ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಅಂತರಿಕ್ಷಕ್ಕೆ ಹೊತ್ತೊಯ್ಯಲಿದ್ದ ಆಕ್ಸಿಯೋಂ-4 ಮಿಷನ್‌ನ ರಾಕೆಟ್‌ನಲ್ಲಿದ್ದ ದೋಷವನ್ನು ಪತ್ತೆ ಹಚ್ಚುವ ಮೂಲಕ ಇಸ್ರೋ ವಿಜ್ಞಾನಿಗಳು ಬಹುದೊಡ್ಡ ದುರಂತವೊಂದನ್ನು ತಪ್ಪಿಸಿದರು ಎಂಬ ವಿಷಯ ಬೆಳಕಿಗೆ ಬಂದಿದೆ.

ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಅಂತರಿಕ್ಷಕ್ಕೆ ಹೊತ್ತೊಯ್ಯಲಿದ್ದ ಆಕ್ಸಿಯೋಂ-4 ಮಿಷನ್‌ನ ರಾಕೆಟ್‌ನಲ್ಲಿದ್ದ ದೋಷವನ್ನು ಪತ್ತೆ ಹಚ್ಚುವ ಮೂಲಕ ಇಸ್ರೋ ವಿಜ್ಞಾನಿಗಳು ಬಹುದೊಡ್ಡ ದುರಂತವೊಂದನ್ನು ತಪ್ಪಿಸಿದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಗಗನಯಾತ್ರಿಗಳಿರುವ ಕ್ಯಾಪ್ಸೂಲ್ ಹೊತ್ತ ಫಾಲ್ಕನ್-9 ರಾಕೆಟ್‌ ಜೂ.11ರಂದು ಉಡಾವಣೆಯಾಗಬೇಕಿತ್ತು. ಆದರೆ ರಾಕೆಟ್‌ನ ಆಕ್ಸಿಡೈಸರ್ ಲೈನ್‌ನಲ್ಲಿ ಬಿರುಕು ಇರುವುದನ್ನು ಇಸ್ರೋ ವಿಜ್ಞಾನಿಗಳು ಪತ್ತೆ ಹಚ್ಚಿದ್ದರು. ರಾಕೆಟ್‌ನಿಂದ ಸೋರಿಕೆಯಾಗುತ್ತಿದ್ದ ದ್ರವ ಆಮ್ಲಜನಕವು ಹೆಚ್ಚು ದಹನಶೀಲವಾದದ್ದು. ಒಂದು ವೇಳೆ ಬಿರುಕು ಪತ್ತೆಯಾಗದೇ ಉಳಿದಿದ್ದರೆ, ರಾಕೆಟ್ ಉಡಾವಣೆಯ ಸಮಯದಲ್ಲಿ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಈ ಸಮಸ್ಯೆಯನ್ನು ಪತ್ತೆ ಹಚ್ಚಿದ ವಿಜ್ಞಾನಿಗಳು ಇಸ್ರೋ ಮುಖ್ಯಸ್ಥ ಡಾ. ವಿ. ನಾರಾಯಣನ್ ಅವರ ಗಮನಕ್ಕೆ ತಂದರು. ನಾರಾಯಣನ್ ಅವರು, ಉಡಾವಣೆಯನ್ನು ಮುಂದೂಡುವಂತೆ ಮತ್ತು ತಾಂತ್ರಿಕ ದೋಷಗಳೆಲ್ಲ ಪರಿಹಾರವಾಗುವವರೆಗೆ ಖಡಾಖಂಡಿತವಾಗಿ ಉಡಾವಣೆ ಮಾಡದಂತೆ ಸೂಚಿಸಿದರು. ಹಾಗಾಗಿ ದೊಡ್ಡ ಅವಘಡ ತಪ್ಪಿತು ಎಂದು ತಿಳಿದುಬಂದಿದೆ.ಈ ಹಿಂದೆ 1997ರಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಕೊಲಂಬಸ್‌ ನೌಕೆಯಲ್ಲಿನ ದೋಷದಿಂದಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಮರಳುತ್ತಿದ್ದ ಭಾರತೀಯ ಮೂಲದ ಕಲ್ಪನಾ ಚಾವ್ಲಾ ಸೇರಿದಂತೆ ಅಮೆರಿಕದ ಯಾನಿಗಳು ನೌಕೆ ಸ್ಫೋಟಗೊಂಡು ಆಗಸದಲ್ಲೇ ಸಾವನ್ನಪ್ಪಿದ್ದರು.

ಇನ್ನು ಕಳೆದ ವರ್ಷ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್‌ ಅವರನ್ನು ಹೊತ್ತೊಯ್ದಿದ್ದ ಅಮೆರಿಕದ ಬೋಯಿಂಗ್‌ ಕಂಪನಿಯ ನೌಕೆಯಲ್ಲಿನ ದೋಷದ ಕಾರಣ, ಸುನಿತಾ ವಿಲಿಯಮ್ಸ್‌ 9 ತಿಂಗಳು ಆಗಸದಲ್ಲೇ ಉಳಿಯವಂತಾಗಿತ್ತು.

ಭಾರತದ ಗಗನಯಾತ್ರಿ ಶುಕ್ಲಾ ಬಾಹ್ಯಾಕಾಶ ಯಾತ್ರೆ 19ಕ್ಕೆ

2 ಬಾರಿ ಮುಂದೂಡಿದ್ದ ಯಾತ್ರೆಗೆ ಹೊಸ ಮುಹೂರ್ತ

ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕರೆದೊಯ್ಯಲಿರುವ ಆಕ್ಸಿಯೋಂ-4 ಮಿಷನ್‌ಗೆ ಇದೀಗ ಜೂ.19ರ ದಿನ ನಿಗದಿಯಾಗಿದೆ. ಈ ವಿಚಾರವನ್ನು ಇದೀಗ ಇಸ್ರೋ ಖಚಿತಪಡಿಸಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಶುಭಾಂಶು ಶುಕ್ಲಾ ಸೇರಿ ನಾಲ್ಕು ಗಗನಯಾತ್ರಿಗಳಿರುವ ಕ್ಯಾಪ್ಸೂಲ್‌ ಹೊತ್ತ ರಾಕೆಟ್‌ ನಾಸಾದ ಕೆನಡಿ ಬ್ಯಾಹ್ಯಾಕಾಶ ಕೇಂದ್ರದಿಂದ ಜೂ.11ರಂದೇ ನಭಕ್ಕೆ ಜಿಗಿಯಬೇಕಿತ್ತು. ಆದರೆ, ಸ್ಪೇಸ್‌ ಎಕ್ಸ್‌ನ ಫಾಲ್ಕಾನ್‌-9 ರಾಕೆಟ್‌ನಲ್ಲಿ ಕಂಡು ಬಂದ ಇಂಧನ ಸೋರಿಕೆ ಹಾಗೂ ನಂತರ ರಷ್ಯಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕಂಡು ಬಂದ ತಾಂತ್ರಿಕ ಸಮಸ್ಯೆಯಿಂದಾಗಿ ಈ ಯಾನ ಮುಂದೂಡಲಾಗಿತ್ತು.

ಇದೀಗ ಆ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ಇದೀಗ ರಾಕೆಟ್‌ ನಭಕ್ಕೇರಲು ಸಿದ್ಧವಾಗಿದೆ ಎಂದು ಇಸ್ರೋ ಹೇಳಿಕೊಂಡಿದೆ.

ನಾಸಾದ ಮಾಜಿ ಗಗನಯಾತ್ರಿ ಮತ್ತು ಆಕ್ಸಿಯೋಂ ಸ್ಪೇಸ್‌ ಸಂಸ್ಥೆಯ ಮಾನವಸಹಿತ ಗಗನಯಾತ್ರೆಯ ನಿರ್ದೇಶಕ ಪೆಗ್ಗಿ ವಿಟ್ಸನ್‌ ಅವರು ಈ ಉಡ್ಡಯನದ ನೇತೃತ್ವವಹಿಸಿದರೆ, ಇಸ್ರೋದ ಗಗನಯಾತ್ರಿ ಶುಕ್ಲಾ ಅವರು ಪೈಲಟ್‌ ಆಗಿರಲಿದ್ದಾರೆ. ಯುರೋಪಿಯನ್‌ ಸ್ಪೇಸ್‌ ಏಜೆನ್ಸಿಯ ಪೋಲೆಂಡ್‌ ಮೂಲದ ಸ್ಲವೋಝ್‌ ಮತ್ತು ಹಂಗೆರಿಯ ಟಿಬೊರ್‌ ಕಪು ಅವರು ಇವರಿಗೆ ಸಾಥ್‌ ನೀಡಲಿದ್ದಾರೆ.