ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ಉಳಿಸಿಕೊಳ್ಳಲು 2023ರ ಒಳಗೆ ಮೀಟರ್‌ ಬದಲಾವಣೆ, ರಾಜ್ಯಾದ್ಯಂತ ‘ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌’ ಕಡ್ಡಾಯ ಅಳವಡಿಕೆಗೆ ಇಂಧನ ಇಲಾಖೆಯಿಂದ ಸಿದ್ಧತೆ

ಶ್ರೀಕಾಂತ್‌.ಎನ್‌.ಗೌಡಸಂದ್ರ

ಬೆಂಗಳೂರು(ಅ.15): ರಾಜ್ಯದಲ್ಲಿನ ವಿದ್ಯುತ್‌ ಗ್ರಾಹಕರು ಮೊದಲು ಹಣ ಪಾವತಿಸಿ ಬಳಿಕ ವಿದ್ಯುತ್‌ ಬಳಸುವಂತೆ ಮಾಡಲು ‘ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌’ ಕಡ್ಡಾಯ ಅಳವಡಿಕೆಗೆ ಇಂಧನ ಇಲಾಖೆಯು ಸಿದ್ಧತೆ ನಡೆಸಿದೆ. ಸದ್ಯದಲ್ಲೇ ಪ್ರಿಪೇಯ್ಡ್‌ ಮೀಟರ್‌ ಅಳವಡಿಕೆಗೆ ಚಾಲನೆ ನೀಡಿ 2023ರ ಡಿಸೆಂಬರ್‌ ವೇಳೆಗೆ ಎಲ್ಲಾ ಮೀಟರ್‌ಗಳನ್ನೂ ಪ್ರಿಪೇಯ್ಡ್‌ ಆಗಿಸಲು ಗಂಭೀರ ಚಿಂತನೆ ನಡೆಸಿದೆ.

ರಾಜ್ಯದ ಎಲ್ಲಾ ಐದು ವಿದ್ಯುತ್‌ ಸರಬರಾಜು ಕಂಪನಿಗಳ (ಎಸ್ಕಾಂ) ವ್ಯಾಪ್ತಿಯಲ್ಲೂ ಪ್ರಿಪೇಯ್ಡ್‌ ಸ್ಮಾರ್ಚ್‌ ಮೀಟರ್‌ ಅಳವಡಿಸುವಂತೆ ಕೇಂದ್ರ ಇಂಧನ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಈ ಹಿಂದೆಯೇ ನಿರ್ದೇಶನ ನೀಡಿದೆ. ಈ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ 2021ರ ಜು.22ರಂದು ಪತ್ರ ಬರೆದಿದ್ದ ಕೇಂದ್ರ ಇಂಧನ ಸಚಿವಾಲಯ, ‘ಕೂಡಲೇ ಸ್ಮಾರ್ಚ್‌ ಮೀಟರ್‌ ಅಳವಡಿಕೆ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಿ 2023ರ ಡಿಸೆಂಬರ್‌ ಒಳಗಾಗಿ ಪ್ರಿಪೇಯ್ಡ್‌ ಮೀಟರ್‌ ಅಳವಡಿಕೆ ಮಾಡಬೇಕು’ ಎಂದು ಸ್ಪಷ್ಟಸೂಚನೆ ನೀಡಿದೆ.

ವಿದ್ಯುತ್‌ ಖಾಸಗೀಕರಣಕ್ಕೆ ಅನ್ನದಾತರ ಆಕ್ರೋಶ

ಯೋಜನೆಯಡಿ ಕೃಷಿ ಪಂಪ್‌ಸೆಟ್‌ಗಳಿಗೂ ಮೀಟರ್‌ ಅಳವಡಿಸುವಂತೆ ಸೂಚಿಸಲಾಗಿದೆ. ಹೀಗಾಗಿ ಜನರ ವಿರೋಧ ಎದುರಾಗುವ ಭಯದಿಂದ ಪ್ರಸ್ತಾವನೆಯನ್ನು ಇಂಧನ ಇಲಾಖೆ ತಡೆ ಹಿಡಿದಿತ್ತು. ಆದರೆ, ಇದೀಗ 2023ರ ಡಿಸೆಂಬರ್‌ ಒಳಗಾಗಿ ಅಳವಡಿಸುವ ಪ್ರಿಪೇಯ್ಡ್‌ ಮೀಟರ್‌ಗಳಿಗೆ ಶೇ.15ರಷ್ಟುಸಬ್ಸಿಡಿ ನೀಡಲಾಗುವುದು, ಪ್ರತಿ ಮೀಟರ್‌ಗೆ ಕನಿಷ್ಠ 900 ರು.ಗಳನ್ನು ಪಾವತಿಸಲಾಗುವುದು ಎಂದು ಕೇಂದ್ರ ಸರ್ಕಾರ ರಾಜ್ಯಕ್ಕೆ ಪತ್ರ ಬರೆದಿದೆ. ಬಳಿಕ ಅಳವಡಿಕೆಯಾಗುವ ಮೀಟರ್‌ಗಳಿಗೆ ಈ ಸಬ್ಸಿಡಿಯನ್ನು ಪಾವತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರ ನೀಡಿರುವ ಗಡುವು ಹತ್ತಿರವಾಗುತ್ತಿರುವುದರಿಂದ ಶತಾಯಗತಾಯ ಪ್ರಿಪೇಯ್ಡ್‌ ಮೀಟರ್‌ ಅಳವಡಿಕೆಗೆ ಸದ್ಯದಲ್ಲೇ ಚಾಲನೆ ನೀಡಿ 2023ರ ವೇಳೆಗೆ ಬಹುತೇಕ ಮೀಟರ್‌ಗಳನ್ನು ಬದಲಿಸಲು ಇಂಧನ ಇಲಾಖೆಯಲ್ಲಿ ಚರ್ಚೆಗಳು ನಡೆಯುತ್ತಿದ್ದು, ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಎಸ್ಕಾಂಗಳಿಗೆ ಸೂಚನೆ ನೀಡಿರುವುದಾಗಿ ಮೂಲಗಳು ಸ್ಪಷ್ಟಪಡಿಸಿವೆ.

ಏನಿದು ಯೋಜನೆ?:

ವಿದ್ಯುತ್‌ ಸರಬರಾಜು ವ್ಯವಸ್ಥೆ ಸುಧಾರಿಸಿ ಆದಾಯ ಸೋರಿಕೆ ತಡೆಯಲು ಕೇಂದ್ರ ಇಂಧನ ಇಲಾಖೆಯು ‘ರೀವ್ಯಾಂಪ್ಡ್‌ ಡಿಸ್ಟ್ರಿಬ್ಯೂಷನ್‌ ಸೆಕ್ಟರ್‌ ಸ್ಕೀಮ್‌’ ಹೆಸರಿನಲ್ಲಿ ಯೋಜನೆ ರೂಪಿಸಿದೆ. ಪ್ರಸ್ತುತ ತಾಂತ್ರಿಕ ಸಮಸ್ಯೆ ಹಾಗೂ ವಿದ್ಯುತ್‌ ಸೋರಿಕೆಯಿಂದ ಉಂಟಾಗುತ್ತಿರುವ ಎ.ಟಿ. ಮತ್ತು ಸಿ ನಷ್ಟವನ್ನು (ಅಗ್ರಿಗೇಟ್‌ ಟೆಕ್ನಿಕಲ್‌ ಅಂಡ್‌ ಕಮರ್ಷಿಯಲ್‌ ಲಾಸ್‌) ಶೇ.12ರಿಂದ 15ರಷ್ಟುಕಡಿಮೆ ಮಾಡಲು ಹಾಗೂ 2024-25ರ ವೇಳೆಗೆ ಶೂನ್ಯಕ್ಕೆ ತರಲು ಪ್ರಿಪೇಯ್ಡ್‌ ಸ್ಮಾರ್ಚ್‌ ಮೀಟರ್‌ ಅಳವಡಿಕೆಗೆ ಮುಂದಾಗಿದೆ.

ಯೋಜನೆಯಡಿ ಮೀಟರ್‌ ಅಳವಡಿಕೆಯ ಪ್ರೋತ್ಸಾಹಧನವನ್ನು ಮೊದಲೇ ನೀಡುವುದಿಲ್ಲ. ಮೀಟರ್‌ ಅಳವಡಿಕೆಯಾಗಿ ಒಂದು ತಿಂಗಳ ಬಿಲ್ಲಿಂಗ್‌ ಆದ ಮೇಲೆ ಮಾನಿಟರಿಂಗ್‌ ಕಮಿಟಿ ವರದಿ ಆಧಾರದ ಮೇಲೆ ಪ್ರೋತ್ಸಾಹಧನ ನೀಡಲಾಗುವುದು ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

2025-26ರವರೆಗೆ ಯೋಜನೆ ಅನ್ವಯ:

ಯೋಜನೆಯಡಿ ಪ್ರೋತ್ಸಾಹಧನ ಪಡೆಯಬೇಕಾದರೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಜೊತೆ ಮೊದಲು ಒಪ್ಪಂದಕ್ಕೆ ಸಹಿ ಹಾಕುವುದು ಕಡ್ಡಾಯ ಎಂದು ಪತ್ರದಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರದಿಂದ 200 ಕೋಟಿ ರು.ಗಳನ್ನು ಕನ್ಸಲ್ಟೆನ್ಸಿಗಾಗಿ ವೆಚ್ಚ ಮಾಡಬೇಕು. ಕೇಂದ್ರದ ಮಾರ್ಗಸೂಚಿ ಅನ್ವಯ ಯೋಜನೆ ಅನುಷ್ಠಾನಗೊಳಿಸಬೇಕು. ಯೋಜನೆಯು 2021-22ರಿಂದ 2025-26ರವರೆಗೆ ಅನ್ವಯವಾಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಬೆಂಗಳೂರಿನಲ್ಲಿ ಪ್ರಾಯೋಗಿಕ ಜಾರಿ:

ಬೆಸ್ಕಾಂ (ಬೆಂಗಳೂರು) ವ್ಯಾಪ್ತಿಯಲ್ಲಿ ಈಗಾಗಲೇ ಸ್ಮಾರ್ಚ್‌ ಮೀಟರ್‌ ಪ್ರಾಯೋಗಿಕ ಅಳವಡಿಕೆ ಜಾರಿಯಾಗಿದ್ದು, ಕೇಂದ್ರ ಸರ್ಕಾರವು 2020ರ ಜನವರಿಯಿಂದ ಈಚೆಗೆ ಅಳವಡಿಸಿರುವ ಮೀಟರ್‌ಗಳಿಗೂ ಸಹಾಯಧನ ನೀಡುವುದಾಗಿ ತಿಳಿಸಿದೆ. ಹೀಗಾಗಿ ಬೆಸ್ಕಾಂ ವ್ಯಾಪ್ತಿಯಲ್ಲಿ ಸದ್ಯದಲ್ಲೇ ಮತ್ತಷ್ಟುಉಪ ವಿಭಾಗಗಳಲ್ಲಿ ಸ್ಮಾರ್ಚ್‌ ಮೀಟರ್‌ ಅಳವಡಿಕೆಯಾಗುವ ಸಾಧ್ಯತೆ ಇದೆ.

ವಿದ್ಯುತ್‌ ಕಂಬಗಳಲ್ಲಿದ್ದ ಅ​ಲ್ಯೂಮಿನಿಯಂ ಪಟ್ಟಿಗಳೇ ಕಳವು

ಕೇಂದ್ರ ಸರ್ಕಾರವು ನೂತನ ವಿದ್ಯುತ್‌ ನೀತಿ ಪ್ರಕಾರ 2023ರ ಡಿಸೆಂಬರ್‌ ಒಳಗಾಗಿ ಪ್ರಿಪೇಯ್ಡ್‌ ಮೀಟರ್‌ ಅಳವಡಿಕೆ ಮಾಡುವಂತೆ ಸೂಚನೆ ನೀಡಿದೆ. ಈ ಬಗ್ಗೆ ಗಂಭೀರ ಚರ್ಚೆಗಳು ಇಲಾಖೆ ಮಟ್ಟದಲ್ಲಿ ನಡೆಯುತ್ತಿವೆ. ಎಸ್ಕಾಂಗಳ ಮುಖ್ಯಸ್ಥರೊಂದಿಗೂ ಸಭೆ ನಡೆಸಲಾಗಿದೆ. ಆದರೆ, ಈವರೆಗೆ ಅನುಷ್ಠಾನದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ - ಜಿ. ಕುಮಾರ್‌ ನಾಯಕ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ.

ಮೊದಲೇ ಹಣ ಕಟ್ಟಿ, ಬಳಿಕ ವಿದ್ಯುತ್‌ ಬಳಸಿ!

ಹಾಲಿ ವಿದ್ಯುತ್‌ ಬಳಸಿದ ಬಳಿಕ ಬರುವ ಬಿಲ್‌ ನೋಡಿ ವಿದ್ಯುತ್‌ ಶುಲ್ಕ ಪಾವತಿಸುವ ವ್ಯವಸ್ಥೆ ಎಲ್ಲೆಡೆ ಇದೆ. ಪ್ರೀಪೇಯ್ಡ್‌ ಮೀಟರ್‌ ವ್ಯವಸ್ಥೆ ಜಾರಿಯಾದ ಬಳಿಕ ಪ್ರತಿ ಸಂಪರ್ಕಕ್ಕೂ ಮೊದಲೇ ನಿರ್ದಿಷ್ಟಹಣ ಪಾವತಿಸಿದರಷ್ಟೇ ವಿದ್ಯುತ್‌ ಸರಬರಾಜಾಗಲಿದೆ. ಪ್ರತಿ ತಿಂಗಳೂ ಈ ರೀತಿ ಮೊದಲೇ ವಿದ್ಯುತ್‌ ಶುಲ್ಕ ಪಾವತಿಸಬೇಕಾಗುತ್ತದೆ.

ಏನಿದು ಯೋಜನೆ?

- ವಿದ್ಯುತ್‌ ಸರಬರಾಜು ವ್ಯವಸ್ಥೆ ಸುಧಾರಿಸಿ ಆದಾಯ ಸೋರಿಕೆ ತಡೆಗಟ್ಟಲು ಕೇಂದ್ರ ಸರ್ಕಾರ ಯೋಜನೆ
- ತಾಂತ್ರಿಕ ಸಮಸ್ಯೆ, ವಿದ್ಯುತ್‌ ಸೋರಿಕೆಯಿಂದ ಉಂಟಾಗುವ ನಷ್ಟತಡೆಗೆ ಪ್ರೀಪೇಯ್ಡ್‌ ಮೀಟರ್‌ ಸ್ಕೀಮ್‌
- ಇದರ ಅನ್ವಯ ಯೋಜನೆ ಬಗ್ಗೆ 2021ರಲ್ಲೇ ರಾಜ್ಯಗಳಿಗೆ ಪತ್ರ ಬರೆದಿದ್ದ ಕೇಂದ್ರದ ಇಂಧನ ಸಚಿವಾಲಯ
- 2023ರ ಡಿಸೆಂಬರ್‌ ಒಳಗಾಗಿ ಅಳವಡಿಸುವ ಮೀಟರ್‌ಗಳಿಗೆ ಶೇ.15 ಸಬ್ಸಿಡಿ ನೀಡುವುದಾಗಿ ಮಾಹಿತಿ
- ಇದೀಗ ಸಬ್ಸಿಡಿ ಪಡೆಯುವ ಸಲುವಾಗಿ ಪ್ರೀಪೇಯ್ಡ್‌ ಮೀಟರ್‌ ಅಳವಡಿಕೆಗೆ ರಾಜ್ಯ ಇಂಧನ ಇಲಾಖೆ ಸಿದ್ಧತೆ