Bengaluru : ಮಾರುಕಟ್ಟೆ, ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಆಟೋ ಕೇಂದ್ರ ಆರಂಭ
ರಾಜ್ಯ ರಾಜಧಾನಿ ಬೆಂಗಳೂರಿನ ಮಾರುಕಟ್ಟೆ, ಬಸ್ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಆಟೋ ಸೇವಾ ಕೇಂದ್ರಗಳನ್ನು ತೆರೆಯಲು ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆಯು ನಿರ್ಧರಿಸಿದೆ. ಶೀಘ್ರ ವಿವಿಧೆಡೆ ಕಿಯೋಸ್ಕ್ ಮೂಲಕ ಪ್ರಿಪೇಯ್ಡ್ ಆಟೋ ಕೇಂದ್ರಗಳು ಪ್ರಾರಂಭವಾಗಲಿವೆ.
ಬೆಂಗಳೂರು (ಡಿ.6): ಬೆಂಗಳೂರಿನಿಂದ ಊರಿಗೆ ಹೋಗುವವರು ಮತ್ತು ಊರಿನಿಂದ ಬರುವವರಿಗೆ ಹಾಗೂ ಕಚೇರಿ ಕೆಲಸಗಳಿಗೆ ಹೋಗಿ -ಬರುವವರಿಗೆ ರೈಲು, ಬಸ್ಸು, ಮೆಟ್ರೋ ಮತ್ತು ಬಿಎಂಟಿಸಿ ಬಸ್ ಇಳಿದ ನಂತರ ತಮ್ಮ ಮನೆಗಳಿಗೆ ತಲುಪಲು (ಲಾಸ್ಟ್ ಮೈಲ್ ಕನೆಕ್ಟಿವಿಟಿ) ಆಟೋಗಳ ಅಗತ್ಯವಿರುತ್ತದೆ. ಹೀಗಾಗಿ, ರಾಜಧಾನಿಯ ಸಂಚಾರ ಪೊಲೀಸ್ ಇಲಾಖೆಯು ಪ್ರೀಪೇಯ್ಡ್ ಆಟೋ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಟ್ರಾಫಿಕ್, ಟ್ರಾಫಿಕ್, ಟ್ರಾಫಿಕ್. ಬೆಳಗ್ಗೆ ಮತ್ತು ಸಂಜೆ ವೇಳೆ ಎಲ್ಲ ಪ್ರಮುಖ ರಸ್ತೆಗಳಲ್ಲಿ ಕಿವಿಗಡಚಿಕ್ಕುವಂತೆ ವಾಹನಗಳ ಸದ್ದು ಕೇಳಿಬರುತ್ತದೆ. ಇಷ್ಟು ವಾಹನಗಳಿದ್ದರೂ ನಮ್ಮ ಮನೆ ಅಥವಾ ವಾಸದ ಸ್ಥಳಗಳಿಗೆ ತಲುಪಲು, ಮಾರುಕಟ್ಟೆ ಪ್ರದೇಶಗಳಲ್ಲಿ ಹೋಗಲು ಆಟೋಗಳ ಸೇವೆ ತೀವ್ರ ಅಗತ್ಯವಾಗಿದೆ. ಆದರೆ, ಆಟೋಗಳ ಸೇವೆ ವಿಚಾರ, ದರಗಳ ಹೊಂದಾಣಿಕೆ, ಕೆಲವು ಕಂಪನಿಗಳಿಂದ ಆಟೋ ಸೇವೆಗಳನ್ನು ಒದಗಿಸುವುದು ಸೇರಿ ಇತ್ಯಾದಿ ಸೌಲಭ್ಯಗಳ ಬಗ್ಗೆ ಸಮಸ್ಯೆಗಳು ಎದುರಾಗಿದ್ದವು. ಇತ್ತೀಚೆಗೆ ಸರ್ವಿಸ್ ಪ್ರೊವೈಡರ್ ಕಂಪನಿಗಳು ಗ್ರಾಹಕರಿಗೆ ವಿಧಿಸುವ ದರ ನಿರ್ಧಾರದ ಬಗ್ಗೆಯೂ ಇತ್ತೀಚೆಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡು ದರ ನಿಗದಿ ಮಾಡಿದೆ. ಈಗ ಕೆಎಸ್‌ಆರ್ ಟಿಸಿ, ಬಿಎಂಟಿಸಿ, ಮೆಟ್ರೋ ಹಾಗೂ ರೈಲು ನಿಲ್ದಾಣಗಳಲ್ಲಿ ಇಳಿದು ಮನೆಗೆ ಹೋಗುವವರಿಗೆ ಅನುಕೂಲ ಆಗುವಂತೆ ಪ್ರಿಪೇಯ್ಡ್ ಆಟೋ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ.
Ola-Uber Fare: ಓಲಾ, ಉಬರ್‌ಗೆ ದರ ಫಿಕ್ಸ್ ಮಾಡಿದ ಸಾರಿಗೆ ಇಲಾಖೆ!
ಮೊದಲ ಹಂತದಲ್ಲಿ 10 ಕೇಂದ್ರ ಆರಂಭ: ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈಗಾಗಲೇ ಪ್ರಿಪೇಯ್ಡ್ ಆಟೋ ಸೇವೆ ಹಲವು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ. ಈಗ ಇದೇ ಮಾದರಿಯನ್ನು ಬೆಂಗಳೂರಿನಲ್ಲಿ ಕೆಲವು ಸ್ಥಳಗಳಲ್ಲಿ ಅಳವಡಿಕೆ ಮಾಡಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಈ ಕುರಿತು ನಮ್ಮ ಮೆಟ್ರೋ (ಬಿಎಂಆರ್‌ಸಿಎಲ್) ಅಧಿಕಾರಿಗಳೊಂದಿಗೆ ಮಾತುಕತೆಯನ್ನೂ ನಡೆಸಲಾಗಿದ್ದು, ಆಟೋ ಸೇವಾ ಕೇಂದ್ರಗಳನ್ನು ತೆರೆಯಲು ಅನುಕೂಲ ಆಗುವಂತೆ ಮೂಲ ಸೌಕರ್ಯಗಳನ್ನು ಒದಗಿಸುವುದಾಗಿ ಒಪ್ಪಿಗೆ ಸೂಚಿಸಿದೆ. ಮೊದಲ ಹಂತದಲ್ಲಿ ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಎಚ್.ಎಸ್.ಆರ್. ಲೇಔಟ್ ಹಾಗೂ ಮೆಟ್ರೋ ಹಸಿರು ಮಾರ್ಗದ ಕೊನೆಯ ನಿಲ್ದಾಣವಾದ ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ಸೇರಿ ಒಟ್ಟು 10 ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಇನ್ನು ಬೆಳಗ್ಗೆ 5 ಗಂಟೆಯಿಂದ ಮಧ್ಯರಾತ್ರಿವರೆಗೆ ಈ ಆಟೋ ಸೇವೆಗಳನ್ನು ನೀಡಲಿವೆ.
80-100 ರೂ. ದರ ನಿಗದಿ ಸಾಧ್ಯತೆ: ಬೆಂಗಳೂರಿನಲ್ಲಿ ಈಗಾಗಲೇ 57 ಕಿ.ಮೀ. ಉದ್ದದ ಮಾರ್ಗವನ್ನು ಹೊಂದಿರುವ ಮೆಟ್ರೋ ಮಾರ್ಗದಲ್ಲಿ ಹಸಿರು ಮತ್ತು ನೇರಳೆ ಎರಡು ಮಾರ್ಗದಲ್ಲಿ ರೈಲುಗಳು ಸೇವೆ ನೀಡುತ್ತಿವೆ. ಕೆಂಗೇರಿ- ಬೈಯಪ್ಪನಹಳ್ಳಿ ಮತ್ತು ಕೇಂದ್ರೀಯ ರೇಷ್ಮೆ ಸಂಸ್ಥೆ- ನಾಗಸಂದ್ರ ಮಾರ್ಗಗಳಲ್ಲಿ ಮೆಟ್ರೋ ಸೇವೆ ಲಭ್ಯವಿದ್ದರೂ ಅಲ್ಲಿಂದ ಮನೆಗಳಿಗೆ ತೆರಳಲು ನಡೆದುಕೊಂಡು ಹೋಗಬೇಕು. ಆದರೆ, ರಾತ್ರಿ ವೇಳೆ ಮಹಿಳೆಯರು, ಯುವತಿಯರು ಒಬ್ಬಂಟಿಯಾಗಿ ಮನೆಗೆ ನಡೆದುಕೊಂಡು ಹೋಗಲು ಕಷ್ಟವಾಗಬಹುದು. ಇನ್ನು ಮಕ್ಕಳು ಹಾಗೂ ಹೆಚ್ಚಿನ ಲಗೇಜ್‌ಗಳು ಇದ್ದರೂ ಮನೆಗೆ ಹೋಗಲು ಅನಿವಾರ್ಯವಾಗಿ ಆಟೋ ಸೇವೆ ಪಡೆಯುತ್ತಾರೆ. ಇಂತಹ ಪರಿಸ್ಥಿತಿಯನ್ನು ನೋಡಿಕೊಂಡು ಆಟೋ ಚಾಲಕರು ದುಬಾರಿ ದರವನ್ನು ಹೇಳುತ್ತಾರೆ. ಹೀಗೆ ದುಬಾರಿ ಪ್ರಯಾಣ ದರವನ್ನು ತಪ್ಪಿಸುವ ಉದ್ದೇಶದಿಂದ ಪ್ರಿಪೇಯ್ಡ್ ಆಟೋ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಇನ್ನು 2-3 ಕಿ.ಮೀ.ವರೆಗಿನ ದೂರಕ್ಕೆ 80 ರೂ.ಗಳಿಂದ 100ರೂ.ವರೆಗೆ ದರ ನಿಗದಿ ಮಾಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕರ್ನಾಟಕದಲ್ಲಿ ವಿದ್ಯುತ್ತಿಗೂ ಪ್ರೀಪೇಯ್ಡ್ ವ್ಯವಸ್ಥೆ ಶೀಘ್ರ ಜಾರಿ
ವಿವಿಧೆಡೆ ಪ್ರಿಪೇಯ್ಡ್ ಕೇಂದ್ರ ತೆರೆಯಬೇಕು: ಪೊಲೀಸ್ ಇಲಾಖೆಯು ಈಗಾಗಲೇ ನಗರದ ಕೆಲವು ಸ್ಥಳದಲ್ಲಿ ಪ್ರಿಪೇಯ್ಡ್ ಆಟೋ ಸೇವಾ ಕೇಂದ್ರಗಳನ್ನು ತೆರೆಯುವುದು ಉತ್ತಮ ನಿರ್ಧಾರವಾಗಿದೆ. ಇದರ ಜೊತೆಗೆ, ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಮೆಟ್ರೋ ನಿಲ್ದಾಣಗಳು, ಶಾಪಿಂಗ್ ಮಾಲ್‌ಗಳು, ಬಿಎಂಟಿಸಿ ಬಸ್ ನಿಲ್ದಾಣಗಳು, ಆಸ್ಪತ್ರೆಗಳು, ಶೀಕ್ಷಣ ಸಂಸ್ಥೆಗಳಾದ ಶಾಲೆ-ಕಾಲೇಜುಗಳು, ರೈಲು ನಿಲ್ದಾಣಗಳು ಸೇರಿ ವಿವಿಧೆಡೆ ಇಂತಹ ಆಟೋ ಸೇವಾ ಕೇಂದ್ರಗಳನ್ನು ತೆರೆಯಬೇಕು. ಈಗಾಗಲೇ ದರದ ಬಗ್ಗೆ ಸರ್ಕಾರ ನಿರ್ಧಾರ ಮಾಡಿದ್ದು, ಇದಕ್ಕೆ ನಮ್ ಸಮ್ಮತಿಯಿದೆ. ಜೊತೆಗೆ, ಇಂತಹ ಕೇಂದ್ರಗಳ ಬಳಿ ಸಾಲಿನಲ್ಲಿ ನಿಲ್ಲದಿರುವ ಆಟೋಗಳ ನಿಯಂತ್ರಣಕ್ಕೆ ಪೊಲೀಸರು ಹೆಚ್ಚು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಟೋ ಚಾಲಕರೊಬ್ಬರು ತಿಳಿಸಿದರು.