ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ ಘಟನೆ ನಡೆದಿದೆ. ರೋಗಿ ಸ್ಟ್ರೇಚ್ಚರ್ ಮೇಲೆ ನರಳುತ್ತಿದ್ದರೂ, ವೈದ್ಯರು ಮೊಬೈಲ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದ ನಂತರ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರು: ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಗಂಭೀರ ಆರೋಪ ಕೇಳಿಬಂದಿದೆ. ಸ್ಟ್ರೇಚ್ಚರ್ ಮೇಲೆ ರೋಗಿ‌ ಉಸಿರಾಟದ ಸಮಸ್ಯೆಯಿಂದ ರೋಗಿಯ ನರಳಾಡುತ್ತಿದ್ದರೂ, ವೈದ್ಯ ಮಾತ್ರ ಹಾಯಾಗಿ ಚೇಂಬರ್‌ ನಲ್ಲಿ ಕುಳಿತುಕೊಂಡು ಮೊಬೈಲ್‌ ನಲ್ಲಿ ಮಾತನಾಡುತ್ತಿದ್ದಾನೆ. ತುರ್ತು ಚಿಕಿತ್ಸಾ ಘಟಕದಲ್ಲಿ ಉಸಿರಾಟದ ಸಮಸ್ಯೆಯಿಂದ ನರಳುತ್ತಿದ್ದ ರೋಗಿಗೆ ಸಮಯಕ್ಕೆ ಚಿಕಿತ್ಸೆ ಸಿಗದೆ ಪರದಾಡಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರ ವರ್ತನೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಚಿಕಿತ್ಸೆ ನೀಡದೆ ಸ್ಟ್ರೇಚ್ಚರ್ ಮೇಲೆ ಮಲಗಿಸಿದ ಸಬ್ಬಂದಿ

ಲಕ್ಷ್ಮಿಪುರ ಗ್ರಾಮದ ನಿವಾಸಿ ಮಂಜುನಾಥ್ (60) ಅವರು ತೀವ್ರ ಉಸಿರಾಟದ ತೊಂದರೆಯಿಂದ ಭಾನುವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ತಕ್ಷಣ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಯಿತಾದರೂ, ಚಿಕಿತ್ಸೆ ನೀಡದೆ ಸ್ಟ್ರೇಚ್ಚರ್ ಮೇಲೆ ಹಾಕಿ ಬಿಟ್ಟಿರುವುದಾಗಿ ಆರೋಪಿಸಲಾಗಿದೆ. ರೋಗಿ ಉಸಿರಾಡಲು ಸಾಧ್ಯವಾಗದೆ ನರಳುತ್ತಿರುವ ದೃಶ್ಯಗಳು ವೈರಲ್ ವಿಡಿಯೋದಲ್ಲಿ ಕಂಡುಬಂದಿವೆ.

ರೋಗಿ ನರಳಾಟ, ವೈದ್ಯ ಮೊಬೈಲ್‌ ನಲ್ಲಿ ಪಟ್ಟಾಂಗ

ವಿಡಿಯೋದಲ್ಲಿ, ರೋಗಿ ತೀವ್ರ ಸಂಕಷ್ಟದಲ್ಲಿ ನರಳುತ್ತಿರುವಾಗಲೇ ವೈದ್ಯರು ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ಕುಳಿತಿರುವ ದೃಶ್ಯಗಳು ಕಂಡುಬಂದಿದ್ದು, ಆಸ್ಪತ್ರೆಯ ಕರ್ತವ್ಯ ಲೋಪವನ್ನು ಸ್ಪಷ್ಟಪಡಿಸುತ್ತವೆ ಎಂಬ ಆರೋಪ ಕೇಳಿಬಂದಿದೆ. ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿರುವ ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರ ವಿರುದ್ಧ ರೋಗಿಯ ಕುಟುಂಬಸ್ಥರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬಳಿಕವೇ ಆಸ್ಪತ್ರೆ ಆಡಳಿತ ಎಚ್ಚೆತ್ತುಕೊಂಡಿದ್ದು, ತಡವಾದರೂ ಮಂಜುನಾಥ್ ಅವರಿಗೆ ಚಿಕಿತ್ಸೆ ಆರಂಭಿಸಲಾಗಿದೆ. ಪ್ರಸ್ತುತ ಅವರನ್ನು ಐಸಿಯುಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಈ ಘಟನೆ ಆರೋಗ್ಯ ಇಲಾಖೆಯ ಕಾರ್ಯವೈಖರಿಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ತುರ್ತು ಚಿಕಿತ್ಸಾ ಘಟಕದಲ್ಲಿ ಇಂತಹ ನಿರ್ಲಕ್ಷ್ಯ ನಡೆದಿರುವುದು ಅಕ್ಷಮ್ಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಿಸಿದ ವೈದ್ಯರು ಹಾಗೂ ಸಿಬ್ಬಂದಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.