ಕರಾವಳಿ ಭಾಗದ ರೈಲು ಪ್ರಯಾಣಿಕರ ಬಹುನಿರೀಕ್ಷಿತ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ನ. 15ರಿಂದ ಬೆಂಗಳೂರು-ಮಡ್ಗಾಂವ್‌ ನಡುವೆ ಮಂಗಳೂರು ಮೂಲಕ ಸಂಚಾರ ಆರಂಭಿಸಲಿದೆ. ಈ ಹೊಸ ರೈಲು ವಾರದಲ್ಲಿ ಆರು ದಿನ ಸಂಚರಿಸಲಿದ್ದು, ಟಿಕೆಟ್ ದರ ಮತ್ತು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಕರಾವಳಿ ಭಾಗದ ರೈಲು ಪ್ರಯಾಣಿಕರ ಬಹುನಿರೀಕ್ಷಿತ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ನ. 15ರಿಂದ ಬೆಂಗಳೂರು-ಮಡ್ಗಾಂವ್‌ ನಡುವೆ ಮಂಗಳೂರು ಮೂಲಕ ಸಂಚಾರ ಆರಂಭಿಸಲಿದೆ. ನೈಋತ್ಯ ರೈಲ್ವೆಯ ಪ್ರಧಾನ ಕಚೇರಿ ನ.10ರಂದು ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ರೈಲ್ವೆ ಸಚಿವಾಲಯ 26655/26656 ಸಂಖ್ಯೆಯ ಯಶವಂತಪುರ-ಮಡ್ಗಾಂವ್‌-ಯಶವಂತಪುರ ವಂದೇ ಭಾರತ್ ರೈಲು ಸಂಚಾರಕ್ಕೆ ಅನುಮೋದನೆ ನೀಡಿದೆ.

ಈ ಹೊಸ ರೈಲು ವಾರದಲ್ಲಿ ಆರು ದಿನ ಸಂಚರಿಸಲಿದೆ. 26655 ಯಶವಂತಪುರ-ಮಡ್ಗಾಂವ್‌ ವಂದೇ ಭಾರತ್ ಬುಧವಾರ ಹೊರತುಪಡಿಸಿ ಉಳಿದ ಆರು ದಿನ ಸಂಚರಿಸಲಿದ್ದು, 26656 ಮಡ್ಗಾಂವ್‌-ಯಶವಂತಪುರ ರೈಲು ಗುರುವಾರ ಹೊರತುಪಡಿಸಿ ಉಳಿದ ಆರು ದಿನ ಸಂಚರಿಸಲಿದೆ.

ಯಶವಂತಪುರ-ಮಡಗಾಂವ್ ವಂದೇ ಭಾರತ್ ರೈಲು: ಟಿಕೆಟ್ ದರ ಎಷ್ಟು?

AC Chair Car (CC): ಸಾಮಾನ್ಯ ಎಸಿ ಆಸನ ವ್ಯವಸ್ಥೆಯಿರುವ ಚೇರ್ ಕಾರ್ ವಿಭಾಗ.

AC Executive Chair Car (EC): ಹೆಚ್ಚಿನ ಸೌಲಭ್ಯ ಮತ್ತು ವಿಶಾಲ ಆಸನ ವ್ಯವಸ್ಥೆಯಿರುವ ಎಕ್ಸಿಕ್ಯುಟಿವ್ ಚೇರ್ ಕಾರ್ ವಿಭಾಗ.

ಶ್ರವಣಬೆಳಗೊಳ (SBGA) ₹615(CC) ₹1,115 (EC)

ಹಾಸನ ಜಂಕ್ಷನ್ (HAS) ₹685(CC) ₹1,255 (EC)

ಸಕಲೇಶಪುರ (SKLR) ₹765(CC) ₹1,410 (EC)

ಸುಬ್ರಹ್ಮಣ್ಯ ರಸ್ತೆ (SBHR) ₹1,170(CC) ₹2,020 (EC)

ಕಬಕಪುತ್ತೂರು (KBPR) ₹1,235(CC) ₹2,140 (EC)

ಮಂಗಳೂರು ಜಂಕ್ಷನ್ (MAJN) ₹1,315(CC) ₹2,305 (EC)

ಉಡುಪಿ (UD) ₹1,510(CC) ₹2,660 (EC)

ಕುಂದಾಪುರ (KUDA) ₹1,590(CC) ₹2,850 (EC)

ಬೈಂದೂರು ಮೂಕಾಂಬಿಕಾ ರಸ್ತೆ (BYNR) ₹1,665(CC) ₹2,995 (EC)

ಮುರ್ಡೇಶ್ವರ (MRDW) ₹1,720(CC) ₹3,100 (EC)

ಗೋಕರ್ಣ ರಸ್ತೆ (GOK) ಪ್ರಕಟಿಸಲಾಗಿಲ್ಲ

ಕಾರವಾರ (KAWR) ₹2,120 (CC) ₹3,720 (EC)

12 ಪ್ರಮುಖ ನಿಲುಗಡೆ:

26655 ಸಂಖ್ಯೆಯ ರೈಲು ಯಶವಂತಪುರದಿಂದ ಬೆಳಗ್ಗೆ 7.35ಕ್ಕೆ ಹೊರಟು ಶ್ರವಣಬೆಳಗೊಳ (9.03), ಹಾಸನ (9.38), ಸಕಲೇಶಪುರ (10.20), ಸುಬ್ರಹ್ಮಣ್ಯ ರೋಡ್ (12.40), ಕಬಕ ಪುತ್ತೂರು (13.25) ಮೂಲಕ ಸಂಜೆ 3.05ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಇಲ್ಲಿ 10 ನಿಮಿಷ ನೀರು ತುಂಬಿಸುವ ಸಲುವಾಗಿ ನಿಲುಗಡೆ ಇರಲಿದೆ. ಬಳಿಕ ಹೊರಟು ಸಂಜೆ 3.45ಕ್ಕೆ ತೋಕೂರು, 4.20ಕ್ಕೆ ಉಡುಪಿ, 4.38ಕ್ಕೆ ಕುಂದಾಪುರ, 5.20ಕ್ಕೆ ಬೈಂದೂರು, 6 ಗಂಟೆಗೆ ಮುರ್ಡೇಶ್ವರ, 7 ಗಂಟೆಗೆ ಗೋಕರ್ಣ ರೋಡ್, 7.45ಕ್ಕೆ ಕಾರವಾರ, ರಾತ್ರಿ 8.55ಕ್ಕೆ ಮಡ್ಗಾಂವ್‌ ತಲುಪಲಿದೆ.

26656 ಸಂಖ್ಯೆಯ ರೈಲು ಮಡ್ಗಾಂವ್‌ನಿಂದ ಬೆಳಗ್ಗೆ 8.20ಕ್ಕೆ ಹೊರಡಲಿದೆ. ಕಾರವಾರಕ್ಕೆ 9.03ಕ್ಕೆ, ಗೋಕರ್ಣ ರೋಡ್‌ಗೆ 9.48, ಮುರ್ಡೇಶ್ವರ 11 ಗಂಟೆಗೆ, ಬೈಂದೂರಿಗೆ 11.20, ಕುಂದಾಪುರಕ್ಕೆ 11.48, ಉಡುಪಿಗೆ 12.18 ಆಗಮಿಸಲಿದೆ. ತೋಕೂರಿನಲ್ಲಿ ಮಧ್ಯಾಹ್ನ 1.20 ನಿಲುಗಡೆಯಿದ್ದು, ಮಂಗಳೂರು ಜಂಕ್ಷನ್‌ಗೆ 1.50ಕ್ಕೆ ಆಗಮಿಸಿ 2 ಗಂಟೆಗೆ ನಿರ್ಗಮಿಸಲಿದೆ. ಕಬಕ ಪುತ್ತೂರಿಗೆ 2.43, ಸುಬ್ರಹ್ಮಣ್ಯ ರೋಡ್‌ಗೆ 3.28, ಸಕಲೇಶಪುರ 5.30ಕ್ಕೆ, ಹಾಸನ 6.13ಕ್ಕೆ, ಶ್ರವಣಬೆಳಗೊಳ 6.43ಕ್ಕೆ ತಲುಪಿ ರಾತ್ರಿ 9.15 ಯಶವಂತಪುರ ತಲುಪಲಿದೆ.

ಇದರೊಂದಿಗೆ ಪ್ರಸ್ತುತ ಮಂಗಳೂರು ಸೆಂಟ್ರಲ್-ಮಡ್ಗಾಂವ್‌ ನಡುವೆ ಸಂಚರಿಸುತ್ತಿರುವ 20645/20646 ಸಂಖ್ಯೆಯ ವಂದೇ ಭಾರತ್ ರೈಲು ಸಂಚಾರ ನ.15ರಿಂದ ಸ್ಥಗಿತಗೊಳ್ಳಲಿದೆ. ನೈಋತ್ಯ ರೈಲ್ವೆ ವೇಳಾಪಟ್ಟಿಯಂತೆ ನ. 13 ರಂದು ಈ ವಿಶೇಷ ರೈಲುಗಳ ಸಂಚಾರಕ್ಕೆ ಚಾಲನೆ ದೊರೆಯಲಿದೆ. ಈ ರೈಲಿನ ಉದ್ಘಾಟನೆ ಬೆಂಗಳೂರು ಮತ್ತು ಮಂಗಳೂರಲ್ಲಿ ಏಕಕಾಲಕ್ಕೆ ನೆರವೇರಲಿದೆ.

ಎಸ್‌ಎಂವಿಟಿ ಬೆಂಗಳೂರು-ಮಡಗಾಂವ್ ನಡುವಿನ ವಂದೇ ಭಾರತ್ ಉದ್ಘಾಟನಾ ವಿಶೇಷ ರೈಲು 13ರಂದು ಮಧ್ಯಾಹ್ನ 1.30ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಡಲಿದೆ. ಪ್ರಧಾನಿ ನರೇಂದ್ರ ಮೋದಿ ಈ ರೈಲು ಸಂಚಾರಕ್ಕೆ ಬೆಂಗಳೂರಲ್ಲಿ ಹಸಿರು ನಿಶಾನೆ ತೋರಿಸಲಿದ್ದು, ಕೇಂದ್ರ ರೈಲ್ವೆ ಸಹಾಯಕ ಸಚಿವ ಸೋಮಣ್ಣ ಭಾಗವಹಿಸಲಿದ್ದಾರೆ. ಉದ್ಘಾಟನೆ ಬಳಿಕ ಈ ರೈಲು ಶ್ರವಣಬೆಳಗೊಳಕ್ಕೆ ಸಂಜೆ 3.05ಕ್ಕೆ ಆಗಮಿಸಿ 3.15ಕ್ಕೆ ನಿರ್ಗಮಿಸಲಿದೆ. ಹಾಸನ 3.50-4, ಸಕಲೇಶಪುರ 4.40-4.50, ಸುಬ್ರಹ್ಮಣ್ಯ ರೋಡ್ 7.15-7.25, ಕಬಕ ಪುತ್ತೂರು 8.05-8.15, ಮಂಗಳೂರು ಜಂಕ್ಷನ್ 9-9.10ಕ್ಕೆ ತಲುಪಲಿದೆ.

ಮಂಗಳೂರು ಜಂಕ್ಷನ್‌ನಲ್ಲಿ ನೀರು ತುಂಬಿಸುವ ವ್ಯವಸ್ಥೆ ಇರಲಿದೆ. ಬಳಿಕ ತೋಕೂರು 9.50ಕ್ಕೆ, ಉಡುಪಿ 10.30-10.40, ಕುಂದಾಪುರ 11.02-11.04, ಮೂಕಾಂಬಿಕಾ ರೋಡ್ ಬೈಂದೂರು 11.28-11.30, ಮುರ್ಡೇಶ್ವರ ಮಧ್ಯರಾತ್ರಿ 12.02-12.04, ಗೋಕರ್ಣ ರೋಡ್ 12.52-12.54, ಕಾರವಾರ 1.22-1.24ಕ್ಕೆ ತಲುಪಲಿದೆ. ಮರುದಿನ ನವೆಂಬರ್ 14ರಂದು ಮುಂಜಾನೆ 2.55ಕ್ಕೆ ಮಡಗಾಂವ್ ತಲುಪಲಿದೆ.

ಮಂಗಳೂರು ಜಂಕ್ಷನ್‌ನಿಂದ ಎಸ್‌ಎಂವಿಟಿ ಬೆಂಗಳೂರು ನಡುವಿನ ವಂದೇ ಭಾರತ್ ಉದ್ಘಾಟನಾ ವಿಶೇಷ ರೈಲು (06213) 13ರಂದು ಮಧ್ಯಾಹ್ನ 1.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಚಾಲನೆ ನೀಡಲಿದ್ದು, ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಶಾಸಕ ವೇದವ್ಯಾಸ್‌ ಕಾಮತ್‌ ಮತ್ತಿತರರು ಭಾಗವಹಿಸಲಿದ್ದಾರೆ.

ಕಬಕ ಪುತ್ತೂರು 2.15-2.25, ಸುಬ್ರಹ್ಮಣ್ಯ ರೋಡ್ 3.05-3.15, ಸಕಲೇಶಪುರ 5.40-5.50, ಹಾಸನ 6.30-6.40, ಶ್ರವಣಬೆಳಗೊಳ 7.15-7.25ಕ್ಕೆ ತಲುಪಲಿದೆ. ರಾತ್ರಿ 9 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.

ಈ ಎರಡೂ ರೈಲುಗಳು 16 ಬೋಗಿಗಳ ವಂದೇ ಭಾರತ್ ರೇಕ್ ಹೊಂದಿದ್ದು, ಬೆಂಗಳೂರು-ಮಡಗಾಂವ್ ರೈಲಿನ ನಿರ್ವಹಣೆಯನ್ನು ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ಹಾಗೂ ಮಂಗಳೂರು-ಬೆಂಗಳೂರು ರೈಲಿನ ನಿರ್ವಹಣೆಯನ್ನು ಮಂಗಳೂರು ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತದೆ.