ಕೊಟ್ಟೂರು ಮಾರ್ಗವಾಗಿ ನಾಲ್ಕು ಹೊಸ ರೈಲುಗಳ ಆರಂಭಕ್ಕೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಮುಂಬೈ-ದಾವಣಗೆರೆ ರೈಲಿನ ವಿಸ್ತರಣೆ ಮತ್ತು ಯಶವಂತಪುರ-ಮಡಗಾಂವ್ ವಂದೇ ಭಾರತ್ ರೈಲಿನ ಸಂಚಾರವೂ ಸೇರಿದೆ. ಇದರಿಂದ ಕೈಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ.

ವಿಜಯನಗರ: ಕೊಟ್ಟೂರು ಮಾರ್ಗವಾಗಿ ನಾಲ್ಕು ಪ್ರಮುಖ ಹೊಸ ರೈಲು ಮಾರ್ಗ ಆರಂಭಿಸಲು ರೈಲ್ವೆ ಸಚಿವರ ಮೇಲೆ ತೀವ್ರ ಒತ್ತಡ ಹೇರಿ ಈ ಭಾಗದ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಬಿಜೆಪಿ ಪಕ್ಷದ ಹಿರಿಯ ಮುಖಂಡ ಎಸ್. ತಿಂದಪ್ಪ ಕೇಂದ್ರ ಸಚಿವ ಪ್ರಹ್ಲಾದ್ ಜ್ಯೋಷಿ ಮತ್ತು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಗೆ ಹುಬ್ಬಳ್ಳಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ಕರಾವಳಿಗೂ ಸಂಪರ್ಕ

ಬೀದರ್ ನಿಂದ ಮಂಗಳೂರು ನಡುವಿನ ರೈಲು ಮಾರ್ಗ ರಚನೆಯಿಂದ ಕೊಟ್ಟೂರು ಮಾರ್ಗವಾಗಿ ಕರಾವಳಿಯ ಪ್ರಮುಖ ಬಂದರೂ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಬಹುದಾಗಿದೆ ಇದರಂತೆ ವಿಶಾಖ ಪಟ್ಟಣಂನಿಂದ ಮಂಗಳೂರಿಗೆ ಸಹ ಸಂಚಾರ ಕಲ್ಪಿಸಿದರೆ ಪೂರ್ವ ಪಶ್ಚಿಮ ಬಂದರೂ ಕರಿಡಾರ್ ರಚನೆಗೆ ಅನುಕೂಲವಾಗುತ್ತದೆ. ಮುಂಬೈ ನಿಂದ ಬೆಂಗಳೂರು ರೈಲನ್ನು ಕೊಟ್ಟೂರು ಹೊಸಪೇಟೆ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಟ್ಟರೆ ಪ್ರಾದೇಶಿಕ ಪ್ರಭಾವ ಮತ್ತು ಪ್ರಯೋಜನ ಆಗಲಿವೆ ಎಂದು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.

ಮುಂಬೈನಿಂದ ದಾವಣಗೆರೆ ರೈಲನ್ನು ಕೊಟ್ಟೂರು ಮಾರ್ಗವಾಗಿ ವಿಸ್ತರಣೆ

ಮುಂಬೈನಿಂದ ದಾವಣಗೆರೆ ರೈಲನ್ನು ಕೊಟ್ಟೂರು ಮಾರ್ಗವಾಗಿ ವಿಸ್ತರಿಸಿದರೆ ವಾಣಿಜ್ಯ ನಗರಿ ಮತ್ತು ರಾಜಧಾನಿ ನಗರ ನಡುವೆ ಪರ್ಯಾಯ ರೈಲು ಮಾರ್ಗವಾಗಿ ಸಹಕಾರಿಯಾಗುವುದರ ಜತೆಗೆ ಬಂದರುಗಳ ಮೂಲಕ ಕೈಗಾರಿಕ ಉತ್ಪನ್ನ ಮತ್ತು ಖನಿಜಗಳ ಸಾಗಣಿಕೆ ವೇಗಗೊಳಿಸಬಹದು ಅಲ್ಲದೇ ಪ್ರವಾಸದ್ಯೋಮ ಮತ್ತು ಧಾರ್ಮಿಕ ಕೇಂದ್ರಗಳಿಗೆ ಮಧ್ಯ ಕರ್ನಾಟಕದ ಭಕ್ತರು ನೇರವಾಗಿ ಪ್ರಯಾಣಿಸಲು ಅನುಕೂಲವಾಗುತ್ತದೆ ಇದು ಪಿ.ಎಂ.ಗತಿ ಶಕ್ತಿ ಯೋಜನೆಯ ಆಶಯಕ್ಕೆ ಪೂರಕವಾಗಿದೆ ಎಂದು ತಿಂದಪ್ಪ ಮನವಿ ಪತ್ರದಲ್ಲಿ ವಿವರಿಸಿದ್ದಾರೆ. ತಿಂದಪ್ಪನವರೊಂದಿಗೆ ನಿವೃತ್ತ ಗುಲ್ಬರ್ಗ ವಿ.ವಿ. ರಿಜಿಸ್ಟಾರ್ ಬಿ.ಸಿ. ಮಹಾಬಲೇಶ್ವರ, ನಿವೃತ್ತ ಶಿಕ್ಷಕ ಈಶ್ವರಪ್ಪ ತುರುಕಾಣಿ ಇದ್ದರು.

ದೇಶದಲ್ಲೇ ನಿಧಾನಗತಿಯ ವಂದೇ ಭಾರತ್!

ಕರಾವಳಿ ಭಾಗದ ಬಹುನಿರೀಕ್ಷಿತ ಬೆಂಗಳೂರು (ಯಶವಂತಪುರ)-ಮಂಗಳೂರು- ಮಡಗಾಂವ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲಿಗೆ ನ.13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎಸ್‌ಎಂವಿಟಿ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಿದ್ದಾರೆ.

26655 ಯಶವಂತಪುರ-ಮಡಗಾವ್‌ ವಂದೇ ಭಾರತ್ ಬುಧವಾರ ಹೊರತುಪಡಿಸಿ, 26656 ಮಡಗಾವ್‌-ಯಶವಂತಪುರ ರೈಲು ಗುರುವಾರ ಹೊರತುಪಡಿಸಿ ಉಳಿದ ಆರು ದಿನ ಸಂಚರಿಸಲಿದೆ.

12 ಪ್ರಮುಖ ನಿಲುಗಡೆ: ಯಶವಂತಪುರದಿಂದ ಬೆಳಗ್ಗೆ 7.35ಕ್ಕೆ ಹೊರಟು ಶ್ರವಣ ಬೆಳಗೊಳ, ಹಾಸನ (ಬೆ.9.38)(ಸಂ.6.13), ಸಕಲೇಶಪುರ, ಸುಬ್ರಹ್ಮಣ್ಯ ರೋಡ್‌, ಕಬಕ ಪುತ್ತೂರು, ಮಂಗಳೂರು ಜಂಕ್ಷನ್‌ (ಮ.3.05)(ಮ.1.50), ಉಡುಪಿ (ಸಂ.4.38)(ಮ.12.18), ಕುಂದಾಪುರ, ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್‌, ಕಾರವಾರ (ಸಂ.7.45)(ಬೆ.3.03) ಮೂಲಕ ಮಡಗಾವ್‌ಗೆ ರಾತ್ರಿ 8.55ಕ್ಕೆ ತಲುಪಲಿದೆ.

ಅದೇ ರೀತಿ ಮರುದಿನ ಮಡಗಾವ್‌ನಿಂದ ಬೆಳಗ್ಗೆ 8.20ಕ್ಕೆ ಹೊರಟು, ಯಶವಂತಪುರವನ್ನು ರಾತ್ರಿ 9.15ಕ್ಕೆ ತಲುಪಲಿದೆ. ಒಟ್ಟು 16 ಬೋಗಿಗಳು ಇದರಲ್ಲಿರಲಿದೆ. ಇದರಿಂದಾಗಿ ಪ್ರಸ್ತುತ ಇರುವ ಮಂಗಳೂರು-ಮಡಗಾವ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸ್ಥಗಿತಗೊಳ್ಳಲಿದೆ.

ದೇಶದಲ್ಲಿಯೇ ಕನಿಷ್ಠ!

ದೇಶದ 82 ಜೋಡಿ ವಂದೇ ಭಾರತ್ ಚೇರ್‌ಕಾರ್‌ ರೈಲು ಸೇವೆಗಳ ಪೈಕಿ ಯಶವಂತಪುರ-ಮಡಗಾಂವ್ ವಂದೇ ಭಾರತ್ ರೈಲು ಅತ್ಯಧಿಕ ಪ್ರಯಾಣದ ಅವಧಿ ಹೊಂದಿರುವ ಸೇವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಷ್ಟೇ ಅಲ್ಲದೇ ಯಶವಂತಪುರದಿಂದ ಇದರ ಸರಾಸರಿ 54 ಕಿ.ಮೀ ವೇಗವಿದ್ದರೆ, ವಾಪಾಸ್‌ 53 ಕಿ.ಮೀ. ಸರಾಸರಿ ಇರಲಿದೆ. ಇದು ದೇಶದಲ್ಲಿಯೇ ಕನಿಷ್ಠವಾಗಲಿದೆ.