ಕೇರಳದ ಪ್ರವಾಸಿ ಬಸ್‌ಗಳು ಕರ್ನಾಟಕದಲ್ಲಿ ಸಂಚರಿಸಲು ಆರ್‌ಟಿಒ ಅಧಿಕಾರಿಗಳಿಗೆ 'ಗೂಗಲ್ ಪೇ' ಮೂಲಕ ಭಾರಿ ಲಂಚ ನೀಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟವು ಸಾಕ್ಷ್ಯಾಧಾರಗಳೊಂದಿಗೆ ಸಾರಿಗೆ ಆಯುಕ್ತರಿಗೆ ದೂರು ನೀಡಿದ್ದು, ಲೋಕಾಯುಕ್ತ ತನಿಖೆಗೆ ಆಗ್ರಹಿಸಿದೆ.

ಬೆಂಗಳೂರು (ಅ,14): ಕೇರಳಂ ನೋಂದಾಯಿತ ಪ್ರವಾಸಿ ಬಸ್‌ಗಳು (Kerala-registered Tourist Buses) ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ, ಮೆಜೆಸ್ಟಿಕ್ ಹಾಗೂ ದೇವನಹಳ್ಳಿ ಸೇರಿದಂತೆ ಕರ್ನಾಟಕದ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸುಗಮವಾಗಿ ಸಂಚರಿಸಲು, ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿ (RTO) ಅಧಿಕಾರಿಗಳು ಹಾಗೂ ಮೋಟಾರು ವಾಹನ ನಿರೀಕ್ಷಕರಿಗೆ (IMV) ಮಾಸಿಕ ಆಧಾರದಲ್ಲಿ ಭಾರಿ ಪ್ರಮಾಣದ ಲಂಚ ನೀಡುತ್ತಿದ್ದಾರೆ. ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕರಾಳ ಹಫ್ತಾ ದಂದೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ 'ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ'ವು (Federation of Karnataka State Private Transport Association) ಸರ್ಕಾರವನ್ನು ಒತ್ತಾಯಿಸಿದೆ.

ಈ ಕುರಿತು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರಾದ ಆರ್‌. ಸೆಲ್ವಮಣಿ ಅವರಿಗೆ ಅಧಿಕೃತ ದೂರು ಸಲ್ಲಿಸಿರುವ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್‌. ನಟರಾಜ ಶರ್ಮಾ, ವಿವಿಧ ಬಸ್ ಮಾಲೀಕರಿಂದ ಬಂದಿರುವ ದೂರುಗಳು ಹಾಗೂ ಪಾವತಿಯ ಸಾಕ್ಷ್ಯಾಧಾರಗಳನ್ನು ಆಯುಕ್ತರ ಮುಂದಿಟ್ಟಿದ್ದಾರೆ.

'ಗೂಗಲ್ ಪೇ' ಮೂಲಕ ಹಫ್ತಾ ವಸೂಲಿ ಮಾಡ್ತಿದ್ದ ಗುರು

ದೂರಿನ ಅನ್ವಯ, ಆರ್‌ಟಿಒ ಅಧಿಕಾರಿಗಳು ಹಾಗೂ ಮೋಟಾರು ವಾಹನ ನಿರೀಕ್ಷಕರ (IMV) ಪರವಾಗಿ 'ಗುರು' ಎಂಬ ಮಧ್ಯವರ್ತಿಯೊಬ್ಬ (Intermediary) ಡಿಜಿಟಲ್ ಯುಪಿಐ ಹಾಗೂ 'ಗೂಗಲ್ ಪೇ' (Google Pay) ಮೂಲಕ ಪ್ರತಿಯೊಂದು ಬಸ್‌ನಿಂದ ಪ್ರತಿ ತಿಂಗಳು ನೇರವಾಗಿ ಲಂಚದ ಹಣವನ್ನು ಸಂಗ್ರಹಿಸುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ದೂರಿನಲ್ಲಿ ನೀಡಲಾಗಿರುವ ಪ್ರಮುಖ ಬಸ್ ಆಪರೇಟರ್‌ಗಳ ಲಂಚದ ವಿವರಗಳು

ದಿಯಾ ಟ್ರಾವೆಲ್ಸ್ ಮತ್ತು ಎಸ್ಎಫ್ಎಸ್ ಟ್ರಾವೆಲ್ಸ್: ಶ್ರೀರಾಜ್ ನಾಯರ್ ಎಂಬುವರು ತಮ್ಮ ಬಸ್‌ಗಳು ಕರ್ನಾಟಕದೊಳಗೆ ಅಡೆತಡೆಯಿಲ್ಲದೆ ಸಂಚರಿಸಲು ತಿಂಗಳಿಗೆ ₹26,000 ಲಂಚ ಪಾವತಿ ಮಾಡುತ್ತಿದ್ದ.

ಸೋನಾ ಟ್ರಾವೆಲ್ಸ್: ರಿಯಾಜ್ ಎಂಬುವರು ತಮ್ಮ ಪ್ರತಿಯೊಂದು ಬಸ್‌ಗೆ ಮಾಸಿಕ ಬರೋಬ್ಬರಿ ₹30,000 ದಷ್ಟು ಹಣವನ್ನು ಮಧ್ಯವರ್ತಿಗೆ ನೀಡುತ್ತಿದ್ದರು.

ಆದಿಲ್ ಸಿದ್ದಿಕ್ (ಆಪರೇಟರ್): ಅತ್ತಿಬೆಲೆ (Attibele) ಗಡಿಯನ್ನು ದಾಟಿ ಕರ್ನಾಟಕ ಪ್ರವೇಶಿಸಲು ಬಸ್‌ ಒಂದಕ್ಕೆ ಮಾಸಿಕ ₹16,000 ವನ್ನು 'ಗುರು' ಎಂಬ ಮಧ್ಯವರ್ತಿಗೆ ಗೂಗಲ್ ಪೇ ಮಾಡುತ್ತಿದ್ದರು.

'60:40 ಕಮಿಷನ್ ದಂಧೆ, ಸಿಕ್ಕಿದೆ ಆಡಿಯೋ ಸಾಕ್ಷಿ

ಬಸ್ ಆಪರೇಟರ್ ರಿಯಾಜ್ ನೀಡಿರುವ ಹೇಳಿಕೆಯ ಪ್ರಕಾರ, ಈ ವಸೂಲಾತಿಯು ಶೇಕಡಾ 60:40 ರ ಅನುಪಾತದಲ್ಲಿ ನಡೆಯುತ್ತಿತ್ತು. ಅಂದರೆ ಒಟ್ಟು ಮೊತ್ತದಲ್ಲಿ ಶೇ. 60 ರಷ್ಟು ಭಾಗವನ್ನು ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆಯೆಂದು ತೋರಿಸಿ, ಇನ್ನುಳಿದ ಶೇ. 40 ರಷ್ಟು ಮೊತ್ತವನ್ನು ಅಧಿಕಾರಿಗಳಿಗೆ ನೀಡುವ ಲಂಚವೆಂದು ನೇರವಾಗಿ ವಸೂಲಿ ಮಾಡಲಾಗುತ್ತಿತ್ತು. ಬಸ್ ಮಾಲೀಕರು ಲಂಚ ಪಾವತಿಸಿರುವ ಗೂಗಲ್ ಪೇ/ಯುಪಿಐ ಸ್ಕ್ರೀನ್‌ಶಾಟ್‌ಗಳು (Screenshots) ಹಾಗೂ ಅಧಿಕಾರಿಗಳ ಪರವಾಗಿ ಮಾತನಾಡಲಾಗಿರುವ ಆಡಿಯೋ ದಾಖಲೆಗಳನ್ನು (Audio Recordings) ಸಾಕ್ಷ್ಯವಾಗಿ ದೂರಿನೊಂದಿಗೆ ಲಗತ್ತಿಸಲಾಗಿದೆ.

ಲೋಕಾಯುಕ್ತ ತನಿಖೆಗೆ ಒಕ್ಕೂಟ ಪಟ್ಟು, ಎಲೆಕ್ಟ್ರಾನಿಕ್ ಸಾಕ್ಷ್ಯ ಸಂರಕ್ಷಣೆಗೆ ಆಗ್ರಹ

"ನಾವು ಈ ಆರೋಪಗಳನ್ನು ಯಾವುದೇ ತನಿಖೆಯಿಲ್ಲದೆ ತಕ್ಷಣವೇ ಸತ್ಯವೆಂದು ಪರಿಗಣಿಸಿ ಎಂದು ಹೇಳುತ್ತಿಲ್ಲ. ಬದಲಿಗೆ ಸಾರಿಗೆ ಇಲಾಖೆಯು ಈ ಕುರಿತು ತಕ್ಷಣವೇ ಪ್ರಾಥಮಿಕ ತನಿಖೆ (Preliminary Inquiry) ನಡೆಸಿ, ಎಲ್ಲಾ ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಸಂರಕ್ಷಿಸಬೇಕು" ಎಂದು ನಟರಾಜ ಶರ್ಮಾ ಅವರು ಒತ್ತಾಯಿಸಿದ್ದಾರೆ.

ಅಲ್ಲದೆ, ಇಲಾಖೆಯು ಅಧಿಕಾರಿಗಳ ಯುಪಿಐ ಮತ್ತು ಬ್ಯಾಂಕ್ ವಹಿವಾಟು ದಾಖಲೆಗಳು, ವಾಹನಗಳನ್ನು ಜಪ್ತಿ ಮಾಡಿದ ಹಾಗೂ ಬಿಡುಗಡೆ ಮಾಡಿದ ರಿಜಿಸ್ಟರ್‌ಗಳು, ತೆರಿಗೆ ಮೌಲ್ಯಮಾಪನ ಪತ್ರಗಳು ಮತ್ತು ನಿಗದಿತ ದಿನಗಳಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದ 'ಡ್ಯೂಟಿ ರೋಸ್ಟರ್'ಗಳನ್ನು (Duty Rosters) ಕೂಲಂಕಷವಾಗಿ ತನಿಖೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

"ನಾವು ಈ ದೂರು ಮತ್ತು ಸಾಕ್ಷ್ಯಾಧಾರಗಳನ್ನು ಶೀಘ್ರದಲ್ಲೇ 'ಕರ್ನಾಟಕ ಲೋಕಾಯುಕ್ತ'ಕ್ಕೂ (Lokayukta) ಹಸ್ತಾಂತರಿಸಲಿದ್ದೇವೆ. ಸಾರಿಗೆ ಇಲಾಖೆಯು ಪ್ರಕರಣದ ತನಿಖೆ ನಡೆಸುವುದಾಗಿ ನಮಗೆ ಭರವಸೆ ನೀಡಿದೆ" ಎಂದು ನಟರಾಜ ಶರ್ಮಾ ತಿಳಿಸಿದ್ದಾರೆ. ಆದರೆ ಈ ಸರಣಿ ಆರೋಪಗಳ ಕುರಿತು ಪ್ರತಿಕ್ರಿಯೆ ಪಡೆಯಲು ಸಾರಿಗೆ ಆಯುಕ್ತರು ಲಭ್ಯವಾಗಿಲ್ಲ.