಗಳೂ ಇವೆ. ಕಾಂಗ್ರೆಸ್ ಅಭ್ಯರ್ಥಿ ಪ್ರಬಲವಾಗಿಲ್ಲದಿದ್ದರೆ ಹಿಂದುಳಿದ ವರ್ಗಗಳ ಮತಗಳೆಲ್ಲವೂ ಎಂ.ಟಿ.ಬಿ.ನಾಗರಾಜ್ ಅವರ ಪಾಲಾಗುವ ಸಾಧ್ಯತೆ ಹೆಚ್ಚಿತ್ತು.
ಇದೀಗ ಕುರುಬ ಸಮುದಾಯಕ್ಕೆ ಸೇರಿದ ಪದ್ಮಾವತಿ ಅವರು ತಮ್ಮ ಸಮುದಾಯದ ಜೊತೆಗೆ ಇತರ ಹಿಂದುಳಿದ ವರ್ಗಗಳನ್ನೂ ಹೆಚ್ಚಿಗೆ ಸೆಳೆದಷ್ಟೂಅದು ಶರತ್ ಬಚ್ಚೇಗೌಡರಿಗೆ ದಾರಿ ಸುಗಮ ಮಾಡಿಕೊಟ್ಟಂತಾಗುತ್ತದೆ. ಈ ನಡುವೆ ಮುಸ್ಲಿಂ ಮತದಾರರು ಕಾಂಗ್ರೆಸ್‌ಗೆ ಬೆಂಬಲಿಸುವ ಬದಲು ಬಿಜೆಪಿಯ ನಾಗರಾಜ್ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿರುವ ಶರತ್ ಬಚ್ಚೇಗೌಡರಿಗೆ ಬೆಂಬಲಿಸಿದಲ್ಲಿ ಶರತ್ ಗೆಲುವಿನತ್ತ ಹೆಜ್ಜೆ ಹಾಕಬಹುದು.
ಶರತ್ ಬೆಂಬಲಿಸಿದರೂ ಲೆಕ್ಕಕಿಲ್ಲದ ಜೆಡಿಎಸ್:
ಜೆಡಿಎಸ್ ಪಕ್ಷಕ್ಕೆ ಈ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರನ್ನು ಬೆಂಬಲಿಸುವ ಮೂಲಕ ಜಾಣತನ ಮೆರೆಯಿತು.
ಹೇಗಿದ್ದರೂ ಜೆಡಿಎಸ್‌ಗೆ ಈ ಕ್ಷೇತ್ರದಲ್ಲಿ ನೆಲೆಯಿಲ್ಲ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೇವಲ ಒಂದು ಸಾವಿರ ಮತಗಳನ್ನು ಮಾತ್ರ ಗಳಿಸಿದ್ದರು ಎಂದರೆ ಅದರ ಬಲಾಬಲ ಅರ್ಥೈಸಿಕೊಳ್ಳಬಹುದಾಗಿದೆ. ಹೀಗಾಗಿ, ಒಕ್ಕಲಿಗ ಸಮುದಾಯದ ಶರತ್ ಬಚ್ಚೇಗೌಡರನ್ನು ಬೆಂಬಲಿಸುವ ಮೂಲಕ ಸಮುದಾಯದ ಪ್ರೀತಿ ಗಳಿಸಿದಂತಾಯಿತು, ಮುಖಭಂಗವಾಗುವುದರಿಂದ ತಪ್ಪಿಸಿಕೊಂಡಂತೆಯೂ ಆಯಿತು.
ಆದರೆ, ಶರತ್ ಬಚ್ಚೇಗೌಡರು ಮಾತ್ರ ಜೆಡಿಎಸ್ ಬೆಂಬಲವನ್ನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ಆ ಪಕ್ಷದ ಹಿರಿಯ ನಾಯಕರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಪ್ರಚಾರಕ್ಕೆ ಬರುವುದಾಗಿ ಹೇಳಿದರೂ ನಿರಾಕರಿಸಿದ್ದಾರೆ.
- ವಿಜಯ್ ಮಲಗಿಹಾಳ