ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ ಪುರವಂಕರ ಲಿಮಿಟೆಡ್ ಉತ್ತರ ಬೆಂಗಳೂರಿನ ಸಾತನೂರಿನಲ್ಲಿ ₹2,500 ಕೋಟಿ ಮೌಲ್ಯದ ವಸತಿ ಯೋಜನೆಗಾಗಿ ಜಂಟಿ ಅಭಿವೃದ್ಧಿ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಜೊತೆಗೆ ಬೆಂಗಳೂರು, ಮುಂಬೈ ಮತ್ತು ದೆಹಲಿ-ಎನ್‌ಸಿಆರ್ ಮಾರುಕಟ್ಟೆಗಳಾದ್ಯಂತ ಬೃಹತ್ ವಿಸ್ತರಣಾ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಸುದ್ದಿಯ ಬೆನ್ನಲ್ಲೇ ಕಂಪನಿಯ ಷೇರು ಮೌಲ್ಯದಲ್ಲಿಯೂ ಏರಿಕೆ ಕಂಡುಬಂದಿದೆ.
ಬೆಂಗಳೂರು ಮೂಲದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾದ ಪುರವಂಕರ ಲಿಮಿಟೆಡ್ ಉತ್ತರ ಬೆಂಗಳೂರಿನ ಸಾತನೂರಿನಲ್ಲಿ 12.76 ಎಕರೆ ಭೂಮಿಗಾಗಿ ಜಂಟಿ ಅಭಿವೃದ್ಧಿ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದೆ. ಈ ಪ್ರಸ್ತಾವಿತ ವಸತಿ ಯೋಜನೆಯ ಒಟ್ಟು ಅಭಿವೃದ್ಧಿ ಮೌಲ್ಯವನ್ನು ಸುಮಾರು ₹2,500 ಕೋಟಿ ಎನ್ನಲಾಗಿದೆ. ಸಂಸ್ಥೆಯು ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ವರದಿಯ ಪ್ರಕಾರ, ಈ ಯೋಜನೆಯು ಸುಮಾರು 1.90 ಮಿಲಿಯನ್ ಚದರ ಅಡಿ ಮಾರಾಟ ಮಾಡಬಹುದಾದ ವಸತಿ ಪ್ರದೇಶಕ್ಕೆ ಸಂಬಂಧಿಸಿದೆ.
ಉತ್ತರ ಬೆಂಗಳೂರು ಟಾರ್ಗೆಟ್ ಏಕೆ?
ಉತ್ತರ ಬೆಂಗಳೂರಿನಲ್ಲಿ ಮನೆ ಮಾಡುವವರ ಆಸಕ್ತಿ ಹೆಚ್ಚಿದೆ. ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಆ ಭಾಗದಲ್ಲಿ ತನ್ನ ಯೋಜನಾ ಸಾಮರ್ಥ್ಯವನ್ನು ವಿಸ್ತರಿಸಲು ಪುರವಂಕರ ಈ ಯೋಜನೆ ಹಾಕಿಕೊಂಡಿದೆ. ಕಂಪನಿಯ ಸಿಇಒ ಮಲ್ಲಣ್ಣ ಸಾಸಲು ಮಾತನಾಡಿ, ಬೆಂಗಳೂರಿನ ವಸತಿ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಪರಿಣಾಮಕಾರಿ ಯೋಜನೆ, ಸಮಯೋಚಿತ ಅನುಮೋದನೆ ಮತ್ತು ಉತ್ತಮ ಗುಣಮಟ್ಟದ ನಿರ್ಮಾಣದ ಮೂಲಕ ಮನೆ ಖರೀದಿದಾರರ ನಿರೀಕ್ಷೆಗಳನ್ನು ತಲುಪುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ
ವ್ಯವಸ್ಥಾಪಕ ನಿರ್ದೇಶಕ ಆಶಿಶ್ ಪುರವಂಕರ ಅವರು ಮಾತನಾಡಿ, ಬಂಡವಾಳ ದಕ್ಷತೆಯನ್ನು ಕಾಯ್ದುಕೊಳ್ಳುತ್ತಾ, ಶಿಸ್ತುಬದ್ಧ ಹೂಡಿಕೆಯೊಂದಿಗೆ ಸಂಸ್ಥೆಯ ದೀರ್ಘಾವಧಿಯ ಬೆಳವಣಿಗೆಗೆ ನೆರವಾಗುವ ಭೂಮಿಗಳನ್ನು ಸೇರ್ಪಡೆಗೊಳಿಸುವುದಾಗಿ ಹೇಳಿದ್ದಾರೆ.
FY27 ರ ಅಭಿವೃದ್ಧಿ ಪೈಪ್‌ಲೈನ್‌ನಲ್ಲಿ ಬೆಂಗಳೂರು ಮುಂಚೂಣಿ
ಸಾತನೂರಿನ ಈ ನೂತನ ಯೋಜನೆಯು FY27 ಕ್ಕೆ ಪುರವಂಕರ ಸಂಸ್ಥೆ ಹಮ್ಮಿಕೊಂಡಿರುವ ಬೃಹತ್ ವಿಸ್ತರಣಾ ಯೋಜನೆಯ ಪ್ರಮುಖ ಭಾಗವಾಗಿದೆ. ಪ್ರಸ್ತುತ ಸಂಸ್ಥೆಯು ಬೆಂಗಳೂರು, ಮುಂಬೈ ಮತ್ತು ದೆಹಲಿ-ಎನ್‌ಸಿಆರ್ ಮಾರುಕಟ್ಟೆಗಳಾದ್ಯಂತ ₹16,600 ಕೋಟಿ GDV ಮೌಲ್ಯದ 12.64 ಮಿಲಿಯನ್ ಚದರ ಅಡಿ ಸಾಮರ್ಥ್ಯದ ಒಟ್ಟು 8 ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.
ಬೆಂಗಳೂರಿನ ಆರು ಪ್ರದೇಶಗಳಲ್ಲಿ ₹8,800 ಕೋಟಿ ಮೌಲ್ಯದ ಯೋಜನೆಗಳು
ಕಂಪನಿಯು ಬೆಂಗಳೂರಿನಾದ್ಯಂತ ಸುಮಾರು 7.02 ಮಿಲಿಯನ್ ಚದರ ಅಡಿ ವಿಸ್ತೀರ್ಣದ 6 ಭೂ ಭಾಗಗಳನ್ನು ತನ್ನ ಯೋಜನೆಗೆ ಸೇರ್ಪಡೆಗೊಳಿಸಿದೆ. ಇದರ ಒಟ್ಟು ಅಭಿವೃದ್ಧಿ ಮೌಲ್ಯ ₹8,800 ಕೋಟಿ ಎಂದು ಅಂದಾಜಿಸಲಾಗಿದೆ. ಸಾತನೂರು, ಮಂಡೂರು, ದೊಡ್ಡಗುಬ್ಬಿ, ಸಣ್ಣ ಅಮ್ಮಣಿಕೆರೆ, ಸರ್ಜಾಪುರ, ಆಗ್ನೇಯ ಬೆಂಗಳೂರು ಇವು ಕಂಪೆನಿ ಆಯ್ಕೆ ಮಾಡಿಕೊಂಡ ಪ್ರದೇಶಗಳಾಗಿವೆ.
ದೆಹಲಿ-ಎನ್‌ಸಿಆರ್ ಮತ್ತು ಮುಂಬೈನಲ್ಲೂ ವಿಸ್ತರಣೆ
ದೆಹಲಿ-ಎನ್‌ಸಿಆರ್‌ನ ಗ್ರೇಟರ್ ನೋಯ್ಡಾ: ಕಂಪನಿಯ ಅಂಗಸಂಸ್ಥೆಯಾದ ಪ್ರುಡೆನ್ಶಿಯಲ್ ಹೌಸಿಂಗ್ ಮೂಲಕ ಗ್ರೇಟರ್ ನೋಯ್ಡಾದಲ್ಲಿ 13.44 ಎಕರೆ ಭೂಮಿಯನ್ನು ಪಡೆದುಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಸುಮಾರು 4.57 ಮಿಲಿಯನ್ ಚದರ ಅಡಿ ಅಭಿವೃದ್ಧಿ ಸಾಮರ್ಥ್ಯ ಹೊಂದಿರುವ ಯೋಜನೆಯನ್ನು ರೂಪಿಸಲಾಗಿದ್ದು, ಇದರ ಒಟ್ಟು ಅಭಿವೃದ್ಧಿ ಮೌಲ್ಯ ಸುಮಾರು ₹5,200 ಕೋಟಿ ಎಂದು ಅಂದಾಜಿಸಲಾಗಿದೆ.
ಮುಂಬೈನ ಗೋರೆಗಾಂವ್ ಪಶ್ಚಿಮ: ಮುಂಬೈನ ಗೋರೆಗಾಂವ್ ಪಶ್ಚಿಮ ಪ್ರದೇಶದಲ್ಲಿಯೂ ಕಂಪನಿ ಪುನರಾಭಿವೃದ್ಧಿ ಯೋಜನೆಯನ್ನು ತನ್ನ ಪೋರ್ಟ್‌ಫೋಲಿಯೊಗೆ ಸೇರಿಸಿಕೊಂಡಿದೆ. ಈ ಯೋಜನೆಯು ಸುಮಾರು 1.05 ಮಿಲಿಯನ್ ಚದರ ಅಡಿ ಮಾರಾಟ ಮಾಡಬಹುದಾದ ಪ್ರದೇಶವನ್ನು ಹೊಂದಿದ್ದು, ಇದರ ಒಟ್ಟು ಅಭಿವೃದ್ಧಿ ಮೌಲ್ಯ ಸುಮಾರು ₹2,600 ಕೋಟಿ ಎಂದು ಅಂದಾಜಿಸಲಾಗಿದೆ.
ಷೇರು ಮಾರುಕಟ್ಟೆ ಚಲನವಲನ
ಭೂ ಒಪ್ಪಂದದ ಸುದ್ದಿ ಪ್ರಕಟವಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಪುರವಂಕರ ಲಿಮಿಟೆಡ್ ಷೇರುಗಳು ಪಾಸಿಟಿವ್ ಏರಿಕೆ ಕಂಡವು. ಅಕ್ಟೋಬರ್ 12ರಂದು ಕಂಪನಿಯ ಷೇರು ಬೆಲೆಯು ₹3.24 ಅಥವಾ ಶೇ. 1.56 ರಷ್ಟು ಏರಿಕೆಯಾಗಿ ₹210.50 ಕ್ಕೆ ತಲುಪಿ ವಹಿವಾಟು ನಡೆಸಿತು.
ಕಂಪನಿಯ ಪ್ರಸ್ತುತ ಸಾಧನೆ
ಜೂನ್ 30, 2026 ರ ಅಂಕಿಅಂಶಗಳ ಪ್ರಕಾರ, ಪುರವಂಕರ ಸಂಸ್ಥೆಯು ಭಾರತದ 9 ಪ್ರಮುಖ ನಗರಗಳಲ್ಲಿ ಇದುವರೆಗೆ ಸುಮಾರು 59 ಮಿಲಿಯನ್ ಚದರ ಅಡಿ ವ್ಯಾಪ್ತಿಯ 97 ಯೋಜನೆಗಳನ್ನು ಸಶಕ್ತವಾಗಿ ಪೂರ್ಣಗೊಳಿಸಿದೆ. ಪ್ರಸ್ತುತ ಸಂಸ್ಥೆಯು 40 ಮಿಲಿಯನ್ ಚದರ ಅಡಿಗಳಷ್ಟು ಬೃಹತ್ ಭೂ ಬ್ಯಾಂಕ್ ಹೊಂದಿದ್ದು, 35.14 ಮಿಲಿಯನ್ ಚದರ ಅಡಿ ವಿಸ್ತೀರ್ಣದ ವಿವಿಧ ಯೋಜನೆಗಳು ಪ್ರಸ್ತುತ ನಿರ್ಮಾಣ ಹಂತದಲ್ಲಿವೆ.


