ನ್ಯಾಯಾಲಯದಲ್ಲಿ ಸಾಕ್ಷಿ ಹೇಳುತ್ತಿದ್ದ ವ್ಯಕ್ತಿ, ನಂಜನಗೂಡಿನಲ್ಲಿ ದೇವರ ಪಲ್ಲಕ್ಕಿ ಹೊತ್ತಿದ್ದ ಅರ್ಚಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಾಕ್ಷಿ ಹೇಳುವಾಗಲೇ ಒಬ್ಬರು ಮತ್ತು ಧಾರ್ಮಿಕ ಕಾರ್ಯಕ್ರಮದ ವೇಳೆ ಮತ್ತೊಬ್ಬರು ಪ್ರಾಣ ಬಿಟ್ಟಿದ್ದಾರೆ.

ಹುಬ್ಬಳ್ಳಿ: ಕೋರ್ಟ್‌ನ ಕಟಕಟೆಯಲ್ಲಿ ಸಾಕ್ಷಿ ಹೇಳುವಾಗಲೇ ಹೃದಯಾಘಾತದಿಂದ ಪೊಲೀಸ್‌ ಅಧಿಕಾರಿಯೊಬ್ಬರ ತಂದೆ ಮೃತಪಟ್ಟ ಘಟನೆ ಇಲ್ಲಿಯ ಸಿವಿಲ್‌ ಕೋರ್ಟ್‌ನಲ್ಲಿ ಶನಿವಾರ ಸಂಭವಿಸಿದೆ. ಕೃಷ್ಣಾಸಾ ಲಕ್ಷ್ಮಣಸಾ ಪವಾರ (69) ಮೃತರು. ಇವರು ಮೂಲತಃ ಬಾಗಲಕೋಟೆಯ ಇಳಕಲ್‌ ತಾಲೂಕಿನ ಗೂಡೂರು ಗ್ರಾಮದವರು. ಇವರ ಪುತ್ರ ಸಂತೋಷ ಪವಾರ ಹಾವೇರಿಯಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೃಷ್ಣ ಪವಾರ್‌ ಖಾಸಗಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾಕ್ಷಿ ಹೇಳಲು ಹುಬ್ಬಳ್ಳಿಯ ಸಿವಿಲ್‌ ಕೋರ್ಟ್‌ಗೆ ಹಾಜರಾಗಿದ್ದರು. 

ಕೋರ್ಟ್‌ ಕಟಕಟೆಯಲ್ಲಿ ಸಾಕ್ಷಿ ನೀಡುತ್ತಿದ್ದಾಗ ಆಕಸ್ಮಿಕವಾಗಿ ಎದೆನೋವು ಕಾಣಿಸಿಕೊಂಡು, ಕ್ಷಣಾರ್ಧದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ನ್ಯಾಯಾಲಯದಲ್ಲಿದ್ದವರು ಸಹಾಯಕ್ಕೆ ಧಾವಿಸಿದರೂ ಹೃದಯಾಘಾತದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ ನ್ಯಾಯಾಲಯಕ್ಕೆ ಆಗಮಿಸಿ ಪರಿಸ್ಥಿತಿ ಪರಿಶೀಲಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ದೇವರ ಪಲ್ಲಕ್ಕಿ ಹೊರುವ ವೇಳೆ ಹೃದಯಾಘಾತ: ಅರ್ಚಕ ಸಾವು

ನಂಜನಗೂಡು: ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ವತಿಯಿಂದ ಜರುಗುವ ಅಂಧಕಾಸುರ ವಧೆ ಕಾರ್ಯಕ್ರಮದಲ್ಲಿ ಉತ್ಸವ ಮೂರ್ತಿಯನ್ನು ಹೊತ್ತ ಸಹಾಯಕ ಅರ್ಚಕ ಶಂಕರ ಉಪಾಧ್ಯಾಯ (55) ಹೃದಯಾಘಾತದಿಂದ ಕುಸಿದು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮೈಸೂರು ಜಿಲ್ಲೆಯ ನಂಜನಗೂಡಿನ ರಾಕ್ಷಸ ಮಂಟಪ ವೃತ್ತದಲ್ಲಿ ಪ್ರತಿ ವರ್ಷ ಸಂಪ್ರದಾಯದಂತೆ ನಡೆಯುವ ಅಂಧಕಾಸುರನ ವಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಮಾರ್ಗ ಮಧ್ಯೆಯೇ ಸಾವು

ಅರ್ಚಕ ಉಪಾಧ್ಯಾಯ ಉತ್ಸವಮೂರ್ತಿ ಇದ್ದ ಪಲ್ಲಕ್ಕಿಗೆ ಭುಜ ಕೊಟ್ಟು ನಡೆಯುತ್ತಿದ್ದ ಕೆಲವೇ ಸೆಕೆಂಡ್‌ಗಳಲ್ಲಿ ಕುಸಿದು ಬಿದ್ದರು. ಪಕ್ಕದಲ್ಲೇ ನಿಂತಿದ್ದ ಇತರ ಅರ್ಚಕರು ಉಪಾಧ್ಯಾಯ ಅವರ ನೆರವಿಗೆ ಧಾವಿಸಿದರು. ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದರಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.