ಔಟರ್ ರಿಂಗ್ ರೋಡ್ ಮೂಲಕ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಈ ಮಾರ್ಗದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ಪ್ರಾಯೋಗಿಕ ರೈಲು ಸಂಚಾರ ಆರಂಭಿಸಿದೆ. ನವೆಂಬರ್‌ 10ರಿಂದ ಬೈಯಪ್ಪನಹಳ್ಳಿ ಡಿಪೋದಿಂದ ದೊಡ್ಡನೆಕುಂಡಿ ನಿಲ್ದಾಣದವರೆಗೆ ಸುಮಾರು ಆರು ಕಿಲೋಮೀಟರ್‌ ದೂರ ಪರೀಕ್ಷಾರ್ಥ ರೈಲು ಸಂಚಾರ ಆರಂಭಿಸಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಜೀವನಾಡಿಯಾಗಿರುವ ‘ನಮ್ಮ ಮೆಟ್ರೋ’ ಜಾಲವು ಮತ್ತೊಂದು ಮಹತ್ವದ ವಿಸ್ತರಣೆಗೆ ಸಜ್ಜಾಗಿದೆ. ನಗರದ ಬಹುನಿರೀಕ್ಷಿತ ಗುಲಾಬಿ ಮಾರ್ಗ ಸಾರ್ವಜನಿಕರ ಸೇವೆಗೆ ಮುಕ್ತವಾದ ಬೆನ್ನಲ್ಲೇ, ಇದೀಗ ಹೊರ ವರ್ತುಲ ರಸ್ತೆ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ‘ಬ್ಲೂ ಲೈನ್’ (ನೀಲಿ ಮಾರ್ಗ) ನಲ್ಲೂ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಇದರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬ್ಲೂ ಲೈನ್ ಪ್ರಾಯೋಗಿಕ ಸಂಚಾರದ ವಿವರ:

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ನವೆಂಬರ್ 10ರಿಂದ ಬ್ಲೂ ಲೈನ್‌ನಲ್ಲಿ ಪ್ರಾಯೋಗಿಕ ಸಂಚಾರವನ್ನು ಪ್ರಾರಂಭಿಸಿದೆ. ಪರೀಕ್ಷಾರ್ಥ ರೈಲು ಬೈಯಪ್ಪನಹಳ್ಳಿ ಡಿಪೋದಿಂದ ಹೊರಟು ಕೆ.ಆರ್. ಪುರಂ ಮಾರ್ಗವಾಗಿ ದೊಡ್ಡನೆಕುಂಡಿ ನಿಲ್ದಾಣದವರೆಗೆ ಸುಮಾರು 6 ಕಿ.ಮೀ. ದೂರ ಮಾತ್ರ ಪರಿಕ್ಷಾರ್ಥ ಸಂಚಾರ ನಡೆಸುತ್ತಿದೆ. ಮುಂಬರುವ ದಿನಗಳಲ್ಲಿ ಈ ಪ್ರಾಯೋಗಿಕ ಸಂಚಾರವನ್ನು ಕೆ.ಆರ್. ಪುರಂ ಮೂಲಕ ಮಾರತ್ತಹಳ್ಳಿಯವರೆಗೆ ವಿಸ್ತರಿಸಲು ನಿಗಮ ಯೋಜಿಸಿದೆ. ಸದ್ಯ 4 ಸ್ಟೇಷನ್‌ನಲ್ಲಿ ಮಾತ್ರ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದೆ.

ಆದರೆ, ಈ ಮಾರ್ಗವು ಸಾರ್ವಜನಿಕರಿಗೆ ಮುಕ್ತವಾಗುವ ಮೊದಲು ಇನ್ನೂ ಕೆಲವು ತಾಂತ್ರಿಕ ದೋಷಗಳು, ಕಾಮಗಾರಿಗಳು ಪೂರ್ಣಗೊಳ್ಳಬೇಕಿದೆ. ಸುಮಾರು 2 ಕಿ.ಮೀ. ಉದ್ದದ ಹಳಿ ಅಳವಡಿಕೆ, ಕೆಲವು ನಿಲ್ದಾಣಗಳ ಅಂತಿಮ ಹಂತದ ಕಾಮಗಾರಿ , ಅತ್ಯಂತ ಪ್ರಮುಖವಾದ ಸಿಗ್ನಲಿಂಗ್ ಕಾಮಗಾರಿ ಪ್ರಕ್ರಿಯೆ ಬಾಕಿಯಿದೆ.

58.19 ಕಿ.ಮೀ. ಬ್ಲೂ ಲೈನ್ ವಿಶೇಷತೆ ಏನು?

ದಕ್ಷಿಣ ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಒಟ್ಟು 58.19 ಕಿ.ಮೀ. ಉದ್ದದ ಈ ಮೆಟ್ರೋ ಜಾಲವು ಒಟ್ಟು 29 ನಿಲ್ದಾಣಗಳೊಂದಿಗೆ ಎರಡು ಹಂತಗಳಲ್ಲಿ ನಿರ್ಮಾಣವಾಗುತ್ತಿದೆ.

ಹಂತ 2A: ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಕೆ.ಆರ್. ಪುರಂ ನಡುವಿನ 19.75 ಕಿ.ಮೀ. ಎತ್ತರಿಸಿದ ಮಾರ್ಗ. ಇದರಲ್ಲಿ ಒಟ್ಟು 13 ನಿಲ್ದಾಣಗಳು. ಐಟಿ ಕಂಪನಿಗಳ ತಾಣವಾದ ಓಟರ್‌ ರಿಂಗ್ ರೋಡ್‌ ನ ಟ್ರಾಫಿಕ್ ದಟ್ಟಣೆ ತಗ್ಗಿಸಲು ಇದು ಸಹಾಯಕವಾಗಲಿದೆ. ಇಲ್ಲಿ ಬರುವ 13 ಸ್ಟೇಷನ್ ಈ ಕೆಳಗಿನಂತಿದೆ. ಈ ಲೈನ್‌ನಲ್ಲೇ ಸದ್ಯಕ್ಕೆ ಪ್ರಾಯೋಗಿಕ ಸಂಚಾರ ನಡೆಯುತ್ತಿರುವುದು.

  1. ಸೆಂಟ್ರಲ್ ಸಿಲ್ಕ್ ಬೋರ್ಡ್ (ಹಳದಿ ಮಾರ್ಗ ಇಂಟರ್ಚೇಂಜ್)
  2. ಎಚ್‌ಎಸ್‌ಆರ್ ಲೇಔಟ್
  3. ಅಗರ ಕೆರೆ
  4. ಇಬ್ಬಲೂರು
  5. ಬೆಳ್ಳಂದೂರು
  6. ದೇವರಬೀಸನಹಳ್ಳಿ ( ಟೆಕ್ ವಿಲೇಜ್ )
  7. ಕಾಡುಬೀಸನಹಳ್ಳಿ
  8. ಮಾರತಹಳ್ಳಿ
  9. ಇಸ್ರೋ
  10. ದೊಡ್ಡನೆಕುಂಡಿ
  11. 1ಡಿಆರ್‌ಡಿಒ ಕ್ರೀಡಾ ಸಂಕೀರ್ಣ (ಬಾಗ್ಮನೆ ಡೆವಲಪರ್ಸ್)
  12. ಸರಸ್ವತಿ ನಗರ
  13. ಕೃಷ್ಣರಾಜಪುರ (ಕೆ.ಆರ್. ಪುರಂ ನೇರಳೆ ಮಾರ್ಗ ಇಂಟರ್ಚೇಂಜ್)

ಹಂತ 2B: ಕೆ.ಆರ್. ಪುರಂನಿಂದ ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 38.44 ಕಿ.ಮೀ. ಮಾರ್ಗ. ಇದು ಒಟ್ಟು 16 ನಿಲ್ದಾಣಗಳನ್ನು ಹೊಂದಿದೆ.

  1. ಕಸ್ತೂರಿ ನಗರ
  2. ಹೊರಮಾವು
  3. ಹೆಚ್‌ಆರ್‌ಬಿಆರ್ ಲೇಔಟ್
  4. ಕಲ್ಯಾಣ ನಗರ
  5. HBR ಲೇಔಟ್
  6. ನಾಗವಾರ (ಇಂಟರ್ಚೇಂಜ್: ಪಿಂಕ್ ಲೈನ್)
  7. ವೀರಣ್ಣಪಾಳ್ಯ
  8. ಕೆಂಪಾಪುರ
  9. ಹೆಬ್ಬಾಳ (ಹೆಬ್ಬಾಳ)
  10. ಕೊಡಿಗೆಹಳ್ಳಿ
  11. ಜಕ್ಕೂರು ಕ್ರಾಸ್
  12. ಯಲಹಂಕ
  13. ಬಾಗಲೂರು ಕ್ರಾಸ್
  14. ದೊಡ್ಡಜಾಲ
  15. ವಿಮಾನ ನಿಲ್ದಾಣ ನಗರ
  16. ಕೆಐಎಎಲ್ ಟರ್ಮಿನಲ್ಸ್

ಸದ್ಯದ ಯೋಜನೆಯ ಗುರಿಯ ಪ್ರಕಾರ, ಸೆಂಟ್ರಲ್ ಸಿಲ್ಕ್ ಬೋರ್ಡ್–ಕೆ.ಆರ್. ಪುರಂ ವಿಭಾಗವನ್ನು 2027ರ ಮಧ್ಯಭಾಗದಲ್ಲಿ ಮತ್ತು ಸಂಪೂರ್ಣ ವಿಮಾನ ನಿಲ್ದಾಣ ಮಾರ್ಗವನ್ನು ಮಾರ್ಚ್ 2028ರೊಳಗೆ ಸಾರ್ವಜನಿಕರಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಗುರಿ ಹೊಂದಿದೆ.