ಕನ್ನಡ ಹಾಡಿನ ಮನವಿಯನ್ನು ಭಯೋತ್ಪಾದಕ ದಾಳಿಗೆ ಹೋಲಿಸಿ ಸಮರ್ಥಿಸಿಕೊಂಡ ಸೋನು ನಿಗಮ್ ವಿರುದ್ಧ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶಭಕ್ತಿಯ ನೆಪದಲ್ಲಿ ಕನ್ನಡಿಗರಿಗೆ ಅಪಮಾನ ಮಾಡುವುದನ್ನು ಬಿಟ್ಟು, ತಕ್ಷಣವೇ ಕ್ಷಮೆಯಾಚಿಸುವಂತೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ಅ.16): ಸಂಗೀತ ಕಾರ್ಯಕ್ರಮದ ವೇಳೆ ಕನ್ನಡ ಹಾಡಿಗೆ ಮನವಿ ಮಾಡಿದ್ದನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಹೋಲಿಸಿ, ಬಳಿಕ ಸುದೀರ್ಘ 'ಬಹಿರಂಗ ಪತ್ರ'ದ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ್ದ ಪ್ರಸಿದ್ಧ ಗಾಯಕ ಸೋನು ನಿಗಮ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ತಿರುಗೇಟು ನೀಡಿದ್ದಾರೆ.

ಸೋನು ನಿಗಮ್ ಸ್ಪಷ್ಟನೆ ನೀಡುವ ಧಾಟಿಯಲ್ಲಿ ತಾನು ಆಡಿದ ನಿಂದನೀಯ ಮಾತುಗಳನ್ನು ಮತ್ತೆ ಸಮರ್ಥಿಸಿಕೊಳ್ಳುವ ನೀಚ ಯತ್ನ ನಡೆಸಿದ್ದಾರೆ. ಕನ್ನಡ ಹಾಡು ಹಾಡಲು ಕೇಳಿದ್ದನ್ನೇ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಹೋಲಿಸಿದ್ದಕ್ಕೆ ಯಾವುದೇ ರೀತಿಯ ಸಮರ್ಥನೆ ಇರಲು ಸಾಧ್ಯವೇ ಇಲ್ಲ. ಸಂದರ್ಭ ಏನೇ ಇರಲಿ, ಒಂದು ಇಡೀ ಭಾಷಾ ಸಮುದಾಯವನ್ನು ಭಯೋತ್ಪಾದಕರಿಗೆ ಹೋಲಿಸುವುದು ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಒಂದು ಹಾಡಿನ ಬೇಡಿಕೆಯೇ ಕಾರಣ ಎನ್ನುವುದು ನೀಚತನದ ಪರಮಾವಧಿ. ಇದಕ್ಕೆ ಈಗ ದೇಶಭಕ್ತಿಯ ಕಾರಣಗಳನ್ನು ಜೋಡಿಸುತ್ತಾ ಹೋಗುವುದು ತೇಪೆ ಹಚ್ಚುವ ಕೆಲಸವಷ್ಟೇ ಎಂದು ನಾರಾಯಣ ಗೌಡ ಕಿಡಿಕಾರಿದ್ದಾರೆ.

"ಕೋಟಿಗಟ್ಟಲೆ ಹಣ, ಲಕ್ಷಾಂತರ ಜನರ ಪ್ರೀತಿ ಕೊಟ್ಟ ನೆಲಕ್ಕೆ ದ್ರೋಹ ಎಸಗಬೇಡಿ"

ಸೋನು ನಿಗಮ್ ಅವರಿಗೆ ಕನ್ನಡಿಗರು ನೀಡಿದ ಅಪಾರ ಪ್ರೀತಿಯನ್ನು ಸ್ಮರಿಸಿದ ನಾರಾಯಣ ಗೌಡ, "ಸೋನು ಅವರಿಗೆ ಈ ಕನ್ನಡ ಮಣ್ಣಿನ ಋಣವಿದೆ. ಇಲ್ಲೇ ಅವರು ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾರೆ. ಅದಕ್ಕಿಂತ ಮಿಗಿಲಾಗಿ ಕನ್ನಡಿಗರ ಲಕ್ಷಾಂತರ ಜನರ ಬೆಲೆ ಕಟ್ಟಲಾಗದ ಪ್ರೀತಿಯನ್ನು ಗಳಿಸಿದ್ದಾರೆ. ಹಾಗಿರುವಾಗ ಆ ಪ್ರೀತಿಗೆ ದ್ರೋಹ ಎಸಗುವುದು ಎಷ್ಟು ಸರಿ ಎಂಬುದನ್ನು ಅವರು ತಮಗೆ ತಾವೇ ಆತ್ಮಸಾಕ್ಷಿಯಿಂದ ಕೇಳಿಕೊಳ್ಳಲಿ" ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

"ಪಹಲ್ಗಾಮ್ ದಾಳಿಗೂ ಮುನ್ನ ಕರ್ನಾಟಕದ ದಂಪತಿಗಳು ಮಾಡಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸೋನು ನಿಗಮ್ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ಆ ದಾಳಿಯ ಭೀಕರತೆ ಇಡೀ ದೇಶಕ್ಕೆ ಗೊತ್ತಿದೆ, ಅದಕ್ಕಾಗಿ ನಾವೆಲ್ಲರೂ ಕಣ್ಣೀರಿಟ್ಟಿದ್ದೇವೆ. ಆ ದಾಳಿಯ ಭಯಾನಕತೆ ನಮಗೂ ಗೊತ್ತಿರುವ ಕಾರಣಕ್ಕಾಗಿಯೇ ಸೋನು ಅವರ ಬೇಜವಾಬ್ದಾರಿ ಹೇಳಿಕೆಯನ್ನು ನಾವೆಲ್ಲರೂ ಅಷ್ಟು ತೀವ್ರವಾಗಿ ವಿರೋಧಿಸಿದ್ದು ಹಾಗೂ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು. ಈಗ ಅವರು ಪಹಲ್ಗಾಮ್ ದಾಳಿಯಲ್ಲಿ ಅಸುನೀಗಿದ ಅಮಾಯಕ ಜೀವಗಳನ್ನು ಮುಂದಿಟ್ಟುಕೊಂಡು ಕನ್ನಡಿಗರಿಂದ ಅನುಕಂಪ ಗಿಟ್ಟಿಸಿಕೊಳ್ಳುವ ಯಾವುದೇ ಅಗತ್ಯ ಇರಲಿಲ್ಲ ಎಂದು ಟೀಕಿಸಿದ್ದಾರೆ.

ದೇಶಭಕ್ತಿಯ ಪಾಠವನ್ನು ನಮಗೆ ಯಾರೂ ಹೇಳಿಕೊಡಬೇಕಾಗಿಲ್ಲ!

ಕನ್ನಡಿಗರ ದೇಶಭಕ್ತಿಯನ್ನು ಹೇಳಿದ ಕರವೇ ಅಧ್ಯಕ್ಷ, ನಮಗೆ ದೇಶಭಕ್ತಿಯ ಪಾಠವನ್ನು ಯಾರೂ ಪ್ರತ್ಯೇಕವಾಗಿ ಹೇಳಿಕೊಡಬೇಕಾಗಿಲ್ಲ. ಶತ ಶತಮಾನಗಳ ಕಾಲ ನಾವೇ ದೇಶವಾಗಿದ್ದೆವು. ನಮ್ಮ ನಾಡಭಕ್ತಿ ಯಾವತ್ತಿಗೂ ದೇಶ ವಿರೋಧಿಯಲ್ಲ. ನಮ್ಮ ಸ್ವಂತ ಭಾಷೆಯನ್ನು ಪ್ರೀತಿಸುವುದು ದೇಶವನ್ನು ಒಡೆಯುವುದಿಲ್ಲ, ಬದಲಿಗೆ ಇನ್ನಷ್ಟು ಬಲವಾಗಿ ದೇಶವನ್ನು ಕಟ್ಟುತ್ತದೆ. ಈ ದೇಶದ ನೈಜ ಸೌಂದರ್ಯವಿರುವುದೇ ನಮ್ಮ ವೈವಿಧ್ಯತೆಯಲ್ಲಿ. ದೇಶದ ಹೆಸರಲ್ಲಿ, ದೇಶಭಕ್ತಿಯ ನೆಪದಲ್ಲಿ ಈ ವೈವಿಧ್ಯತೆಯನ್ನು ವಿರೋಧಿಸುವುದು ಮತ್ತು ಅಪಮಾನಿಸುವುದು ನಿಜವಾದ ದೇಶದ್ರೋಹ ಎಂದು ಸಿಡಿದೆದ್ದಿದ್ದಾರೆ.

ಸೋನು ನಿಗಮ್ ಅವರಿಗೆ ನೇರ ಎಚ್ಚರಿಕೆ ನೀಡಿದ ಅವರು, ಒಂದು ಭಾಷಾ ಸಮುದಾಯವನ್ನು ಭಯೋತ್ಪಾದಕರಿಗೆ ಹೋಲಿಸಿದ ಸೋನು ನಿಗಮ್ ಮಾಡಬೇಕಾದ, ಮಾಡಬಹುದಾದ ಒಂದೇ ಒಂದು ಕೆಲಸವೆಂದರೆ - ತಾನು ಅಪಮಾನಿಸಿದ ಕನ್ನಡ ಜನರಿಗೆ, ಈ ಮಣ್ಣಿಗೆ ತಲೆಬಾಗಿ ಕ್ಷಮೆ ಕೋರುವುದು ಮತ್ತು ಇನ್ನೆಂದೂ ಇಂತಹ ಕೃತ್ಯ ಎಸಗುವುದಿಲ್ಲ ಎಂದು ಪ್ರಮಾಣ ಮಾಡುವುದು. ಅದನ್ನು ಬಿಟ್ಟು ದೇಶಭಕ್ತಿ, ಧರ್ಮ ಹಾಗೂ ಹುತಾತ್ಮ ಜೀವಗಳ ಬೆನ್ನ ಹಿಂದೆ ಅಡಗಿಕೊಂಡು ಸ್ವಯಂ ಸಮರ್ಥನೆಗೆ ಇಳಿಯುವುದು ಸಂಪೂರ್ಣವಾಗಿ ನೀಚತನ. ಅದನ್ನು ಯಾರೂ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಸೋನು ನಿಗಮ್ ಒಬ್ಬ ಶ್ರೇಷ್ಠ ಗಾಯಕರಾಗಿ ನಮಗೆಲ್ಲರಿಗೂ ಇಷ್ಟ. ಅದರಲ್ಲಿ ಎರಡು ಮಾತಿಲ್ಲ. ಕನ್ನಡ ಚಿತ್ರ ಸಂಗೀತಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಸೋನು ಅವರನ್ನೂ ಕೂಡ ಕನ್ನಡ ಚಿತ್ರರಂಗ ತಾಯಿಯಂತೆ ಪೊರೆದಿದೆ. ಒಬ್ಬ ಗಾಯಕನಾಗಿ ಹಾಡುಗಳಿಗೆ ಜೀವ ತುಂಬುವಾಗ ಅವರು ತೋರುವ ಸೂಕ್ಷ್ಮತೆಯನ್ನೇ ಸಾರ್ವಜನಿಕ ನಡವಳಿಕೆಯಲ್ಲಿ, ಆಡುವ ಮಾತುಗಳಲ್ಲಿ ತೋರಬೇಕು ಅನ್ನುವುದಷ್ಟೇ ನಮ್ಮ ಅಪೇಕ್ಷೆ. ಇದನ್ನು ಅವರು ಎಷ್ಟು ಬೇಗ ಅರ್ಥ ಮಾಡಿಕೊಂಡರೆ ಅಷ್ಟು ಒಳ್ಳೆಯದು ಎಂದು ಕಿವಿಮಾತು ಹೇಳಿದ್ದಾರೆ.

ಕೊನೆಯಲ್ಲಿ, "ಕನ್ನಡಿಗರು ಎಲ್ಲಾ ಅರ್ಥದಲ್ಲೂ ನಿಜವಾದ ದೇಶಭಕ್ತರು. ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ನಂತರದಲ್ಲೂ ದೇಶಕ್ಕಾಗಿ ನಮ್ಮನ್ನು ನಾವು ತೇಯ್ದುಕೊಂಡಿದ್ದೇವೆ, ಬೇಕಾದಷ್ಟು ಕಳೆದುಕೊಂಡಿದ್ದೇವೆ. ಸೋನು ಅವರಿಗೆ ಈ ದೇಶಕ್ಕಾಗಿ ಕನ್ನಡಿಗರು ನೀಡಿದ ತ್ಯಾಗದ ಬಗ್ಗೆ ಮಾಹಿತಿ ಬೇಕಿದ್ದರೆ, ನಾವೇ ತಲುಪಿಸುತ್ತೇವೆ" ಎಂದು ಕರವೇ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಆಕ್ರೋಶದ ತಿರುಗೇಟು ನೀಡಿದ್ದಾರೆ.