ಬೆಂಗಳೂರಿಗೆ ಬಂಪರ್ ಗಿಫ್ಟ್ ಮಾಗಡಿ ರಸ್ತೆ-ತಾವರೆಕೆರೆ ಮಾರ್ಗದಲ್ಲಿ ಮೆಟ್ರೋ ಸಂಪರ್ಕ ಕಲ್ಪಿಸುವ ಸಿದ್ಧತೆ ನಡೆಯುತ್ತಿದ್ದು, ಇದೇ ಮಾರ್ಗದಲ್ಲಿ ಡಬಲ್ ಡೆಕ್ಕರ್ ವ್ಯವಸ್ಥೆ ಜಾರಿಗೆ ತರುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ
ಬೆಂಗಳೂರು: ರಾಜಧಾನಿ ಬೆಂಗಳೂರಿನ ದಿನೇದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾಗಡಿ ರಸ್ತೆಯಿಂದ ತಾವರೆಕೆರೆವರೆಗೆ 'ನಮ್ಮ ಮೆಟ್ರೋ' ಹಾಗೂ 'ಡಬಲ್ ಡೆಕ್ಕರ್' ಸಾರಿಗೆ ಕಾರಿಡಾರ್ ನಿರ್ಮಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ
ಶುಕ್ರವಾರ ಲಗ್ಗೆರೆ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡ ಹಾಗೂ ಕಾವೇರಿ ಮಾತೆಯ ಕಂಚಿನ ಪ್ರತಿಮೆಗಳನ್ನು ಅನಾವರಣಗೊಳಿಸಿ, ನೂತನ ಕೆಂಪೇಗೌಡ ಸಭಾ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ನಗರದ ಮೂಲಸೌಕರ್ಯ, ಕುಡಿಯುವ ನೀರು, ಆಸ್ತಿ ದಾಖಲೆಗಳ ಸರಳೀಕರಣ ಹಾಗೂ ಸಮುದಾಯ ಸಂಸ್ಥೆಗಳ ಆರ್ಥಿಕ ನೆರವಿಗೆ ಸಂಬಂಧಿಸಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಮಾತನಾಡಿದರು.
ಮಾಗಡಿ ರಸ್ತೆ - ತಾವರೆಕೆರೆ ಡಬಲ್ ಡೆಕ್ಕರ್ ಮೆಟ್ರೋ ಯೋಜನೆ
ನಗರದ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಮೆಟ್ರೋ ಜಾಲ ವಿಸ್ತರಣೆ ಅನಿವಾರ್ಯವಾಗಿದೆ ಎಂದ ಡಿ.ಕೆ. ಶಿವಕುಮಾರ್, ಮಾಗಡಿ ರಸ್ತೆಯಿಂದ ತಾವರೆಕೆರೆವರೆಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ಇದೇ ಮಾರ್ಗದಲ್ಲಿ ಮೇಲ್ಸೇತುವೆ ಮತ್ತು ಮೆಟ್ರೋ ಒಳಗೊಂಡ ಡಬಲ್ ಡೆಕ್ಕರ್ ವ್ಯವಸ್ಥೆ ಜಾರಿಗೆ ತರುವ ಕುರಿತು ಪ್ರಧಾನಿ ಜೊತೆಗೆ ಚರ್ಚಿಸಲಾಗಿದೆ. ಸದ್ಯ ಅಧಿಕಾರಿಗಳ ಮಟ್ಟದಲ್ಲಿ ಈ ಬಗ್ಗೆ ಸಮಾಲೋಚನೆ ನಡೆಯುತ್ತಿದೆ" ಎಂದು ಮಾಹಿತಿ ನೀಡಿದರು.
ಟೌನ್ ಪ್ಲಾನಿಂಗ್ ಅಧ್ಯಯನಕ್ಕೆ ಜಪಾನ್ಗೆ ಡಿಕೆಶಿ ಪ್ರವಾಸ
ಬೆಂಗಳೂರಿನ ಭವಿಷ್ಯದ ನಗರಾಭಿವೃದ್ಧಿಗೆ ಅಂತಾರಾಷ್ಟ್ರೀಯ ಮಾದರಿಗಳನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ತಾವು ನಾಡಿದ್ದು ಮೂರು ದಿನಗಳ ಕಾಲ ಜಪಾನ್ ಪ್ರವಾಸ ಕೈಗೊಳ್ಳುತ್ತಿರುವುದಾಗಿ ಶಿವಕುಮಾರ್ ತಿಳಿಸಿದರು. ಜಪಾನ್ ಮತ್ತು ಟೋಕಿಯೋ ನಗರಗಳಲ್ಲಿ ನಗರ ಯೋಜನೆ ಹಾಗೂ ಸಾರಿಗೆ ವ್ಯವಸ್ಥೆಯನ್ನು ಯಾವ ರೀತಿ ವೈಜ್ಞಾನಿಕವಾಗಿ ರೂಪಿಸಲಾಗಿದೆ ಎಂಬುದನ್ನು ಅಧ್ಯಯನ ಮಾಡಿ, ಬೆಂಗಳೂರಿಗೆ ಸೂಕ್ತವಾದ ಮಾದರಿಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದರು.
‘ಬಿ’ ಖಾತಾದಿಂದ ‘ಎ’ ಖಾತಾ ಸೌಲಭ್ಯ ಹಾಗೂ ಕಾವೇರಿ 6ನೇ ಹಂತ
ಬೆಂಗಳೂರಿನ ಕುಡಿಯುವ ನೀರಿನ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಕಾವೇರಿ ನೀರು ಸರಬರಾಜು ಯೋಜನೆಯ 6ನೇ ಹಂತಕ್ಕೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದ್ದು, ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ರೆವಿನ್ಯೂ ಸೈಟ್ಗಳಲ್ಲಿ ಮನೆ ಕಟ್ಟಿಕೊಂಡು ತೊಂದರೆ ಅನುಭವಿಸುತ್ತಿರುವ ನಾಗರಿಕರಿಗೆ ನೆರವಾಗಲು 'ಭೂಮಿ ಗ್ಯಾರಂಟಿ' ಯೋಜನೆಯಡಿ ನಿಗದಿತ ಮೊತ್ತದ ಶೇ. 5ರಷ್ಟು ಶುಲ್ಕ ಪಾವತಿಸಿ, ಅರ್ಹ 'ಬಿ' ಖಾತಾ ಆಸ್ತಿಗಳನ್ನು 'ಎ' ಖಾತಾ ಹಾಗೂ 'ಇ-ಖಾತಾ' ಆಗಿ ಪರಿವರ್ತಿಸಿಕೊಳ್ಳಲು ಸರ್ಕಾರ ಐತಿಹಾಸಿಕ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು. ಗ್ರಾಮೀಣ ಭಾಗದಿಂದ ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಿಎಸ್ಆರ್ ನಿಧಿಯಡಿ ರಾಜ್ಯಾದ್ಯಂತ 1,000 ಸರ್ಕಾರಿ ಶಾಲೆಗಳನ್ನು ನಿರ್ಮಿಸುವ ಕೆಲಸ ಭರದಿಂದ ಸಾಗಿದೆ ಎಂದರು.
ವಿವಿಧ ಸಮುದಾಯ ಸಂಸ್ಥೆಗಳ ₹400 ಕೋಟಿ ಬಡ್ಡಿ ಮನ್ನಾ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವಿವಿಧ ಸಮುದಾಯಗಳ ಸಂಘ-ಸಂಸ್ಥೆಗಳು ಪಾವತಿಸಬೇಕಿದ್ದ ಸುಮಾರು ₹400 ಕೋಟಿ ಬಾಕಿ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಡಿಕೆಶಿ ಘೋಷಿಸಿದರು. ಒಕ್ಕಲಿಗರ ಸಂಘವು ಬಿಡಿಎಗೆ ₹93 ಕೋಟಿ ಬಾಕಿ ಉಳಿಸಿಕೊಂಡಿತ್ತು, ಅದರ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಇದು ಕೇವಲ ಒಂದೇ ಸಮುದಾಯಕ್ಕೆ ಸೀಮಿತವಲ್ಲ. ಕುರುಬ ಸಮುದಾಯ ಸೇರಿದಂತೆ ಎಲ್ಲಾ ಸಮಾಜಗಳ ಸಂಘ-ಸಂಸ್ಥೆಗಳ ಬಾಕಿ ಮೊತ್ತದ ಬಡ್ಡಿಯನ್ನು ಮನ್ನಾ ಮಾಡುವ ಮೂಲಕ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಸಮಾನ ಆದ್ಯತೆ ನೀಡಿದೆ ಎಂದು ಸ್ಪಷ್ಟಪಡಿಸಿದರು.
ಆರ್.ಆರ್. ನಗರ ಗೆಲುವಿನ ವಿಶ್ವಾಸ
ಕೆಂಪೇಗೌಡರು ಕೆರೆ-ಕಟ್ಟೆಗಳನ್ನು ಕಟ್ಟಿ, ನೀರು ಕೊಟ್ಟು ಆಧುನಿಕ ಬೆಂಗಳೂರನ್ನು ನಿರ್ಮಿಸಿದರು. ಇನ್ನು ಹತ್ತು ವರ್ಷ ಕಳೆದರೆ ಬೆಂಗಳೂರು ನಿರ್ಮಾಣವಾಗಿ 500 ವರ್ಷ ತುಂಬಲಿದೆ. ಕೆಂಪೇಗೌಡರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸದೆ, ವಿಶ್ವಮಾನವ ತತ್ವದಡಿ ಅವರ ದೂರದೃಷ್ಟಿಯನ್ನು ಮುಂದುವರಿಸಬೇಕು. ಗ್ರಾಮೀಣ ಭಾಗದಲ್ಲಿ ಮಠಗಳು ಶಿಕ್ಷಣ ನೀಡದಿದ್ದರೆ ಬೆಂಗಳೂರಿಗೆ ಇನ್ನಷ್ಟು ವಲಸೆ ಹೆಚ್ಚಾಗುತ್ತಿತ್ತು. ಹೀಗಾಗಿ ಮಠಗಳನ್ನು ನಮ್ಮ ಮನೆಯಂತೆ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ವೇಳೆ ರಾಜರಾಜೇಶ್ವರಿನಗರ ಕ್ಷೇತ್ರದ ರಾಜಕೀಯದ ಬಗ್ಗೆ ಮಾತನಾಡಿದ ಅವರು, ಈ ಕ್ಷೇತ್ರದೊಂದಿಗೆ ನನಗೆ ವಿದ್ಯಾರ್ಥಿ ದಿಸೆಯಿಂದಲೂ ನಂಟಿದೆ, ಹಿಂದೆ ಇಲ್ಲಿ ನಮ್ಮ ಕೋಳಿ ಫಾರಂ ಕೂಡ ಇತ್ತು. ಕಳೆದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಕುಸುಮಾ ಅವರು ಅತ್ಯಲ್ಪ ಅಂತರದಲ್ಲಿ ಸೋತಿದ್ದಾರೆ. ಅವರು ತೋರಿಸಿರುವ ಸರ್ವಿಸ್ ರಸ್ತೆ ಸೇರಿದಂತೆ ಕ್ಷೇತ್ರದ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ನಾನೇ ಮುಂದೆ ನಿಂತು ಮಾಡಿಕೊಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಸೂರ್ಯ-ಚಂದ್ರರಿರುವಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
















