ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮತ್ತೊಂದೆಡೆ ಕರಾವಳಿ ಭಾಗದಲ್ಲಿ ತಾಪಮಾನ ವಿಪರೀತವಾಗಿ ಏರಿಕೆಯಾಗಿದ್ದು, ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ. ಅಕ್ಟೋಬರ್ 16ರ ನಂತರ ರಾಜ್ಯದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಭರ್ಜರಿ ಮಳೆಯಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆಯಿಂದ ಮಾಹಿತಿ ನೀಡಿದೆ. ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳ ಕಾಲ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಮುಂದಿನ ಮೂರು ಗಂಟೆಗಳಲ್ಲಿ 30-40 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ. ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಮಳೆಯ ಕಾರಣ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ವಿದ್ಯುತ್ ವ್ಯತ್ಯಯ ಸಣ್ಣಪುಟ್ಟ ಸಂಚಾರ ದಟ್ಟಣೆ ಹಾಗೂ ದುರ್ಬಲ ಮರದ ಕೊಂಬೆಗಳು ಮುರಿದು ಬೀಳುವ ಸಾಧ್ಯತೆ ಇದ್ದು, ಸೂಕ್ತ ಮುನ್ನೆಚ್ಚರಿಕೆಗಳನ್ನು ವಹಿಸಲು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರಾವಳಿ ತಾಪಮಾನ ಏರಿಕೆ, ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ
ಕರ್ನಾಟಕ ಕರಾವಳಿಯಲ್ಲಿ ಒಂದು ವಾರದಿಂದೀಚೆಗೆ ಬಿಸಿಲ ತಾಪಮಾನ ವಿಪರೀತ ಏರಿಕೆಯಾಗುತ್ತಿದೆ. ಬುಧವಾರ ಬಿಸಿಲ ತೀವ್ರತೆ ಮತ್ತೆ ಹೆಚ್ಚಾಗಿದೆ. ದ.ಕ ಜಿಲ್ಲೆಯಲ್ಲಿ ದಿನದ ತಾಪಮಾನ 36-37 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸುಳ್ಯದಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು 38.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದೇ ವೇಳೆ ಆರೋಗ್ಯ ಇಲಾಖೆ ಆರೋಗ್ಯ ಮುನ್ನೆಚ್ಚರಿಕೆ ಬಗ್ಗೆ ಸೂಚನೆ ನೀಡಿದೆ.
ದ.ಕ. ದಿನದ ತಾಪಮಾನ 36–38 ಡಿ.ಸೆ., ಸುಳ್ಯದಲ್ಲಿ ಗರಿಷ್ಠ 38.1 ಡಿ.ಸೆ. ದಾಖಲು
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮುಂದಿನ ಎರಡು ದಿನಗಳ ಕಾಲ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ ಇದ್ದು, ಸೆಕೆಯ ಅನುಭವ ಇನ್ನೂ ಹೆಚ್ಚಾಗಲಿದೆ. ಗರಿಷ್ಠ ತಾಪಮಾನದಲ್ಲಿ ಒಂದೆರಡು ಡಿಗ್ರಿ ಇಳಿಕೆಯಾದರೂ, ಅಧಿಕ ತೇವಾಂಶದಿಂದ ಸೆಕೆ ಹೆಚ್ಚಾಗಬಹುದು ಎಂದು ಮಾಹಿತಿ ನೀಡಲಾಗಿದೆ.
ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಹಾಗೂ ಬೆಳಿಗ್ಗೆ ಸಾಧಾರಣ ಮಳೆಯಾಗಿದ್ದು, ಬುಧವಾರ ಬೆಳಗಿನ ಜಾವ ಮಂಜುಕವಿದ ವಾತಾವರಣ ಕಂಡುಬಂದಿದೆ. ಅದೇ ರೀತಿ ದ.ಕ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರಾತ್ರಿ ಮಂಜು ಕವಿದ ವಾತಾವರಣ ಸಹಿತ ತುಸು ಚಳಿ ಹೆಚ್ಚಿತ್ತು.
ಮುಂಜಾಗರೂಕತಾ ಕ್ರಮ ವಹಿಸಲು ಸೂಚನೆ
ಗರಿಷ್ಠ ತಾಪಮಾನ ಏರಿಕೆ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಆರೋಗ್ಯ ಮುನ್ನೆಚ್ಚರಿಕೆ ನೀಡಲಾಗಿದೆ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುಂಜಾಗರೂಕತಾ ಕ್ರಮಗಳನ್ನು ಸೂಚಿಸಿದೆ. ಬೆಳಿಗ್ಗೆ 11 ಗಂಟೆಯಿಂದ ಸಂಜೆ 3 ಗಂಟೆಯ ವರೆಗೆ ಸಾಧ್ಯವಾದಷ್ಟು ಓಡಾಟವಿದ್ದರೆ ಬಿಸಿಲಿನ ಝಳವನ್ನು ತಪ್ಪಿಸುವಂತೆ ಸಲಹೆ ನೀಡಲಾಗಿದೆ.
ದ.ಕ. ಜಿಲ್ಲೆಯ ಸಾರ್ವಜನಿಕರಿಗೆ ಈ ಕುರಿತು ತುರ್ತು ಸೇವೆಯ ಅಗತ್ಯವಿದ್ದರೆ ಟೋಲ್ ಫ್ರೀ ಸಂಖ್ಯೆ 1077 ಗೆ ಕರೆ ಮಾಡಬಹುದು. ಅಥವಾ ದೂರವಾಣಿ ಸಂಖ್ಯೆ 0824-2442590 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ತೀವ್ರ ಸೆಕೆ
ದ.ಕ. ಜಿಲ್ಲೆಯಲ್ಲಿ ಬುಧವಾರ ಬೆಳಗಿನಿಂದಲೇ ತಾಪಮಾನ ಏರಿಕೆಯಾಗಿದ್ದು, ಮಧ್ಯಾಹ್ನ ಗರಿಷ್ಠ ಮಟ್ಟ ತಲುಪಿತ್ತು. ಸುಡುವ ಬಿಸಿಲಿನಲ್ಲಿ ಓಡಾಟಕ್ಕೂ ಕಷ್ಟ ಎನಿಸುವಷ್ಟು ಬಿಸಿಲಿನ ಧಗೆ ಕಂಡುಬಂದಿತ್ತು. ತಾಪಮಾನದ ತೀವ್ರತೆಯ ಪ್ರಭಾವ ರಾತ್ರಿಯೂ ಇದ್ದು, ವಿಪರೀತ ಸೆಕೆಯ ಅನುಭವ ಉಂಟಾಗುತ್ತಿದೆ. ಪ್ರಸ್ತುತ ಕರಾವಳಿಯಲ್ಲಿ ನವರಾತ್ರಿ ಹಬ್ಬಗಳ ಆಚರಣೆ ನಡೆಯುತ್ತಿದ್ದು, ಸೆಕೆ, ಬೆವರು ಇದರ ಮೇಲೆ ಪರಿಣಾಮ ಬೀರುತ್ತಿದೆ. ಧಾರ್ಮಿಕ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೂ ಸೆಕೆ ತೀವ್ರ ಪರಿಣಾಮ ಬೀರುತ್ತಿದೆ.
16ರಿಂದ ಮಳೆ ಸಾಧ್ಯತೆ
ಬಂಗಾಳ ಕೊಲ್ಲಿಯ ಕಡೆಯಿಂದ ಬೀಸುತ್ತಿರುವ ಗಾಳಿ ಪ್ರಬಲವಾಗುತ್ತಿದ್ದು, ಅ.16ರಿಂದ ಮುಂದಿನ ಒಂದೆರಡು ದಿನ ದಕ್ಷಿಣ ಒಳನಾಡು ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದೆ. ಅ.17-18ರ ಬಳಿಕ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಮೋಡಗಳು ಕಾಣಿಸಿಕೊಳ್ಳಲಿದ್ದು, ಘಟ್ಟದ ಕೆಳಗಿನ ತಪ್ಪುಲು ಪ್ರದೇಶಗಳ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಹೇಳಲಾಗಿದೆ.


