ನೈಸ್ ಸಂಸ್ಥೆಯು ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದೆ ಮೂಲ ವೆಚ್ಚಕ್ಕಿಂತ ಮೂರು ಪಟ್ಟು ಹೆಚ್ಚು (4,756 ಕೋಟಿ ರೂ.) ಟೋಲ್ ಸಂಗ್ರಹಿಸಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಹೈಕೋರ್ಟ್ ತೀರ್ಪಿನ ಅನ್ವಯ ತಕ್ಷಣವೇ ಟೋಲ್ ವಸೂಲಿಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ಬೆಂಗಳೂರು (ಅ.7): ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸ್ (ನೈಸ್ - NICE) ಸಂಸ್ಥೆಯು ಯೋಜನೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸದಿದ್ದರೂ, ಮೂಲ ಯೋಜನಾ ವೆಚ್ಚಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚು ಅಂದರೆ 4,756.48 ಕೋಟಿ ರೂಪಾಯಿಗಳನ್ನು ಟೋಲ್ ರೂಪದಲ್ಲಿ ಸಂಗ್ರಹಿಸಿದೆ ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ಆಧಾರದ ಮೇಲೆ ನೈಸ್ ರಸ್ತೆಯಲ್ಲಿ ತಕ್ಷಣವೇ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೆಂಗಳೂರಿನ ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ನೈಸ್ ಸಂಸ್ಥೆಯು ಮೂಲ ಒಪ್ಪಂದದ ಷರತ್ತುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದು, ನಿಯಮಗಳನ್ನು ಪಾಲಿಸದೆ ಕಾನೂನುಬಾಹಿರವಾಗಿ ಸಾರ್ವಜನಿಕರಿಂದ ಟೋಲ್ ವಸೂಲಿ ಮಾಡುತ್ತಿದೆ ಎಂದು ಸೂಕ್ತ ದಾಖಲೆಗಳೊಂದಿಗೆ ವಾಗ್ದಾಳಿ ನಡೆಸಿದರು.
ಯೋಜನಾ ವೆಚ್ಚಕ್ಕಿಂತ ಮೂರು ಪಟ್ಟು ಹೆಚ್ಚು ವಸೂಲಿ
"ನೈಸ್ ರಸ್ತೆ ಯೋಜನೆಯ ಮೂಲ ವೆಚ್ಚ 1,583.76 ಕೋಟಿ ರೂಪಾಯಿಗಳು ಮಾತ್ರ. ಆದರೆ ಕಂಪನಿಯು 2008 ರಿಂದ 2025ರ ವರೆಗೆ ಸಾರ್ವಜನಿಕರಿಂದ ಒಟ್ಟು 4,756.48 ಕೋಟಿ ರೂಪಾಯಿಗಳನ್ನು ಟೋಲ್ ರೂಪದಲ್ಲಿ ವಸೂಲಿ ಮಾಡಿದೆ. ಇದು ಮೂಲ ಯೋಜನಾ ವೆಚ್ಚಕ್ಕಿಂತ ಮೂರು ಪಟ್ಟು ಹೆಚ್ಚು" ಎಂದು ಕುಮಾರಸ್ವಾಮಿ ಅಂಕಿ-ಅಂಶಗಳನ್ನು ಬಿಚ್ಚಿಟ್ಟರು.
ಅವರು ನೀಡಿದ ಮಾಹಿತಿಯಂತೆ, 2008-09ರಲ್ಲಿ ವರ್ಷಕ್ಕೆ ಕೇವಲ 5.59 ಕೋಟಿ ರೂಪಾಯಿ ಇದ್ದ ಟೋಲ್ ಸಂಗ್ರಹವು, 2024-25ರ ವೇಳೆಗೆ ವರ್ಷಕ್ಕೆ ಭಾರಿ ಪ್ರಮಾಣದಲ್ಲಿ ಅಂದರೆ 734.97 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಒಪ್ಪಂದ ಮತ್ತು ನಿಯಮಗಳ ಘೋರ ಉಲ್ಲಂಘನೆ
ಸಚಿವರು ನೀಡಿದ ವಿವರಣೆಗಳ ಪ್ರಕಾರ, 2000ರ ಸೆಪ್ಟೆಂಬರ್ 4 ರಂದು ರಾಜ್ಯ ಲೋಕೋಪಯೋಗಿ ಇಲಾಖೆ (PWD) ಹಾಗೂ ನೈಸ್ ಸಂಸ್ಥೆಯ ನಡುವೆ 'ಟೋಲ್ ರಿಯಾಯಿತಿ ಒಪ್ಪಂದ' (TCA) ಸಹಿ ಮಾಡಲಾಗಿತ್ತು. ಈ ಒಪ್ಪಂದವು 1997ರ ಏಪ್ರಿಲ್ 3 ರಂದು ಮಾಡಿಕೊಳ್ಳಲಾಗಿದ್ದ 'ಫ್ರೇಮ್‌ವರ್ಕ್ ಒಪ್ಪಂದ'ಕ್ಕೆ (FWA) ಬದ್ಧವಾಗಿರಬೇಕಿತ್ತು.
ಅದರಂತೆ ಟೋಲ್ ಸಂಗ್ರಹ ಆರಂಭಿಸುವ ಮುನ್ನ ನಾಲ್ಕು ಪಥಗಳ ಕಾಂಕ್ರೀಟ್ ರಸ್ತೆ, ಸರ್ವಿಸ್ ರಸ್ತೆಗಳು ಹಾಗೂ ಅಗತ್ಯ ಮೂಲಸೌಕರ್ಯ ನಿರ್ವಹಣಾ ಪ್ರದೇಶಗಳನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿತ್ತು. ಆದರೆ 2008ರಲ್ಲಿ ಟೋಲ್ ವಸೂಲಿ ಆರಂಭಿಸಿದಾಗ ಈ ಯಾವುದೇ ಷರತ್ತುಗಳು ಪೂರ್ಣಗೊಂಡಿರಲಿಲ್ಲ. ಯೋಜನೆಯನ್ನು ಪೂರ್ಣಗೊಳಿಸದೆ, ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು ನೈಸ್ ಸಂಸ್ಥೆ ಅಕ್ರಮವಾಗಿ ಟೋಲ್ ಸಂಗ್ರಹಿಸುತ್ತಿದೆ ಎಂದು ಅವರು ಕಿಡಿಕಾರಿದರು.
ಕೆರೆಗಳ ಒತ್ತುವರಿ ಹಾಗೂ ಅನುಮತಿಯಿಲ್ಲದೆ ಬದಲಾದ ಅಲೈನ್ಮೆಂಟ್
ಎಚ್.ಟಿ. ಸೋಮಶೇಖರ ರೆಡ್ಡಿ ಪ್ರಕರಣವನ್ನು ಉಲ್ಲೇಖಿಸಿದ ಕುಮಾರಸ್ವಾಮಿ, ನೈಸ್ ಸಂಸ್ಥೆಯು ಸುಪ್ರೀಂ ಕೋರ್ಟ್ ಮುಂದೆ ಬಾಹ್ಯ ವರ್ತುಲ ರಸ್ತೆಗಾಗಿ (Peripheral Road) 2,193 ಎಕರೆ ಸೇರಿದಂತೆ ಒಟ್ಟು 6,999 ಎಕರೆ ಭೂಮಿಯನ್ನು ಕೋರಿತ್ತು. ಆದರೆ ಆ ಸಮಯದಲ್ಲಿ ಸಲ್ಲಿಸಲಾದ ಭೂ ವಿವರಗಳಲ್ಲಿ ಕೆರೆ ಪ್ರದೇಶಗಳನ್ನು ಸೇರಿಸಿರಲಿಲ್ಲ. 2021ರಲ್ಲಿ ಕಪಿಲ್ ಶರ್ಮಾ ಎಂಬ ಎಂಜಿನಿಯರ್ 'ದಿಶಾಂಕ್' (Dishaank) ಆಪ್ ಬಳಸಿ ಕೆರೆಗಳ ಮೇಲೆ ರಸ್ತೆ ನಿರ್ಮಿಸಿರುವುದನ್ನು ಪತ್ತೆಹಚ್ಚಿ ದೂರು ನೀಡಿದ್ದರು ಎಂಬುದನ್ನು ಸಚಿವರು ನೆನಪಿಸಿಕೊಂಡಿದ್ದಾರೆ.
ಅಲ್ಲದೆ, 2004ರ ಫೆಬ್ರವರಿ 12 ರಂದು ಔಟ್‌ಲೈನ್ ಡೆವಲಪ್‌ಮೆಂಟ್ ಪ್ಲಾನ್ (ODP) ಮೂಲಕ ಸಂಪುಟದ ಯಾವುದೇ ಅನುಮೋದನೆ ಪಡೆಯದೆ ಯೋಜನೆಯ ಅಲೈನ್ಮೆಂಟ್ (ಮಾರ್ಗ) ಬದಲಾಯಿಸಲಾಯಿತು. ಇದರಿಂದಾಗಿ ಪೆರಿಫೆರಲ್ ರಸ್ತೆಗೆ ನೀಡಲಾಗಿದ್ದ ಭೂಮಿ 2,193 ಎಕರೆಯಿಂದ 2,747 ಎಕರೆಗೆ ಹಾಗೂ ಒಟ್ಟು ಟೋಲ್ ರಸ್ತೆಯ ಭೂಮಿ 6,999 ಎಕರೆಯಿಂದ 9,468 ಎಕರೆಗೆ ಹೆಚ್ಚಳವಾಯಿತು ಎಂದು ಆರೋಪಿಸಿದರು. ಈ ಕುರಿತು ಜುಲೈ 29 ರಂದು ಹೈಕೋರ್ಟ್ ನೀಡಿದ ತೀರ್ಪಿನಲ್ಲಿಯೂ ಒಪ್ಪಂದದ ಅಕ್ರಮ ತಿದ್ದುಪಡಿ ಹಾಗೂ ಅಧಿಕಾರಿಗಳ ಪಾತ್ರವನ್ನು ತೀವ್ರವಾಗಿ ಟೀಕಿಸಲಾಗಿದೆ ಎಂದರು.
ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿಲ್ಲ - ತಕ್ಷಣ ಟೋಲ್ ನಿಲ್ಲಿಸಿ
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ನೈಸ್ ಸಂಸ್ಥೆಯು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜೆ ಅರ್ಜಿಯನ್ನು (SLP) ಸಲ್ಲಿಸಿದೆಯಾದರೂ, ಉನ್ನತ ನ್ಯಾಯಾಲಯವು ಹೈಕೋರ್ಟ್ ತೀರ್ಪಿಗೆ ಯಾವುದೇ ತಡೆಯಾಜ್ಞೆ (Stay) ನೀಡಿಲ್ಲ ಮತ್ತು ವಿಚಾರಣೆಯನ್ನು ನವೆಂಬರ್ 2ಕ್ಕೆ ಮುಂದೂಡಿದೆ. ಆದ್ದರಿಂದ ಹೈಕೋರ್ಟ್ ಆದೇಶ ಜಾರಿಯಲ್ಲಿದ್ದು, ತಕ್ಷಣವೇ ಟೋಲ್ ಸಂಗ್ರಹವನ್ನು ಬಂದ್ ಮಾಡಬೇಕು ಎಂದು ಹೇಳಿದ್ದಾರೆ.
2002ರ ನವೆಂಬರ್ 4 ರಂದು ಎಸ್.ಎಂ. ಕೃಷ್ಣ ಸರ್ಕಾರದ ಅವಧಿಯಲ್ಲಿ ತೆಗೆದುಕೊಂಡ ಸಚಿವ ಸಂಪುಟ ನಿರ್ಧಾರದಂತೆ, ಆರು ವರ್ಷಗಳ ಒಳಗೆ ನಾಲ್ಕು ಪಥದ ಕಾಂಕ್ರೀಟ್ ರಸ್ತೆ ಪೂರ್ಣಗೊಳಿಸದಿದ್ದರೆ ಟೋಲ್ ವಸೂಲಿಯನ್ನು ಹಿಂಪಡೆಯಬೇಕು ಎಂಬ ನಿಯಮವನ್ನೂ ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.
ಇತರ ಮೂಲಗಳಿಂದ ಕೋಟ್ಯಂತರ ರೂ. ಆದಾಯ ಗಳಿಕೆ
ಮೂಲ ಒಪ್ಪಂದಕ್ಕೆ ವಿರುದ್ಧವಾಗಿ ನೈಸ್ ಸಂಸ್ಥೆಯು ಇತರ ಮಾರ್ಗಗಳಿಂದಲೂ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಆದಾಯ ಗಳಿಸಿದೆ ಎಂದು ಸಚಿವರು ದೂರಿದರು.
ಭೂಮಿ ಮಾರಾಟ: ಭೂಮಿ ಮಾರಾಟದ ಮೂಲಕ ಸುಮಾರು 384 ಕೋಟಿ ರೂ. ಗಳಿಸಲಾಗಿದೆ.
ಜಂಟಿ ಅಭಿವೃದ್ಧಿ: ಜಂಟಿ ಭೂ ಅಭಿವೃದ್ಧಿ ಮತ್ತು ನಿರ್ಮಾಣ ಯೋಜನೆಗಳ ಮುಂಗಡವಾಗಿ 108 ಕೋಟಿ ರೂ. ಪಡೆಯಲಾಗಿದೆ.
ಸಾವಿರಾರು ಕೋಟಿ ಆದಾಯ: ಕನ್ವೆನ್ಷನ್ ಸೆಂಟರ್‌ಗಳಿಂದ 338 ಕೋಟಿ ರೂ. ಆದಾಯ ಗಳಿಸಲಾಗಿದೆ.
2016ರಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ನೇತೃತ್ವದ ಸದನ ಸಮಿತಿಯು ನೈಸ್ ಯೋಜನೆಯನ್ನು ಸರ್ಕಾರವೇ ವಶಕ್ಕೆ ಪಡೆಯಬೇಕು ಮತ್ತು ಹೆಚ್ಚುವರಿ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಶಿಫಾರಸು ಮಾಡಿತ್ತು. ಆದರೆ ಜಯಚಂದ್ರ ಅವರು 2023ರ ಆಗಸ್ಟ್‌ನಲ್ಲಿ ನೈಸ್ ರಸ್ತೆಯ ಅಗತ್ಯವೇ ಇಲ್ಲ ಎಂದಿದ್ದವರು, 2025ರ ಮೇ ತಿಂಗಳಿನಲ್ಲಿ ಯೋಜನೆಯನ್ನು ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು ಏಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. 'ಇನ್ನು 10 ವರ್ಷಗಳ ಕಾಲ ಟೋಲ್ ಸಂಗ್ರಹ ಮುಂದುವರಿಯುತ್ತದೆ ಎಂದು ಯಾವ ಆಧಾರದ ಮೇಲೆ ಹೇಳುತ್ತಿದ್ದಾರೆ? ಈ ಸಾರ್ವಜನಿಕ ಲೂಟಿ ಇನ್ನು ಮುಂದೆ ನಡೆಯಬಾರದು. ಕೋರ್ಟ್ ಆದೇಶ ಹಾಗೂ ಒಪ್ಪಂದದ ನಿಯಮಗಳ ಆಧಾರದ ಮೇಲೆ ರಾಜ್ಯ ಸರ್ಕಾರ ತಕ್ಷಣವೇ ಟೋಲ್ ಸಂಗ್ರಹವನ್ನು ತಡೆಹಿಡಿಯಬೇಕು" ಎಂದು ಕುಮಾರಸ್ವಾಮಿ ಒತ್ತಾಯಿಸಿದರು.


