ಬೆಂಗಳೂರು (ನ. 26): ಇತ್ತೀಚೆಗೆ ಭಾರಿ ಏರಿಳಿತ ಕಾಣುತ್ತಿರುವ ಈರುಳ್ಳಿ ದರ ಇದೀಗ ಸಾರ್ವಕಾಲಿಕ ದಾಖಲೆ ಬರೆದಿದ್ದು, ಸಗಟು ಮಾರುಕಟ್ಟೆಯಲ್ಲಿ ಉತ್ಕೃಷ್ಟಗುಣಮಟ್ಟದ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 10,000 ರು.ಗೆ (ಕೆ.ಜಿ.ಗೆ 100 ರು.) ಮಾರಾಟವಾಗಿದೆ.

ಬೆಂಗಳೂರಿನಲ್ಲಿ ಸೋಮವಾರ ಉತ್ತಮ ಗುಣಮಟ್ಟದ ಪುಣೆ ಈರುಳ್ಳಿ 10,000 ರು.ಗೆ ಹಾಗೂ ಗದಗದಲ್ಲಿ ಉತ್ಕೃಷ್ಟಗುಣಮಟ್ಟದ ಸ್ಥಳೀಯ ಈರುಳ್ಳಿ 10,500 ರು.ಗೆ ಮಾರಾಟವಾಗಿವೆ. ಆದರೆ, ಸಾಮಾನ್ಯ ಗುಣಮಟ್ಟದ ಈರುಳ್ಳಿ ಈಗಲೂ ಚಿಲ್ಲರೆ ಮಾರುಕಟ್ಟೆಯಲ್ಲಿ 50-60 ರು.ಗೆ ದೊರೆಯುತ್ತಿರುವುದರಿಂದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

1 ಕೇಜಿ ಈರುಳ್ಳಿ 220 ರು.: ಪ್ರಧಾನಿ ಮನೆಯಲ್ಲಿ ಈರುಳ್ಳಿ ಬಳಕೆ ಕಟ್‌!

ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಾಗಿ ಬಳಸುವ ಉತ್ತಮ ಗುಣಮಟ್ಟದ ಪುಣೆ ಈರುಳ್ಳಿ ಸೋಮವಾರ ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 100 ರು.ನಂತೆ ಮಾರಾಟವಾಗಿದೆ. ಕರ್ನಾಟಕ ಸೇರಿದಂತೆ ದೇಶದ ಹಲವು ಕಡೆ ಮಳೆ ಅವಾಂತರದಿಂದ ಈರುಳ್ಳಿ ಬೆಳೆಗೆ ಹಾನಿಯಾಗಿ ಉತ್ಪಾದನೆ ಕುಂಠಿತವಾಗಿದೆ. ಹಾಗಾಗಿ ಮುಂದಿನ ಬೆಳೆ ಬರುವವರೆಗೂ ದೇಶಾದ್ಯಂತ ಈ ಗುಣಮಟ್ಟದ ಈರುಳ್ಳಿಯ ಕೊರತೆ ಉಂಟಾಗಲಿದೆ ಎನ್ನಲಾಗಿದೆ.

ರಾಜ್ಯದ ಹುಬ್ಬಳ್ಳಿ, ಧಾರವಾಡ, ಗದಗ ಮೊದಲಾದ ಜಿಲ್ಲೆಗಳಲ್ಲಿ ಬೆಳೆಯುವ ಈರುಳ್ಳಿ ಅಕ್ಟೋಬರ್‌-ನವೆಂಬರ್‌ ತಿಂಗಳಿಗೆ ಮಾರುಕಟ್ಟೆಗೆ ಬರುತ್ತದೆ. ಆದರೆ, ಮಳೆ ಅವಾಂತರದಿಂದಾಗಿ ಈ ಬಾರಿ ಬೆಳೆ ಹಾನಿಯಾಗಿರುವುದರಿಂದ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಪೂರೈಕೆಯಾಗುತ್ತಿರುವ ಈರುಳ್ಳಿ ಗುಣಮಟ್ಟಅಷ್ಟೇನೂ ಉತ್ತಮವಾಗಿಲ್ಲ. ಆದರೂ ತಕ್ಕಮಟ್ಟಿಗೆ ಈ ಭಾಗಗಳಿಂದ ಮಾರುಕಟ್ಟೆಗೆ ಈರುಳ್ಳಿ ಬರುತ್ತಿದೆ. ಈ ಈರುಳ್ಳಿಗೆ ಗುಣಮಟ್ಟಆಧರಿಸಿ ಕೆ.ಜಿ.ಗೆ ಗರಿಷ್ಠ 60 ರು.ವರೆಗೂ ಮಾರಾಟ ಮಾಡಲಾಗುತ್ತಿದೆ ಎಂದು ಯಶವಂತಪುರ ಎಪಿಎಂಸಿ ಈರುಳ್ಳಿ ವರ್ತಕ ಬಿ.ರವಿಶಂಕರ್‌ ಹೇಳಿದರು.

ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಗದಗ, ಚಿತ್ರದುರ್ಗದ ಹಲವಡೆ ರೈತರು ಮತ್ತೆ ಈರುಳ್ಳಿ ಬಿತ್ತನೆ ಮಾಡಿರುವುದರಿಂದ ಡಿಸೆಂಬರ್‌ ಅಥವಾ ಜನವರಿ ವೇಳೆಗೆ ಈರುಳ್ಳಿ ಮಾರುಕಟ್ಟೆಗೆ ಬರಲಿದೆ. ಆಗ ದರ ಕೊಂಚ ತಗ್ಗಲಿದೆ ಎಂದು ಅವರು ಹೇಳುತ್ತಾರೆ.

ಸಾಮಾನ್ಯವಾಗಿ ನವೆಂಬರ್‌ ಮಾಸಾಂತ್ಯದ ವೇಳೆ ಎಪಿಎಂಸಿ ಮಾರುಕಟ್ಟೆಗೆ ಒಂದು ಲಕ್ಷ ಚೀಲ ಈರುಳ್ಳಿ ಬರಬೇಕಿತ್ತು. ಆದರೆ, ಇಂದು 66 ಸಾವಿರ ಚೀಲ ಬಂದಿದೆ. ಹೀಗಾಗಿ, ಇನ್ನು 10ರಿಂದ 15 ದಿನ ಪುಣೆ ಈರುಳ್ಳಿ ದರ 100 ರು. ಇರುವ ಸಾಧ್ಯತೆಯಿದೆ. ಸಾಮಾನ್ಯ ಈರುಳ್ಳಿ ತಕ್ಕಮಟ್ಟಿಗೆ ಪೂರೈಕೆಯಿರುವುದರಿಂದ ದರದಲ್ಲಿ ಅಂತಹ ಹೆಚ್ಚಳವಾಗುವುದಿಲ್ಲ ಎಂದರು.

ಇನ್ನು, ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ 20 ದಿನಗಳಿಂದ ಸತತವಾಗಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದು, ಸೋಮವಾರ .10,500ಕ್ಕೆ ಈರುಳ್ಳಿ (ಸುಮಾರು 10 ಕ್ವಿಂಟಲ್‌ ಅತ್ಯುತ್ತಮ ಗುಣಮಟ್ಟದ ಈರುಳ್ಳಿ) ಬಿಕರಿಯಾಗಿದೆ. ಸೋಮವಾರ ಮಾರುಕಟ್ಟೆಪ್ರಾರಂಭವಾಗುತ್ತಿದ್ದಂತೆ .10,500 ವರೆಗೆ ಈರುಳ್ಳಿ ಮಾರಾಟವಾಗಿದ್ದು, 80 ಟನ್‌ಗೂ ಅಧಿಕ ಈರುಳ್ಳಿ ಆವಕವಾಗಿದೆ.

ಪುಣೆ ಈರುಳ್ಳಿ ಸಗಟು ದರ ಕೆ.ಜಿ.ಗೆ 100 ರು., ಚಿಲ್ಲರೆ ಕೆ.ಜಿ.ಗೆ 110-120 ರು.

ಸಾಮಾನ್ಯ ಈರುಳ್ಳಿ ಸಗಟು ದರ ಕೆ.ಜಿ.ಗೆ 20 ರು.ನಿಂದ 40 ರು., ಚಿಲ್ಲರೆ ಕೆ.ಜಿ.ಗೆ 50ರಿಂದ 60 ರು.

ಗದಗದಲ್ಲಿ ಈರುಳ್ಳಿ ಬೆಲೆ (ಕ್ವಿಂಟಲ್‌ಗೆ)

ನ.19 .4,500

ನ.20 .5,600

ನ.21 .6,400

ನ.22 .7,500

ನ.23 .7,800

ನ.25 .10,500