ಶಾಸಕ ಪ್ರದೀಪ್ ಈಶ್ವರ್ ಅವರು ಉತ್ತರ ಕರ್ನಾಟಕದ ಭಾಷೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಮೇಲೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕ್ಷಮೆಯಾಚಿಸದಿದ್ದರೆ ಅವರ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ವಿವಿಧ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಇತ್ತೀಚಿನ ತಮ್ಮ ಭಾಷಣ ಅಥವಾ ಹೇಳಿಕೆಯೊಂದರಲ್ಲಿ ಉತ್ತರ ಕರ್ನಾಟಕದ ಭಾಷೆ ಮತ್ತು ಜನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹೇಳಿಕೆಯೊದು ಹೊರ ಬರುತ್ತಿದ್ದಂತೆ ಉತ್ತರ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಈಗಂತು ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಬೀದರ, ವಿಜಯನಗರ ಸೇರಿ ವಿವಿದೆಡೆಯ ಕಂಟೆಂಟ್‌ ಕ್ರಿಯೇಟರ್‍ಸ್‌ ತರಾಟಗೆ ತೆಗೆದುಕೊಂಡಿದ್ದರು. ಆದರೆ ರಾಜ್ಯದ ಹೃದಯ ಭಾಗ ಬೆಳಗಾವಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಆಗ್ರಹವೇ ಪ್ರಾರಂಭವಾಗಿದೆ.

ಭುಗಿಲೆದ್ದ ಆಕ್ರೋಶ!

ಯಾವ ಉತ್ತರ ಕರ್ನಾಟಕ ಭಾಷೆ ಎಂಬ ಹೇಳಿಕೆ ಹೊರಬರುತ್ತಿದ್ದಂತೆ ಉತ್ತರ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬೆಳಗಾವಿಯ ಪ್ರಸಿದ್ಧ ರಾಣಿ ಚನ್ನಮ್ಮ ವೃತ್ತ, ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಸೇರಿ ವಿವಿಧೆಡೆ ಪ್ರತಿಭಟನೆಗಳು ತೀವ್ರಗೊಂಡಿವೆ. ಕರ್ನಾಟಕ ಏಕೀಕರಣಕ್ಕೆ ನಾಂದಿ ಹಾಡಿದ ಮತ್ತು ಶ್ರೀಮಂತ ಇತಿಹಾಸ ಹೊಂದಿರುವ ಉತ್ತರ ಕರ್ನಾಟಕದ ಭಾಷೆಯನ್ನು ಹಗುರವಾಗಿ ಕಂಡಿರುವುದನ್ನು ಸಹಿಸುವುದಿಲ್ಲ ಎಂದು ಕನ್ನಡಪರ ಹೋರಾಟಗಾರರು ಮತ್ತು ಉತ್ತರ ಕರ್ನಾಟಕ ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದೆ.

ಕ್ಷಮೆಯಾಚನೆಗೆ ಆಗ್ರಹ!

ಶಾಸಕ ಪ್ರದೀಪ್ ಈಶ್ವರ್ ಉತ್ತರ ಕರ್ನಾಟಕದ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದು, ತಕ್ಷಣವೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಹಾಗೂ ಅವರ ವಿರುದ್ಧ ಸರ್ಕಾರ ಮತ್ತು ಪಕ್ಷ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಅದು ಈಗ ತೀವ್ರ ಸ್ವರೂಪ ಪಡೆದಿದೆ. ಅಲ್ಲದೇ ಈ ಪ್ರತಿಭಟನೆ ಕಾವು ಹೆಚ್ಚುತ್ತಿದ್ದರು ಶಾಸಕ ಪ್ರದೀಪ ಈಶ್ವರ ಮೌನವಹಿಸಿರುವುದು ಹಲವು ಪ್ರಶ್ನೆಗನ್ನು ಸೃಷ್ಟಿಸಿದೆ.

ಕ್ಷಮೆ ಕೇಳದಿದ್ದರೆ ನಿವಾಸಕ್ಕೆ ಮುತ್ತಿಗೆ!

ಆಕ್ರೋಶದ ತೀವ್ರತೆ ಹೆಚ್ಚಾಗುತ್ತಿದ್ದು, ಶಾಸಕರು ಕ್ಷಮೆ ಕೇಳದಿದ್ದರೆ ಚಿಕ್ಕಬಳ್ಳಾಪುರದಲ್ಲಿರುವ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಮತ್ತು ಉತ್ತರ ಕರ್ನಾಟಕದಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲು ವಿವಿಧ ಸಂಘಟನೆಗಳು ತಂತ್ರ ರೂಪಿಸುತ್ತಿವೆ. ಈಗಾಗಲೇ ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ, ಜಾತಿ ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂಬ ಆರೋಪಗಳ ಬೆನ್ನಲ್ಲೇ, ಈಗ ಉತ್ತರ ಕರ್ನಾಟಕದ ಭಾಷಾ ವಿವಾದ ಶಾಸಕರಿಗೆ ಮತ್ತಷ್ಟು ರಾಜಕೀಯ ಸಂಕಷ್ಟ ತಂದಿಟ್ಟಿದೆ ಎನ್ನಲಾಗಿದೆ.