ಬೆಂಗಳೂರಿನ ಇನ್‌ಫೆಂಟ್ರಿ ರಸ್ತೆಯ ಪೊಲೀಸ್ ಕಮಿಷನರ್ ಕಚೇರಿ ಮುಂಭಾಗ ಚಲಿಸುತ್ತಿದ್ದ ಟೊಯೋಟಾ ಕಾರಿನ ಇಂಜಿನ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಸಮಯಪ್ರಜ್ಞೆ ಮೆರೆದ ಚಾಲಕ ಶಬ್ಬೀರ್ ತಕ್ಷಣವೇ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಮತ್ತು ಪೊಲೀಸರ ಕಾರ್ಯಾಚರಣೆಯಿಂದ ಬೆಂಕಿ ನಂದಿಸಲಾಗಿದ್ದು, ದೊಡ್ಡ ದುರಂತ ತಪ್ಪಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೃದಯಭಾಗದಲ್ಲಿರುವ ಪೊಲೀಸ್ ಕಮಿಷನರ್ ಕಚೇರಿಯ ಮುಂಭಾಗದಲ್ಲೇ ಚಲಿಸುತ್ತಿದ್ದ ಕಾರೊಂದರ ಇಂಜಿನ್‌ನಲ್ಲಿ ದಿಢೀರನೆ ಭೀಕರ ಬೆಂಕಿ ಕಾಣಿಸಿಕೊಂಡು ಭಾಗಶಃ ಸುಟ್ಟು ಹೋದ ಘಟನೆ ಇನ್‌ಫೆಂಟ್ರಿ ರಸ್ತೆಯಲ್ಲಿ ನಡೆದಿದೆ. ಸಮಯಪ್ರಜ್ಞೆ ಮೆರೆದ ಚಾಲಕ ತಕ್ಷಣವೇ ಕಾರಿನಿಂದ ಕೆಳಗಿಳಿದ ಕಾರಣ ಯಾವುದೇ ರೀತಿಯ ಜೀವಾಪಾಯ ಸಂಭವಿಸದೆ ದೊಡ್ಡ ದುರಂತವೊಂದು ತಪ್ಪಿದೆ.

ಶಬ್ಬೀರ್ ಎಂಬುವವರು ತಮ್ಮ ಟೊಯೋಟಾ ಕಂಪನಿಯ 'ಟೈಸರ್' (Toyota Taisor) ಮಾಡೆಲ್ ಕೆಂಪು ಬಣ್ಣದ ಕಾರಿನಲ್ಲಿ ಇನ್‌ಫೆಂಟ್ರಿ ರಸ್ತೆಯ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದರು. ಕಾರಿನಲ್ಲಿ ಅವರು ಒಬ್ಬರೇ ಇದ್ದರು. ಕಮಿಷನರ್ ಕಚೇರಿ ಮುಂಭಾಗ ಬರುತ್ತಿದ್ದಂತೆ ಕಾರಿನ ಇಂಜಿನ್ ಭಾಗದಿಂದ ದಿಢೀರನೆ ದಟ್ಟ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿತು. ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಪಾಯವನ್ನು ಅರಿತ ಮಾಲೀಕ ಶಬ್ಬೀರ್, ತಡಮಾಡದೇ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ತಕ್ಷಣ ಕೆಳಗಿಳಿದು ಸಹಾಯಕ್ಕಾಗಿ ಕೇಳಿಕೊಂಡರು.

ಸ್ಥಳೀಯರು ಹಾಗೂ ಸಂಚಾರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ನಡುರಸ್ತೆಯಲ್ಲೇ ಕಾರು ಹೊತ್ತಿ ಉರಿಯುತ್ತಿದ್ದನ್ನು ಕಂಡ ತಕ್ಷಣವೇ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸ್ ಸಿಬ್ಬಂದಿ, ಸ್ಥಳೀಯ ಸಾರ್ವಜನಿಕರು ಹಾಗೂ ಸಮೀಪದಲ್ಲಿದ್ದ ಸ್ಪರ್ಶ್ ಆಸ್ಪತ್ರೆಯ ಸಿಬ್ಬಂದಿಗಳು ಧಾವಿಸಿ ಬಂದಿದ್ದಾರೆ. ಆಸ್ಪತ್ರೆ ಹಾಗೂ ಸುತ್ತಮುತ್ತಲ ಕಟ್ಟಡಗಳಲ್ಲಿ ಇದ್ದ 'ಫೈರ್ ಎಕ್ಸ್‌ಟಿಂಗುಷರ್' ಬಳಸಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದು ನಂದಿಸುವಲ್ಲಿ ಯಶಸ್ವಿಯಾದರು.

ಚಾಲಕ ಸುರಕ್ಷಿತ - ಇಂಜಿನ್ ಭಸ್ಮ:

ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸಿದ್ದರಿಂದ ಅಕ್ಕಪಕ್ಕದ ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ಅನಾಹುತ ಸಂಭವಿಸಿಲ್ಲ. ಈ ಬೆಂಕಿ ಅವಘಡದಲ್ಲಿ ಕಾರಿನ ಮುಂಭಾಗದ ಇಂಜಿನ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಭಾರೀ ಹಾನಿಯಾಗಿದೆ. ಇಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಅಥವಾ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸೌತ್ ಎಂಡ್ / ಕಂಟೋನ್ಮೆಂಟ್ ವ್ಯಾಪ್ತಿಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.