ವೆಚ್ಚ ಕಡಿತದ ಭಾಗವಾಗಿ, ಬೆಂಗಳೂರು ಮೆಟ್ರೋದ ಹೆಬ್ಬಾಳ-ಸರ್ಜಾಪುರ ಕಾರಿಡಾರ್‌ನಿಂದ ವೆಟರ್ನರಿ ಕಾಲೇಜು ನಿಲ್ದಾಣವನ್ನು ಕೈಬಿಡಲಾಗಿದೆ. ಪರಿಷ್ಕೃತ ₹25,999 ಕೋಟಿ ವೆಚ್ಚದ ಈ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಬಾಕಿಯಿದ್ದು, ಡಬಲ್ ಡೆಕ್ಕರ್ ವಿನ್ಯಾಸದ ಕುರಿತ ವಿವಾದದಿಂದಾಗಿ ವಿಳಂಬವಾಗಿದೆ.
ಬೆಂಗಳೂರು (ಜೂ.12): ಕೇಂದ್ರ ಸರ್ಕಾರದ ಅಂತಿಮ ಅನುಮೋದನೆ ಪಡೆಯಲು ವೆಚ್ಚವನ್ನು ಕಡಿಮೆ ಮಾಡುವ ಪ್ರಕ್ರಿಯೆಯ ಭಾಗವಾಗಿ, ಬೆಂಗಳೂರು ಮೆಟ್ರೋ (Bangalore Metro) ರೈಲು ನಿಗಮ ನಿಯಮಿತ (BMRCL) ಫೇಸ್ 3A (ರೆಡ್ ಲೈನ್) ಅಡಿಯಲ್ಲಿ ಪ್ರಸ್ತಾವಿತ ಹೆಬ್ಬಾಳ-ಸರ್ಜಾಪುರ ಕಾರಿಡಾರ್‌ನಿಂದ (Hebbal-Sarjapur corridor) ಒಂದು ಮೆಟ್ರೋ ನಿಲ್ದಾಣವನ್ನು ಕೈಬಿಟ್ಟಿದೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ. ಮೆಖ್ರಿ ಸರ್ಕಲ್ ಮತ್ತು ಹೆಬ್ಬಾಳ ಸಮೀಪದ ಗಂಗಾನಗರ ನಡುವೆ ಈ ಹಿಂದೆ ಯೋಜಿಸಲಾಗಿದ್ದ ಪ್ರಸ್ತಾವಿತ ವೆಟರ್ನರಿ ಕಾಲೇಜು ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣವನ್ನು ಪರಿಷ್ಕೃತ ವಿವರವಾದ ಯೋಜನಾ ವರದಿ (DPR) ಯಿಂದ ಕೈಬಿಡಲಾಗಿದೆ ಎಂದು ಮೂಲಗಳು ಹೇಳಿವೆ. ಈ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ತುಂಬಾ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದ್ದು, ವೆಚ್ಚವನ್ನು ತಗ್ಗಿಸುವ ಸಲುವಾಗಿ ಇದನ್ನು ಕೈಬಿಡುವ ತೀರ್ಮಾನಕ್ಕೆ ಬರಲಾಗಿದೆ.
ಪ್ರಸ್ತುತ ಪರಿಷ್ಕೃತ ರೂಪದಲ್ಲಿ ಸುಮಾರು 25,999 ಕೋಟಿ ರೂ. ವೆಚ್ಚದ 37 ಕಿಲೋಮೀಟರ್ ಉದ್ದದ ಹೆಬ್ಬಾಳ-ಸರ್ಜಾಪುರ ಕಾರಿಡಾರ್‌ಗೆ ಕರ್ನಾಟಕ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಆದರೆ ಇದು ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಯ ಕ್ಲಿಯರೆನ್ಸ್‌ಗಾಗಿ ಕಾಯುತ್ತಿದೆ. ಈ ಕಾರಿಡಾರ್ ಆಗ್ನೇಯ ಬೆಂಗಳೂರಿನ ಪ್ರಮುಖ ಐಟಿ ಹಬ್ ಆಗಿರುವ ಸರ್ಜಾಪುರವನ್ನು ಉತ್ತರದ ಹೆಬ್ಬಾಳಕ್ಕೆ ಸಂಪರ್ಕಿಸಲಿದ್ದು, ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ (CBD) ಮತ್ತು ಕೋರಮಂಗಲ ಸೇರಿದಂತೆ ಪ್ರಮುಖ ನಗರ ಪ್ರದೇಶಗಳ ಮೂಲಕ ಹಾದುಹೋಗುತ್ತದೆ.
ವೆಚ್ಚ ಪರಿಷ್ಕರಣೆ ಮತ್ತು ಡಿಪಿಆರ್ ಬದಲಾವಣೆಗಳು
ಫೇಸ್ 3A ಯೋಜನೆಯು ಒಟ್ಟು 37.8 ಕಿಮೀ ವ್ಯಾಪಿಸಿದ್ದು, ಇದರಲ್ಲಿ 14 ಕಿಮೀ ಭೂಗತ (Underground) ಮತ್ತು 23 ಕಿಮೀ ಎತ್ತರಿಸಿದ (Elevated) ಮಾರ್ಗ ಸೇರಿದೆ. ಕರ್ನಾಟಕ ಸರ್ಕಾರವು 2025 ಜನವರಿ 10 ರಂದು 28,405 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಗೆ ಅನುಮೋದನೆ ನೀಡಿ, 2025 ಜನವರಿ 15 ರಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯಕ್ಕೆ (MoHUA) ಡಿಪಿಆರ್ ಸಲ್ಲಿಸಿತ್ತು.
ಭೂಗತ ಮಾರ್ಗದ ವೆಚ್ಚವನ್ನು ಸಮರ್ಥಿಸುವಂತೆ ಕೇಂದ್ರ ಸಚಿವಾಲಯ ಸೂಚಿಸಿದ ನಂತರ, ಬಿಎಂಆರ್‌ಸಿಎಲ್ ಫ್ರೆಂಚ್ ಸಂಸ್ಥೆ 'ಸಿಸ್ಟ್ರಾ' (SYSTRA) ಮೂಲಕ ಅಂದಾಜುಗಳನ್ನು ಪರಿಶೀಲಿಸಿತು. ಈ ಸಂಸ್ಥೆಯು ಭೂಗತ ನಿಲ್ದಾಣಗಳ ಉದ್ದವನ್ನು ಕಡಿಮೆ ಮಾಡುವ ಮೂಲಕ ಯೋಜನಾ ವೆಚ್ಚವನ್ನು 25,485 ಕೋಟಿ ರೂ.ಗೆ ಇಳಿಸಿತು (2,920 ಕೋಟಿ ರೂ. ಕಡಿತ). ತದನಂತರದ ವಿನ್ಯಾಸ ಬದಲಾವಣೆಗಳು ಮತ್ತು ಒಂದು ನಿಲ್ದಾಣವನ್ನು ಕೈಬಿಡುವ ನಿರ್ಧಾರದ ನಂತರ, ಕಾರಿಡಾರ್‌ನ ಅಂದಾಜು ವೆಚ್ಚವನ್ನು 25,999 ಕೋಟಿ ರೂ. ಗೆ ಇಳಿಸಿ 2026ರ ಏಪ್ರಿಲ್ 29 ರಂದು ಕೇಂದ್ರಕ್ಕೆ ಮರುಸಲ್ಲಿಸಲಾಗಿದೆ.
ಡಬಲ್ ಡೆಕ್ಕರ್ ವಿನ್ಯಾಸದ ಕುರಿತು ಐಐಟಿ ರೂರ್ಕಿ ಅಧ್ಯಯನ
ಹೆಬ್ಬಾಳ-ಸರ್ಜಾಪುರ ಕಾರಿಡಾರ್‌ನಾದ್ಯಂತ ಸಂಪೂರ್ಣ 'ಡಬಲ್ ಡೆಕ್ಕರ್' (ಮೇಲ್ಭಾಗದಲ್ಲಿ ಮೆಟ್ರೋ ಮಾರ್ಗ ಮತ್ತು ಕೆಳಭಾಗದಲ್ಲಿ ರಸ್ತೆ ಫ್ಲೈಓವರ್) ರಚನೆಗಳನ್ನು ನಿರ್ಮಿಸುವುದರಿಂದ ಆಗುವ ಪರಿಣಾಮಗಳು ಮತ್ತು ಅದರ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಬಿಎಂಆರ್‌ಸಿಎಲ್ ಈಗ ಐಐಟಿ ರೂರ್ಕಿ (IIT Roorkee) ಸಂಸ್ಥೆಯನ್ನು ನಿಯೋಜಿಸಿದೆ.
ಇಡೀ ಕಾರಿಡಾರ್‌ನಲ್ಲಿ ಇಂತಹ ಡಬಲ್ ಡೆಕ್ಕರ್ ವಿನ್ಯಾಸ ತರುವುದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು, ಖಾಸಗಿ ವಾಹನಗಳ ಬಳಕೆಗೆ ಉತ್ತೇಜನ ಸಿಗಬಹುದು ಮತ್ತು ಇಷ್ಟು ದೊಡ್ಡ ವೆಚ್ಚದ ಮೆಟ್ರೋ ಯೋಜನೆಯ ಮುಖ್ಯ ಉದ್ದೇಶವೇ ಹಳ್ಳ ಹಿಡಿಯಬಹುದು ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ (MoHUA) ಕಳವಳ ವ್ಯಕ್ತಪಡಿಸಿತ್ತು. ಕರ್ನಾಟಕದ ಈ ಡಬಲ್ ಡೆಕ್ಕರ್ ಮೆಟ್ರೋ ನೀತಿಯಿಂದಾಗಿಯೇ ಹೆಬ್ಬಾಳ-ಸರ್ಜಾಪುರ ಕಾರಿಡಾರ್‌ಗೆ ಕೇಂದ್ರದ ಅನುಮೋದನೆ ವಿಳಂಬವಾಗಿದೆ ಎಂದು 2026 ಫೆಬ್ರವರಿ 11 ರಂದೇ ವರದಿಯಾಗಿತ್ತು. ಐಐಟಿ ರೂರ್ಕಿ ವರದಿ ಬಂದ ನಂತರ ಕೇಂದ್ರದ ಅಂತಿಮ ಒಪ್ಪಿಗೆ ಸಿಗುವ ನಿರೀಕ್ಷೆಯಿದೆ.
ಡಬಲ್ ಡೆಕ್ಕರ್ ಕಾರಿಡಾರ್‌ಗಳಿಗಾಗಿ ರಾಜ್ಯದ ಪಟ್ಟು
ಬೆಂಗಳೂರಿನಲ್ಲಿ ಜಾಗದ ಕೊರತೆ ಇರುವುದರಿಂದ ಮತ್ತು ಭೂಸ್ವಾಧೀನ ವೆಚ್ಚ ಹೆಚ್ಚಾಗಿರುವುದರಿಂದ ರಸ್ತೆ ಮತ್ತು ಮೆಟ್ರೋ ಮೂಲಸೌಕರ್ಯಗಳನ್ನು ಲಂಬವಾಗಿ (Vertical) ಸಂಯೋಜಿಸುವುದು ಅನಿವಾರ್ಯ ಎಂದು ರಾಜ್ಯ ಅಧಿಕಾರಿಗಳು ವಾದಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಮಾದರಿಯನ್ನು ಬಲವಾಗಿ ಬೆಂಬಲಿಸುತ್ತಿದ್ದಾರೆ.
ನಮ್ಮ ಮೆಟ್ರೋ ಫೇಸ್ 3 ಅಡಿಯಲ್ಲಿ ಹೊರವರ್ತುಲ ರಸ್ತೆ ಪಶ್ಚಿಮ (Outer Ring Road West) ಮತ್ತು ಮಾಗಡಿ ರಸ್ತೆಯ ಸುಮಾರು 44.6 ಕಿಮೀ ವ್ಯಾಪ್ತಿಯಲ್ಲಿ ಡಬಲ್ ಡೆಕ್ಕರ್ ಕಾರಿಡಾರ್‌ಗಳನ್ನು ಯೋಜಿಸಲಾಗುತ್ತಿದೆ. ಇದರ ಜೊತೆಗೆ 37 ಕಿಮೀ ವ್ಯಾಪ್ತಿಯ ಹೆಚ್ಚುವರಿ ಡಬಲ್ ಡೆಕ್ಕರ್ ಘಟಕಕ್ಕೆ ರಾಜ್ಯ ಸರ್ಕಾರ 9,700 ಕೋಟಿ ರೂ. ಅನುಮೋದನೆ ನೀಡಿದ್ದು, ಇದರ ಸಂಪೂರ್ಣ ವೆಚ್ಚವನ್ನು ರಾಜ್ಯವೇ ಭರಿಸಲಿದೆ.
ಪರಿಷ್ಕೃತ ವಿನ್ಯಾಸದ ಕಾರಣ ಇದಕ್ಕೆ ಕೇಂದ್ರದಿಂದ ಹೊಸದಾಗಿ ಅನುಮೋದನೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಜನವರಿ 2026 ರಲ್ಲಿ ಫೇಸ್ 3 (ಆರೆಂಜ್ ಲೈನ್) ನ 18.5 ಕಿಮೀ ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದರೂ, ಕೇಂದ್ರದ ಒಪ್ಪಿಗೆ ಸಿಗದ ಕಾರಣ ಕಾಂಟ್ರಾಕ್ಟ್ ನೀಡಲು ಸಾಧ್ಯವಾಗಿಲ್ಲ.
ಫೇಸ್ 2 ಯೋಜನೆಯ ವೆಚ್ಚ ಹೆಚ್ಚಳ
ಇದೇ ವೇಳೆ ಬೆಂಗಳೂರು ಮೆಟ್ರೋ ಹಂತ 2 ರ ವೆಚ್ಚ ಪರಿಷ್ಕರಣೆಯನ್ನೂ ಕೇಂದ್ರದ ಅನುಮೋದನೆಗೆ ಸಲ್ಲಿಸಲಾಗಿದೆ. ಫೆಬ್ರವರಿ 2014 ರಲ್ಲಿ ಕೇಂದ್ರ ಸರ್ಕಾರವು ಫೇಸ್ 2 ರ 72 ಕಿಮೀ ಮಾರ್ಗಕ್ಕೆ (61 ನಿಲ್ದಾಣಗಳು) 26,405.14 ಕೋಟಿ ರೂ. ಮಂಜೂರು ಮಾಡಿತ್ತು ಮತ್ತು 5 ವರ್ಷಗಳಲ್ಲಿ ಮುಗಿಸಲು ಗಡುವು ನೀಡಿತ್ತು. ಆದರೆ, ಪ್ರಸ್ತುತ ಇದರ ಪರಿಷ್ಕೃತ ಪೂರ್ಣಗೊಳ್ಳುವ ವೆಚ್ಚವು 40,425 ಕೋಟಿ ರೂ. ಗೆ ಏರಿಕೆಯಾಗಿದೆ (14,019.8 ಕೋಟಿ ರೂ. ಹೆಚ್ಚಳ).
ಕರ್ನಾಟಕ ಸರ್ಕಾರ ಈಗಾಗಲೇ ಅನುಮೋದಿಸಿರುವ ಭೂಸ್ವಾಧೀನ ವೆಚ್ಚಗಳನ್ನು ಹೊರತುಪಡಿಸಿ, ನಿವ್ವಳ ಹೆಚ್ಚಳವು 9,729.90 ಕೋಟಿ ರೂ. ಆಗಿದೆ ಎಂದು ಡಿ.ಕೆ. ಶಿವಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ. 2025 ಜೂನ್ 5 ರಂದು ರಾಜ್ಯ ಸರ್ಕಾರ ಅನುಮೋದಿಸಿದ ಈ ಪರಿಷ್ಕೃತ ವೆಚ್ಚದ ಪ್ರಸ್ತಾವನೆಯನ್ನು ಜೂನ್ 9 ರಂದು ಅಂತಿಮ ಕ್ಲಿಯರೆನ್ಸ್‌ಗಾಗಿ MoHUA ಗೆ ಸಲ್ಲಿಸಲಾಗಿದೆ.


