ರಾಜ್ಯದ ಆಶಾ ಕಾರ್ಯಕರ್ತೆಯರ ಅಹರ್ನಿಶಿ ಪ್ರತಿಭಟನೆ 12ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯನ್ನು ಅಂತ್ಯಗೊಳಿಸುವಂತೆ ಮನವೊಲಿಸಲು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಮತ್ತೊಂದು ಸುತ್ತಿನ ಮಾತುಕತೆ ವಿಫಲವಾಗಿದ್ದು, 15 ಸಾವಿರ ಸಿಗುವವರೆಗು ಕದಲಲ್ಲ ಎಂದು ಆಶಾಗಳು ಹೇಳಿದ್ದಾರೆ.
ಬೆಂಗಳೂರು: ಆಶಾ ಕಾರ್ಯಕರ್ತೆಯರ ಅಹರ್ನಿಶಿ ಹೋರಾಟವು 12ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಕಾರ್ಯಕರ್ತೆಯರ ನಡುವೆ ನಡುವೆ ನಡೆದ ಮತ್ತೊಂದು ಸುತ್ತಿನ ಮಾತುಕತೆ ಕೂಡ ವಿಫಲವಾಗಿದೆ. ಆಶಾ ಕಾರ್ಯಕರ್ತೆಯರ ಮನವೊಲಿಸಲು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಮತ್ತೊಮ್ಮೆ ಸಂಘಟನೆಯ ಮುಖಂಡರಿಗೆ ಬುಲಾವ್ ನೀಡಿ, ಇಂದು ಬೆಳಗ್ಗೆ 10 ಗಂಟೆಗೆ ಆರೋಗ್ಯ ಸಚಿವರ ನಿವಾಸದಲ್ಲಿ ಮಹತ್ವದ ಸಭೆ ಜರುಗಿತು. ಆ ಸಭೆಯಲ್ಲಿ 2 ಸಾವಿರ ರೂ ಹೆಚ್ಚಳ ಭರವಸೆ ನೀಡಿದರು. ಆದರೆ ಇದನ್ನು ಒಪ್ಪದ ಆಶಾಗಳು 15 ಸಾವಿರ ಬೇಕೆ ಬೇಕು ಎಂದು ಹಠ ಹಿಡಿದಿದ್ದಾರೆ.
2 ಸಾವಿರ ರೂಪಾಯಿ ಹೆಚ್ಚಳದ ಭರವಸೆ ಮತ್ತು ಸಂಘದ ನಿಲುವು
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸ್ಪಂದಿಸಿರುವ ಸರ್ಕಾರ ನಡೆಸಿದ ಸಭೆಯಲ್ಲಿ, ಸದ್ಯ ನೀಡುತ್ತಿರುವ 8 ಸಾವಿರ ರೂಪಾಯಿ ಪ್ರೋತ್ಸಾಹಧನದ ಜೊತೆಗೆ ಹೆಚ್ಚುವರಿಯಾಗಿ 2 ಸಾವಿರ ರೂಪಾಯಿ ನೀಡುವ ಬಗ್ಗೆ ಭರವಸೆ ವ್ಯಕ್ತಪಡಿಸಿತು. ಈ ಹೆಚ್ಚಳವನ್ನು ಮುಂಬರುವ ಬಜೆಟ್ನಲ್ಲಿ ಘೋಷಿಸುವುದಾಗಿ ತಿಳಿಸಿ, ಸರ್ಕಾರದ ಭರವಸೆಯ ಮೇಲೆ ವಿಶ್ವಾಸವಿಟ್ಟು ಹೋರಾಟವನ್ನು ವಾಪಸ್ ಪಡೆಯುವಂತೆ ಮನವಿ ಮಾಡಲಾಯಿತು.
ಆದರೆ ಈ ಭರವಸೆಯನ್ನು ಒಪ್ಪಿಕೊಳ್ಳಲು ಆಶಾ ಕಾರ್ಯಕರ್ತೆಯರ ಸಂಘ ನಿರಾಕರಿಸಿದೆ. ಸಭೆಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ತಮ್ಮ ಬದುಕಿನ ಸಂಕಷ್ಟ ಮತ್ತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಂತೆ ಸ್ಪಷ್ಟವಾಗಿ ಒತ್ತಾಯಿಸಿದರು. ಆಶಾಗಳು ಒಪ್ಪದ ಹಿನ್ನೆಲೆಯಲ್ಲಿ ಸಿಎಂ ಜೊತೆ ಚರ್ಚೆ ನಡೆಸುವುದಾಗಿ ಹೇಳಿ ಸಚಿವ ಖಾದರ್ ಸಭೆಯಿಂದ ನಿವಾಸಕ್ಕೆ ತೆರಳಿದರು. ಸಿಎಂ ಜೊತೆ ಫೋನ್ ಮೂಲಕ ಆಶಾ ಗಳು ಒಪ್ಪದಿರುವ ಬಗ್ಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಸಭೆಯಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಸೇರಿದಂತೆ 10 ಮಂದಿ ಆಶಾ ಕಾರ್ಯಕರ್ತೆಯರು ಈ ಸಭೆಯಲ್ಲಿ ಭಾಗವಹಿಸಿದ್ದರು. ಒಟ್ಟಾರೆ ಸುಮಾರು 20 ಜನರ ಆಶಾ ಕಾರ್ಯಕರ್ತೆಯರ ನಿಯೋಗದ ಜೊತೆ ಮಾತುಕತೆ ನಡೆಸಲಾಯಿತು. ಸಭೆಯಲ್ಲಿ ಆರೋಗ್ಯ ಇಲಾಖೆಯ ಆಯುಕ್ತ ಗುರದತ್ತ ಹೆಗಡೆ ಮತ್ತು ಡೆಪ್ಯೂಟಿ ಡೈರಕ್ಟರ್ ಪ್ರಭು ಗೌಡ ಅವರು ಉಪಸ್ಥಿತರಿದ್ದರು.
ಕಳೆದ ಶನಿವಾರವೂ ಸಚಿವ ಯು.ಟಿ. ಖಾದರ್ ಅವರು ಆಶಾ ಕಾರ್ಯಕರ್ತೆಯರ ಜೊತೆ ಸಭೆ ನಡೆಸಿದ್ದರು. ಆದರೆ ಹಿಂದಿನ ಮಾತುಕತೆಯ ಬಳಿಕವೂ ಹೋರಾಟ ಮುಂದುವರಿದ ಹಿನ್ನೆಲೆಯಲ್ಲಿ, ಬಿಕ್ಕಟ್ಟು ಶಮನಗೊಳಿಸಲು ಇಂದು ಸಭೆ ಆಯೋಜಿಸಲಾಗಿತ್ತು.
ಅನುದಾನದ ಹಿನ್ನೆಲೆ ಮತ್ತು ಪ್ರೋತ್ಸಾಹಧನದ ವಿವರ
ಆಶಾ ಕಾರ್ಯಕರ್ತೆಯರನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಆದರೆ ಕೇಂದ್ರ ಸರ್ಕಾರವೇ ಕಾರ್ಯಕರ್ತೆಯರನ್ನು ಕೈಬಿಟ್ಟಿದೆ ಎಂಬ ನಿಲುವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಮೊದಲಿನಿಂದಲೂ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಆರಂಭದಲ್ಲಿ ಕಾರ್ಯಕರ್ತೆಯರಿಗೆ ಅತ್ಯಲ್ಪ ಪ್ರೋತ್ಸಾಹಧನ ಸಿಗುತ್ತಿದ್ದ ಸಂದರ್ಭದಲ್ಲಿ, 2014ರಲ್ಲಿ ತಾವು ಆರೋಗ್ಯ ಸಚಿವರಾಗಿದ್ದಾಗ ಕೇಂದ್ರದ ಅನುದಾನಕ್ಕೆ ಸರಿಸಮನಾಗಿ ರಾಜ್ಯ ಸರ್ಕಾರವೂ ಮ್ಯಾಚಿಂಗ್ ಗ್ರಾಂಟ್ ನೀಡುವ ನಿರ್ಧಾರ ಕೈಗೊಂಡಿತ್ತು ಎಂದು ಅವರು ಹೇಳಿದ್ದಾರೆ.
ನಂತರ ಕೇಂದ್ರ ಸರ್ಕಾರ ಅನುದಾನವನ್ನು ಕೈಬಿಟ್ಟಾಗ ಮತ್ತು ಕಡಿಮೆ ಮಾಡಿದಾಗ, ರಾಜ್ಯ ಸರ್ಕಾರವೇ ಆರ್ಥಿಕ ನೆರವು ನೀಡುವ ಜವಾಬ್ದಾರಿ ವಹಿಸಿಕೊಂಡಿತು ಎಂಬುದನ್ನು ವಿವರಿಸಿದರು. ಸದ್ಯ ಕನಿಷ್ಠ 8 ಸಾವಿರ ರೂಪಾಯಿ ಪ್ರೋತ್ಸಾಹಧನ ದೊರೆಯುತ್ತಿದೆ ಎಂದು ಹೇಳಿದ ಅವರು, ಇಂದಿನ ಸಭೆಯಲ್ಲೂ ಅದೇ ಅಂಶವನ್ನು ಪುನರುಚ್ಚರಿಸಿದರು. ಜೊತೆಗೆ, ಕೆಲಸದ ಪ್ರಮಾಣ ಮತ್ತು ವಿವಿಧ ಆರೋಗ್ಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಿಕೆಗೆ ಅನುಗುಣವಾಗಿ 13 ಸಾವಿರದಿಂದ 16 ಸಾವಿರ ರೂಪಾಯಿವರೆಗೆ ಪಡೆಯುವ ಕಾರ್ಯಕರ್ತೆಯರೂ ಇದ್ದಾರೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.












