ಬೆಂಗಳೂರಿನ ಮಡಿವಾಳದಲ್ಲಿರುವ ಸಂಧ್ಯಾ ಥಿಯೇಟರ್‌ನ ಮಹಿಳಾ ಶೌಚಾಲಯದಲ್ಲಿ ವಿಕೃತಕಾಮಿಯೊಬ್ಬ ಗುಪ್ತ ಕ್ಯಾಮರಾ ಇಟ್ಟಿದ್ದ ಘಟನೆ ನಡೆದಿದೆ. 'ನುವ್ವು ನಾಕು ನಚ್ಚಾವ್' ಸಿನಿಮಾ ನೋಡಲು ಬಂದಿದ್ದ ಮಹಿಳೆಯರು ಇದನ್ನು ಪತ್ತೆಹಚ್ಚಿ, ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರು (ಜ.5): ಸಿಲಿಕಾನ್ ಸಿಟಿಯ ಸಿನಿಮಾ ಥಿಯೇಟರ್‌ವೊಂದರಲ್ಲಿ ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ತಂದಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವಾಶ್ ರೂಮ್‌ಗೆ ಹೋದ ಮಹಿಳೆಯರು ಅಲ್ಲಿ ಅಡಗಿಸಿಟ್ಟಿದ್ದ ಕ್ಯಾಮರಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಸಂಧ್ಯಾ ಥಿಯೇಟರ್‌ನಲ್ಲಿ ಯುವತಿಯರಿಗೆ ಕಾದಿತ್ತು ಶಾಕ್
ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ ಈ ಘಟನೆ ನಡೆದಿದೆ. ವಿಕೃತಕಾಮಿಯೊಬ್ಬ ಲೇಡಿಸ್ ಟಾಯ್ಲೆಟ್ ಒಳಗೆ ಗುಪ್ತವಾಗಿ ಕ್ಯಾಮರಾ ಅಳವಡಿಸಿದ್ದನು. ವಾಶ್ ರೂಮ್‌ಗೆ ಹೋದ ಮಹಿಳೆಯರು ಮತ್ತು ಯುವತಿಯರು ಇದನ್ನು ಗಮನಿಸಿ ತಕ್ಷಣವೇ ಹೊರಬಂದು ಕಿರುಚಾಡಿದ್ದಾರೆ. ಇದರಿಂದ ಥಿಯೇಟರ್ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
'ನುವ್ವು ನಾಕು ನಚ್ಚಾವ್' ಸಿನಿಮಾ ನೋಡಲು ಬಂದಾಗ ಕೃತ್ಯ
ತೆಲುಗಿನ ಜನಪ್ರಿಯ ಸಿನಿಮಾ 'ನುವ್ವು ನಾಕು ನಚ್ಚಾವ್' (Nuvvu Naaku Nachav) ಇತ್ತೀಚೆಗೆ ರೀ-ರಿಲೀಸ್ ಆಗಿತ್ತು. ಈ ಸಿನಿಮಾ ನೋಡಲು ಮಹಿಳೆಯರು ಮತ್ತು ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಿನಿಮಾ ವೀಕ್ಷಣೆಯ ವಿರಾಮದ ಸಮಯದಲ್ಲಿ ಮಹಿಳೆಯರು ಶೌಚಾಲಯಕ್ಕೆ ಹೋದಾಗ ಈ ನೀಚ ಕೃತ್ಯ ಬೆಳಕಿಗೆ ಬಂದಿದೆ.
ಆರೋಪಿಗೆ ಸಾರ್ವಜನಿಕರಿಂದ ಧರ್ಮದೇಟು
ಕ್ಯಾಮರಾ ಇಟ್ಟಿದ್ದ ಆರೋಪಿಯನ್ನು ಸ್ಥಳೀಯರು ತಕ್ಷಣವೇ ಪತ್ತೆ ಹಚ್ಚಿ ಹಿಡಿದಿದ್ದಾರೆ. ಅವನ ವಿಕೃತ ಬುದ್ಧಿಗೆ ಆಕ್ರೋಶಗೊಂಡ ಸಾರ್ವಜನಿಕರು ಸ್ಥಳದಲ್ಲೇ ಸರಿಯಾಗಿ ಧರ್ಮದೇಟು ನೀಡಿದ್ದಾರೆ. ಬಳಿಕ ಮಡಿವಾಳ ಪೊಲೀಸರಿಗೆ ಮಾಹಿತಿ ನೀಡಿ, ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಮಡಿವಾಳ ಪೊಲೀಸರಿಂದ ತೀವ್ರ ವಿಚಾರಣೆ
ಸ್ಥಳಕ್ಕೆ ಆಗಮಿಸಿದ ಮಡಿವಾಳ ಠಾಣೆಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆತ ಎಷ್ಟು ಸಮಯದಿಂದ ಈ ರೀತಿ ಮಾಡುತ್ತಿದ್ದ? ಅವನ ಬಳಿ ಬೇರೆ ಯಾವುದೇ ದೃಶ್ಯಗಳಿವೆಯೇ ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ. ಸಿನಿಮಾ ಮಂದಿರಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಈಗ ದೊಡ್ಡ ಮಟ್ಟದ ಪ್ರಶ್ನೆ ಎದ್ದಿದೆ.


