ಬೆಂಗಳೂರಿನ ಬನಶಂಕರಿ ದೇವಾಲಯದ ಬಳಿ ಇದ್ದ 100 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನಿನ ಅಕ್ರಮ ಒತ್ತುವರಿಯನ್ನು ಜಿಬಿಎ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಈ ಜಾಗವನ್ನು ಜಿಬಿಎ ಕೇಂದ್ರ ಕಚೇರಿ ನಿರ್ಮಾಣಕ್ಕಾಗಿ ಸರ್ಕಾರ ಮಂಜೂರು ಮಾಡಿದ್ದು, ಅನಧಿಕೃತ ಶೆಡ್‌ಗಳನ್ನು ಜೆಸಿಬಿ ಮೂಲಕ ನೆಲಸಮ ಮಾಡಲಾಗಿದೆ.
ಬೆಂಗಳೂರು: ದಕ್ಷಿಣ ಪಾಲಿಕೆ ವ್ಯಾಪ್ತಿಯ ಸಾರಕ್ಕಿ ಗ್ರಾಮದ ಸರ್ವೆ ನಂಬರ್ 73ರಲ್ಲಿ ಅಂದಾಜು 100 ಕೋಟಿ ರು. ಮೌಲ್ಯದ 3 ಎಕರೆ 13 ಗುಂಟೆ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಡೆದಿದ್ದ ಒತ್ತುವರಿಯನ್ನು ಜಿಬಿಎ ಅಧಿಕಾರಿಗಳು ತೆರವುಗೊಳಿಸಿ ವಶಕ್ಕೆ ಪಡೆದಿದ್ದಾರೆ. ಸರ್ಕಾರ ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆಗೆ (ಹಣ್ಣು ಮತ್ತು ತರಕಾರಿಗಳ ವಿಭಾಗ - ಎಪಿಎಂಸಿ) ಮಂಜೂರಾತಿ ನೀಡಿದ್ದು, ಇದುವರೆಗೂ ಬಳಕೆಯಾಗದ ಹಿನ್ನೆಲೆಯಲ್ಲಿ ಈ ಮಂಜೂರಾತಿಯನ್ನು ರದ್ದುಪಡಿಸಿ, ಸೆ.3 ರಂದು ಈ ಜಮೀನನ್ನು ಜಿಬಿಎ ಕೇಂದ್ರ ಕಚೇರಿ ನಿರ್ಮಾಣಕ್ಕಾಗಿ ಮಂಜೂರು ಮಾಡಿತ್ತು.
ಈ ಹಿನ್ನೆಲೆಯಲ್ಲಿ ಮಂಗಳವಾರ ಪಾಲಿಕೆಯ ಆಯುಕ್ತರ ನಿರ್ದೇಶನದ ಮೇರೆಗೆ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮಹಾಂತೇಶ್ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿ ಪಾಲಿಕೆ ಜಾಗದಲ್ಲಿ ಉಂಟಾಗಿದ್ದ ಅನಧಿಕೃತ ಶೆಡ್ ಹಾಗೂ ಅಕ್ರಮ ಒತ್ತುವರಿಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಿದರು.
ಅಕ್ರಮ ಕಟ್ಟಡಗಳಿಗೆ ಜಾಗ ಖಾಲಿ ಮಾಡುವಂತೆ ಸೂಚನೆ
ಇದೆ ಸರ್ವೇ ನಂಬರ್‌ನ ಮತ್ತೊಂದು ಸ್ಥಳದಲ್ಲಿ ಅಕ್ರಮ ಕಟ್ಟಡ ನಿರ್ಮಿಸಿಕೊಂಡಿದ್ದ ವ್ಯಕ್ತಿಗಳಿಗೆ ಪಾಲಿಕೆಗೆ ಸೇರಿದ ಜಾಗವನ್ನು ತುರ್ತಾಗಿ ಖಾಲಿ ಮಾಡುವಂತೆ ಸೂಚನೆ ನೀಡಿದರು. ಇನ್ನು ಮುಂದೆ ಈ ಜಾಗವನ್ನು ಒತ್ತುವರಿ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಯುಕ್ತ ಕೆ.ಎನ್.ರಮೇಶ್ ಎಚ್ಚರಿಸಿದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತದಲ್ಲಿ (ಕೆಎಸ್‌ಟಿಡಿಸಿ) ಭ್ರಷ್ಟಾಚಾರ ನಡೆದಿದ್ದು, ಸರ್ಕಾರ ಕೂಡಲೇ ಕ್ರಮವಹಿಸಬೇಕು’ ಎಂದು ಕೆಎಸ್‌ಟಿಡಿಸಿ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಜಿ.ಆರ್.ಶಿವಶಂಕರ್ ಒತ್ತಾಯಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿಗಮದ ಗುತ್ತಿಗೆ ನೌಕರರೊಬ್ಬರಿಗೆ ನಿಯಮಬಾಹಿರವಾಗಿ 2 ಬಾರಿ ಬಡ್ತಿ ನೀಡಲಾಗಿದ್ದು, ಅವರು ನಿಗಮದ ಹೋಟೆಲ್‌ಗಳಿಗೆ ತಮಗೆ ಬೇಕಾದ ಸಿಬ್ಬಂದಿಯನ್ನು ನೇಮಿಸಿಕೊಂಡು ಅವ್ಯವಹಾರ ನಡೆಸಿದ್ದಾರೆ. ಅವರನ್ನು ಕೆಲಸದಿಂದ ವಜಾಗೊಳಿಸಿ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು’ ಎಂದರು.
ಹಲವು ವರ್ಷದಿಂದ ಕೆಲಸ ನಿರ್ವಹಿಸುತ್ತಿರುವ ಕಾಯಂ ನೌಕರರಿಗೆ ಬಡ್ತಿ ನೀಡಬೇಕು. ಗುತ್ತಿಗೆ ಆಧಾರದ ಮೇಲೆ ಹಲವು ವರ್ಷದಿಂದ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು. ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ನಾರಾಯಣ್, ಮುಖಂಡ ರಾಜು ಇದ್ದರು.


