ಬೆಂಗಳೂರಿನ ಐಐಎಂಬಿ (IIMB) ಮೊದಲ ಬ್ಯಾಚ್ನ ವಿದ್ಯಾರ್ಥಿಗಳು 50 ವರ್ಷಗಳ ನಂತರ 'ಸುವರ್ಣ ಮಹೋತ್ಸವ ಪುನರ್ಮಿಲನ' ಆಚರಿಸಿಕೊಂಡರು. 1976ರ ಬ್ಯಾಚ್ನ 12 ಮಂದಿ ಒಂದೆಡೆ ಸೇರಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಬೆಂಗಳೂರು (ನ.23): ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ (IIM Bangalore - IIMB) ಮೊದಲ ಬ್ಯಾಚ್ನ ಹಳೆಯ ವಿದ್ಯಾರ್ಥಿಗಳು ಪದವಿ ಪಡೆದು 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ತಮ್ಮ 'ಸುವರ್ಣ ಮಹೋತ್ಸವ ಪುನರ್ಮಿಲನ'ವನ್ನು (Golden Reunion) ಸಂಭ್ರಮದಿಂದ ಆಚರಿಸಿಕೊಂಡರು. 1976ರ ಬ್ಯಾಚ್ನ ಒಟ್ಟು 49 ವಿದ್ಯಾರ್ಥಿಗಳ ಪೈಕಿ 12 ಮಂದಿ ಐದು ದಶಕಗಳ ನಂತರ ಒಂದೆಡೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಪರಸ್ಪರ ಬೆರೆತರು. 50 ವರ್ಷಗಳ ಹಿಂದೆ ಬೆಂಗಳೂರಿನ ಲ್ಯಾಂಗ್ಫೋರ್ಡ್ ರಸ್ತೆಯ ಬಾಡಿಗೆ ಸ್ಥಳದಲ್ಲಿ ಐಐಎಂಬಿ ಆರಂಭವಾಗಿತ್ತು. ಅದಾದ ಕೆಲ ವರ್ಷಗಳ ಬಳಿಕ ಶಾಶ್ವತವಾಗಿ ಬನ್ನೇರುಘಟ್ಟ ರಸ್ತೆಯ ಬಿಲ್ಡಿಂಗ್ಗೆ ಶಿಫ್ಟ್ ಆಗಿತ್ತು.
ಐಐಎಂಬಿ ಹಳೆಯ ವಿದ್ಯಾರ್ಥಿಗಳ ಸಂಘ (IIMBAA) ಈ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕುರಿತು ಮಾತನಾಡಿದ ಐಐಎಂಬಿಎಎ (IIMBAA) ಅಧ್ಯಕ್ಷ ಹರೀಶ್ ಮಿತ್ತಲ್ (PGP 1988), ಐಐಎಂಬಿಯ ಮೊಟ್ಟಮೊದಲ ಪದವೀಧರ ಬ್ಯಾಚ್ನ ಸುವರ್ಣ ಮಹೋತ್ಸವ ಪುನರ್ಮಿಲನವನ್ನು ಆಯೋಜಿಸುವುದು ಐಐಎಂಬಿಎಎಗೆ ದೊರೆತ ದೊಡ್ಡ ಗೌರವ ಮತ್ತು ಸೌಭಾಗ್ಯವಾಗಿದೆ. 1976ರ ಬ್ಯಾಚ್ ಸಂಸ್ಥೆಯ ಆರಂಭದ ದಿನಗಳಿಂದಲೂ ಈ ಪಯಣದ ಭಾಗವಾಗಿದೆ; ಈ ಮಹತ್ವದ ಮೈಲಿಗಲ್ಲಿನ ಜವಾಬ್ದಾರಿಯನ್ನು ಅವರು ನಮಗೆ ವಹಿಸಿರುವುದು ಅತ್ಯಂತ ವಿಶೇಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಹಳೆಯ ವಿದ್ಯಾರ್ಥಿಗಳ ಸಾಧನೆ ಇಂದಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿ: ಪ್ರೊ. ದಿನೇಶ್ ಕುಮಾರ್
ಐಐಎಂಬಿ ಪ್ರಭಾರ ನಿರ್ದೇಶಕ ಪ್ರೊ. ದಿನೇಶ್ ಕುಮಾರ್ (Prof Dinesh Kumar) ಅವರು ಹಳೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಮೊದಲ ಬ್ಯಾಚ್ ವಿದ್ಯಾರ್ಥಿಗಳ ಜೀವನ ಪಯಣ ಮತ್ತು ಸಮಾಜಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿದರು. ಅಲ್ಲದೆ, ಇವರ ಅನುಭವಗಳು ಇಂದಿನ ವಿದ್ಯಾರ್ಥಿಗಳಿಗೆ ಹೇಗೆ ಸ್ಫೂರ್ತಿಯಾಗಬಲ್ಲವು ಎಂಬುದನ್ನು ಅವರು ಒತ್ತಿ ಹೇಳಿದರು.
ಐಐಎಂಬಿಯ ಪ್ರತಿಷ್ಠಿತ 'ಡಿಸ್ಟಿಂಗ್ವಿಶ್ಡ್ ಅಲುಮ್ನಿ' (Distinguished Alumni) ಪ್ರಶಸ್ತಿ ಪುರಸ್ಕೃತರಾದ ಎಂ.ಎಸ್. ಜಾಯೆದ್ (MS Zayed - PGP 1976), ಐಐಎಂಬಿ ತಮ್ಮ ಜೀವನ ಮತ್ತು ವೃತ್ತಿಜೀವನವನ್ನು ಹೇಗೆ ರೂಪಿಸಿತು ಎಂಬುದನ್ನು ನೆನಪಿಸಿಕೊಂಡರು. ಒಂದು ವೇಳೆ ನಿಮಗೆ ಮತ್ತೊಂದು ಜೀವನ ಬದುಕುವ ಅವಕಾಶ ಸಿಕ್ಕರೆ ಏನನ್ನು ಆಯ್ಕೆ ಮಾಡಿಕೊಳ್ಳುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ಮತ್ತೆ ಐಐಎಂಬಿಯ ಇದೇ ಪಯಣವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ" ಎಂದು ಭಾವುಕರಾಗಿ ನುಡಿದರು. ಈ ಸುವರ್ಣ ಮಹೋತ್ಸವ ಪುನರ್ಮಿಲನ ಕಾರ್ಯಕ್ರಮವನ್ನು ಶ್ರೀನಿವಾಸನ್ (Srinivasan - PGP 1976) ಅವರು ಯಶಸ್ವಿಯಾಗಿ ಸಂಯೋಜಿಸಿದ್ದರು.
















