ಬೆನ್ನುನೋವಿನಿಂದ ಬಳಲುತ್ತಿರುವ ರೇಣುಕಾಸ್ವಾಮಿ ಪ್ರಕರಣದ ಆರೋಫಿ ದರ್ಶನ್ ಅವರನ್ನು ಸದ್ಯಕ್ಕೆ ಆಸ್ಪತ್ರೆಗೆ ಸ್ಥಳಾಂತರಿಸುವ ಅಗತ್ಯವಿಲ್ಲ ಎಂದು ನಿರ್ಧರಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ಫಿಸಿಯೋಥೆರಪಿ ತಜ್ಞರೇ ಜೈಲಿಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಆರೋಗ್ಯ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಸದ್ಯದ ಮಟ್ಟಿಗೆ ದರ್ಶನ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆದಿಲ್ಲ. ಬದಲಿಗೆ ಜೈಲಿನ ಒಳಗಡೆಯೇ ಅಗತ್ಯ ವೈದ್ಯಕೀಯ ಸೌಲಭ್ಯ ಹಾಗೂ ಫಿಸಿಯೋಥೆರಪಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ.
ನ್ಯಾಯಾಲಯಕ್ಕೆ ವೈದ್ಯಕೀಯ ವರದಿ ಮತ್ತು ಕೋರ್ಟ್ ಸೂಚನೆ
ರೇಣುಕಾಸ್ವಾಮಿ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಅವರ ಪ್ರಸ್ತುತ ಆರೋಗ್ಯ ಸ್ಥಿತಿಯ ಕುರಿತಾದ ಸಮಗ್ರ ವೈದ್ಯಕೀಯ ವರದಿಯನ್ನು ಜೈಲಾಧಿಕಾರಿಗಳು ಗುರುವಾರ ನ್ಯಾಯಾಲಯಕ್ಕೆ ಸಲ್ಲಿಸಿದರು. ಈ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಸುಜಾತ ಎಂ. ಸಾಂಬ್ರಾಣಿ ಅವರು ಮಹತ್ವದ ನಿರ್ದೇಶನ ನೀಡಿದರು.
ಆರೋಪಿಯ ಬೆನ್ನು ನೋವಿನ ಸಮಸ್ಯೆಯನ್ನು ಉಪಶಮನ ಮಾಡಲು ನಿಯಮಿತವಾಗಿ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಒಂದು ವೇಳೆ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಗತ್ಯ ಎನಿಸಿದರೆ ಮಾತ್ರ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಜೈಲಿನ ಮುಖ್ಯ ವೈದ್ಯಾಧಿಕಾರಿಗೆ ಸೂಚಿಸಿದ ನ್ಯಾಯಾಧೀಶರು, ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಿದರು.
ಖಾಸಗಿ ಆಸ್ಪತ್ರೆ ಚಿಕಿತ್ಸೆಗೆ ಮನವಿ
ವಿಚಾರಣೆಯ ಸಂದರ್ಭದಲ್ಲಿ ನಟ ದರ್ಶನ್ ಪರ ವಕೀಲ ಹಸ್ಮತ್ ಪಾಷಾ ಅವರು ವಾದ ಮಂಡಿಸಿ, ದರ್ಶನ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಕೋರಿದರು. ಕಳೆದ ಕೆಲವು ವಾರಗಳಿಂದ ಬೆನ್ನು ನೋವು ತೀವ್ರವಾಗಿ ಕಾಡುತ್ತಿದ್ದು, ಜೈಲಿನಲ್ಲಿ ಅಗತ್ಯವಾದ ಸೂಕ್ತ ಚಿಕಿತ್ಸೆ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ಕಾರಣ ನೀಡಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅನುಮತಿ ನೀಡುವಂತೆ ಈ ಹಿಂದೆ ದರ್ಶನ್ ಪರವಾಗಿ ಅರ್ಜಿ ಸಲ್ಲಿಸಲಾಗಿತ್ತು.
ಮುಖ್ಯ ವೈದ್ಯರ ನಿರ್ಧಾರ ಮತ್ತು ವಿಕ್ಟೋರಿಯಾ ವೈದ್ಯರ ನೆರವು
ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಹಿರಿಯ ಜೈಲಾಧಿಕಾರಿಗಳು ಚಿಕಿತ್ಸೆಯ ವಿಚಾರವನ್ನು ಜೈಲಿನ ಮುಖ್ಯ ವೈದ್ಯರ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಸದ್ಯಕ್ಕೆ ದರ್ಶನ್ ಅವರನ್ನು ಹೊರಗಿನ ಆಸ್ಪತ್ರೆಗೆ ಕರೆದೊಯ್ಯುವ ಬದಲು, ವಿಕ್ಟೋರಿಯಾ ಆಸ್ಪತ್ರೆಯ ಫಿಸಿಯೋಥೆರಪಿ ವೈದ್ಯರ ಮೂಲಕವೇ ಜೈಲಿನಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ.
ಜೈಲಿನ ಮುಖ್ಯ ವೈದ್ಯರು ವಿಕ್ಟೋರಿಯಾ ಆಸ್ಪತ್ರೆಯ ಫಿಸಿಯೋಥೆರಪಿ ತಜ್ಞರನ್ನು ಜೈಲಿಗೆ ಕರೆಸಿಕೊಳ್ಳುತ್ತಿದ್ದು, ಬೆನ್ನು ನೋವಿಗೆ ಅಗತ್ಯವಿರುವ ವೈದ್ಯಕೀಯ ಯಂತ್ರೋಪಕರಣಗಳ ಸಹಾಯದಿಂದ ಅಲ್ಲಿಯೇ ಚಿಕಿತ್ಸೆ ಮುಂದುವರಿಸಲು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ, ತಕ್ಷಣಕ್ಕೆ ಆಸ್ಪತ್ರೆ ಶಿಫ್ಟ್ ಇಲ್ಲದಿದ್ದರೂ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಜೈಲಿನಲ್ಲೇ ಆರೈಕೆ ಮುಂದುವರಿದಿದೆ.












