ಕನ್ನಡಿಗರನ್ನು ಅವಮಾನಿಸಿದ ವಿಚಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ದ್ವಂದ್ವ ನಿಲುವು ಪ್ರದರ್ಶಿಸುತ್ತಿದೆ. ಗಾಯಕ ಸೋನು ನಿಗಮ್ ಅವರ ಬೆಂಗಳೂರು ಕಾರ್ಯಕ್ರಮವನ್ನು ವಿರೋಧಿಸುವ ಕರವೇ, ಇದೇ ರೀತಿಯ ಹೇಳಿಕೆ ನೀಡಿದ್ದ ಧ್ರುವ್ ರಾಠಿ ವಿಚಾರದಲ್ಲಿ ಮೌನ ವಹಿಸಿದೆ.
ಬೆಂಗಳೂರು (ಅ.14): ಇಲ್ಲಿನ ವಿಚಾರ ಧ್ರುವ್ ರಾಠಿಯದ್ದೂ ಅಲ್ಲ, ಸೋನು ನಿಗಮ್ದೂ ಅಲ್ಲ. ಕನ್ನಡಿಗರಿಗೆ ಆದ ಅವಮಾನವನ್ನು ತನ್ನ ಸೆಲೆಕ್ಟಿವ್ ಆಗಿ ಬಳಸಿಕೊಳ್ಳುವ ಕರ್ನಾಟಕ ರಕ್ಷಣಾ ವೇದಿಕೆಯ ವರ್ತನೆಯದ್ದು. ಕರ್ನಾಟಕ ರಕ್ಷಣಾ ವೇದಿಕೆ ಇಂದು ದೊಡ್ಡ ಪ್ರಕಟಣೆ ಹೊರಡಿಸಿ ಬೆಂಗಳೂರಿನಲ್ಲಿ ಸೋನು ನಿಗಮ್ ಅವರ ಸಂಗೀತ ಕಾರ್ಯಕ್ರಮಕ್ಕೆ ತಮ್ಮ ವಿರೋಧವಿದೆ ಎಂದು ಹೇಳಿದೆ. ಅಕ್ಟೋಬರ್ 24 ರಂದು ಸೋನು ನಿಗಮ್ ಅವರ 'ದಿ ರೆವಲ್ಯೂಷನ್ ಇಂಡಿಯಾ ಟೂರ್' (The Revolution India Tour) ಸಂಗೀತ ಕಾರ್ಯಕ್ರಮ ಬಾಗಲೂರು ರಸ್ತೆಯ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ಭಾರತೀಯ ಮಾಲ್ ಆಫ್ ಬೆಂಗಳೂರು (Bhartiya Mall of Bengaluru) ಆವರಣದಲ್ಲಿ ಸಂಜೆ 7 ಗಂಟೆಗೆ ಆಯೋಜನೆಯಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಅದಕ್ಕೆ ಕಾರಣವೂ ಇದೆ. 2025ರ ಏಪ್ರಿಲ್ನಲ್ಲಿ ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಭಾಗವಹಿಸಿದ್ದರು. ಈ ವೇಳೆ ಒಬ್ಬ ವ್ಯಕ್ತಿ ಸೋನು ನಿಗಮ್ ಅವರಿಗೆ ಕನ್ನಡ ಹಾಡು ಹೇಳುವಂತೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಅವರು, 'ಕನ್ನಡ, ಕನ್ನಡ, ಕನ್ನಡ.. ಇದೇ ಕಾರಣಕ್ಕೆ ಪಹಲ್ಗಾಮ್ನಲ್ಲಿ ಘಟನೆ (ಭಯೋತ್ಪಾದಕ ದಾಳಿ) ಸಂಭವಿಸಿತ್ತು' ಎಂದು ಹೇಳಿಕೆ ನೀಡಿದ್ದರು. ಸೋನು ನಿಗಮ್ ಹೇಳಿದ ಮಾತು ತಪ್ಪು ಅದರಲ್ಲಿ ಯಾವುದೇ ಅನುಮಾನವಿಲ್ಲ. ಅದೇ ಕಾರಣಕ್ಕೆ ದೊಡ್ಡ ಮಟ್ಟದ ಪ್ರತಿಭಟನೆ ವ್ಯಕ್ತವಾಗಿ, ಕನ್ನಡ ಸಿನಿಮಾಗಳಲ್ಲಿ ಇನ್ನು ಸೋನು ನಿಗಮ್ರನ್ನು ಹಾಡಿಸೋದಿಲ್ಲ ಅನ್ನೋ ತೀರ್ಮಾನಕ್ಕೂ ಸ್ಯಾಂಡಲ್ವುಡ್ ಬಂದಿತ್ತು. ಅವರ ವಿರುದ್ಧ ಸಾಲು ಸಾಲು ಎಫ್ಐಆರ್ ದಾಖಲಾಗಿದ್ದವು. ಎಲ್ಲದಕ್ಕೂ ಮುಂಚೂಣಿಯಲ್ಲಿ ನಿಂತು ಕರವೇ ಹೋರಾಟ ಮಾಡಿತ್ತು. ಸೋನು ನಿಗಮ್ ಈ ವಿಚಾರವಾಗಿ ಕ್ಷಮೆ ಕೇಳಿದರೂ ವಿವಾದ ಮಾತ್ರ ತಣ್ಣಗಾಗಿರಲಿಲ್ಲ. ಅಂದಿನಿಂದ ಸೋನು ನಿಗಮ್ ಕರ್ನಾಟಕದಲ್ಲಿ ಯಾವುದೇ ಕಾರ್ಯಕ್ರಮದಲ್ಲೂ ಭಾಗವಹಿಸಿರಲಿಲ್ಲ.
ಆದರೆ, ಆಕ್ಟಿವಿಸ್ಟ್ ಧ್ರುವ್ ರಾಠಿ ವಿಚಾರದಲ್ಲಿ ಹೀಗಾಗಲಿಲ್ಲ. ತಮ್ಮ ಹಳೆಯ ವಿಡಿಯೋ ಒಂದರಲ್ಲಿ ಕನ್ನಡ ಮಾತನಾಡದ ಪರಭಾಷಿಕರ ಮೇಲಿನ ದಾಳಿಗಳ ಬಗ್ಗೆ ಪ್ರಸ್ತಾಪಿಸುವಾಗ, ಧ್ರುವ್ ರಾಠಿ ಕನ್ನಡಿಗರ ವರ್ತನೆಯನ್ನು ಭಯೋತ್ಪಾದಕರಿಗೆ ಹೋಲಿಸಿ ಮಾತನಾಡಿದ್ದರು. ಇಂಥ ಧ್ರುವ್ ರಾಠಿ ಇತ್ತೀಚೆಗೆ ಸಿಜೆಪಿ ಪ್ರತಿಭಟನೆಗಾಗಿ ಬೆಂಗಳೂರಿಗೆ ಬಂದಿದ್ದಾಗ ಅದಕ್ಕೆ ಕರವೇ ಸಣ್ಣ ಮಟ್ಟದ ಪ್ರತಿರೋಧ ಕೂಡ ತೋರಿರಲಿಲ್ಲ. ಸೋನು ನಿಗಮ್ ವಿಚಾರದಲ್ಲಿ ಬೀದಿಗಿಳಿದು ಪ್ರತಿಭಟಿಸಿದ್ದ ಕರವೇ ಹಾಗೂ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ, ಧ್ರುವ್ ರಾಠಿ ವಿಚಾರದಲ್ಲಿ ಒಂಚೂರೂ ಮಾತನಾಡದೇ ಸುಮ್ಮನಾಗಿದ್ದರು.
ಕನ್ನಡ ಹೋರಾಟವನ್ನು ಭಯೋತ್ಪಾದನೆಗೆ ಹೋಲಿಸಿ ಮಾತನಾಡಿದ್ದ ಧ್ರುವ್ ರಾಠಿ ವಿಡಿಯೋ
ಅಲ್ಲದೆ, ಧ್ರುವ್ ರಾಠಿ ಬೆಂಗಳೂರಿಗೆ ಬಂದಾಗ ಅವರನ್ನು ವಿರೋಧಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ಕಂಡು ಬರಲಿಲ್ಲ. ಇನ್ನು ಧ್ರುವ್ ರಾಠಿ ಕೂಡ ಹಿಂದೊಮ್ಮೆ ತಾವು ನೀಡಿದ್ದ ಹೇಳಿಕೆಗೆ ಕ್ಷಮೆ ಕೂಡ ಕೇಳಲಿಲ್ಲ.
ಇಷ್ಟೆಲ್ಲ ಆದ ಬಳಿಕ ಪ್ರಶ್ನೆ ಇರುವುದು ಸೋನು ನಿಗಮ್ ಅಥವಾ ಧ್ರುವ್ ರಾಠಿಯ ಬಗ್ಗೆಯಲ್ಲ. ಕನ್ನಡಿಗರಿಗೆ ಮಾಡಿದ ಅವಮಾನವನ್ನು ಕರ್ನಾಟಕ ರಕ್ಷಣಾ ವೇದಿಕೆ ಸೆಲೆಕ್ಟಿವ್ ಮಾಡುತ್ತಿರುವುದೇಕೆ? ಇದರ ಹಿಂದಿನ ಕಾರಣವೇನು? ಧ್ರುವ್ ರಾಠಿ ಬಂದಾಗ ಸೈಲೆಂಟ್ ಆಗಿದ್ದು, ಸೋನು ನಿಗಮ್ ಬಂದಾಗ ಬೀದಿಗಿಳಿದು ಪ್ರತಿಭಟಿಸಿದರೆ ಕರ್ನಾಟಕ ರಕ್ಷಣಾ ವೇದಿಕೆ ಅಂತಾ ನೀವು ಹೆಸರಿಟ್ಟುಕೊಂಡಿರುವುದು ತಪ್ಪಲ್ಲವೇ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಮತ್ತೊಂದು ವಿಚಾರ. ಇಲ್ಲಿ ಸೋನು ನಿಗಮ್ ಅಥವಾ ಧ್ರುವ್ ರಾಠಿ ಹೇಳಿದ್ದು ಸರಿ ಎಂದೂ ಯಾರೂ ಸಮರ್ಥನೆ ಮಾಡುತ್ತಿಲ್ಲ. ಅವರಿಬ್ಬರೂ ಹೇಳಿದ್ದು ತಪ್ಪೇ. ಯಾಕೆಂದರೆ ಅವರಿಬ್ಬರೂ ಹೇಳಿದ್ದು ಕನ್ನಡಿಗರ ಬಗ್ಗೆ. ವಿರೋಧ ಅವರಿಬ್ಬರ ಮೇಲೆಯೂ ಇರಬೇಕು. ಧ್ರುವ್ ರಾಠಿ ಬಂದಾಗ ಬಿಲದಲ್ಲಿದ್ದು, ಸೋನು ನಿಗಮ್ ಬಂದಾಗ ರಸ್ತೆಯಲ್ಲಿ ಬಿದ್ದು ಒದ್ದಾಡಿದರೆ ಕರವೇಯನ್ನು ಮುಂದೆ ಯಾರೂ ಕೂಡ ನಂಬೋದಿಲ್ಲ.


