ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ, ಆದರೆ ಯಾವುದೇ ರೀತಿಯ ಲಿಖಿತ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಸಚಿವ ಹೆಚ್.ಸಿ ಬಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ. ಮುಷ್ಕರ ಕೈಬಿಡುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದ್ದರೂ ಹೋರಾಟ ಮುಂದುವರಿದಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಮನಗರ (ನ.27): ಆಶಾ ಕಾರ್ಯಕರ್ತೆಯರ ಸಮಸ್ಯೆಗೆ ನಮ್ಮ ಸರ್ಕಾರ ಸ್ಪಂದಿಸುತ್ತದೆ. ಆದರೆ ಲಿಖಿತ ಭರವಸೆ ಕೊಡಲು ಆಗಲ್ಲ ಎಂದು ಸಚಿವ ಹೆಚ್‌ಸಿ ಬಾಲಕೃಷ್ಣ ನಿರಾಕರಿಸಿರುವುದು ಆಶಾ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ರಾಮನಗರದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಬಾಲಕೃಷ್ಣ ಅವರು ಆಶಾ ಕಾರ್ಯಕರ್ತೆಯ ಹೋರಾಟಕ್ಕೆ ಬೆಲೆ ಇದೆ. ನಿಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತದೆ. ಆದರೆ ಈ ಬಗ್ಗೆ ಲಿಖಿತ ಭರವಸೆ ಕೊಡಲು ಆಗಲ್ಲ. ನಾಳೆ ಎಲ್ಲರೂ ಇದೇ ರೀತಿ ಹೋರಾಟ ಶುರು ಮಾಡುತ್ತಾರೆ. ಎಲ್ಲರಿಗೂ ಲಿಖಿತ ಭರವಸೆ ಕೊಟ್ಟು ಸರ್ಕಾರ ನಡೆಸಲು ಆಗುತ್ತಾ ಎಂದು ಪ್ರಶ್ನಿಸಿದರು. ಮುಂದುವರಿದು ಸಿಎಂ ಈಗಾಗಲೇ ಹೇಳಿದ್ದಾರೆ. ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಮುಷ್ಕರ ಕೈಬಿಡಿ ಅಂತಾ ಹೇಳಿದ್ದಾರೆ. ಆದರೂ ಹೋರಾಟ ಮುಂದುವರಿದಿದೆ ಎಂದರು.

ಆಶಾ ಕಾರ್ಯಕರ್ತೆಯರು ಇಲ್ಲದಿದ್ರೂ ನಡೆಯುತ್ತೆ

ಆಶಾ ಕಾರ್ಯಕರ್ತೆಯರು ಇಲ್ಲದಿದ್ರೂ ನಡೆಯುತ್ತೆ ಎಂಬ ಆರೋಗ್ಯ ಸಚಿವ ಖಾದರ್ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, 'ನಾನು ಅದರ ಬಗ್ಗೆ ರಿಯಾಕ್ಟ್ ಮಾಡೋಕೆ ಹೋಗಲ್ಲ. ಎಲ್ಲರ ಅವಶ್ಯಕತೆಯೂ ಇದೆ. ಆದರೆ ಅವರು ಮೊಂಡುತನದ ಹೋರಾಟ ಬಿಡಬೇಕು. ಎಲ್ಲರಿಗೂ ಲಿಖಿತವಾಗಿ ಬರೆದು ಕೊಡೋಕೆ ಆಗೋಲ್ಲ. ಕೇಂದ್ರದಲ್ಲೂ ಅನೇಕ ಸಮಸ್ಯೆಗಳಿವೆ. ಹಾಗಾಂತ ಅವರು ಭರವಸೆ ಈಡೇರಿಸ್ತೇವೆ ಅಂತಾ ಅವ್ರೂ ಬರೆದುಕೊಡ್ತಾರಾ? ಆಶಾ ಕಾರ್ಯಕರ್ತೆಯರ ಹೋರಾಟ ಸರಿಯಾಗಿಯೇ ಇದೆ. ಆದರೆ ಬೇಡಿಕೆ ಈಡೇರಿಸಲು ಸಮಯ ಬೇಕು, ಪರಿಶೀಲನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು. ಕೇಂದ್ರದವರೂ ಕೊಡಬೇಕು ಅಲ್ವಾ? ಈಗ ಗುಜರಾತ್ ನಲ್ಲಿ 2400 ರೂ. ಕೊಡ್ತಿದ್ದಾರೆ, ರಾಜ್ಯಕ್ಕೂ ಅದೇ ರೀತಿ ಕೊಡಬೇಕು. ಕೇಂದ್ರ ಸರ್ಕಾರ ನಮ್ಮ ರಾಜ್ಯದಿಂದ ಶೇ 60 ರಷ್ಟು ಟ್ಯಾಕ್ಸ್ ಹಣ ಪಡೆಯುತ್ತಿದ್ದಾರೆ. ಅಲ್ಲಿಂದ ವಾಪಸ್ ಕೊಡಬೇಕು ಅಲ್ವಾ? ಇದಕ್ಕೆಲ್ಲ ಸಮಯ ಬೇಕು. ಹಾಗಾಗಿ ಸಿಎಂ ಮೇಲೆ ವಿಶ್ವಾಸ ಇಟ್ಟು ಮುಷ್ಕರ ಹಿಂಪಡೆಯಬೇಕು ಎಂದರು.

ದೊರೆ ತಪ್ಪು ಮಾಡಿದ್ರೆ ದೂರು ಇಲ್ವಂತೆ!

ಇನ್ನು ಜೆಡಿಎಸ್ ಲೀಡರ್ ಸುರೇಶ್ ಬಾಬು ಮನೆಗೆ ಕೆಎನ್ ರಾಜಣ್ಣ ಭೇಟಿ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಬಾಲಕೃಷ್ಣ ಅವರು, ಅವರು ಭೇಟಿ ನೀಡಿದ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಬೇಕು. ಪಾಪ ಅವರು ಎಲ್ಲ ಕಡೆ ಹೋಗ್ತಾರೆ. ಅವರೀಗ ಸರ್ವ ಸ್ವತಂತ್ರರು. ನಮ್ಮ ಪಕ್ಷದಲ್ಲಿ ಅವರ ಮೇಲೆ ಯಾವುದೇ ಕ್ರಮ ಆಗಲ್ಲ. ಅವ್ರು ನಮ್ಮ ಪಾರ್ಟಿ ಸೀನಿಯರ್ ಲೀಡರ್, ಏನು ಬೇಕಾದರೂ ಮಾಡಬಹುದು. ದೊರೆ ತಪ್ಪು ಮಾಡದ್ರೆ ದೂರು ಇಲ್ವಂತೆ ಎನ್ನುವ ಮೂಲಕ ಪರೋಕ್ಷವಾಗಿ ಪಕ್ಷದ ವರಿಷ್ಠರ ಮೇಲೆ ಸಚಿವ ಬಾಲಕೃಷ್ಣ ಬೇಸರ ಹೊರಹಾಕಿದರು.