ಕೇವಲ ₹20 ವಿದ್ಯುತ್ ಬಿಲ್ ಪಾವತಿಸಲು ಮುಂದಾದ 71 ವರ್ಷದ ಬೆಂಗಳೂರಿನ ವ್ಯಕ್ತಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹1.99 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ. ಆದರೆ ಬ್ಯಾಂಕ್‌ ಕೋರ್ಟ್‌ ಶಾಕ್‌ ನೀಡಿದೆ.

ಕೇವಲ ₹20 ವಿದ್ಯುತ್ ಬಿಲ್ ಪಾವತಿಸಲು ಮುಂದಾದ 71 ವರ್ಷದ ಬೆಂಗಳೂರಿನ ವ್ಯಕ್ತಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹1.99 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ. ಆದರೆ ಪ್ರಕರಣದಲ್ಲಿ ಬ್ಯಾಂಕ್‌ ಗ್ರಾಹಕರಿಗೆ ಪರಿಹಾರ ನೀಡುವಂತೆ ಕೋರ್ಟ್‌ ಸೂಚಿಸಿದೆ.

₹20 ಬಿಲ್ ಪಾವತಿಸಲು ಹೋಗಿ ಶುರುವಾಯ್ತು ಮೋಸ

2022ರ ಜುಲೈ 19ರಂದು ಬೆಂಗಳೂರಿನ ವ್ಯಕ್ತಿಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ ಎಂಬ ಸಂದೇಶ ಬಂದಿತ್ತು. ಬಿಲ್ ಬಾಕಿ ಇರುವುದರಿಂದ ಸಂಪರ್ಕ ಕಡಿತಗೊಳ್ಳಲಿದೆ ಎಂದು ನಂಬಿದ ಅವರು, ಸಂದೇಶದಲ್ಲಿದ್ದ ಸಂಖ್ಯೆಯನ್ನು ಸಂಪರ್ಕಿಸಿದ್ದರು. ವಂಚಕರು ವಿದ್ಯುತ್ ಇಲಾಖೆಯ ಅಧಿಕೃತ ಅಪ್ಲಿಕೇಶನ್‌ನಂತೆ ಕಾಣುವ ನಕಲಿ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡುವಂತೆ ಅವರಿಗೆ ಸೂಚಿಸಿದ್ದರು. ₹20ರಷ್ಟು ಸಣ್ಣ ಮೊತ್ತದ ವಿದ್ಯುತ್ ಬಿಲ್ ಪಾವತಿಸಲು ಅವರು ಮುಂದಾಗಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಅವರ SBI ಖಾತೆಯಿಂದ ₹25,000 ಮತ್ತು ನಂತರ ₹1.99 ಲಕ್ಷದ ಅನಧಿಕೃತ ವಹಿವಾಟು ನಡೆದಿತ್ತು.

OTP ನೀಡದಿದ್ದರೂ ಖಾತೆಯಿಂದ ಹಣ ಮಾಯ

ಈ ಪ್ರಕರಣದಲ್ಲಿ ಗಮನ ಸೆಳೆದ ಸಂಗತಿಯೆಂದರೆ, ಗ್ರಾಹಕರು ಯಾವುದೇ OTP ಹಂಚಿಕೊಂಡಿರಲಿಲ್ಲ ಎಂದು ಹೇಳಿದ್ದರು. ಮೋಸ ಗೊತ್ತಾದ ತಕ್ಷಣವೇ ಅವರು SBIಗೆ ಮಾಹಿತಿ ನೀಡುವುದರ ಜೊತೆಗೆ ಸೈಬರ್ ಕ್ರೈಂ ಪೊಲೀಸರಿಗೂ ದೂರು ನೀಡಿದ್ದರು. ಬ್ಯಾಂಕ್ ₹25,000 ಮೊತ್ತವನ್ನು ಮರು ಜಮೆ ಮಾಡಿದ್ದರೂ, ₹1.99 ಲಕ್ಷದ ದೊಡ್ಡ ಮೊತ್ತವನ್ನು ಹಿಂತಿರುಗಿಸಿರಲಿಲ್ಲ.

SBI ವಿರುದ್ಧ ಗ್ರಾಹಕರ ಹೋರಾಟ

ಈ ಪ್ರಕರಣದಲ್ಲಿ ಗ್ರಾಹಕರೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು SBI ವಾದಿಸಿತ್ತು. ಆದರೆ ಪ್ರಕರಣ ಮುಂದುವರಿದಂತೆ ಗ್ರಾಹಕ ಆಯೋಗಗಳು ಬ್ಯಾಂಕ್‌ನ ವಾದವನ್ನು ಒಪ್ಪಲಿಲ್ಲ. ಕರ್ನಾಟಕ ರಾಜ್ಯ ಗ್ರಾಹಕ ಆಯೋಗವು SBIಗೆ ₹1.99 ಲಕ್ಷ ಮರುಪಾವತಿ ಮಾಡುವಂತೆ ಆದೇಶಿಸಿತ್ತು. ಇದರ ವಿರುದ್ಧ SBI ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ (NCDRC) ಮೇಲ್ಮನವಿ ಸಲ್ಲಿಸಿತು. ಆದರೆ NCDRC ಕೂಡ SBIಯ ಮೇಲ್ಮನವಿಯನ್ನು ತಿರಸ್ಕರಿಸಿ, ಗ್ರಾಹಕರ ಪರವಾಗಿಯೇ ತೀರ್ಪು ನೀಡಿತು.

ನಕಲಿ ಆ್ಯಪ್ ಡೌನ್‌ಲೋಡ್ ಮಾಡಿದ್ದೇ ತಪ್ಪಲ್ಲ ಎಂದ ಆಯೋಗ

ಈ ಪ್ರಕರಣದಲ್ಲಿ ಆಯೋಗ ನೀಡಿದ ಪ್ರಮುಖ ಅಭಿಪ್ರಾಯವೆಂದರೆ, ನಕಲಿ ಆ್ಯಪ್ ಡೌನ್‌ಲೋಡ್ ಮಾಡಿದ್ದ ಮಾತ್ರಕ್ಕೆ ಗ್ರಾಹಕರನ್ನೇ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಅಥವಾ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಅನಧಿಕೃತ ವಹಿವಾಟು ನಡೆದ ತಕ್ಷಣ ಗ್ರಾಹಕರು ಬ್ಯಾಂಕ್ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದನ್ನು ಆಯೋಗ ಪರಿಗಣಿಸಿತು.

ಗ್ರಾಹಕರಿಗೆ ₹1.99 ಲಕ್ಷದ ಜೊತೆಗೆ ಪರಿಹಾರ

NCDRC ಆದೇಶದ ಪ್ರಕಾರ SBI ₹1.99 ಲಕ್ಷವನ್ನು ಮರುಪಾವತಿಸಬೇಕು. ಇದರ ಜೊತೆಗೆ ಗ್ರಾಹಕರಿಗೆ ₹25,000 ಪರಿಹಾರ ನೀಡುವಂತೆ ಸೂಚಿಸಲಾಗಿದೆ.

ಈ ಘಟನೆ ನೀಡುವ ಎಚ್ಚರಿಕೆ ಏನು?

ವಿದ್ಯುತ್ ಬಿಲ್, ಬ್ಯಾಂಕ್ KYC, ಪಾರ್ಸೆಲ್, ಸಿಮ್ ಕಾರ್ಡ್ ಅಥವಾ ಸರ್ಕಾರಿ ಸೇವೆಯ ಹೆಸರಿನಲ್ಲಿ ಬರುವ ಯಾವುದೇ SMS ಅಥವಾ WhatsApp ಸಂದೇಶದಲ್ಲಿರುವ ಅಪರಿಚಿತ ಲಿಂಕ್, ಫೋನ್ ನಂಬರ್ ಅಥವಾ ಆ್ಯಪ್‌ಗಳನ್ನು ನಂಬಿ ಕ್ಲಿಕ್ ಮಾಡಬೇಡಿ.

ಅಧಿಕೃತ ಸೇವೆಯೇ ಎಂದು ಖಚಿತಪಡಿಸಿಕೊಳ್ಳದೆ ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಅಥವಾ ಬ್ಯಾಂಕಿಂಗ್ ಮಾಹಿತಿಯನ್ನು ನೀಡುವುದು ಅಪಾಯಕಾರಿ. ಈ ಪ್ರಕರಣದಲ್ಲಿ ಕೇವಲ ₹20ರ ಬಿಲ್ ಪಾವತಿಸುವ ಪ್ರಯತ್ನವೇ ₹1.99 ಲಕ್ಷದ ಸೈಬರ್ ವಂಚನೆಗೆ ಕಾರಣವಾಗಿತ್ತು.