ಮಗನನ್ನು ನೋಡಲು ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದ ತಾಯಿಯೊಬ್ಬರು ದಾರಿ ತಿಳಿಯದೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ಯುವಕನೊಬ್ಬ ಆಕೆಯ ಬಳಿ ಇದ್ದ ಚೀಟಿಯಲ್ಲಿದ್ದ ನಂಬರ್‌ಗೆ ಕರೆ ಮಾಡಿ ಸಹಾಯ ಮಾಡಿದ್ದಾನೆ. ಅಂತಿಮವಾಗಿ ಆ ಯುವಕ ತಾಯಿ ಮತ್ತು ಮಗನನ್ನು ಒಗ್ಗೂಡಿಸಿದ್ದು, ಈ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು: ಗ್ರಾಮೀಣ ಭಾಗದಿಂದ ಮೊದಲ ಬಾರಿಗೆ ಸಿಲಿಕಾನ್ ಸಿಟಿಗೆ ಆಗಮಿಸುವ ಜನರಿಗೆ ಬೆಂಗಳೂರು ಅನ್ನೋದು ಮಹಾಸಾಗರ. ಬೆಂಗಳೂರಿನಲ್ಲಿರೋ ತಮ್ಮವರಿಗಾಗಿ ಮನಸ್ಸಿಲ್ಲದೇ ಇದ್ರೂ ಅನಿವಾರ್ಯವಾಗಿ ರಾಜಧಾನಿಗೆ ಬರುವಂತಾಗುತ್ತದೆ. ಈ ರೀತಿ ಮೊದಲ ಬಾರಿ ಬೆಂಗಳೂರಿಗೆ ಬರೋರಲ್ಲಿ ಸಣ್ಣದಾದ ಆತಂಕ ಇದ್ದೇ ಇರುತ್ತೆ. ತಮ್ಮೂರಿನಿಂದ ಬಸ್ ಹತ್ತುವ ಜನರಿಗೆ ಯಾವ ನಿಲ್ದಾಣದಲ್ಲಿ ಇಳಿಯಬೇಕೆಂಬ ಮಾಹಿತಿ ಇದ್ರೂ, ಇದುವೇ ತಮ್ಮ ನಿಲುಗಡೆ ಎಂದು ತಿಳಿದಿರಲ್ಲ. ಇದೀಗ ಇದೇ ರೀತಿ ಮಗನನ್ನು ನೋಡಲು ಬೆಂಗಳೂರಿಗೆ ಬಂದ ತಾಯಿ, ಮೆಜೆಸ್ಟಿಕ್ ನಿಲ್ದಾಣದಲ್ಲಿ ದಾರಿ ತಿಳಿಯದೇ ಕಣ್ಣೀರು ಹಾಕಿದ್ದಾರೆ. ಈ ವೇಳೆ ಅಲ್ಲಿದ್ದ ಯುವಕನೋರ್ವ ತಾಯಿಗೆ ಸಹಾಯ ಮಾಡಿದ್ದಾರೆ.
ಈ ತಾಯಿ ಮಗ ಬೆಂಗಳೂರಿನಲ್ಲಿ ಆಟೋ ಚಾಲಕರಾಗಿದ್ದು, ಅಮ್ಮನಿಗೆ ಬಸ್ ಹತ್ತಿಕೊಂಡು ಬರುವಂತೆ ಹೇಳಿದ್ದಾರೆ. ಹಾಗೆಯೇ ಬಸ್ ಚಾಲಕ ಮತ್ತು ನಿರ್ವಾಹಕರಿಗೂ ತಾಯಿಯನ್ನು ಬೆಂಗಳೂರಿನ ಮೇಖ್ರಿ ಸರ್ಕಲ್ ನಿಲ್ದಾಣದಲ್ಲಿ ಇಳಿಸುವಂತೆ ಹೇಳಿದ್ದಾರೆ. ಆದ್ರೆ ಇದನ್ನು ಮರೆತ ಸಾರಿಗೆ ಸಿಬ್ಬಂದಿ, ತಾಯಿಯನ್ನು ಮೆಜೆಸ್ಟಿಕ್ ಗೆ ಕರೆದುಕೊಂಡು ಬಂದು ಇಳಿಸಿದ್ದಾರೆ.
ಚೀಟಿ ತೋರಿಸುತ್ತಾ ಮಗನಿಗೆ ಕಾಲ್ ಮಾಡುವಂತೆ ಮನವಿ
ಮೆಜೆಸ್ಟಿಕ್ ನಿಲ್ದಾಣದಲ್ಲಿ ಸಾವಿರಾರು ವಾಹನಗಳನ್ನು ನೋಡಿ ದಾರಿ ತಿಳಿಯದೇ ತಾಯಿ ಕಣ್ಣೀರು ಹಾಕುತ್ತಾ ಕುಳಿತಿದ್ದಾರೆ. ಊರಿನಿಂದ ಹೊರಡುವಾಗ ಚೀಟಿಯಲ್ಲಿ ಮಗನ ಮೊಬೈಲ್ ನಂಬರ್ ಬರೆದುಕೊಂಡು ಬಂದಿದ್ದರು. ಚೀಟಿಯನ್ನು ತೋರಿಸುತ್ತಾ ನನ್ನ ಮಗನಿಗೆ ಕಾಲ್ ಮಾಡಿ ಎಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದರು. ತಾಯಿ ಕಷ್ ನೋಡಿದ ಯುವಕ, ಚೀಟಿಯಲ್ಲಿರುವ ಮಗನಿಗೆ ಕಾಲ್ ಮಾಡಿದ್ದಾರೆ. ಆದ್ರೆ ಮೊಬೈಲ್ ಸ್ವಿಚ್ಢ್ಆಫ್ ಬಂದಿದೆ. ಪದೇ ಪದೇ ಪ್ರಯತ್ನಿಸಿದಾಗ ಕೆಲ ಸಮಯದ ಬಳಿಕ ಕಾಲ್ ಕನೆಕ್ಟ್ ಆಗಿದೆ.
ಕಾಲ್ ರಿಸೀವ್ ಮಾಡಿದ ವ್ಯಕ್ತಿ, ತಾನು ರೈಲು ನಿಲ್ದಾಣದ ಭಾಗದಲ್ಲಿ ತಾಯಿಯನ್ನು ಹುಡುಕುತ್ತಿರುವ ವಿಷಯ ತಿಳಿಸಿದ್ದಾರೆ. ನಂತರ ಯುವಕ, ತಾಯಿಯನ್ನು ಕರೆದುಕೊಂಡು ಆ ವ್ಯಕ್ತಿ ಹೇಳಿದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಂತಿಮವಾಗಿ ತಾಯಿ ಮತ್ತು ಮಗನನ್ನು ಸೇರಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಡಿಯೋ ನೋಡಿ ಜನರು ಹೇಳಿದ್ದೇನು?
ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು, ಮುಗ್ಧ ತಾಯಂದಿರನ್ನು ಒಂಟಿಯಾಗಿ ಬೆಂಗಳೂರಿಗೆ ಕರೆಸಿಕೊಳ್ಳಬೇಡಿ. ಕೆಲವೊಮ್ಮೆ ಇಂತಹ ಘಟನೆಯನ್ನು ದುರುಪಯೋಗ ಮಾಡಿಕೊಳ್ಳುವ ಜನರು ಇರುತ್ತಾರೆ. ತಾಯಿಯ ಅದೃಷ್ಟ ಚೆನ್ನಾಗಿದ್ದು, ಈ ಯುವಕನ ಕಣ್ಣಿಗೆ ಕಾಣಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಈ ವೈರಲ್ ವಿಡಿಯೋವನ್ನು banuprasad_traveller_ (ಬಾನು ಪ್ರಸಾದ್) ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.


