ರಾಜ್ಯದಲ್ಲಿ ಕನ್ನಡ ಅನುಷ್ಠಾನಕ್ಕೆ ಜಾರಿಗೆ ತರಲಾಗಿದ್ದ ಎರಡು ಕಾಯ್ದೆಗಳನ್ನು ರದ್ದುಗೊಳಿಸಿ ಸಮಗ್ರವಾದ ಕಾನೂನನ್ನು ಒಳಗೊಂಡ  ಮಹತ್ವದ ವಿಧೇಯಕವನ್ನು ಸರ್ಕಾರ ರೂಪಿಸಿದೆ.

ಕನ್ನಡಪ್ರಭ ವಾರ್ತೆ ವಿಧಾನಸಭೆ

ಬೆಂಗಳೂರು: ಶಾಲಾ ಶಿಕ್ಷಣದಂತೆ ಉನ್ನತ, ತಾಂತ್ರಿಕ ಮತ್ತು ವೃತ್ತಿ ಶಿಕ್ಷಣದಲ್ಲೂ ಒಂದು ಭಾಷೆಯಾಗಿ ಕನ್ನಡ ಕಲಿಕೆ, ಸರ್ಕಾರಿ ಉದ್ಯೋಗಗಳಲ್ಲಿ ಕನ್ನಡ ಅವಶ್ಯಕ ಭಾಷೆಯಾಗಿ ಪರಿಗಣನೆ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡದ ಕೈಗಾರಿಕೆಗಳಿಗೆ ಸರ್ಕಾರಿ ಸೌಲಭ್ಯಗಳ ಹಕ್ಕು ಮೊಟಕು, ಅಧೀನ ನ್ಯಾಯಾಲಯಗಳು, ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ಸೇರಿದಂತೆ ಎಲ್ಲ ಹಂತಗಳಲ್ಲಿ ಕನ್ನಡ ರಾಜ್ಯದ ಅಧಿಕೃತ ಭಾಷೆಯಾಗಿ ಕಟ್ಟುನಿಟ್ಟಿನ ಅನುಷ್ಠಾನ... ಈ ಅಂಶಗಳಿಗೆ ಅಗತ್ಯ ಶಾಸನಾತ್ಮಕ ಬಲ ತಂದುಕೊಡುವ 'ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022'ಕ್ಕೆ ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.

ರಾಜ್ಯದಲ್ಲಿ ಕನ್ನಡ ಅನುಷ್ಠಾನಕ್ಕೆ ಜಾರಿಗೆ ತರಲಾಗಿದ್ದ ಎರಡು ಕಾಯ್ದೆಗಳನ್ನು ರದ್ದುಗೊಳಿಸಿ ಸಮಗ್ರವಾದ ಕಾನೂನನ್ನು ಒಳಗೊಂಡ ಈ ಮಹತ್ವದ ವಿಧೇಯಕವನ್ನು ಸರ್ಕಾರ ರೂಪಿಸಿದೆ. ಕಳೆದ ಬೆಳಗಾವಿ ಅಧಿವೇಶನದಲ್ಲೇ ಮಂಡಿಸಲಾಗಿದ್ದ ವಿಧೇಯಕವನ್ನು ಪ್ರಸಕ್ತ ಬಜೆಟ್‌ ಅಧಿವೇಶನದಲ್ಲಿ ಪರ್ಯಾಲೋಚಿಸಿ ಅಂಗೀಕರಿಸಲು ಸೂಚಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ (V. Sunil Kumar) ಅವರು ಯಾವ ಉದ್ದೇಶಕ್ಕೆ ಈ ವಿಧೇಯಕ ತರಲಾಗಿದೆ ಎಂದು ವಿವರಿಸಿದರು. ಬಳಿಕ ಧ್ವನಿಮತದ ಮೂಲಕ ವಿಧೇಯಕಕ್ಕೆ ಸದನದ ಅನುಮೋದನೆ ದೊರೆಯಿತು. ಈ ವಿಧೇಯಕಕ್ಕೆ ವಿಧಾನ ಪರಿಷತ್‌ನಲ್ಲೂ ಅಂಗೀಕಾರ ದೊರೆತು ರಾಜ್ಯಪಾಲರ ಅಂಕಿತ ದೊರೆತರೆ ಅಧಿಕೃತವಾಗಿ ಜಾರಿಗೆ ಬರಲಿದೆ.

ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವೆ: ಬಿ.ಎಸ್‌.ಯಡಿಯೂರಪ್ಪ

ಕನ್ನಡ ಭಾಷೆ ಕಾಯ್ದೆ (Kannada Language Act) ಅನುಷ್ಠಾನಕ್ಕೆ ಓರ್ವ ಮೇಲ್ವಿಚಾರಣಾ ಅಧಿಕಾರಿಯನ್ನು ನೇಮಿಸಲಾಗುವುದು. ಆಡಳಿತದಲ್ಲಿ ಕನ್ನಡ ಜಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವುದು ಸೇರಿದಂತೆ ಶಿಸ್ತು ಕ್ರಮಗಳ ಅನುಷ್ಠಾನಕ್ಕಾಗಿ ವಿವಿಧ ಹಂತಗಳಲ್ಲಿ ಜಾರಿ ಪ್ರಾಧಿಕಾರ ರಚನೆ ಮಾಡುವುದಕ್ಕೆ ಈ ವಿಧೇಯಕದ ಮೂಲಕ ಅವಕಾಶ ನೀಡಲಾಗಿದೆ. ಮುಖ್ಯವಾಗಿ ರಾಜ್ಯದಲ್ಲಿ ಭೂಮಿ, ತೆರಿಗೆ ರಿಯಾಯಿತಿ, ಅನುದಾನ ಹಾಗೂ ಇತರೆ ಸೌಲಭ್ಯ ಪಡೆಯುತ್ತಿರುವ ಕೈಗಾರಿಕೆಗಳು, ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡುವ ಮೇಲ್ವಿಚಾರಣೆಗೂ ಈ ವಿಧೇಯಕ ಬಲ ನೀಡಲಿದೆ.

ವಿಧೇಯಕದ ಮುಖ್ಯಾಂಶಗಳು:

ಈಗಾಗಲೇ ಶಾಲಾ ಶಿಕ್ಷಣದಲ್ಲಿ ಇರುವಂತೆ ಉನ್ನತ, ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಪರಿಚಯಿಸಿ ಕನ್ನಡ ಕಲಿಕೆಗೆ ಪ್ರೋತ್ಸಾಹಿಸುವುದು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉನ್ನತ, ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣದಲ್ಲಿ ಮೀಸಲು ಸೌಲಭ್ಯ ಕಲ್ಪಿಸುವುದು. ರಾಜ್ಯ ಸರ್ಕಾರ, ಸ್ಥಳೀಯ ಪ್ರಾಧಿಕಾರ, ಶಾಸನಬದ್ಧ ಸಂಸ್ಥೆಗಳು, ಸಹಕಾರ ಸಂಘಗಳ ನೇಮಕ ಪ್ರಕ್ರಿಯೆಯಲ್ಲಿ ಕನ್ನಡ ಭಾಷಾ ಜ್ಞಾನ ಕಡ್ಡಾಯಗೊಳಿಸುವುದು. ಅಧೀನ ನ್ಯಾಯಾಲಯ ಹಾಗೂ ನ್ಯಾಯಾಧಿಕರಣಗಳು, ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳಲ್ಲಿ ಕನ್ನಡ ಭಾಷಾ ಬಳಕೆ, ಕನ್ನಡ ಭಾಷೆಯ ವ್ಯಾಪಕ ಬಳಕೆ ಮತ್ತು ಪ್ರಚಾರಕ್ಕೆ ಕ್ರಮಗಳನ್ನು ತೆಗೆದುಕೊಳ್ಳುವುದು. ಮಾಹಿತಿ ತಂತ್ರಜ್ಞಾನ ಮತ್ತು ತಂತ್ರಾಂಶದಲ್ಲಿ ಕನ್ನಡ ಬಳಕೆಗೆ ಕ್ರಮ. ರಾಜ್ಯ ಸರ್ಕಾರದಿಂದ ಕೈಗಾರಿಕಾ ನೀತಿಯ ಅನುಸಾರ ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಎಲ್ಲ ಕೈಗಾರಿಕೆಗಳಿಗೆ ಮಾತ್ರ ಸರ್ಕಾರದ ತೆರಿಗೆ ರಿಯಾಯಿತಿ, ಮುಂದೂಡಿಕೆ ಹಾಗೂ ಇತರೆ ಸೌಲಭ್ಯ ಪಡೆಯುವ ಹಕ್ಕು ನೀಡುವುದು. ಕನ್ನಡಗರಿಗಾಗಿ ಉದ್ಯೋಗ ಪೋರ್ಟಲ್‌ ಸ್ಥಾಪನೆ, ಕನ್ನಡದ ಅನುಷ್ಠಾನ ಮತ್ತು ಮೇಲ್ವಿಚಾರಣೆಗೆ (ಸಮಿತಿಗಳು, ಜಾರಿ ಅಧಿಕಾರಿಗಳ) ಕಾರ್ಯವ್ಯವಸ್ಥೆಯನ್ನು ಸ್ಥಾಪಿಸುವುದು. ಕೊನೆಯದಾಗಿ ಸರ್ಕಾರಿ ಅಧಿಕಾರಿಗಳು/ ಸಾರ್ವಜನಿಕರಿಂದ ಈ ಅಧಿನಿಯಮದ ಉಪಬಂಧಕಗಳ ಅನುಷ್ಠಾನದ ಉಲ್ಲಂಘನೆಗಾಗಿ ದಂಡವನ್ನು ವಿಧಿಸಲು ಈ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

B S Yediyurappa: ವಿಧಾನಸಭೆಗೆ ಬಿಎಸ್‌ವೈ ವಿದಾಯ: ರಾಜ್ಯ ಬಿಜೆಪಿಯ ಭೀಷ್ಮ ನಡೆದು ಬಂದ ಹಾದಿ ರೋಚಕ

20 ಸಾವಿರ ರು.ವರೆಗೆ ದಂಡ ಹೇರಿಕೆ ಅಧಿಕಾರ

ಇದೆಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಅನುಷ್ಠಾನ ಉಲ್ಲಂಘನೆ ಮಾಡಿದ ವ್ಯಕ್ತಿ, ಸಂಘ- ಸಂಸ್ಥೆಗಳಿಗೆ ಈ ಕಾಯಿದೆಯ ಮೂಲಕ ದಂಡ ವಿಧಿಸುವ ಉಪಬಂಧವನ್ನು ಈ ಕಾಯಿದೆಯ ಮೂಲಕ ಪರಿಚಯಿಸಲಾಗುತ್ತಿದೆ. ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದ ಖಾಸಗಿ ವ್ಯಕ್ತಿ, ಕಾರ್ಖಾನೆ, ಸಂಘಟನೆಗಳಿಗೆ 5000 ರು., ಎರಡನೇ ಬಾರಿ ಉಲ್ಲಂಘನೆಗೆ 10,000 ರು. ಹಾಗೂ ಮೂರನೇ ಬಾರಿಗೆ ತಪ್ಪೆಸಗಿದವರಿಗೆ 20,000 ರು.ವರೆಗೆ ದಂಡ ವಿಧಿಸುವ ಅಧಿಕಾರವನ್ನು ವಿವಿಧ ಹಂತದಲ್ಲಿ ಜಾರಿಗೆ ತರುವ ಅಧಿಕಾರ ಜಾರಿ ಪ್ರಾಧಿಕಾರಕ್ಕೆ ನೀಡಲಾಗುತ್ತದೆ. ಸರಕಾರಿ ಅಧಿಕಾರಿಗಳು ಕನ್ನಡ ಜಾರಿ ವಿಚಾರದಲ್ಲಿ ಎಸಗುವ ತಪ್ಪನ್ನು ಕರ್ತವ್ಯ ಲೋಪ ಎಂದು ಪರಿಗಣಿಸಿ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ. ಇ-ಆಡಳಿತ ಇಲಾಖೆಯಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಪರಿಣಾಮಕಾರಿ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಸೃಜನಾತ್ಮಕ ಸಲಹೆ ನೀಡುವ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡುವುದಕ್ಕೂ ಈ ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.


ಈಗಿನ ಎರಡು ಕಾಯ್ದೆ ರದ್ದು

ಕನ್ನಡ ಭಾಷಾ ಅನುಷ್ಠಾನಕ್ಕೆ ಹೊಸ ಸಮಗ್ರ ವಿಧೇಯಕ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಈಗಿರುವ ಎರಡು ಕಾಯ್ದೆಗಳು ರದ್ದಾಗಲಿವೆ. ಸಂವಿಧಾನ ಬದ್ಧವಾಗಿ ಕನ್ನಡವನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಎಲ್ಲ ಹಂತಗಳಲ್ಲೂ ಅಳವಡಿಸಿಕೊಳ್ಳಲು ಕರ್ನಾಟಕ ರಾಜ್ಯಭಾಷಾ ಅಧಿನಿಯಮ 1963(1963 ಕರ್ನಾಟಕ ಅಧಿನಿಯಮ 26 ಮತ್ತು ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳು (ಅಧಿಕೃತ ಭಾಷೆ) ಅಧಿನಿಯಮ 1981 (1981 ಕರ್ನಾಟಕ ಅಧಿನಿಯಮ 30) ಜಾರಿಗೆ ತರಲಾಗಿತ್ತು.

ಇವುಗಳ ಜತೆಗೆ, ವಿವಿಧ ಕಾನೂನು, ಅಧಿಸೂಚನೆ, ಆದೇಶಗಳನ್ನು ಜಾರಿಗೊಳಿಸಿದ್ದರೂ ಸಹ ಕನ್ನಡ ಅನುಷ್ಠಾನದ ಉದ್ದೇಶದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಈ ಎರಡು ಅಧಿನಿಯಮಗಳನ್ನು ರದ್ದುಗೊಳಿಸಿ, ಒಂದು ನೂತನ ಸಮಗ್ರ ಕಾನೂನಿನ ಅಧಿನಿಯಮವನ್ನು ಜಾರಿಗೆ ತರಲು ನ್ಯಾ.ಎಸ್‌.ಆರ್‌.ಬನ್ನೂರುಮಠ ಅವರ ಅಧ್ಯಕ್ಷತೆಯ ಕರ್ನಾಟಕ ಕಾನೂನು ಆಯೋಗ ಶಿಫಾರಸು ಮಾಡಿತ್ತು. ಅದರಂತೆ ಸರ್ಕಾರ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022’ವನ್ನು ರೂಪಿಸಿದೆ.