ಮಂಗಳೂರು-ಯಶವಂತಪುರ ನಡುವಿನ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ಸೇರಿದಂತೆ ಎರಡು ಪ್ರಮುಖ ರೈಲುಗಳ ವೇಳಾಪಟ್ಟಿ ಬದಲಾವಣೆಗೆ ವಿರೋಧ ವ್ಯಕ್ತವಾಗಿದೆ. ಹಳೆಯ ಬೆಳಗ್ಗೆ 7 ಗಂಟೆಯ ನಿರ್ಗಮನ ಸಮಯವನ್ನೇ ಮುಂದುವರಿಸುವಂತೆ ಶಾಸಕ ವೇದವ್ಯಾಸ ಕಾಮತ್ ಅವರು ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮಂಗಳೂರು: ಮಂಗಳೂರು ರೈಲ್ವೆ ಪ್ರದೇಶ ಮೈಸೂರು ವಿಭಾಗಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ರೈಲುಗಳ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಪ್ರಕಟವಾಗಿತ್ತು, ಇದು ಕರಾವಳಿಯ ರೈಲು ಪ್ರಯಾಣಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಯಶವಂತಪುರ-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಂಗಳೂರು ಜಂಕ್ಷನ್ ಮೂಲಕ ಸಂಚರಿಸಲಿದ್ದು, ಮಂಗಳೂರು ಸೆಂಟ್ರಲ್‌ಗೆ ಬರದಿರುವುದು ಒಂದೆಡೆಯಾದರೆ, ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹಗಲು ರೈಲುಗಳ ವೇಳಾಪಟ್ಟಿಯನ್ನೇ ಬದಲಿಸಿರುವುದು ಕರಾವಳಿಗರ ಅಸಮಾಧಾನಕ್ಕೆ ಕಾರಣವಾಗಿತ್ತು.

ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಸಂಖ್ಯೆ 16576 ಮಂಗಳೂರು-ಯಶವಂತಪುರ ‘ಗೊಮ್ಮಟೇಶ್ವರ ಎಕ್ಸ್‌ಪ್ರೆಸ್’ ಮತ್ತು ರೈಲು ಸಂಖ್ಯೆ 16540 ಮಂಗಳೂರು-ಯಶವಂತಪುರ ಎಕ್ಸ್‌ಪ್ರೆಸ್‌ಗಳ ಪ್ರಸ್ತುತ ನಿರ್ಗಮನ ಸಮಯಗಳ ಮುಂದುವರಿಸುವಂತೆ ಶಾಸಕ ವೇದವ್ಯಾಸ ಕಾಮತ್‌ ಅವರು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಎರಡೂ ನಿರ್ಗಮನ ಸಮಯಗಳಲ್ಲಿನ ಬದಲಾವಣೆಯ ಬಗ್ಗೆ ಈ ಪ್ರದೇಶದ ಪ್ರಯಾಣಿಕರಲ್ಲಿ ವ್ಯಾಪಕ ಅಸಮಾಧಾನವಿದೆ. ಪ್ರಸ್ತುತ ಈ ಎರಡೂ ರೈಲುಗಳು ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 7 ಗಂಟೆಗೆ ಹೊರಟು ಸಂಜೆ 4.30ಕ್ಕೆ ಯಶವಂತಪುರ ತಲುಪುತ್ತವೆ. ಶಿಕ್ಷಣ, ಉದ್ಯೋಗ, ವೈದ್ಯಕೀಯ ಚಿಕಿತ್ಸೆ ಮತ್ತು ವೈಯಕ್ತಿಕ ಅಗತ್ಯಗಳಿಗಾಗಿ ಕರಾವಳಿ ಕರ್ನಾಟಕ ಮತ್ತು ಬೆಂಗಳೂರು ನಡುವೆ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ಈ ಅನುಕೂಲಕರ ಹಗಲಿನ ವೇಳಾಪಟ್ಟಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಜೊತೆಗೆ ಪ್ರಸಿದ್ಧ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೂ ಈ ಸಮಯ ಅನುಕೂಲಕರವಾಗಿದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೂ ಈ ಸಮಯ ಹೆಚ್ಚು ಅನುಕೂಲಕರವಾಗಿದೆ.

ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 7ರಿಂದ ಬೆಳಗ್ಗೆ 11.30ಕ್ಕೆ ರೈಲುಗಳ ನಿರ್ಗಮನ ಸಮಯವನ್ನು ಬದಲಾಯಿಸಲು ರೈಲ್ವೆ ಆಡಳಿತ ಮುಂದಾಗಿದ್ದು, ಇದರಿಂದ ಈ ರೈಲುಗಳು ಯಶವಂತಪುರಕ್ಕೆ ಆಗಮಿಸುವ ಸಮಯವೂ ವಿಳಂಬವಾಗುತ್ತದೆ. ರಾತ್ರಿ 10.30ಕ್ಕೆ ಬೆಂಗಳೂರಿಗೆ ತಲುಪುವುದರಿಂದ ಈ ಬದಲಾವಣೆ ಅಲ್ಲಿಂದ ಬೆಂಗಳೂರಿನ ವಿವಿಧ ಭಾಗಗಳಿಗೆ ಪ್ರಯಾಣಿಸಬೇಕಾದವರಿಗೆ, ವಿಶೇಷವಾಗಿ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಮಹಿಳೆಯರು ಮತ್ತು ಮಕ್ಕಳೊಂದಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ತೀವ್ರ ಅನಾನುಕೂಲತೆ ಮತ್ತು ತೊಂದರೆಯನ್ನುಂಟು ಮಾಡುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಬದಲಾವಣೆಯಾದ ರೈಲುಗಳ ಸಮಯ

ಗೋಮಟೇಶ್ವರ ಹಗಲು ರೈಲಿನ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿ ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 7 ಗಂಟೆಗೆ ಹೊರಡುತ್ತಿದ್ದ 16576/16540 ಸಂಖ್ಯೆಯ ರೈಲು ಬೆಳಗ್ಗೆ 11.40ಕ್ಕೆ ಹೊರಟು. ಯಶವಂತಪುರ ತಲುಪುವ ಸಮಯವನ್ನು ಸಂಜೆ 4.30ರ ಬದಲಿಗೆ ರಾತ್ರಿ 10.15ಕ್ಕೆ ನಿಗದಿಪಡಿಸಲಾಗಿದೆ.

ಯಶವಂತಪುರದಿಂದ ಮಂಗಳೂರು ಕಡೆಗೆ ಬರುವ 16575/16539 ರೈಲಿನ ವೇಳಾಪಟ್ಟಿಯಲ್ಲೂ ಬದಲಾವಣೆಯಾಗಿದೆ. ಈ ರೈಲು ಪಡೀಲ್‌ಗೆ ಸಂಜೆ 4.25ರ ಬದಲಿಗೆ 5 ಗಂಟೆಗೆ ಆಗಮಿಸಲಿದ್ದು, ಮಂಗಳೂರು ಜಂಕ್ಷನ್‌ಗೆ ಸಂಜೆ 4.40ರ ಬದಲಿಗೆ 5.10ಕ್ಕೆ ತಲುಪಲಿವೆ.

ಯಶವಂತಪುರ-ಕಾರವಾರ 16515 ರೈಲಿನ ಪಡೀಲ್ ಆಗಮನ ಸಮಯವನ್ನು ಸಂಜೆ 4.25ರಿಂದ 5 ಗಂಟೆಗೆ ಹಾಗೂ ತೋಕೂರು ಆಗಮನ ಸಮಯವನ್ನು ಸಂಜೆ 5.45ರಿಂದ 6.20ಕ್ಕೆ ಬದಲಿಸಲಾಗಿದೆ. ಕಾರವಾರ ತಲುಪುವ ಸಮಯ ರಾತ್ರಿ 10.45ರ ಬದಲಿಗೆ 11.30 ಆಗಿದೆ. ಕಾರವಾರ-ಯಶವಂತಪುರ 16516 ರೈಲು ಯಶವಂತಪುರ ತಲುಪುವ ಸಮಯ ರಾತ್ರಿ 8.50ರ ಬದಲಿಗೆ 10.15ಕ್ಕೆ ಬದಲಾವಣೆಯಾಗಿದೆ