ಬೆಂಗಳೂರಿನಲ್ಲಿ ಟ್ರಾಫಿಕ್ ದಂಡವನ್ನು ವಿದ್ಯುತ್ ಬಿಲ್ ಜೊತೆ ಸೇರಿಸುವ ಬದಲು, ದಂಡ ಕಟ್ಟದ ವಾಹನಗಳನ್ನೇ ಜಪ್ತಿ ಮಾಡಲು ಸರ್ಕಾರ ನಿರ್ಧರಿಸಿದೆ. ಫುಟ್‌ಪಾತ್ ಮತ್ತು ಒನ್-ವೇ ಸಂಚಾರದ ದಂಡವನ್ನು 5,000 ರೂ.ಗೆ ಏರಿಸಲಾಗಿದೆ. ಅಲ್ಲದೆ, ನಗರದಲ್ಲಿ ಶೀಘ್ರದಲ್ಲೇ ಪ್ರತ್ಯೇಕ ಬಸ್ ಲೇನ್ ವ್ಯವಸ್ಥೆ ಮರಳಿ ಬರಲಿದೆ.

ಬೆಂಗಳೂರು (ಸೆ.30): ಬೆಂಗಳೂರಿನಲ್ಲಿ ಟ್ರಾಫಿಕ್ ಉಲ್ಲಂಘನೆ ದಂಡವನ್ನು ವಿದ್ಯುತ್ ಬಿಲ್ (Electricity Bill) ಜೊತೆಗೆ ಸೇರಿಸಿ ವಸೂಲಿ ಮಾಡುವ ಸುಪ್ರೀಂಕೋರ್ಟ್‌ನ ಸಲಹೆಯನ್ನು ರಾಜ್ಯದಲ್ಲಿ ಜಾರಿ ಮಾಡಲು ಸಾಧ್ಯವಿಲ್ಲ. ಇದರ ಬದಲಾಗಿ ದಂಡ ಕಟ್ಟದ ವಾಹನಗಳನ್ನೇ ಜಪ್ತಿ (Seize) ಮಾಡಲು ಕಠಿಣ ನಿಯಮ ರೂಪಿಸಲು ಹಾಗೂ ಬೆಂಗಳೂರಿನಲ್ಲಿ ಟ್ರಾಫಿಕ್ ಉಲ್ಲಂಘನೆ ದಂಡವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಹೇಳಿದರು.

ಬೆಂಗಳೂರು ನಗರದ ಟ್ರಾಫಿಕ್ ನಿರ್ವಹಣೆ ಹಾಗೂ ದಂಡ ವಸೂಲಾತಿಗೆ ಸಂಬಂಧಿಸಿದಂತೆ ವಿಕಾಸಸೌಧದಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಸಾರಿಗೆ ಮತ್ತು ಗೃಹ ಇಲಾಖೆಯ ಮಹತ್ವದ ಜಂಟಿ ಸಭೆ ನಡೆಯಿತು. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು.

ವಿದ್ಯುತ್ ಬಿಲ್ ಜೊತೆ ಟ್ರಾಫಿಕ್ ಫೈನ್ ಲಿಂಕ್ ಇಲ್ಲ, ಯಾಕೆ?

ಸಭೆಯ ಕುರಿತು ಮಾಹಿತಿ ನೀಡಿದ ಸಾರಿಗೆ ಸಚಿವರು, 'ರಾಜ್ಯದಲ್ಲಿ ಶೇ. 96ರಷ್ಟು ಜನರಿಗೆ (ಗೃಹಜ್ಯೋತಿ ಯೋಜನೆಯಡಿ) ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಹೀಗಿರುವಾಗ ವಿದ್ಯುತ್ ಬಿಲ್ ಜೊತೆ ಟ್ರಾಫಿಕ್ ಫೈನ್ ಸೇರಿಸಿ ವಸೂಲಿ ಮಾಡುವ ನಿಯಮ ನಮಗೆ ಅನ್ವಯ ಆಗುವುದಿಲ್ಲ, ಅದು ಸಾಧ್ಯವೂ ಇಲ್ಲ. ಆದ್ದರಿಂದ, ನಿಯಮ ಉಲ್ಲಂಘಿಸಿ ದಂಡ ಕಟ್ಟದಿದ್ದರೆ ನೇರವಾಗಿ ವಾಹನವನ್ನೇ ಸೀಜ್ ಮಾಡುವಂತಹ ಕಠಿಣ ರೂಲ್ಸ್ ಫ್ರೇಮ್ ಮಾಡಿ, ಅದನ್ನು ಜಾರಿಗೆ ತರುತ್ತೇವೆ' ಎಂದು ಎಚ್ಚರಿಕೆ ನೀಡಿದ್ದಾರೆ.

ಫುಟ್‌ಪಾತ್, ಒನ್-ವೇ ರೈಡಿಂಗ್‌ಗೆ 5,000 ರೂ. ದಂಡ!

ಟ್ರಾಫಿಕ್ ನಿಯಮ ಉಲ್ಲಂಘನೆಗೆ ಬ್ರೇಕ್ ಹಾಕಲು ಸಾರಿಗೆ ಮತ್ತು ಗೃಹ ಇಲಾಖೆ ಒಮ್ಮತದ ನಿರ್ಧಾರಕ್ಕೆ ಬಂದಿವೆ. 'ಒನ್-ವೇ (One way) ಯಲ್ಲಿ ನುಗ್ಗುವುದು ಹಾಗೂ ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರಿಗೆ ಈ ಮೊದಲು ಇದ್ದ 500 ರೂ. ದಂಡವನ್ನು 5,000 ರೂ. ಗಳಿಗೆ ಏರಿಕೆ ಮಾಡಲಾಗಿದೆ. ಕಠಿಣ ದಂಡದ ಮೂಲಕ ಉಲ್ಲಂಘನೆಗಳನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶ' ಎಂದು ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಬೆಂಗಳೂರಿಗೆ ಮತ್ತೆ ಮರಳಲಿದೆ 'ಬಸ್ ಲೇನ್'

ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಸಿಎಂ ಸುರಂಗ ಮಾರ್ಗ ಸೇರಿದಂತೆ ಹಲವು ಯೋಜನೆ ರೂಪಿಸುತ್ತಿದ್ದಾರೆ. ಸಾರಿಗೆ ಇಲಾಖೆಯಿಂದ ಶೀಘ್ರದಲ್ಲೇ 4,500 ಹೊಸ ಎಲೆಕ್ಟ್ರಿಕ್ ಬಸ್‌ಗಳು ರಸ್ತೆಗಿಳಿಯಲಿದ್ದು, ಇದರಿಂದ ವಾಹನ ದಟ್ಟಣೆ ಕಡಿಮೆಯಾಗಲಿದೆ. 'ಮೆಟ್ರೋ ಕಾಮಗಾರಿಗೂ ಮುನ್ನ ಬೆಂಗಳೂರಿನಲ್ಲಿ ಬಸ್ ಮತ್ತು ಆಂಬ್ಯುಲೆನ್ಸ್‌ಗಳ ಸಂಚಾರಕ್ಕೆಂದೇ ಪ್ರತ್ಯೇಕ 'ಬಸ್ ಲೇನ್' (Dedicated Bus Lane) ವ್ಯವಸ್ಥೆ ಇತ್ತು. ಆದರೆ ಮೆಟ್ರೋ ಕಾಮಗಾರಿಯಿಂದ ರಸ್ತೆಗಳು ಕಿರಿದಾದ ಕಾರಣ ಅದನ್ನು ರದ್ದು ಮಾಡಲಾಗಿತ್ತು. ಈಗ ಮೆಟ್ರೋ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿವೆ. ಹೀಗಾಗಿ ನಗರದಲ್ಲಿ ಮತ್ತೆ ಸಪರೇಟ್ ಬಸ್ ಲೇನ್ ವ್ಯವಸ್ಥೆಯನ್ನು ವಾಪಸ್ ತರಲಾಗುವುದು' ಎಂದು ಸಚಿವರು ಘೋಷಿಸಿದ್ದಾರೆ.

ಸತತ 2 ಗಂಟೆಗಳ ಕಾಲ ನಡೆದ ಈ ಮಹತ್ವದ ಸಭೆಯಲ್ಲಿ ಡಿಜಿ-ಐಜಿಪಿ ಡಾ.ಎಂ.ಎ. ಸಲೀಂ, ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಟ್ರಾಫಿಕ್ ಜಂಟಿ ಆಯುಕ್ತರು, ಡಿಸಿಪಿಗಳು ಸೇರಿದಂತೆ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಉಪಸ್ಥಿತರಿದ್ದರು.