ಕಾಡುಗೊಲ್ಲ ಮತ್ತು ಹಟ್ಟಿಗೊಲ್ಲ ಸಮುದಾಯಗಳನ್ನು ಎಸ್ಟಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಹೊಸದಾಗಿ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ನಿರ್ಧರಿಸಿದೆ. ಈ ಹಿಂದೆ ಐದು ಬಾರಿ ಕೇಂದ್ರ ಸರ್ಕಾರ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರಿಂದ, ಧಾರವಾಡದ ಸಿಎಂಡಿಆರ್ ಸಂಸ್ಥೆಗೆ ಮೂರು ತಿಂಗಳಲ್ಲಿ ಸಮಗ್ರ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ.

ಬೆಂಗಳೂರು(ನ.22): ಕಾಡುಗೊಲ್ಲ ಮತ್ತು ಹಟ್ಟಿಗೊಲ್ಲ ಸಮುದಾಯ(Kadugolla and Hattigolla Communities)ವನ್ನು ಪರಿಶಿಷ್ಟ ಪಂಗಡ (ST) ಪಟ್ಟಿಗೆ ಸೇರಿಸುವ ಸಂಬಂಧ ಕುಲಶಾಸ್ತ್ರೀಯ ಅಧ್ಯಯನ(Ethnological study) ನಡೆಸಿ, ಅದರ ವರದಿಯೊಂದಿಗೆ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಶಿಫಾರಸು ಸಲ್ಲಿಸಲು ರಾಜ್ಯ ಸರ್ಕಾರ(Karnataka Government) ನಿರ್ಧರಿಸಿದೆ.

ದಶಕಗಳ ಬೇಡಿಕೆ ಈಡೇರುತ್ತಾ?

ಕಾಡುಗೊಲ್ಲ ಮತ್ತು ಹಟ್ಟಿಗೊಲ್ಲ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕೆಂದು ದಶಕಗಳಿಂದ ಬೇಡಿಕೆಯಿದೆ. ಅಲ್ಲದೆ, ಈ ಹಿಂದೆಯೂ ಐದು ಬಾರಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಕಳುಹಿಸಿತ್ತು. ಅದರೆ, ಕೇಂದ್ರ ಸರ್ಕಾರ ಆಕ್ಷೇಪಣೆಯೊಂದಿಗೆ ಐದು ಬಾರಿಯೂ ಪ್ರಸ್ತಾವನೆ ತಿರಸ್ಕರಿಸಿತ್ತು. ಇದೀಗ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆ ಮೂಲಕ ಹಿಂದಿನ ವರದಿಗಳನ್ನೇ ಪುನರಾವರ್ತಿಸುವ ಬದಲು ಹೊಸದಾಗಿ ಸಮಗ್ರ ಅಧ್ಯಯನ ವರದಿಯೊಂದಿಗೆ ಶಿಫಾರಸು ಮಾಡಲು ನಿರ್ಣಯಿಸಲಾಗಿದೆ.

ಮೂರು ತಿಂಗಳಲ್ಲಿ ವರದಿ ನೀಡಲು ಆದೇಶ

ಕೇಂದ್ರ ಸರ್ಕಾರದ ಆಕ್ಷೇಪಣೆಗೆ ಸೂಕ್ತ ಉತ್ತರ ನೀಡಲು ಕುಲಶಾಸ್ತ್ರೀಯ ಅಧ್ಯಯನ ನಡೆಸಲಾಗುತ್ತಿದ್ದು, ಅದಕ್ಕಾಗಿ ಧಾರವಾಡದ ಸೆಂಟರ್‌ ಫಾರ್‌ ಮಲ್ಟಿ-ಡಿಸಿಪ್ಲಿನರಿ ಡೆವಲಪ್‌ಮೆಂಟ್‌ ರಿಸರ್ಚ್‌ (CMDR) ಸಂಸ್ಥೆಯ ಮಾನವಶಾಸ್ತ್ರಜ್ಞರ ನೆರವು ಪಡೆಯಲು ನಿರ್ಧರಿಸಲಾಗಿದೆ. ಕಾಡುಗೊಲ್ಲ ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಬುಡಕಟ್ಟು ಹಿನ್ನೆಲೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿ, 3 ತಿಂಗಳಲ್ಲಿ ವರದಿ ನೀಡಲು ಸೂಚಿಸಲಾಗಿದೆ. ಈ ಕುರಿತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

ಹೊಸ ಅಧ್ಯಯನ ಮೂಲಕ ಸಮುದಾಯದ ವಿಶಿಷ್ಟ ಜೀವನಶೈಲಿ, ಸಾಮಾಜಿಕ ಸ್ಥಿತಿ, ಸಾಂಪ್ರದಾಯಿಕ ಆಚರಣೆಗಳು, ವಾಸಸ್ಥಳ ಮತ್ತು ಬುಡಕಟ್ಟು ಲಕ್ಷಣಗಳನ್ನು ದಾಖಲಿಸಿ, ಕೇಂದ್ರದ ಪರಿಶೀಲನೆಗೆ ಅಗತ್ಯವಿರುವ ಸಮಗ್ರ ದಾಖಲೆ ಸಿದ್ಧಪಡಿಸುವ ಉದ್ದೇಶ ಸರ್ಕಾರದ್ದಾಗಿದೆ.

ರಾಜ್ಯದ 12 ಜಿಲ್ಲೆಗಳ 40 ತಾಲೂಕುಗಳಲ್ಲಿ 1273 ಹಟ್ಟಿಗಳಲ್ಲಿ 6 ಲಕ್ಷಕ್ಕೂ ಹೆಚ್ಚಿನ ಕಾಡುಗೊಲ್ಲರಿದ್ದಾರೆ. ರಾಜ್ಯ ಸರ್ಕಾರದ ನೂತನ ಕ್ರಮದಿಂದ ಅವರಿಗೆ ಅನುಕೂಲವಾಗಲಿದೆ.

ಐದು ಬಾರಿ ಪ್ರಸ್ತಾವನೆ ತಿರಸ್ಕಾರ:

ಕಾಡುಗೊಲ್ಲರನ್ನು ಎಸ್ಟಿ ಪಟ್ಟಿಗೆ ಸೇರಿಸುವ ಸಂಬಂಧ ರಾಜ್ಯ ಸರ್ಕಾರ 2015ರಿಂದ ಪ್ರಯತ್ನ ಮಾಡುತ್ತಿದೆ. 2015ರ ಮಾರ್ಚ್‌ 18ರಂದು ಮೊದಲ ಬಾರಿಗೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಅದೇ ವರ್ಷ ಆ.17ರಂದು ಮತ್ತೊಂದು ಪ್ರಸ್ತಾವನೆ ಕಳುಹಿಸಲಾಗಿತ್ತು. ನಂತರ 2018ರ ಸೆ. 28, 2021ರ ಅ.12 ಮತ್ತು 2022ರ ಫೆ.4 ಹಾಗೂ 2025ರ ಏ.3ರಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು.

ಆದರೆ, ಭಾರತದ ರಿಜಿಸ್ಟ್ರಾರ್‌ ಜನರಲ್‌ ಕಚೇರಿಯು ಪ್ರಸ್ತಾವನೆ ಪರಿಶೀಲಿಸಿ ಐದು ಬಾರಿಯೂ ಅದನ್ನು ತಿರಸ್ಕರಿಸಿತ್ತು. ಹೊಸ ಮಾಹಿತಿ ಅಥವಾ ಹೆಚ್ಚುವರಿ ಸಾಕ್ಷ್ಯಾಧಾರಗಳಿಲ್ಲ ಎಂದು ಕೇಂದ್ರ ಸರ್ಕಾರ ತನ್ನ ಆಕ್ಷೇಪಣೆಯಲ್ಲಿ ತಿಳಿಸಿತ್ತು. ಆ ಹಿನ್ನೆಲೆಯಲ್ಲಿ ಹೊಸ ದಾಖಲೆಗಳೊಂದಿಗೆ, ಕುಲಶಾಸ್ತ್ರೀಯ ವರದಿಯೊಂದಿಗೆ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದೆ.