ರಾಜ್ಯದಲ್ಲಿ ನಂದಿನಿ ಹಾಲಿನ ಬೆಲೆಯನ್ನು 8 ರಿಂದ 12 ರೂಪಾಯಿವರೆಗೆ ಏರಿಕೆ ಮಾಡಲಾಗಿದ್ದು, ರೈತರ ಹೆಸರಿನಲ್ಲಿ KMF ಗ್ರಾಹಕರಿಗೆ ಬರೆ ಎಳೆಯುತ್ತಿದೆ. ತಮಿಳುನಾಡು ಸರ್ಕಾರವು ರೈತರಿಗೆ ಹೆಚ್ಚಿನ ಹಣ ನೀಡಿ ಕಡಿಮೆ ಬೆಲೆಗೆ ಹಾಲು ಮಾರಾಟ ಮಾಡುತ್ತಿದ್ದರೆ, ಕರ್ನಾಟಕ ಸರ್ಕಾರ ಮಾತ್ರ ಹೊರೆ ಹಾಕುತ್ತಿದೆ.
ಬೆಂಗಳೂರು (ಅ.31): ಬರದ ಸಮಯದಲ್ಲಿ ರೈತರಿಗೆ ಸಹಾಯ ಅನ್ನೋ ನಿಟ್ಟಿನಲ್ಲಿ ಸಾಮಾನ್ಯ ಜನರ ಮೇಲೆ ರಾಜ್ಯ ಸರ್ಕಾರ ಬರೆ ಎಳೆಯಲು ಸಿದ್ದವಾಗಿದೆ. ನಾಳೆಯಿಂದ ರಾಜ್ಯದಲ್ಲಿ ಹಾಲಿನ ಬೆಲೆ 8 ರೂಪಾಯಿ ಏರಿಕೆಯಾಗಲಿದೆ. ಇದರಲ್ಲಿ 7 ರೂಪಾಯಿಯನ್ನು ರೈತರಿಗೆ ನೀಡ್ತಿರೋದಾಗಿ ಸರ್ಕಾರ ಹೇಳಿಕೊಂಡಿದೆ. ಇದರ ವಿರುದ್ಧ ಜನರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ದಿನದಿಂದ ಇಲ್ಲಿಯವರೆಗೆ ಲೀಟರ್ ಹಾಲಿನ ಬೆಲೆಯಲ್ಲಿ ಬರೋಬ್ಬರಿ 17 ರೂಪಾಯಿ ಏರಿಕೆ ಮಾಡಿದ್ದು, ಇದಕ್ಕೆ ರೈತರ ಸಹಾಯ ಎನ್ನುವ ಮುಲಾಮನ್ನು ಗ್ರಾಹಕರಿಗೆ ಹಾಕುತ್ತಿದೆ. ಆದರೆ, ರೈತರ ಹೆಸರಿನಲ್ಲಿ ಕೆಎಂಎಫ್ ಮಾಡ್ತಿರುವ ದೋಖಾ ಮಾತ್ರ ಯಾರಿಗೂ ಗೊತ್ತಾಗ್ತಿಲ್ಲ.
ಹೌದು ಅತೀ ಕಡಿಮೆ ಅಂದರೆ 8 ರೂಪಾಯಿ ಏರಿಕೆಯಾಗಿರುವುದು ನಂದಿನಿ ಬ್ಲ್ಯೂ ಪಾಕೆಟ್ ಹಾಲಿನ ಲೀಟರ್ಗೆ ಮಾತ್ರ. ಉಳಿದಂತೆ, ಸ್ಪೆಷಲ್ ಟೋನ್ಡ್ ಮಿಲ್ಕ್, ಶುಭಂ ಹಾಲು, ಹೋಮೋಜೆನೆಯ್ಡ್ ಶುಭಂ ಹಾಲಿನ ಲೀಟರ್ಗೆ ಬರೋಬ್ಬರಿ 12 ರೂಪಾಯಿ ಏರಿಕೆಯಾಗಿದೆ. ಈ ಹಾಲುಗಳ ಮಾರಾಟದಿಂದ ಬರುವ ಹೆಚ್ಚುವರಿ 5 ರೂಪಾಯಿ ನೇರವಾಗಿ ಕೆಎಂಎಫ್ ಪಾಲಾಗಲಿದೆ. ಉಳಿದಂತೆ 1 ಕೆಜಿ ಮೊಸರಿನ ಪ್ಯಾಕೇಟ್ ಮೇಲೆ 14 ರೂಪಾಯಿ, ಅರ್ಧ ಲೀಟರ್ ಮೊಸರಿನ ಪ್ಯಾಕೆಟ್ ಮೇಲೆ 6 ರೂಪಾಯಿ ಏರಿಕೆ ಮಾಡಿ ಬರೆ ಎಳೆದಿದೆ. ಈ ಏರಿಕೆಯ ಹಣ ಕೂಡ ಕೆಎಂಎಫ್ನ ಬಿಳಿ ಆನೆಗಳಿಗೆ ಸೇರುತ್ತದೆ.
ತಮಿಳುನಾಡಿನಿಂದ ಕಲಿತುಕೊಳ್ಳಿ, ತಪ್ಪೇನಿಲ್ಲ
ರಾಜ್ಯ ಸರ್ಕಾರ ಬೆಲೆ ಏರಿಕೆಗೆ ಸಾಕಷ್ಟು ಕಾರಣಗಳನ್ನು ನೀಡಿದೆ. ಬೇರೆ ರಾಜ್ಯಗಳಲ್ಲಿ ಹಾಲಿನ ಬೆರೆ ನಮಗಿಂತ ಹೆಚ್ಚಿದೆ ಎದು ಹೇಳುತ್ತಿದೆ. ಹಾಗಂತ ಹೇಳುವ ರಾಜ್ಯ ಸರ್ಕಾರ ಅದಕ್ಕೆ ಉದಾಹರಣೆಯಾಗಿ ರಾಜಸ್ಥಾನ ಹಾಗೂ ಗುಜರಾತ್ ರಾಜ್ಯವನ್ನು ಹೇಳುತ್ತದೆಯಾದರೂ, ತನ್ನ ಬಹುಪಾಲು ಗಡಿಯನ್ನು ಹಂಚಿಕೊಂಡಿರುವ ಪಕ್ಕದ ತಮಿಳುನಾಡು ರಾಜ್ಯದ ಉದಾಹರಣೆಯನ್ನು ತೆಗೆದುಕೊಳ್ಳೋದಿಲ್ಲ.
ತಮಿಳುನಾಡು ರಾಜ್ಯದ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ರಾಜ್ಯದಲ್ಲಿ ಕೆಎಂಎಫ್ ಇರುವಂತೆ ತಮಿಳುನಾಡಲ್ಲಿ ತಮಿಳುನಾಡು ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಇದೆ. ಆವಿನ್ (Aavin) ಅನ್ನೋ ಬ್ರ್ಯಾಂಡ್ನಲ್ಲಿ ಇದು ಹಾಲು ಮಾರಾಟ ಮಾಡುತ್ತದೆ. ಅಲ್ಲಿ ಟೋನ್ಡ್ ಹಾಲು ಅಂದರೆ ನಂದಿನಿಯ ಬ್ಲ್ಯೂಪಾಕೆಟ್ ರೀತಿಯ ಹಾಲಿನ ಅರ್ಧ ಲೀಟರ್ಗೆ 20 ರೂಪಾಯಿ ಹಾಗೂ ಒಂದು ಲೀಟರ್ಗೆ 40 ರೂಪಾಯಿ ಬೆಲೆ ಇದೆ. ಅದೂ ಇತ್ತೀಚಿನ ಬೆಲೆ ಏರಿಕೆಯ ಬಳಿಕ ಆಗಿರುವುದು. ಅದರೊಂದಿಗೆ ಗ್ರೀನ್ ಮ್ಯಾಜಿಕ್ಗೆ ಅರ್ಧ ಲೀಟರ್ಗೆ 22 ರೂಪಾಯಿ, ಆವಿನ್ ಪ್ರೀಮಿಯಂ ಫುಲ್ ಕ್ರೀಮ್ ಮಿಲ್ಕ್ ಅರ್ಧ ಲೀಟರ್ಗ 30 ರೂಪಾಯಿ ಬೆಲೆ ಇದೆ.
ಖರೀದಿ ಮಾಡುವ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಹಾಲು ಮಾರಾಟ
ಹಾಗಂತ ಹಾಲು ಉತ್ಪಾದಕರಿಗೇನೂ ತಮಿಳುನಾಡು ಸರ್ಕಾರ ಕಡಿಮೆ ಬೆಲೆಯನ್ನು ನೀಡುತ್ತಿಲ್ಲ. ಹಸುವಿನ ಹಾಲಿಗೆ ಲೀಟರ್ಗೆ 44 ರೂಪಾಯಿ, ಎಮ್ಮೆ ಹಾಲಿಗೆ 53 ರೂಪಾಯಿ ನೀಡುತ್ತಿದೆ. ಇದರರ್ಥ ಹಾಲು ಖರೀದಿ ಮಾಡುವ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಸರ್ಕಾರ ಅದನ್ನು ಗ್ರಾಹಕರಿಗೆ ನೀಡುತ್ತಿದೆ.
ರಾಜ್ಯದಲ್ಲಿ ಇರುವಂತೆ ಅಲ್ಲಿಯೂ ಸಮಸ್ಯೆ ಇದೆ. ಈ ಬಾರಿ ಮಳೆಯಾಗಿಲ್ಲ. ತನ್ನ ಕೃಷಿಗಾಗಿ ಬಹುತೇಕ ಕಾವೇರಿ ನೀರನ್ನೇ ನೆಚ್ಚಿಕೊಳ್ಳುತ್ತದೆ. ಜಾನುವಾರು ಮೇವುಗಳಿಗೆ ಕೊರತೆ ಇದೆ. ಅದರ ಬೆಲೆಗಳು ಅಲ್ಲಿಯೂ ಜಾಸ್ತಿ ಆಗಿದೆ. ಆದರೆ, ಇದರ ಹೊರೆಯನ್ನು ಅಲ್ಲಿನ ಸರ್ಕಾರವೇ ಹೊತ್ತುಕೊಂಡಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನವನ್ನು ಕಾಲಕಾಲಕ್ಕೆ ಏರಿಕೆ ಮಾಡಿದ್ದರೂ, ಹಾಲಿನ ಬೆಲೆಯನ್ನು ಬಹುತೇಕವಾಗಿ ಗ್ರಾಹಕರಿಗೆ ಹೊರೆಯಾಗದಂತೆ ಇರಿಸಿದೆ. ಪೆಟ್ರೋಲ್, ಡೀಸೆಲ್ ಬೆಲೆಗಳು ಅಲ್ಲೂ ಏರಿಕೆಯಾಗಿವೆ. ಸಾರಿಗೆ ವೆಚ್ಚ, ಟೋಲ್ ಚಾರ್ಜ್ಗಳೂ ಅಲ್ಲೂ ಜಾಸ್ತಿಯಾಗಿವೆ. ಕೆಎಂಎಫ್ನಂತೆ ಆವಿನ್ ಹಾಲುಗಳು ಕೂಡ ಪ್ಲಾಸ್ಟಿಕ್ ಚೀಲದಲ್ಲೇ ಬರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕ ರಾಜ್ಯಕ್ಕಿಂತ ಹೆಚ್ಚಿನ ಸಾಲ ತಮಿಳುನಾಡಿಗೆ ಇದೆ. ಇಷ್ಟೆಲ್ಲ ಇದ್ದರೂ, ಜನಸಾಮಾನ್ಯರ ಬದುಕು ಹಾಳಾಗಬಾರದು ಎನ್ನುವ ನಿಟ್ಟಿನಲ್ಲಿ ಹಾಲಿನಂಥ ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯನ್ನು ಹೆಚ್ಚಾಗಿ ಏರಿಕೆ ಮಾಡುವ ಗೋಜಿಗೆ ಹೋಗೋದಿಲ್ಲ. ಆದರೆ, ದಪ್ಪ ಚರ್ಮದ ಕರ್ನಾಟಕ ಸರ್ಕಾರಕ್ಕೆ ಇದ್ಯಾವುದೂ ಬೇಕಾಗಿಯೂ ಇಲ್ಲ.
ಸರ್ಕಾರಿ ಸ್ವಾಮ್ಯದ ಸಹಕಾರಿ ಸಂಸ್ಥೆಯಾದ 'ಆವಿನ್' (Aavin), ಭಾರೀ ಸರ್ಕಾರಿ ಸಹಾಯಧನಗಳು, ಹಾಲಿನ ಸಂಯೋಜನೆಯಲ್ಲಿನ ಬದಲಾವಣೆಗಳು ಮತ್ತು ಹೆಚ್ಚಿನ ಲಾಭಾಂಶ ನೀಡುವ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯವನ್ನು ಇತರ ಉತ್ಪನ್ನಗಳಿಗೆ ಸಬ್ಸಿಡಿಯಾಗಿ ಬಳಸುವ ವಿಧಾನಗಳ ಮೂಲಕ ಬೆಲೆಗಳ ಅಂತರವನ್ನು ನಿಭಾಯಿಸುತ್ತದೆ. ಉಪ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯವನ್ನು ಹಾಲಿನ ಮಾರಾಟದಿಂದ ಆದ ನಷ್ಟಕ್ಕೆ ಹೊಂದಿಸಿಕೊಳ್ಳುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕ ಹಾಲಿನ ಸಮೃದ್ಧ ರಾಜ್ಯ. ಕೆಎಂಎಫ್ನ ಅಧಿಕಾರಿಗಳು ಉದಾಹರಣೆ ನೀಡುವ ರಾಜಸ್ಥಾನದಂತೆ, ಹಾಲಿನ ಅಭಾವ ಇರುವ ರಾಜ್ಯವಲ್ಲ. ರಾಜಸ್ಥಾನದಂಥ ರಾಜ್ಯಗಳು ತನ್ನ ದಿನನಿತ್ಯದ ಹಾಲನ್ನು ಬೇರೆ ರಾಜ್ಯದಿಂದ ಖರೀದಿ ಮಾಡುವ ಕಾರಣ ಅಲ್ಲಿ ಬೆಲೆ ಹೆಚ್ಚಿರುವ ಸಾಮಾನ್ಯ. ಒಟ್ಟಾರೆಯಾಗಿ ಕೆಎಂಎಫ್ ತನ್ನ ಬಿಳಿ ಆನೆಯ ಅಧಿಕಾರಿಳನ್ನು ಸಾಕಲು ಬಡಜನರ ಹೊಟ್ಟೆಮೇಲೆ ಹೊಡೆಯುತ್ತಿರುವುದಂತೂ ಈ ಬೆಲೆ ಎರಿಕೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.






