ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ಪವಿತ್ರಾ ಗೌಡ ತಮ್ಮ ಜಾಮೀನು ರದ್ದು ಮಾಡದಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿ, ಏಕೈಕ ಪೋಷಕಿ ಮತ್ತು ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದಿರುವುದನ್ನು ಪ್ರಮುಖ ವಾದವಾಗಿ ಮುಂದಿಟ್ಟಿದ್ದಾರೆ.

ಬೆಂಗಳೂರು (ಆ.6): ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಆರೋಪಿ ಸಂಖ್ಯೆ 1 ಪವಿತ್ರಾ ಗೌಡ, ತಮ್ಮ ಜಾಮೀನು ರದ್ದು ಮಾಡದೇ ಇರುವಂತೆ ಸುಪ್ರೀಂ ಕೋರ್ಟ್‌ಗೆ ಲಿಖಿತ ಸಲ್ಲಿಕೆ ನೀಡಿದ್ದಾರೆ. ಇಡೀ ಪ್ರಕರಣದಲ್ಲಿ ದರ್ಶನ್‌ ಹಾಗೂ ಆತನ ಸಹಚರರಿಗೆ ನೀಡಿರುವ ಜಾಮೀನು ರದ್ದು ಮಾಡಬೇಕು ಎಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಜಾಮೀನು ಪಡೆದುಕೊಂಡ ಆರೋಪಿಗಳಿಗೆ ಲಿಖಿತ ಸಲ್ಲಿಕೆ ನೀಡಲು ತಿಳಿಸಿತ್ತು. ಇದರಲ್ಲಿ ಆರೋಪಿ ನಂ.1 ಆಗಿರುವ ಪವಿತ್ರಾ ಗೌಡ ಪರ ವಕೀಲರಾದ ಸಂಜನಾ ಸ್ಯಾಡಿ ಅವರು ಹೆಚ್ಚುವರಿ ಲಿಖಿತ ವಾದ ಸಲ್ಲಿಕೆಗಳನ್ನು ಸಲ್ಲಿಸಿದ್ದಾರೆ. ಇದರಲ್ಲಿ ಪವಿತ್ರಾ ಗೌಡ ಅವರ ಪರವಾಗಿ ಪ್ರಬಲ ವಾದವನ್ನು ಮಂಡಿಸಲಾಗಿದೆ.

ಸಲ್ಲಿಸಿರುವ ಮಾಹಿತಿಯ ಪ್ರಕಾರ, ರೇಣುಕಾಸ್ವಾಮಿಯಿಂದ ತಮಗೆ ಲೈಂಗಿಕ ಕಿರುಕುಳವಾಗಿತ್ತು ಎಂಬ ಬಗ್ಗೆ ಪವಿತ್ರಾ ಗೌಡ ಅವರು ಆರೋಪಿ ಸಂಖ್ಯೆ 3ಕ್ಕೆ ಮಾಹಿತಿ ನೀಡಿದ್ದರು. ಇದೊಂದೇ ತಮ್ಮ ವಿರುದ್ಧದ ಏಕೈಕ ಆರೋಪ ಎಂದು ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ರೇಣುಕಾಸ್ವಾಮಿಯ ಅಪಹರಣದಲ್ಲಿ ಭಾಗಿಯಾಗಿದ್ದ ಇತರ ಆರೋಪಿಗಳೊಂದಿಗೆ ಪವಿತ್ರಾ ಗೌಡ ಸಂಪರ್ಕ ಹೊಂದಿದ್ದರು ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ತನ್ನ ಮನೆ ಕೆಲಸದ ವ್ಯಕ್ತಿಯಾಗಿದ್ದಆರೋಪಿ 3ಗೆ ಮಾಡಿದ ಫೋನ್ ಕರೆಗಳು ಕೊಲೆ ಪಿತೂರಿಯನ್ನು ಸಾಬೀತುಪಡಿಸುವುದಿಲ್ಲ ಎಂದು ತಿಳಿಸಲಾಗಿದೆ.

ಮುಖ್ಯ ಸಾಕ್ಷಿ ವಾದ ಮಂಡನೆಗಳ ಪ್ರಕಾರ, ಪವಿತ್ರಾ ಗೌಡ ಅವರು ಕೇವಲ ಚಪ್ಪಲಿಯಿಂದ ರೇಣುಕಾಸ್ವಾಮಿಗೆ ಹೊಡೆದಿದ್ದಾರೆ. ಆದರೆ, ಕೊಲೆಗೆ ಕಾರಣವಾದ ಮಾರಣಾಂತಿಕ ಪೆಟ್ಟುಗಳು ಪವಿತ್ರಾ ಗೌಡ ಅವರು ಸ್ಥಳದಿಂದ ಹೊರಟ ನಂತರವೇ ಕೊಲೆಯಾದ ವ್ಯಕ್ತಿಗೆ ಬಿದ್ದಿದೆ ಎಂದು ತಿಳಿಸಲಾಗಿದೆ.

ತಾನು ಸಿಂಗಲ್‌ ಪೇರೆಂಟ್‌ ಆಗಿದ್ದು, ಹತ್ತನೇ ತರಗತಿಯಲ್ಲಿ ಓದುತ್ತಿರುವ ತಮ್ಮ ಮಗಳ ಏಕೈಕ ಪೋಷಕಿ ಹಾಗೂ ಆರೈಕೆ ಮಾಡುವವಳಾಗಿದ್ದೇನೆ. ಈ ವರ್ಷ ಆಕೆಯ ಬೋರ್ಡ್‌ ಪರೀಕ್ಷೆ ಕೂಡ ಇದೆ. ತಾನು ವೃತ್ತಿಯಲ್ಲಿ ಫ್ಯಾಶನ್‌ ಡಿಸೈನರ್‌ ಆಗಿದ್ದು, ಸ್ಟುಡಿಯೋ ನಡೆಸಿ ತನ್ನ ಮಗಳು ಹಾಗೂ ವಯಸ್ಸಾದ ಪೋಷಕರನ್ನು ನೋಡಿಕೊಳ್ಳುತ್ತಿದ್ದೇನೆ. ಇದನ್ನು ಗಮನದಲ್ಲಿಟ್ಟುಕೊಂಡು ಜಾಮೀನು ರದ್ದು ಮಾಡಬಾರದು ಎಂದು ಕೋರಿದ್ದಲ್ಲದೆ, ಈ ಹಿಂದೆ ತಮ್ಮ ಮೇಲೆ ಯಾವುದೇ ಕ್ರಿಮಿನಲ್‌ ಪ್ರಕರಣಗಳೂ ಇಲ್ಲ ಎಂದಿದ್ದಾರೆ.

ಇನ್ನು ಮಹಿಳಾ ಆರೋಪಿಗಳ ಜಾಮೀನು ರದ್ದು ಮಾಡುವುದು ಕಠಿಣ ಕ್ರಮ. ಈ ವಿಷಯದಲ್ಲಿ ನ್ಯಾಯಾಲಯವು ಸಂವೇದನಾಶೀಲವಾಗಿರಬೇಕು ಎಂದು ಹಿಂದಿನ ನ್ಯಾಯಾಲಯದ ತೀರ್ಪುಗಳನ್ನು ಉಲ್ಲೇಖಿಸಿ ವಾದಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಪವಿತ್ರಾ ಗೌಡ ಅವರ ಜಾಮೀನು ರದ್ದು ಮಾಡಬಾರದು ಎಂದು ಅವರ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.